ವಿಕ ಸುದ್ದಿಲೋಕ ಚಿಕ್ಕಮಗಳೂರು ಕೆಡುಕುಗಳಿಂದ ನಮ್ಮನ್ನು ನಾವು ಸಂಸ್ಕರಿಸಿಕೊಳ್ಳುವುದಕ್ಕೆ ರಂಜಾನ್ ಒಂದು ತಿಂಗಳ ಉಪವಾಸ ಉತ್ತಮ ಅವಕಾಶ ನೀಡಿದೆ ಎಂದು ಬರಹಗಾರ ಎ.ಕೆ.ಕುಕ್ಕಿಲ ಹೇಳಿದರು. ಜಮಾ ಅತೆ ಇಸ್ಲಾಮಿ ಹಿಂದ್ ಸಂಘಟನೆ ಲಯನ್ಸ್ ಸೇವಾ ಭವನದಲ್ಲಿಇತ್ತೀಚೆಗೆ ಹಮ್ಮಿಕೊಂಡಿದ್ದ ರಂಜಾನ್ ಸೌಹಾರ್ದ ಇಫ್ತಾರ್ ಸಮಾರಂಭದಲ್ಲಿಮಾತನಾಡಿದರು. ರಂಜಾ ಎಂದರೆ ಸುಡುವುದು ಎಂದರ್ಥ. ಈ ತಿಂಗಳಲ್ಲಿನಮ್ಮ ಎಲ್ಲಕೆಡುಕುಗಳನ್ನು ಸುಟ್ಟುಕೊಂಡು ಪಾವನನಾಗಿ ಹೊರ ಬರಬೇಕು ಎಂಬುದಾಗಿದೆ. ಅಸೂಹೆ, ಭ್ರಷ್ಟಾ ಚಾರ, ಕೋಮುವಾದದ ಮನಸ್ಥಿತಿಯಿಂದ ಹಾಗೂ ವಂಚನೆ, ಇನ್ನೊಬ್ಬರಿಗೆ ಕೆಡುಕು ಬಯಸುವ ಭಾವನೆಯಿಂದ ಹೊರಬರಬೇಕು. ಒಟ್ಟಾರೆ ನಮ್ಮನ್ನು ನಾವು ಸಂಸ್ಕರಿಸಿಕೊಳ್ಳಲು ರಂಜಾನ್ ಉಪವಾಸ ಸುವರ್ಣ ಅವಕಾಶ ಒದಗಿಸಿದೆ ಎಂದರು. ರಂಜಾನ್ ಉಪವಾಸ ಮುಗಿದ ನಂತರ ಎಲ್ಲರೂ ಪರಿಶುದ್ಧರಾಗುತ್ತಾರಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಯಾರು ಇದನ್ನು ಪಾಲಿಸದೆ ಕೆಟ್ಟ ಚಟುವಟಿಕೆಯಲ್ಲಿತೊಡಗಿಕೊಳ್ಳುತ್ತಾರೋ ಅವರು ಪರಿಶುದ್ಧ ವಾಗಲಿಲ್ಲಎಂದರ್ಥ. ಅಂತವರಿಗೆ ಮತ್ತೆ ಮತ್ತೆ ರಂಜಾನ್ ನಲ್ಲಿಅವಕಾಶ ಬರುತ್ತದೆ. ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಜಮಾ ಅತೆ ಇಸ್ಲಾಮಿ ಹಿಂದ್ ಸಂಘಟನೆಯ ಮುಖಂಡ ರಿಜ್ವಾನ್ ಮಾತನಾಡಿ, ಕಳೆದ 40 ವರ್ಷದಿಂದ ಇಫ್ತಾರ್ ಕೂಟ ನಡೆಸಿಕೊಂಡು ಸನ್ಮಾರ್ಗದ ಬೋಧನೆ ಮಾಡಲಾಗುತ್ತಿದೆ ಎಂದರು. ಸಂಘಟನೆಯ ಪ್ರಮುಖರು ಹಾಗೂ ಇಫ್ತಾರ್ ಕಾರ್ಯಕ್ರಮ ಆಯೋಜಕರಾದ ಡಾ. ಮಹಮದ್ ಸಾಲಿಹ, ನಿವೃತ್ತ ಉಪನ್ಯಾಸಕ ಗಫಾರ್ ಬೇಗ್ ಹಾಗೂ ಇತರರಿದ್ದರು.

