ಆರ್ಥಿಕತೆ, ಇಂಧನ ಭದ್ರತೆ, ವ್ಯಾಪಾರ-ವ್ಯವಹಾರಕ್ಕೆ ಹೊಡೆತ | ದೀರ್ಘಕಾಲೀನ ಪರಿಣಾಮದ ಎದುರಿಸಲು ಸರಕಾರ ಸಿದ್ಧತೆ |
1 ಕೋಟಿಗೂ ಹೆಚ್ಚು ಭಾರತೀಯರ ರಕ್ಷಣೆಗೆ ಆದ್ಯತೆ | ಸದ್ಯಕ್ಕೆ ಸಂಘರ್ಷ ಶಮನ ಸಾಧ್ಯತೆ ದೂರ | 4ನೇ ದಿನವೂ ದಾಳಿ-ಪ್ರತಿದಾಳಿ
ಟೆಹ್ರಾನ್ /ಹೊಸದಿಲ್ಲಿ: ಇರಾನ್ ಮೇಲೆ ವೈಮಾನಿಕ ದಾಳಿಯಿಂದ ಮಧ್ಯಪ್ರಾಚ್ಯದಲ್ಲಿಭುಗಿಲೆದ್ದಿರುವ ಸಂಘರ್ಷ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದು ಭಾರತ ಸೇರಿದಂತೆ ಜಾಗತಿಕವಾಗಿ ಅರ್ಥವ್ಯವಸ್ಥೆ ಮತ್ತು ವ್ಯಾಪಾರೋದ್ಯಮದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವ ಆತಂಕ ಹೆಚ್ಚಿದೆ. ಈ ಬಗ್ಗೆ ಭಾರತವೂ ತೀವ್ರ ಕಳವಳ ವ್ಯಕ್ತಪಡಿಸಿದ್ದು, ದೀರ್ಘಕಾಲೀನ ಪರಿಸ್ಥಿತಿ ಎದುರಿಸಲು ಅಗತ್ಯ ತಯಾರಿ ನಡೆಸಿದೆ. ಮುಖ್ಯವಾಗಿ, ಕಚ್ಚಾತೈಲ ಪೂರೈಕೆಯಲ್ಲಿವ್ಯತ್ಯಯ ಹಾಗೂ ಸರಕು-ಸಾಗಣೆಗೆ ಅಡಚಣೆಯು ಸರಣಿ ಪರಿಣಾಮಗಳಿಗೆ ದಾರಿ ಮಾಡುವ ಆತಂಕವನ್ನು ಭಾರತದ ವ್ಯಕ್ತಪಡಿಸಿದೆ. ಮಧ್ಯಪ್ರಾಚ್ಯದಲ್ಲಿರುವ 1 ಕೋಟಿಗೂ ಹೆಚ್ಚು ಭಾರತೀಯರ ಸುರಕ್ಷತೆ ಬದ್ಧವೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಏತನ್ಮಧ್ಯೆ, ‘‘ನಮ್ಮ ಬಳಿ ಸಾಕಷ್ಟು ಯುದ್ಧ ಸಾಮಗ್ರಿಗಳ ದಾಸ್ತಾನಿದ್ದು, ಮಧ್ಯಮ ಮತ್ತು ಉನ್ನತ ಶ್ರೇಣಿಯ ಶಸ್ತಾ್ರಸ್ತ್ರಗಳ ಅನಿಯಮಿತ ಪೂರೈಕೆ ಇದೆ. ಹೀಗಾಗಿ ನಾವು ದೀರ್ಘಕಾಲ ಯುದ್ಧ ಮಾಡಿ ಯಶಸ್ವಿಯಾಗಬಲ್ಲೆವು,’’ ಎಂದು ತಮ್ಮ ಸಾಮಾಜಿಕ ಜಾಲತಾಣ ಟ್ರೂಥ್ ನಲ್ಲಿಹೇಳಿದ್ದಾರೆ.
ಇತ್ತ, ಇರಾನ್ ಸಹ ಅಮೆರಿಕಕ್ಕೆ ತಿರುಗೇಟು ನೀಡಿದ್ದು, ಪ್ರತಿದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ. ಅಮೆರಿಕಕ್ಕೆ ನೆರವಾಗುವ ಯೂರೋಪ್ ದೇಶಗಳಿಗೂ ಕಠಿಣ ಎಚ್ಚರಿಕೆ ರವಾನಿಸಿದೆ.
ಸಚಿವಾಲಯ ಹೇಳಿದ್ದೇನು?
‘‘ಕಳೆದ ಕೆಲವು ದಿನಗಳಿಂದ ಸಂಘರ್ಷ ತೀವ್ರಗೊಳ್ಳುವುದು ಮಾತ್ರವಲ್ಲದೆ, ಅದು ಇತರ ದೇಶಗಳಿಗೂ ವ್ಯಾಪಿಸುತ್ತಿರುವುದನ್ನು ನೋಡುತ್ತಿದ್ದೇವೆ. ವಿನಾಶ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸಾಮಾನ್ಯ ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿವೆ.’’
‘‘ಸಂಘರ್ಷದಲ್ಲಿತೊಡಗಿರುವ ದೇಶಗಳ ಸಾಮಿಪ್ಯ ಹಾಗೂ ಈ ಭಾಗದ ಭದ್ರತೆ ಮತ್ತು ಸುಸ್ಥಿರತೆಯ ದೃಷ್ಟಿಯಿಂದ ಈ ಬೆಳವಣಿಗೆಯು ಅತ್ಯಂತ ಕಳವಳಕಾರಿಯಾಗಿದೆ. ಮಧ್ಯಪ್ರಾಚ್ಯದಲ್ಲಿಸುಮಾರು 1 ಕೋಟಿಗೂ ಅಧಿಕ ಭಾರತೀಯರಿದ್ದು, ಅವರ ಸುರಕ್ಷತೆ ಮತ್ತು ಶ್ರೇಯಸ್ಸು ನಮ್ಮ ಪ್ರಧಾನ ಆದ್ಯತೆಯಾಗಿದೆ. ಭಾರತೀಯರ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುವ ಯಾವುದೇ ಬೆಳವಣಿಗೆಯನ್ನು ನಿರ್ಲಕ್ಷಿಸಲಾಗದು. ಸಂಬಂಧಪಟ್ಟ ಎಲ್ಲಾದೇಶಗಳ ರಾಯಭಾರ ಕಚೇರಿಗಳೊಂದಿಗೆ ಭಾರತ ನಿರಂತರ ಸಂಪರ್ಕದಲ್ಲಿದ್ದು, ಸುರಕ್ಷಿತ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ,’’ ಎಂದು ಸಚಿವಾಲಯ ಹೇಳಿದೆ.
===================
48 ಗಂಟೆಯಲ್ಲಿ8 ದೇಶಗಳ ಜತೆ ಮೋದಿ ಚರ್ಚೆ
ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿಪ್ರಧಾನಿ ಮೋದಿ ಅವರು ವಿವಿಧ ದೇಶಗಳ ನಾಯಕರೊಂದಿಗೆ ಮಾತುಕತೆ ಮುಂದುವರಿಸಿದ್ದಾರೆ. 48 ಗಂಟೆಯಲ್ಲಿಒಟ್ಟು 8 ದೇಶಗಳ ನಾಯಕರ ಜತೆ ದೂರವಾಣಿಯಲ್ಲಿಚರ್ಚಿಸಿದ್ದಾರೆ. ಮಂಗಳವಾರ ಒಮನ್ ಮತ್ತು ಕುವೈತ್ ದೇಶಗಳ ದೊರೆಗಳೊಂದಿಗೆ ಜತೆ ಅವರು ಮಾತನಾಡಿದರು. ಇದಕ್ಕೂ ಮುನ್ನ ಇಸ್ರೇಲ್ , ಸೌದಿ ಅರೇಬಿಯಾ, ಯುಎಇ, ಜೋರ್ಡಾನ್ , ಬಹ್ರೇನ್ , ಮತ್ತು ಕತಾರ್ ದೇಶಗಳ ನಾಕರೊಂದಿಗೆ ಮೋದಿ ಚರ್ಚಿಸಿದರು.
ರಾಜತಾಂತ್ರಿಕ ಮತ್ತು ಮಾತುಕತೆಯ ಮಾರ್ಗಗಗಳ ಮೂಲಕ ಸಂಘರ್ಷ ಇತ್ಯರ್ಥಕ್ಕೆ ಒತ್ತಾಯಿಸುರವ ಮೋದಿ, ಶಾಂತಿ ಮತ್ತು ಸುಸ್ಥಿರತೆಗೆ ಭಾರತದ ಬದ್ಧತೆ ವ್ಯಕ್ತಪಡಿಸಿದ್ದಾರೆ. ಪರಸ್ಪರ ಪ್ರತಿದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮೋದಿ, ಆ ದೇಶಗಳಲ್ಲಿರುವ ಭಾರತೀಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಲ್ಲಿನ ಮುಖಂಡರಿಗೆ ಮನವಿ ಮಾಡಿದ್ದಾರೆ.
==================
ಮೇಲ್ವಿಚಾರಣೆಗೆ ಸಚಿವರ ಸಮಿತಿ ರಚನೆ
ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇದರ ಸಾಧಕ-ಬಾಧಕಗಳನ್ನು ಅವಲೋಕಿಸಲು ಕೇಂದ್ರ ಸರಕಾರ ಅಂತರ-ಸಚಿವಾಲಯ ಸಮಿತಿಯನ್ನು ರಚಿಸಿದೆ. ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರು ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿಉಂಟಾಗಿರುವ ಬಿಕ್ಕಟ್ಟಿನಿಂದ ವ್ಯಾಪಾರದ ಮೇಲೆ ಗಂಭೀರ ಪರಿಣಾಮದ ಬಗ್ಗೆ ರಫ್ತುದಾರರು ತೀವ್ರ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿಸರಕಾರ ಈ ಕ್ರಮಕ್ಕೆ ಮುಂದಾಗಿದೆ.
‘‘ಮಧ್ಯಪ್ರಾಚ್ಯದ ಬೆಳವಣಿಗೆಗಳ ಮೇಲೆ ನಿರಂತರ ನಿಗಾ ಇರಿಸಲು ಅಂತರ-ಸಚಿವಾಲಯ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಪ್ರತಿನಿತ್ಯ ಸಭೆ ಸೇರಲಿದೆ. ಸರಕುಸಾಗಣೆ, ರಫ್ತು, ಅತ್ಯಗತ್ಯ ವಸ್ತುಗಳ ಆಮದುಗಳ ಅಡಚಣೆಗಳನ್ನು ನಿವಾರಿಸಲು ಯತ್ನಿಸಲಿದೆ. ಮಂಗಳವಾರ ಈ ಸಮಿತಿಯ ಮೊದಲ ಸಭೆ ನಡೆದಿದೆ,’’ ಎಂದು ಗೋಯಲ್ ತಿಳಿಸಿದ್ದಾರೆ.
=============
50 ದಿನಕ್ಕಾಗುವಷ್ಟು ತೈಲ ದಾಸ್ತಾನು
‘‘ಭಾರತದ ಬಳಿ 6-8 ವಾರಗಳ ಬೇಡಿಕೆಯನ್ನು ಪೂರೈಸುವಷ್ಟು ಕಚ್ಚಾತೈಲ ಮತ್ತು ಪೆಟ್ರೋಲ್ , ಡೀಸೆಲ್ ಲಭ್ಯವಿದ್ದು ಆತಂಕ ಅಗತ್ಯವಿಲ್ಲಎಂದು ಕೇಂದ್ರ ಸರಕಾರ ಹೇಳಿದೆ. 25 ದಿನಗಳಿಗೆ ಸಾಕಾಗುವಷ್ಟು ಕಚ್ಚಾತೈಲದ ಜತೆಗೆ 25 ದಿನಗಳಿಗೆ ಆಗುವಷ್ಟು ಪೆಟ್ರೋಲ್ , ಡೀಸೆಲ್ ಹಾಗೂ ಇತರೆ ಇಂಧನಗಳ ದಾಸ್ತಾನು ಇದೆ. ಹೀಗಾಗಿ ತಾತ್ಕಾಲಿಕವಾಗಿ ಕಚ್ಚಾತೈಲ ಪೂರೈಕೆಗೆ ಅಡಚಣೆಯಾದರೂ ಕೊರತೆ ಬಾರದು. ಸರಕಾರ ಪ್ರತಿ ದಿನ ಮತ್ತು ಗಂಟೆಗೊಮ್ಮೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಇದಕ್ಕಾಗಿ 27/7 ಕಂಟ್ರೋಲ್ ರೂಮ್ ತೆರೆಯಲಾಗಿದೆ,’’ ಎಂದು ಪೆಟ್ರೋಲಿಯಂ ಖಾತೆ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ಭಾರತದಲ್ಲಿಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಕಾಡದಿದ್ದರೂ ಜಾಗತಿಕ ಮಾರುಕಟ್ಟೆಯಲ್ಲಿಹೆಚ್ಚುತ್ತಿರುವ ಕಚ್ಚಾತೈಲ ಬೆಲೆ, ಸರಕುಸಾಗಣೆ ವೆಚ್ಚ ಹಾಗೂ ದುಬಾರಿ ವಿಮೆಯಿಂದಾಗಿ ಭಾರತದ ಆಮದು ಬಿಲ್ ಹೆಚ್ಚಾಗುವ ಸಾಧ್ಯತೆಯಿದೆ. ಜಗತ್ತಿನ ಸುಮಾರು ಅರ್ಧದಷ್ಟು ಕಚ್ಚಾತೈಲ ಸಾಗಣೆಯಾಗುವ ಹರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿರ್ಬಂಧದ ಹಿನ್ನೆಲೆಯಲ್ಲಿ ಸುಮಾರು 700ಕ್ಕೂ ಅಧಿಕ ಕಚ್ಚಾತೈಲ ಟ್ಯಾಂಕರ್ ಗಳು ನಿಂತಲ್ಲೇ ನಿಂತಿವೆ ಎಂದು ಮೂಲಗಳು ತಿಳಿಸಿವೆ.
=================
* 787: ಇರಾನ್ ನಲ್ಲಿಮೃತಪಟ್ಟವರ ಸಂಖ್ಯೆ
ದಿನದ ಬೆಳವಣಿಗೆ
* ನಾಲ್ಕನೇ ದಿನವೂ ದಾಳಿ-ಪ್ರತಿದಾಳಿ ಮುಂದುವರಿಸಿದ ಇಸ್ರೇಲ್ -ಇರಾನ್ , ಸಂಘರ್ಷ ಉಲ್ಬಣ
* ಕೊಲ್ಲಿದೇಶಗಳ ಹಲವು ನಗರಗಳ ಅಮೆರಿಕ ದೂತಾವಾಸಗಳ ಮೇಲೆ ಎರಗಿದ ಇರಾನ್ ಡ್ರೋನ್ಸ್
* ಟೆಹ್ರಾನ್ ನಲ್ಲಿಇರಾನ್ ಅಧ್ಯಕ್ಷರ ನಿವಾಸದ ಕಚೇರಿ ಸೇರಿದಂತೆ ಹಲವು ಆಯಕಟ್ಟಿನ ಸ್ಥಳಗಳ ಇಸ್ರೇಲ್ ದಾಳಿ
* ಹೆಜ್ಬುಲ್ಲಾಬಂಡುಕೋರರ ಪಡೆ ಗುರಿಯಾಗಿಸಿ ಲೆಬನಾನ್ ನ ಭೈರೂತ್ ಮೇಲೆ ಮತ್ತೆ ದಾಳಿ ನಡೆಸಿದ ಇಸ್ರೇಲ್
* ಒಮನ್ ಕರಾವಳಿಯಲ್ಲಿವಾಣಿಜ್ಯ ನೌಕೆಗಳ ಮೇಲೆ ದಾಳಿಯಲ್ಲಿಇದುವರೆಗೂ ಮೂವರು ಭಾರತೀಯರು ಸಾವು
* ಖಮೇನಿ ಹತ್ಯೆ ಖಂಡಿಸದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿ
ಯುದ್ಧದ ನಿರ್ದಯತೆಯ ದರ್ಶನ..
ಇಸ್ರೇಲ್ ನ ಮಿನಾಬ್ ನಗರದ ಪ್ರಾಥಮಿಕ ಶಾಲೆಯ ಮೇಲೆ ಶನಿವಾರ ಇಸ್ರೇಲ್ -ಅಮೆರಿಕ ವಾಯುದಾಳಿಯಲ್ಲಿಮೃತಪಟ್ಟ 168 ಹೆಣ್ಣುಮಕ್ಕಳ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಮಂಗಳವಾರ ಸಿದ್ಧತೆ ನಡೆಸಿದ ದೃಶ್ಯ. ಒಂದರ ಪಕ್ಕದಲ್ಲಿಒಂದರಂತೆ ಸಾಲಾಗಿ ತೋಡಲಾದ ಸಮಾಧಿಗಳು, ಮುಗ್ಧ ಮಕ್ಕಳನ್ನು ಬಲಿಪಡೆದ ಯುದ್ಧದ ನಿರ್ದಯತೆಯನ್ನು ಸಾರಿ ಹೇಳುವಂತಿದ್ದವು.

