ಕಾಂಗ್ರೆಸ್ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರ ಮತ್ತೆ ಬಿಕ್ಕಟ್ಟು ಸೃಷ್ಟಿಸಿದೆ. ದಲಿತ ಎಡಗೈ ಮತ್ತು ಬಲಗೈ ಸಮುದಾಯಗಳ ಅಸಮಾಧಾನ ಹೆಚ್ಚಾಗಿದೆ. ಗುರುವಾರದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಖಾಲಿ ಹುದ್ದೆಗಳ ನೇಮಕಕ್ಕೆ ಆಗ್ರಹಿಸಿ ಯುವಜನರ ಪ್ರತಿಭಟನೆಗೆ ಮಣಿದ ಸರ್ಕಾರ ನೇರ ನೇಮಕಕ್ಕೆ ತೀರ್ಮಾನಿಸಿತ್ತು. ಈ ನಿರ್ಧಾರದಿಂದ ಪರಿಶಿಷ್ಟ ಜಾತಿ ಮೀಸಲು ಪ್ರಮಾಣ ಶೇ.15ಕ್ಕೆ ಸೀಮಿತವಾಗುವ ಕಾರಣ ಎಡಗೈ ಸಮುದಾಯ ಅಸಮಾಧಾನಗೊಂಡಿದೆ. ಸಚಿವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು: ನೇರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರ ಮತ್ತೆ ಕಾಂಗ್ರೆಸ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ದಲಿತರ ಎಡಗೈ ಮತ್ತು ಬಲಗೈ ಸಮುದಾಯಗಳ ನಡುವೆ ಅಸಮಾಧಾನ ಮೂಡಿದ್ದು, ಗುರುವಾರದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಯುವಜನತೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಶೇ.50 ಮೀಸಲಾತಿ ಮಿತಿಯೊಳಗೆ ನೇರ ನೇಮಕಕ್ಕೆ ಸರ್ಕಾರ ತೀರ್ಮಾನಿಸಿತ್ತು. ಆದರೆ, ಇದರಿಂದ ಪರಿಶಿಷ್ಟ ಜಾತಿ ಮೀಸಲಾತಿ ಶೇ.15ಕ್ಕೆ ಸೀಮಿತವಾಗುವುದರಿಂದ ತಮಗೆ ಅನ್ಯಾಯವಾಗಲಿದೆ ಎಂದು ಎಡಗೈ (ಮಾದಿಗ) ಸಮುದಾಯದ ಸಚಿವರು, ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಸಂಪುಟದಲ್ಲೂ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಈ ಬಿಕ್ಕಟ್ಟು ನಿವಾರಿಸಲು ಬುಧವಾರ ಸರಣಿ ಸಭೆಗಳು ನಡೆದವು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎರಡೂ ಕಡೆಯವರು ಭೇಟಿ ಮಾಡಿ ತಮ್ಮ ಅಹವಾಲು ತೋಡಿಕೊಂಡರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಖರ್ಗೆ ಅವರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ, ದಲಿತ ಎಡಗೈ ಸಮುದಾಯದ ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ, ಶಾಸಕ ನೆಲಮಂಗಲ ಶ್ರೀನಿವಾಸ್, ಮಾಜಿ ಎಂಎಲ್ಸಿ ಧರ್ಮಸೇನಾ ಕೂಡ ಖರ್ಗೆ ಅವರನ್ನು ಭೇಟಿಯಾದರು.ಖರ್ಗೆ ಅವರು ಎರಡೂ ಸಮುದಾಯದ ನಾಯಕರಿಗೆ ಒಟ್ಟಿಗೆ ಕುಳಿತು ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪರಿಹಾರ ಸೂತ್ರದೊಂದಿಗೆ ಸಂಪುಟ ಸಭೆಗೆ ಬರುವಂತೆ ಸೂಚಿಸಿರುವುದರಿಂದ, ಗೃಹ ಸಚಿವ ಡಾ.ಪರಮೇಶ್ವರ್ ಅವರ ಸರಕಾರಿ ನಿವಾಸದಲ್ಲಿ ಸರಣಿ ಸಭೆಗಳು ನಡೆದವು. ಈ ಸಭೆಗಳಲ್ಲಿ ಸಚಿವರಾದ ಮುನಿಯಪ್ಪ, ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ, ಶಾಸಕ ಶ್ರೀನಿವಾಸ್, ಮಾಜಿ ಸಂಸದ ಎಲ್.ಹನುಮಂತಯ್ಯ ಮತ್ತು ಎಡಗೈ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಬಳಿಕ, ಡಾ.ಪರಮೇಶ್ವರ್ ಅವರು ತಮ್ಮ ಸಮುದಾಯವಾದ ಬಲಗೈ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಮಹದೇವಪ್ಪ ಅವರೊಂದಿಗೆ ಚರ್ಚಿಸಿದರು. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಗುರುವಾರದ ಸಂಪುಟ ಸಭೆಯಲ್ಲಿ ಯಾವ ನಿರ್ಣಯ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.