ವಿಕ ಸುದ್ದಿಲೋಕ ಕಮಲಾಪುರ ತಾಲೂಕಿನ ಮುತ್ಯಾನ ಬಬಲಾದ ಗ್ರಾಮದ ಶ್ರೀ ಚನ್ನವೀರ ಬೆಟ್ಟದಲ್ಲಿಶ್ರೀ ಗುರು ಚನ್ನವೀರೇಶ್ವರ ಸಂಸ್ಕೃತ ವೇದ ಮತ್ತು ಜ್ಯೋತಿಷ್ಯ ಪಾಠ ಶಾಲೆಯಲ್ಲಿಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ವೈದಿಕ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆಯಿತು. ಶ್ರೀ ಗುರು ಚನ್ನವೀರೇಶ್ವರ ವಿರಕ್ತ ಮಠದ ಪೂಜ್ಯ ಶ್ರೀ ಗುರುಪಾದಲಿಂಗ ಶಿವಯೋಗಿಗಳು ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಖೇಳಗಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿಚಿಕ್ಕ ವಯಸ್ಸಿನಿಂದಲೇ ಸಂಸ್ಕಾರ ಬೆಳೆಸುವುದು ತುಂಬಾ ಅವಶ್ಯಕವಾಗಿದೆ. ಸತ್ಯ, ಶ್ರದ್ಧೆ, ಶಿಸ್ತು, ಸೇವಾಭಾವನೆ, ಹಿರಿಯರ ಗೌರವ ಇವುಗಳನ್ನೇ ಜೀವನದ ಆಧಾರವಾಗಿಸಬೇಕು. ದೇಶದ ದೊಡ್ಡ ಶಕ್ತಿಯಾಗಿರುವ ಯುವಜನರು ಇಂದು ದಾರಿ ತಪ್ಪುತ್ತಿದ್ದು, ಇದಕ್ಕೆ ಮೌಲ್ಯಗಳ ಕೊರತೆಯೇ ಮುಖ್ಯ ಕಾರಣ. ಆದ್ದರಿಂದ ಮಕ್ಕಳ ಚಾರಿತ್ರ್ಯ ನಿರ್ಮಾಣಕ್ಕೆ ಜಂಗಮ ವಟುಗಳಿಗೆ ವೈದಿಕ ಸಂಸ್ಕಾರ ಸಹಾಯಕವಾಗಲಿದೆ. ಮಕ್ಕಳ ಶಾರೀರಿಕ, ಮಾನಸಿಕ ಬೆಳವಣಿಗೆ ಜತೆಗೆ ಆಧ್ಯಾತ್ಮಿಕ ಚಿಂತನೆಗೂ ಇಲ್ಲಿಪ್ರಾಮುಖ್ಯತೆ ನೀಡಲಾಗಿದೆ. ಯೋಗ, ಧ್ಯಾನ, ಪ್ರಾರ್ಥನೆ, ಕ್ರೀಡೆ, ವ್ಯಕ್ತಿತ್ವ ವಿಕಸನ ತರಗತಿ, ಸಾಂಸ್ಕತಿಕ ಚಟುವಟಿಕೆಗಳು ಮಕ್ಕಳ ಸಮಗ್ರ ವಿಕಾಸಕ್ಕೆ ಬುನಾದಿ ಹಾಕಲಾಗಿದೆ ಎಂದರು. ಚಲಗೇರಿಯ ಶ್ರೀ ಶಾಂತವೀರ ಶಿವಾಚಾರ್ಯರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿಮಕ್ಕಳಿಗೆ ಸಂಸ್ಕಾರ, ಮೌಲ್ಯ, ನೈತಿಕ ಪಾಠ ಸಿಗುವುದು ತೀರ ಕಮ್ಮಿಯಾಗಿದೆ. ಮಕ್ಕಳ ಭವಿಷ್ಯ ದೃಷ್ಟಿಯಿಂದ ಪಾಲಕರು ಶಿಕ್ಷಣದಷ್ಟೇ ಮಹತ್ವ ಸಂಸ್ಕಾರ, ಮೌಲ್ಯಗಳಿಗೂ ನೀಡುವುದು ಅನಿವಾರ್ಯವಾಗಿದೆ. ಜಂಗಮ ವಟುಗಳಿಗೆ ವೈದಿಕ ಸಂಸ್ಕಾರ ನೀಡುವಂತಹ ಕಾರ್ಯ ಮಾಡುತ್ತಿರುವ ಮುತ್ಯಾನ ಬಬಲಾದ ಶ್ರೀ ಗುರುಪಾದಲಿಂಗ ಶಿವಯೋಗಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಈ ಶಿಬಿರದಲ್ಲಿಪಡೆದ ವೈದಿಕ ಜ್ಞಾನವನ್ನು ಮಕ್ಕಳು ಪ್ರತಿದಿನ ಅಧ್ಯಯನ ಮಾಡಿ ಶ್ರೇಷ್ಠ ವ್ಯಕ್ತಿಯಾಗಬೇಕು ಎಂದರು. ಈ ಶಿಬಿರದಲ್ಲಿವೈದಿಕ ಶಿವಪೂಜಾ ವಿಧಿ, ಮಂತ್ರ ಪಠಣ, ರುದ್ರಾಭಿಷೇಕ, ಪಂಚಾಭೀಷೇಕ ಮಂತ್ರಗಳು, ಲಿಂಗಾಷ್ಠಕ ಮಂತ್ರ, ಸಹಸ್ರ ನಾಮಾವಳಿ ಮಂತ್ರ, ಇಷ್ಟಲಿಂಗ ಪೂಜಾ ವಿಧಾನ, ವೀರಶೈವ ಧರ್ಮದ ಆಚಾರ ವಿಚಾರ ಸಂಸ್ಕಾರ ಪದ್ಧತಿಗಳನ್ನು ಹಾಗೂ ಇನ್ನಿತರ ಪೂಜಾರ ಸಂಸ್ಕಾರ ಪದ್ಧತಿಗಳ ಅಧ್ಯಯನವನ್ನು ಉಪನ್ಯಾಸ ಮೂಲಕ ತಿಳಿಸಿಕೊಡಲಾಗಿದೆ. ಶರಣಸಿರಸಗಿಯ ವೇದಮೂರ್ತಿ ಸಿದ್ದರಾಮ ದೇವರು ಮತ್ತು ಮಕ್ಕಳು ನಾನಾ ಯೋಗ ಆಸನಗಳನ್ನು ಪ್ರದರ್ಶಿಸಿರುವುದು ಜನರ ಗಮನ ಸೆಳೆಯಿತು. ವೇದಮೂರ್ತಿ ಶಾಂತವೀರಯ್ಯ ಶಾಸ್ತ್ರಿ ಕುರಿಕೋಟಾ, ಬಸವನಬಾಗೇವಾಡಿಯ ವಿಶ್ವನಾಥ ಶಾಸ್ತ್ರಿ, ಸೇಡಂ ಶಿವಕುಮಾರ ಶಾಸ್ತ್ರಿ, ಹೊನ್ನಕಿರಣಗಿಯ ಕರಣಯ್ಯ ಶಾಸ್ತ್ರಿ, ಶರಣಬಸಪ್ಪ ಪಾಟೀಲ್ ಅಷ್ಟಗಿ, ಮಲ್ಲಿಕಾರ್ಜುನ ಮರತುರಕರ್ , ಸಿದ್ದನಗೌಡ ಪಾಟೀಲ್ ಬನ್ನೂರು, ಶರಣಬಸಪ್ಪ ಗುತ್ತಿ ಅಂಬಲಗಿ ಸೇರಿ ಇತರರಿದ್ದರು. ಒಂದು ತಿಂಗಳ ಪರ್ಯಂತ ವೈದಿಕ ಸಂಸ್ಕಾರ ಕಲಿತ ವಿದ್ಯಾರ್ಥಿಗಳಿಗೆ ಪೂಜ್ಯ ಶ್ರೀ ಗುರುಪಾದಲಿಂಗ ಶಿವಯೋಗಿಗಳು ಪ್ರಮಾಣಪತ್ರ ವಿತರಿಸಿದರು.

