ವಿಕ ಸುದ್ದಿಲೋಕ ಗದಗ
ಬೆಳಗಾವಿಯಲ್ಲೇ ಚಳಿಗಾಲದ ಅಧಿವೇಶನ ನಡೆಸಲಾಗುವುದು. ಅದನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಸರಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ .ಕೆ. ಪಾಟೀಲ ಹೇಳಿದರು.
ಸೋಮವಾರ ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಳಿಗಾಲದ ಅಧಿವೇಶನದ ಸ್ಥಳ ಬದಲಾವಣೆ ಕುರಿತು ಇನ್ನೂ ಸಚಿವ ಸಂಪುಟದಲ್ಲಿಯಾವುದೇ ನಿರ್ಣಯವಾಗಿಲ್ಲ. ಮೇ 29ರಂದು ಮತ್ತೆ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ ಇದ್ದು, ಆ ಸಭೆಯಲ್ಲಿಅಂತಿಮ ನಿರ್ಧಾರ ಕೈಗೊಳ್ಳಬಹುದು ಎಂದು ಅಧಿವೇಶನದ ಸ್ಥಳ ಬದಲಾವಣೆ ಕುರಿತು ಹರಿದಾಡುತ್ತಿರುವ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡಿದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಮಾತನಾಡಿದ ಸಚಿವರು,‘‘ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮಹತ್ವದ ವಿಷಯವಾಗಿದ್ದು, ಕೆಲವು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿಫಲಾನುಭವಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ ಸರಕಾರದ ಗಮನಕ್ಕೆ ಬಂದಿದೆ. ಎಸ್ ಐಆರ್ ಪ್ರಕ್ರಿಯೆಯಲ್ಲಿಮತದಾನದ ಹಕ್ಕು ಕಳೆದುಕೊಂಡರೆ ಗ್ಯಾರಂಟಿ ಸೌಲಭ್ಯಗಳು ನಿಲ್ಲುತ್ತವೆ ಎಂಬ ಭಯ ಜನರಲ್ಲಿಇದೆ. ಕೆಲವರ ಗ್ಯಾರಂಟಿ ಯೋಜನೆಗಳು ಜಿಎಸ್ ಟಿ ಸಂಬಂಧಿತ ಕಾರಣಗಳಿಂದ ಸ್ಥಗಿತಗೊಂಡಿದ್ದವು. ಆದರೆ ಸ್ಪಷ್ಟೀಕರಣ ನೀಡಿದವರ ಪ್ರಕರಣಗಳನ್ನು ಮರುಪರಿಶೀಲಿಸಿ ಪರಿಷ್ಕರಣೆ ಮಾಡಲಾಗುತ್ತಿದೆ’’ಎಂದು ತಿಳಿಸಿದರು.
‘‘ದೇಶದ ಆರ್ಥಿಕ ಸ್ಥಿತಿ ಸರಿಯಾದ ಮಾರ್ಗದಲ್ಲಿಇಲ್ಲಎಂಬ ಕಾರಣಕ್ಕೆ ಜನರ ಬದುಕನ್ನು ಘಾಸಿಗೊಳಿಸಲಾಗುತ್ತಿದೆ. ಚುನಾವಣೆ ಬಂದಾಗ ಒಮ್ಮೆಯೂ ಬೆಲೆ ಏರಿಕೆ ಮಾಡದೇ, ಈಗ ಎರಡ್ಮೂರು ದಿನಕ್ಕೊಮ್ಮೆ ಬೆಲೆ ಏರಿಕೆ ಮಾಡುತ್ತಿದೆ. ಕೇಂದ್ರ ಸರಕಾರ ಜನರ ಬದುಕಿನೊಂದಿಗೆ ಚೆಲ್ಲಾಟ ಆಡಬಾರದು’’ ಎಂದರು.

