ಬೆಂಗಳೂರು: ಪಿಎಂ ಇ ಡ್ರೈವ್ ಯೋಜನೆಯಡಿ ಕರ್ನಾಟಕದಲ್ಲಿಹೊಸದಾಗಿ 1,243 ಹೊಸ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ರಾಜ್ಯ ಸರಕಾರದ 123.26 ಕೋಟಿ ರೂ.ಗಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್ .ಡಿ. ಕುಮಾರಸ್ವಾಮಿ ಘೋಷಿಸಿದರು.
ಬೆಂಗಳೂರಿನಲ್ಲಿಮಂಗಳವಾರ ನಡೆದ ‘ದೇಶವ್ಯಾಪಿ ಇವಿ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘‘ವಿವಿಧ ರಾಜ್ಯಗಳು ಮತ್ತು ಕೇಂದ್ರ ಸರಕಾರಿ ವಲಯದ ಉದ್ಯಮಗಳಲ್ಲಿಹೊಸದಾಗಿ 4,874 ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗಾಗಿ ಈವರೆಗೆ 503.86 ಕೋಟಿ ರೂ. ಮೊತ್ತದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಪಿಎಂ ಇ ಡ್ರೈವ್ ಯೋಜನೆಯು ಭಾರತದ ಇವಿ ರೂಪಾಂತರದ ಮೂಲಾಧಾರ. 10,900 ಕೋಟಿ ರೂ.ಗಳ ಈ ಯೋಜನೆಯು ಇವಿ ದ್ವಿಚಕ್ರ, ತ್ರಿಚಕ್ರ ವಾಹನಗಳು, ಬಸ್ ಗಳು ಮತ್ತು ಟ್ರಕ್ ಗಳ ಅಳವಡಿಕೆಗೆ ಉತ್ತೇಜನ ನೀಡಿದೆ. ಇದರಲ್ಲಿಚಾರ್ಜಿಂಗ್ ಮೂಲಸೌಕರ್ಯ ನಿಯೋಜನೆಗಾಗಿ 2,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ,’’ ಎಂದು ತಿಳಿಸಿದರು.

