ಯಾರದ್ದೇ ವೈಯಕ್ತಿಕ ಬದುಕಿಗೆ ಅನಧಿಕೃತವಾಗಿ ಎಂಟ್ರಿಯಾಗುವುದು ಹಾಗೂ ವಿಡಿಯೊ ಮಾಡುವುದು ಅಪರಾಧ. ಅದರಲ್ಲೂವ್ಯಕ್ತಿಯ ಅರಿವಿಗೆ ಬಾರದಂತೆ ಚಿತ್ರಿಸುವುದು ಇನ್ನೂ ತಪ್ಪು. ಇದನ್ನು ಮಾಡುತ್ತಿರುವ ಅನಾಮಧೇಯರು, ಅಪರಿಚಿತರನ್ನು ಹುಡುಕುವ ಬದಲು ಇಂಥ ಕೃತ್ಯಕ್ಕೆ ಕಡಿವಾಣ ಬೀಳಬೇಕಿದೆ. ನಟಿಯರಿಗೂ ಪ್ರಬುದ್ಧತೆಯ ಪ್ರಜ್ಞೆ ಬೆಳೆಯಬೇಕಿದೆ ಎಂಬುದು ನಟಿ ತಾರಾ ಮಾತು. ಈ ನಿಟ್ಟಿನಲ್ಲಿವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷೆ ನಟಿ ಜಯಮಾಲಾ ಮೇಲೆ ತಮಗೆ ನಂಬಿಕೆ ಇದೆ, ಈ ಬಗ್ಗೆ ಅವರು ಖಂಡಿತಾ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಬೆಕ್ಕಿಗೆ ಗಂಟೆ ಕಟ್ಟುವವರಾರ ಯರು?: ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ಹಿಂದೆ ಕೂಡ ಇಂಥದ್ದೇ ದೂರು ಹೋಗಿದ್ದು, ಪ್ರೆಸ್ ಮೀಟ್ ಗಳಿಗೆ ಮೊಬೈಲ್ ಹಿಡಿದು ಬರುವವರ ಮೇಲೆ ನಿಗಾವಿಡುವ ಪ್ರಯತ್ನ ನಡೆದಿದೆ. ಆದರೆ ಅದು ಕೇವಲ ತಾತ್ಕಾಲಿಕವಾಗಿತ್ತು. ಪ್ರತಿಷ್ಠಿತ ಸುದ್ದಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಐಡಿ ಕಾರ್ಡ್ ನೀಡುವಂತೆ, ಇನ್ ಫ್ಲುಯೆನ್ಸರ್ ಗಳಿಗೂ ಐಡಿ ಕೊಡಬೇಕು. ಕಚೇರಿಯ ಒಳಗೆ ಬರುವಾಗ ಹೇಗೆ ಐಡಿ ಕಾರ್ಡ್ ಕಡ್ಡಾಯವೋ, ಪ್ರೆಸ್ ಮೀಟ್ , ಲಾಂಚಿಂಗ್ ಮುಂತಾದ ಸಿನಿಮಾ ಕಾರ್ಯಕ್ರಮಗಳಿಗೆ ಬರುವವರಿಗೂ ಇದನ್ನು ಕಡ್ಡಾಯ ಮಾಡಬೇಕು. ಆದರೆ ಈ ಐಡಿಯನ್ನು ಚೇಂಬರ್ ಕಡೆಯಿಂದ ಕೊಡಬೇಕೋ ಅಥವಾ ಸಿನಿಮಾ ಪ್ರಚಾರ ಮಾಡಿಸುವ ಪಿಆರ್ ಒಗಳು ಕೊಡಬೇಕೋ ಎನ್ನುವ ನಿರ್ಧಾರವಾಗಬೇಕಿದೆ. ಇದರ ಹೊರತಾಗಿಯೂ ಈ ಕಾರ್ಯಕ್ರಮಗಳ ಆಯೋಜನೆ ಮಾಡುವ ಪಿಆರ್ ಒಗಳು ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದಿದ್ದಾರೆ ತಾರಾ. ನಟಿಯರಿಗೂ ಪ್ರಚಾರದ ಹಪಾಹಪಿ: ಈಗಿನ ನಟಿಯರಿಗೆ ಪ್ರಚಾರದ ಹುಚ್ಚು ಹೆಚ್ಚಾಗಿದೆ ಎಂದಿರುವ ನಟಿ ತಾರಾ, ‘ನನ್ನ ಬಳಿಯೂ ಕೆಲವು ನಟಿಯರು ತಮ್ಮನ್ನು ಯಾರೂ ಗುರುತಿಸುವುದಿಲ್ಲ, ಯಾವುದೇ ಮೀಡಿಯಾಗಳು ನಮ್ಮ ಬಗ್ಗೆ ಬರೆಯುವುದಿಲ್ಲ. ಹಾಗಾಗಿ ಇನ್ ಫ್ಲುಯೆನ್ಸರ್ ಗಳ ಮೂಲಕ ವೈಯಕ್ತಿಕ ಪ್ರಚಾರ ಮಾಡಿಸಬೇಕಾಗುತ್ತದೆ ಎಂದಿದ್ದಾರೆ. ಆದರೆ ವೈಯಕ್ತಿಕ ಪ್ರಚಾರ ಮಾಡಿಸಿಕೊಳ್ಳಲು ನಾವು ಯಾವುದೇ ವಸ್ತುಗಳಲ್ಲ. ಮಾಡಿಕೊಳ್ಳಲೇಬೇಕು ಎಂದು ಅನಿಸಿದರೆ ಅದಕ್ಕೆಂದೇ ಸೋಶಿಯಲ್ ಮೀಡಿಯಾ ಇದೆ. ಸಿನಿಮಾಗೆ ಪ್ರಚಾರ ಬೇಕಿದ್ದರೆ ಅಲ್ಲಿನಮ್ಮ ಕಲೆಯ ಮೂಲಕ ಜನರನ್ನು ತಲುಪಬೇಕು. ನಾವು ನಟಿಯರಾಗಿದ್ದಾಗ ಸಿನಿಮಾ ನಟನಟಿಯರನ್ನು ನೋಡಬೇಕು, ಅವರ ಬಗ್ಗೆ ತಿಳಿಯಬೇಕು ಎಂದು ಜನರಿಗಿದ್ದ ಕ್ರೇಜ್ ಈಗಿಲ್ಲ. ಮೊಬೈಲ್ ಹಿಡಿದು ಬರುವ ಪ್ರಚಾರಕರು ವೈಯಕ್ತಿಕ ಬದುಕನ್ನು ಜಗಜ್ಜಾಹೀರು ಮಾಡುವುದರಿಂದ ಯಾವುದೇ ಲಾಭವಿಲ್ಲ. ಇದರಿಂದ ಈಗ ಆಗುತ್ತಿರುವಂಥ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ. ಹೀಗೆ ಹಿರಿಯ ನಟಿ ತಾರಾ ಹೇಳಿರುವ ಮಾತುಗಳು ಕಾರ್ಯರೂಪಕ್ಕೆ ಬರಬೇಕಿವೆ. ನಟಿಯರು ತಮ್ಮ ಪ್ರಚಾರದ ಕುರಿತು ಕೊಡುವ ಗಮನಕ್ಕಿಂತ ತಮ್ಮ ನಟನೆಯ ಸಿನಿಮಾ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಬೇಕೆಂಬ ಬಗ್ಗೆ ಯೋಚಿಸಬೇಕಿದೆ. ಈ ಹೋರಾಟದಲ್ಲಿವಿಜಯ ಕರ್ನಾಟಕ ಲವಲವಿಕೆಯು ನಟಿಯರು, ಚಿತ್ರರಂಗದ ಪರವಾಗಿ ನಿಂತಿದೆ.

