-ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಲು ಒತ್ತಾಯ
ವಿಕ ಸುದ್ದಿಲೋಕ ಮದ್ದೂರು
ತಾಲೂಕು ಕಚೇರಿಯಲ್ಲಿನ ಭ್ರಷ್ಟಾಚಾರ ಹಾಗೂ ವಿ.ಸಿ.ನಾಲಾ ವ್ಯಾಪ್ತಿಯ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ರೈತ ಸಂಘಟನೆಯ ತಾಲೂಕು ಅಧ್ಯಕ್ಷ ವಳಗೆರೆಹಳ್ಳಿ ಉಮೇಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿಮಂಗಳವಾರ ನಡೆದ ರೈತ ಸಂಘದ ಕಾರ್ಯಕರ್ತರ ಹಾಗೂ ತಾಲೂಕು ಸಮಿತಿ ಸಭೆಯಲ್ಲಿಮಾತನಾಡಿ, ‘‘ಮೇ 25ರಂದು ಬೆಳಗ್ಗೆ 11ಕ್ಕೆ ತಾಲೂಕು ಕಚೇರಿ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ,’’ಎಂದರು.
‘‘ಕಳೆದ ಹಲವು ದಿನಗಳಿಂದಲೂ ಕೊನೆ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯದ ಪರಿಣಾಮ ಬೆಳೆಗಳು ಒಣಗಿ ಅಧಿಕ ನಷ್ಟವುಂಟಾಗಿದ್ದು , ಕೂಡಲೇ ಸರಕಾರ ಪರಿಹಾರ ಒದಗಿಸುವ ಜತೆಗೆ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಬೆಳಗಿನ ಸಮಯ 7 ಗಂಟೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಬೇಕು,’’ ಎಂದು ಒತ್ತಾಯಿಸಿದರು.
‘‘ಜಿಲ್ಲೆಹಾಗೂ ತಾಲೂಕಿನಾದ್ಯಂತ ರಸಗೊಬ್ಬರಗಳ ಕೊರತೆ ಕಂಡುಬರುತ್ತಿದ್ದು, ಈಗಾಗಲೇ ಹಲವಾರು ರಸಗೊಬ್ಬರಗಳ ದರ ಏರಿಕೆಯಿಂದಾಗಿ ರೈತರು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸರಕಾರಗಳು ರೈತರ ನೆರವಿಗೆ ಧಾವಿಸದೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮವಾಗಿ ಹಲವಾರು ನಿರ್ಣಯಗಳನ್ನು ಕೈಗೊಂಡು ಪ್ರತಿಭಟನೆಗೆ ಮುಂದಾಗಿದೆ,’’ಎಂದು ಹೇಳಿದರು.
‘‘ಕಬ್ಬಿನ ಬಾಕಿ ಮೊತ್ತವನ್ನು ರೈತರಿಗೆ ಪಾವತಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಕಾರ್ಖಾನೆ ಅಧಿಕಾರಿಗಳು ವಿಳಂಭ ಧೋರಣೆ ಅನುಸರಿಸುತ್ತಿದ್ದು, ಕಾರ್ಖಾನೆಯಿಂದ ಬರಬೇಕಾಗಿರುವ 50 ರೂ. ಜತೆಗೆ ಉಪಉತ್ಪನ್ನಗಳ ಲಾಭಾಂಶದ 150 ರೂ.ಗಳನ್ನು ನೀಡುವಂತೆ ಆಗ್ರಹಿಸಲಾಗುವುದು,’’ಎಂದರು.
‘‘ಸರಕಾರ ಕೃಷಿ ಪಂಪ್ ಸೆಟ್ ಗಳಿಗೆ ಅಳವಡಿಸುವ ಟ್ರಾನ್ಸ್ ಫಾರಂ ಹೆಚ್ಚಿನ ದರ ವಿಧಿಸಲು ಮುಂದಾಗಿದ್ದು, ಕೂಡಲೇ ತೀರ್ಮಾನವನ್ನು ಕೈಬಿಟ್ಟು ಕನಿಷ್ಠ ದರ ವಿಧಿಸಿ ಸರಕಾರವೇ ಟ್ರಾನ್ಸ್ ಫಾರಂ ಅಳವಡಿಸಲು ಮುಂದಾಗಬೇಕು,’’ಎಂದು ಆಗ್ರಹಿಸಿದರು.
‘‘ರೈತರ ಹತ್ತು ಹಲವು ಬೇಡಿಕೆಗಳ ಈಡೇರಿಕೆಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಟ್ಟಿಗೆ ಚರ್ಚಿಸಿ ಮತ್ತು ಸಾರ್ವಜನಿಕರು ತಾಲೂಕು ಕಚೇರಿಗೆ ದಿನನಿತ್ಯ ಅಲೆದಾಡುವ ಪರಿಸ್ಥಿತಿ ಎದುರಾಗಿದ್ದು, ಕಚೇರಿಯಲ್ಲಿವ್ಯಾಪಕ ಭ್ರಷ್ಟಾಚಾರ ಮಿತಿಮೀರಿರುವ ಹಿನ್ನೆಲೆಯಲ್ಲಿಅಧಿಕಾರಿಗಳಿಗೆ ಎಚ್ಚರಿಕೆ ನೀಡಲು ಹಾಗೂ ಸರಕಾರದ ಗಮನ ಸೆಳೆಯಲು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ,’’ಎಂದರು.
ಜಿಲ್ಲಾಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಖಜಾಂಚಿ ರವಿಕುಮಾರ್ , ಕಾರ್ಯದರ್ಶಿ ವಿನೋದ್ ಬಾಬು, ಪದಾಧಿಕಾರಿಗಳಾದ ದೇಸಿಗೌಡ, ವೆಂಕಟೇಶ್ , ಪ್ರಸನ್ನ, ರಮೇಶ್ , ರವಿ, ಸತೀಶ್ ಇತರರಿದ್ದರು.
-----------
ಪೋಟೋ ಶೀರ್ಷಿಕೆಗಳು
ಎಂಡಿವೈ12ಎಂಡಿಆರ್ 4ಸಿ
ನಗರದ ಪ್ರವಾಸಿ ಮಂದಿರದಲ್ಲಿನಡೆದ ರೈತ ಸಂಘಟನೆಯ ಕಾರ್ಯಕರ್ತರ ಸಭೆ ವೇಳೆ ತಾಲೂಕು ಅಧ್ಯಕ್ಷ ವಳಗೆರೆಹಳ್ಳಿ ಉಮೇಶ್ ಮಾತನಾಡಿದರು.

