ಕಲ್ಕುಣಿಕೆ ಶಾಲಾ ಕಟ್ಟಡ ಉಳಿಸಿ
* ಹೆದ್ದಾರಿ ಯೋಜನೆಯ ಎಂಜಿನಿಯರ್ ಗಳಿಗೆ ಮಾಜಿ ಶಾಸಕ ಎಚ್ .ಪಿ. ಮಂಜುನಾಥ್ ಆಗ್ರಹ
ವಿಕ ಸುದ್ದಿಲೋಕ ಹುಣಸೂರು
ನಗರದ ಕಲ್ಕುಣಿಕೆ ಸರಕಾರಿ ಶಾಲಾ ಕಟ್ಟಡ ಉಳಿಸಲೇಬೇಕು, ಕೋರ್ಟ್ ವೃತ್ತದ ಬಳಿ ಅಂಡರ್ ಪಾಸ್ , ಐಟಿಐ ಕಾಲೇಜು ಎದುರಿನ ಬಡಾವಣೆ ಬಳಿ ಹಳೇ ಮೈಸೂರು ರಸ್ತೆಯಿಂದ ಸಂಪರ್ಕ ರಸ್ತೆ ನಿರ್ಮಿಸುವಂತೆ ಹೆದ್ದಾರಿ ಯೋಜನೆಯ ಎಂಜಿನಿಯರ್ ಗಳಿಗೆ ಮಾಜಿ ಶಾಸಕ ಎಚ್ .ಪಿ. ಮಂಜುನಾಥ್ ಸೂಚಿಸಿದರು.
ಹುಣಸೂರು ಬೈಪಾಸ್ ಹೆದ್ದಾರಿ ಅಗಲೀಕರಣ ವೇಳೆ ಕಲ್ಕುಣಿಕೆ ಸರಕಾರಿ ಶಾಲಾ ಕಟ್ಟಡ ತೆರವುಗೊಳಿಸುವ ಸಂಬಂಧ ಪೋಷಕರು, ಹಳೇ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದ್ದ ಹಿನ್ನೆಲೆ ಹೆದ್ದಾರಿ ಎಇಇ ರೂಪಾ ಅವರನ್ನು ಸ್ಥಳಕ್ಕೆ ಕರೆಸಿ ಯಾವುದೇ ಕಾರಣಕ್ಕೂ ಶಾಲಾ ಕಟ್ಟಡ ಒಡೆಯದಂತೆ ರಸ್ತೆ ನಿರ್ಮಿಸುವಂತೆ ಸೂಚಿಸಿದರು.
ಕೋರ್ಟ್ ವೃತ್ತದ ಬಳಿ ಶಬ್ಬೀರ್ ನಗರಕ್ಕೆ ತೆರಳಲು ಅಂಡರ್ ಪಾಸ್ ನಿರ್ಮಿಸಬೇಕು. ಐಟಿಐ ಕಾಲೇಜು, ಅರಸು ವೃತ್ತದ ಬಳಿಯ ದೇವರಾಜ ಅರಸು ಕಾಲೇಜು, ಟ್ಯಾಲೆಂಟ್ ಶಾಲೆಗೆ ತೆರಳಲು ಅನುವಾಗುವಂತೆ ರಸ್ತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ಲ್ಯಾನ್ ಏಕೆ ಬದಲಾಯ್ತು:
ಈ ಹಿಂದೆ ಚೀಫ್ ಎಂಜಿನಿಯರ್ ರಮೇಂದ್ರ ಅವರನ್ನು ಕರೆಸಿ ನೀಲನಕ್ಷೆ ತಯಾರಿಸಲಾಗಿತ್ತು. ಇತ್ತೀಚೆಗೆ ಪ್ಲ್ಯಾನ್ ಬದಲಾವಣೆಯಾಗಿದೆ. ಇಲ್ಲಿಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ, ಸಾರ್ವಜನಿಕರಿಗೆ ಅನನುಕೂಲವಾಗಿದ್ದು, ಮೊದಲಿನ ಪ್ಲ್ಯಾನ್ ನಂತೆ ಕಾಮಗಾರಿ ನಡೆಸಬೇಕು. ಇಲ್ಲದಿದ್ದಲ್ಲಿನಾಗರಿಕರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಎಚ್ .ಪಿ. ಮಂಜುನಾಥ್ ಹೆದ್ದಾರಿ ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಬಗ್ಗೆ ಎಇಇ ರೂಪಾ ಪ್ರತಿಕ್ರಿಯಿಸಿ, ‘‘ಮಾಜಿ ಶಾಸಕ ಮಂಜುನಾಥ್ ಅವರು ನೀಡಿರುವ ಸಲಹೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸಲಾಗುವುದು,’’ ಎಂದು ವಿಕಕ್ಕೆ ತಿಳಿಸಿದರು.
ಈ ವೇಳೆ ಕಲ್ಕುಣಿಕೆ ಶಾಲೆ ಉಳಿಸಿ ಹೋರಾಟ ಸಮಿತಿಯ ಬಸವರಾಜ್ ಕಲ್ಕುಣಿಕೆ, ಆನಂದ್ , ರಾಘು, ನಾಗರಾಜ್ , ಬಸವರಾಜು, ಚಂದ್ರಶೇಖರ್ , ಮಹೇಶ್ ಸೇರಿದಂತೆ ಅನೇಕರಿದ್ದರು. ನಗರಸಭೆ ಎಂಜಿನಿಯರ್ ಲೋಕೇಶ್ , ಕಂದಾಯಾಧಿಕಾರಿ ಸಿದ್ದರಾಜು, ಸುರೇಂದ್ರ ಹಾಜರಿದ್ದರು.
(ಫೋಟೋ ಕಳುಹಿಸುವೆ.)

