ಸ್ಮೂಥಿ ಆರೋಗ್ಯಕರವೇ ?
ಇಂಟ್ರೊ: ಸ್ಮೂಥಿಗಳನ್ನು ತಯರಿಸುವಾಗ ಸರಿಯಾದ ವಿಧಾನ ಹಾಗೂ ಪ್ರಮಾಣ ಅನುಸರಿಸದಿದ್ದರೆ ಅದು ಕ್ಯಾಲೊರಿ ಬಾಂಬ… ಆಗಿ ಆರೋಗ್ಯಕ್ಕೆ ಮಾರಕವಾಗಬಹುದು.
ಲವಲವಿಕೆ ಸುದ್ದಿಲೋಕ
ಯುವ ಜನತೆಯ ಹಲವರ ಬೆಳಗಿನ ಉಪಾಹಾರವೇ ಸ್ಪೂಥಿ. ಇದು ಆರೋಗ್ಯಕ್ಕೆ ಉತ್ತಮ ಎಂಬ ನಂಬಿಕೆ ಇದೆ. ಆದರೆ ತಯಾರಿಸುವ ವಿಧಾನ ಸರಿಯಿಲ್ಲದಿದ್ದರೆ ಆರೋಗ್ಯಕ್ಕೆ ಮಾರಕವಾಗಬಹುದು.
ಸ್ಮೂಥಿಗಳು ಪೌಷ್ಟಿಕಾಂಶಯುಕ್ತ ಮತ್ತು ತಯಾರಿಸಲು ಸುಲಭ ಎಂಬ ಕಾರಣಕ್ಕೆ ಜನಪ್ರಿಯವಾಗಿವೆ. ಆದರೆ ಅವುಗಳನ್ನು ಬಳಸುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನ ಸರಿಯಾಗಿಲ್ಲದಿದ್ದರೆ, ಅತಿಯಾದ ಕ್ಯಾಲೊರಿಗಳನ್ನು ದೇಹಕ್ಕೆ ಸೇರಿಸುವ ಕ್ಯಾಲೊರಿ ಬಾಂಬ… ಆಗಿ ಬದಲಾಗಬಹುದು. ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಆಹಾರ ತಜ್ಞರು ಎಚ್ಚರಿಸಿದ್ದಾರೆ.
ಅತಿಯಾದ ಕ್ಯಾಲೊರಿ ಅಪಾಯ
ಹಣ್ಣುಗಳನ್ನು ಹಾಗೆಯೇ ತಿನ್ನುವಾಗ ನಾರು ಹೆಚ್ಚಿರುತ್ತದೆ ಮತ್ತು ಅಗಿಯಲು ಸಮಯ ಬೇಕಾಗುತ್ತದೆ. ಇದರಿಂದ ಹೊಟ್ಟೆ ಬೇಗ ತುಂಬಿದಂತಾಗುತ್ತದೆ. ಆದರೆ ಸ್ಮೂಥಿ ಮಾಡುವಾಗ ಎರಡು ಬಾಳೆಹಣ್ಣು, ಒಂದು ಮಾವು ಮತ್ತು ಬೆರ್ರಿಗಳನ್ನು ಒಟ್ಟಿಗೆ ಬೆರೆಸಿದಾಗ ನೀವು ಕೆಲವೇ ನಿಮಿಷಗಳಲ್ಲಿಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕ್ಯಾಲೊರಿಯನ್ನು ಸೇವಿಸುತ್ತೀರಿ. ಇದು ನಿಮ್ಮ ದೇಹಕ್ಕೆ ಒಂದೇ ಬಾರಿಗೆ ಅತಿಯಾದ ನೈಸರ್ಗಿಕ ಸಕ್ಕರೆಯನ್ನು ನೀಡುತ್ತದೆ.
ದ್ರವ ರೂಪದ ಕ್ಯಾಲೊರಿ ಮತ್ತು ಹಸಿವು
ಘನ ರೂಪದ ಆಹಾರವನ್ನು ಸೇವಿಸಿದಾಗ ಮಿದುಳಿಗೆ ಸಿಗುವ ಹೊಟ್ಟೆ ತುಂಬಿದೆ ಎಂಬ ಸಂಕೇತ, ದ್ರವ ರೂಪದ ಆಹಾರ ಸೇವಿಸಿದಾಗ ಸಿಗುವುದಿಲ್ಲ. ಇದರಿಂದಾಗಿ ಹೆಚ್ಚಿನ ಕ್ಯಾಲೊರಿ ಇರುವ ಸ್ಮೂಥಿ ಕುಡಿದ ಸ್ವಲ್ಪ ಸಮಯದಲ್ಲೇ ಮತ್ತೆ ಹಸಿವಾಗಬಹುದು. ಇದು ದಿನವಿಡೀ ಅತಿಯಾದ ಆಹಾರ ಸೇವನೆಗೆ ಕಾರಣವಾಗುತ್ತದೆ.
ಹೆಲ್ತ… ಬೂಸ್ಟರ್
ಸ್ಮೂಥಿಯನ್ನು ಹೆಚ್ಚು ರುಚಿಕರವಾಗಿಸಲು ಸೇರಿಸುವ ಪೀನಟ್ ಬಟರ್ , ಜೇನುತುಪ್ಪ, ಒಣ ದ್ರಾಕ್ಷಿ, ತೆಂಗಿನ ಹಾಲು ಮತ್ತು ಪ್ರೊಟೀನ್ ಪೌಡರ್ ಗಳು ಅತಿಯಾದ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಒಂದು ಚಮಚ ಪೀನಟ್ ಬಟರ್ ನಲ್ಲಿ 90 ರಿಂದ 100 ಕ್ಯಾಲೊರಿ ಇರುತ್ತದೆ. ಇವೆಲ್ಲವನ್ನೂ ಸೇರಿಸಿದಾಗ ಸ್ಮೂಥಿಯು ಉಪಾಹಾರದ ಬದಲು ಒಂದು ದೊಡ್ಡ ಊಟದಷ್ಟೇ ಕ್ಯಾಲೊರಿಗಳನ್ನು ಹೊಂದಿರುತ್ತದೆ.
ರೆಡಿಮೇಡ್ ಸ್ಮೂಥಿಗಳ ಬಗ್ಗೆ ಎಚ್ಚರ
ಮಾರುಕಟ್ಟೆಯಲ್ಲಿಸಿಗುವ ಸ್ಮೂಥಿಗಳು ನೈಸರ್ಗಿಕ ಎಂದು ಹೇಳಿಕೊಂಡರೂ ಅವುಗಳಲ್ಲಿಹೆಚ್ಚಿನ ಪ್ರಮಾಣದ ಸಿರಪ್ ಗಳು, ಕೃತಕ ಸಿಹಿ ಮತ್ತು ಫ್ಲೇವರ್ ಗಳನ್ನು ಸೇರಿಸಲಾಗಿರುತ್ತದೆ. ಇವು ಆರೋಗ್ಯಕರ ಪಾನೀಯಕ್ಕಿಂತ ಹೆಚ್ಚಾಗಿ ಡೆಸರ್ಟ್ ತರಹ ಇರುತ್ತವೆ.
ಬಾಕ್ಸ್
ಆರೋಗ್ಯಕರ ಸ್ಮೂಥಿ
- ಹಣ್ಣುಗಳ ಜೊತೆಗೆ ಪಾಲಕ್ , ಸೌತೆಕಾಯಿಯಂತಹ ಹಸಿರು ತರಕಾರಿಗಳನ್ನು ಸೇರಿಸಿ. ಇದು ಫೈಬರ್ ಹೆಚ್ಚಿಸುತ್ತದೆ ಮತ್ತು ಕ್ಯಾಲೊರಿ ಕಡಿಮೆ ಮಾಡುತ್ತದೆ.
- ಸ್ಮೂಥಿ ಕುಡಿದ ನಂತರ ಹೊಟ್ಟೆ ತುಂಬಿದ ಅನುಭವವಾಗಲು ಪ್ರೊಟೀನ್ ಪೌಡರ್ ಅಥವಾ ಸ್ವಲ್ಪ ಚಿಯಾ ಬೀಜಗಳನ್ನು ಸೇರಿಸಿ.
- ಪ್ರತಿ ಪದಾರ್ಥವನ್ನು ಹಾಕುವಾಗ ಅಳತೆ ಮಾಡಿ ಹಾಕಿ. ಕಣ್ಣಳತೆಯಲ್ಲಿಹಾಕುವುದರಿಂದ ಕ್ಯಾಲೊರಿ ಲೆಕ್ಕ ತಪ್ಪಬಹುದು.

