ಹೊಸದಿಲ್ಲಿ: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶ ಪರೀಕ್ಷೆ ನೀಟ್ (ಯುಜಿ)-2026 ಪ್ರಶ್ನೆ ಪತ್ರಿಕೆ ಸೋರಿಕೆ ವಿದ್ಯಾರ್ಥಿ ಸಮುದಾಯವನ್ನು ತಲ್ಲಣಗೊಳಿಸಿದೆ. ದೇಶದ ಪರೀಕ್ಷಾ ವ್ಯವಸ್ಥೆಯೊಳಗಿನ ಹುಳುಕನ್ನು ಬಯಲು ಮಾಡಿದೆ. ಪರೀಕ್ಷೆ ರದ್ದುಗೊಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಹೊಸ ದಿನಾಂಕ ಪ್ರಕಟಿಸುವುದಾಗಿ ಘೋಷಣೆ ಮಾಡಿದೆ. ಆದರೆ, ಕಠಿಣ ಅಭ್ಯಾಸದ ಮೂಲಕ ಪರೀಕ್ಷೆ ಬರೆದಿದ್ದ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ನಾಸಿಕ್ -ಸಿಕರ್ -ಗುರುಗ್ರಾಮ-ಕೇರಳ ಲಿಂಕ್
ನೀಟ್ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆ ಕೈಗೆತ್ತಿಕೊಂಡ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ ಒಜಿ) ಸೋರಿಕೆಯ ಮೂಲವನ್ನು ಪತ್ತೆ ಮಾಡಿದೆ. ಮಹಾರಾಷ್ಟ್ರದ ನಾಸಿಕ್ ನಲ್ಲಿಸೋರಿಕೆಯಾದ ಪತ್ರಿಕೆ ರಾಜಸ್ಥಾನದ ಸಿಕರ್ ತಲುಪಿದೆ. ಇಲ್ಲಿಂದ ಹರಿಯಾಣ, ಕೇರಳದ ಮೂಲಕ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ಹರಿಯ ಬಿಡಲಾಗಿದೆ. ಪಾಸ್ ವರ್ಡ್ ರಕ್ಷಣೆಯಲ್ಲಿಪಿಡಿಎಫ್ ಮಾದರಿಯ ದಾಖಲೆಯನ್ನು ಹಂಚಿಕೊಳ್ಳಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಬಯಲಾಗಿದ್ದು ಹೇಗೆ?
ಊಹೆ ಮೇಲೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿದೆ. 410 ಪ್ರಶ್ನೆ ರೂಪಿಸಿ, ಪ್ರಶ್ನೆಗೆ ಸೂಕ್ತ ಉತ್ತರ ರೂಪಿಸಿ, ಕೈ ಬರಹದಲ್ಲಿಬರೆದ ದಾಖಲೆಯಲ್ಲಿಪಿಡಿಎಫ್ ಸ್ವರೂಪದಲ್ಲಿಹಣ ನೀಡಿದ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಯ 130ಕ್ಕೂ ಹೆಚ್ಚು ಪ್ರಶ್ನೆಗಳು ಸೋರಿಕೆಯಾದ ಪೇಪರ್ ಜತೆ ಹೋಲಿಕೆಯಾಗಿವೆ. ಕೇರಳದಲ್ಲಿಮೇಡಿಕಲ್ ಶಿಕ್ಷಣ ಪಡೆಯುತ್ತಿದ್ದ ರಾಜಸ್ಥಾನ ಮೂಲದ ವಿದ್ಯಾರ್ಥಿ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ. ಅಕ್ರಮದಲ್ಲಿಹರಿಯಾಣದ ಗುರುಗ್ರಾಮದಲ್ಲಿರುವ ವೈದ್ಯ, ರಾಜಸ್ಥಾನದ ಸಿಕರ್ ನಲ್ಲಿರುವ ಪಿಜಿ ಕೇಂದ್ರ ಭಾಗಿಯಾಗಿರುವುದು ತನಿಖೆಯಲ್ಲಿಕಂಡು ಬಂದಿದೆ.
======
28 ಲಕ್ಷ ರೂ.ಗೆ ಮಾರಾಟ
ಮೇ 3 ರಂದು ನಡೆದ ನೀಟ್ ಪ್ರವೇಶ ಪರೀಕ್ಷೆಗೂ ಮೊದಲು ಪ್ರಶ್ನೆ ಪತ್ರಿಕೆಯನ್ನು ವಾಟ್ಸ್ ಆ್ಯಪ್ , ಟೆಲಿಗ್ರಾಂ ಗ್ರೂಪ್ ಮೂಲಕ ಹರಿಯ ಬಿಡಲಾಗಿದೆ. ವಾಟ್ಸ್ ಆ್ಯಪ್ ಚಾಟ್ ಗಳನ್ನು ಡಿಕೋಡ್ ಮಾಡಿರುವ ತನಿಖಾಧಿಕಾರಿಗಳು, ಪ್ರಶ್ನೆ ಪತ್ರಿಕೆಯನ್ನು ಕನಿಷ್ಠ 30 ಸಾವಿರ ರೂ.ಗಳಿಂದ 28 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ. ಅಕ್ರಮದ ಹಿಂದೆ ಸಂಘಟಿತ ಅಪರಾಧಿಗಳ ಗುಂಪು ಕೆಲಸ ಮಾಡಿರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
==========
ಸೋರಿಕೆಯಾಗಿದ್ದು ಹೇಗೆ?
ನಾಸಿಕ್ ಸರಕಾರಿ ಮುದ್ರಣಾಲಯದಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ. ಮುದ್ರಣಾಯದಲ್ಲಿಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಸೋರಿಕೆ ಮಾಡಿರುವ ಶಂಕೆ ಇದೆ. ಪರೀಕ್ಷಾ ಅಕ್ರಮ ನೆಟ್ ವರ್ಕ್ ಮೂಲಕ ಗುರುಗ್ರಾಮದಲ್ಲಿರುವ ವೈದ್ಯನ ಕೈ ಸೇರಿದ ಪತ್ರಿಕೆಯನ್ನು ಜೈಪುರದ ಖಾತಿಕ್ ಎಂಬಾತ ಖರೀದಿಸಿದ್ದಾನೆ. ಬಳಿಕ ನೀಟ್ ಕೋಚಿಂಗ್ ಸೆಂಟರ್ ಜತೆ ನಂಟು ಹೊಂದಿದ್ದ ಸಿಕರ್ ನ ರಾಕೇಶ್ ಕುಮಾರ್ ಗೆ ಮಾರಾಟ ಮಾಡಿದ್ದಾನೆ. ಬಳಿಕ ವಿವಿಧ ರಾಜ್ಯಗಳಲ್ಲಿದ್ದ ನೆಟ್ ವರ್ಕ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.
ಕೋಚಿಂಗ್ ಸೆಂಟರ್ ಸಲಹೆಗಾರ ರಾಕೇಶ್ ಕುಮಾರ್ ಮೊದಲಿಗೆ ಕೇರಳದಲ್ಲಿದ್ದ ರಾಜಸ್ಥಾನ ಮೂಲಕ ಎಂಬಿಬಿಎಸ್ ವಿದ್ಯಾರ್ಥಿಗೆ 30 ಸಾವಿರ ರೂ.ಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿದ್ದಾನೆ. ಪತ್ರಿಕೆ ಕೊಂಡುಕೊಂಡ ವಿದ್ಯಾರ್ಥಿ ಸಿಕರ್ ನಲ್ಲಿತಮ್ಮ ತಂದೆಗೆ ರವಾನಿಸಿ, ಪಿಜಿಯಲ್ಲಿರುವ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿಯರಿಗೆ ಹಂಚುವಂತೆ ಸೂಚಿಸಿದ್ದಾನೆ. ಮಗನ ಸಲಹೆಯಂತೆ ಪಿಜಿ ಮಾಲಿಕ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡಿದ್ದಾನೆ. ಸೋರಿಕೆಯಾದ ಪತ್ರಿಕೆಯಲ್ಲಿದ್ದ 281 ಪ್ರಶ್ನೆಗಳಲ್ಲಿ ಜೀವಶಾಸ್ತ್ರ ಪತ್ರಿಕೆಯ 90 ಪ್ರಶ್ನೆಗಳು, ರಸಾಯನಶಾಸ್ತ್ರ ಪತ್ರಿಕೆಯ 45 ಪ್ರಶ್ನೆಗಳು ಹೊಂದಾಣಿಕೆಯಾಗಿರುವುದು ತನಿಖೆಯಲ್ಲಿಕಂಡು ಬಂದಿದೆ.
====(ಬಾಕ್ಸ್ )))
ಬೆಳಕಿಗೆ ಬಂದಿದ್ದೇ ರೋಚಕ
ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಮೊದಲಿಗೆ ರಾಜಸ್ಥಾನ ಪೊಲೀಸರಿಗೆ ದೂರು ನೀಡಲಾಗುತ್ತದೆ. ಪೊಲೀಸರು ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಹೋದಾಗ ದೂರುದಾರ ಪರೀಕ್ಷಾ ಏಜೆನ್ಸಿ ಜತೆ ವಿಷಯ ಹಂಚಿಕೊಳ್ಳುತ್ತಾರೆ. ಎನ್ ಟಿಎ ರವಾನಿಸಿದ ಮಾಹಿತಿ ಆಧರಿಸಿ ವಿಷಯ ಸಂಗ್ರಹಿಸಿದ ಗುಪ್ತಚರ ಇಲಾಖೆ, ರಾಜಸ್ಥಾನ ಪೊಲೀಸರಿಗೆ ಅಕ್ರಮದ ಜಾಲ ಬೆನ್ನತ್ತಲು ಸೂಚಿಸುತ್ತದೆ. ತನಿಖೆಗೆ ಇಳಿದ ವಿಶೇಷ ಪೊಲೀಸ್ ಕಾರ್ಯಪಡೆ, ಪಿಜಿ ಕೇಂದ್ರದ ವ್ಯಕ್ತಿ ಸೇರಿ 15 ಮಂದಿಯನ್ನು ಬಂಧಿಸಿದ ಬಳಿಕ ಅಕ್ರಮದ ಜಾಲ ಬೆಳಕಿಗೆ ಬಂದಿದೆ.
====(ಬಾಕ್ಸ್ )))
ಚೀನಾ ಮಾದರಿ ಕ್ರಮಕ್ಕೆ ಆಗ್ರಹ
ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಚೀನಾ ಮಾದರಿಯಲ್ಲಿನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ತಜ್ಞ ಆನಂದ್ ಕುಮಾರ್ ಆಗ್ರಹಿಸಿದ್ದಾರೆ. ಕೋಚಿಂಗ್ ಸೆಂಟರ್ ನಿರ್ಬಂಧ, ಅಕ್ರಮ ತಡೆಗೆ ತಂತ್ರಜ್ಞಾನ ಅಳವಡಿಕೆ, ಪರೀಕ್ಷಾ ಕೇಂದ್ರಗಳಲ್ಲಿಕಟ್ಟು ನಿಟ್ಟಿನ ಮೇಲ್ವಿಚಾರಣೆ, ಮುದ್ರಣದಿಂದ ಪರೀಕ್ಷಾ ಕೇಂದ್ರದವರೆಗೂ ಪ್ರಶ್ನೆ ಪತ್ರಿಕೆಗಳ ಸಾಗಣೆಗೆ ಬಿಗಿಯಾದ ಭದ್ರತಾ ಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚೀನಾದಲ್ಲಿ2021ರಿಂದ ಖಾಸಗಿ ಕೋಚಿಂಗ್ ಸೆಂಟರ್ ನಿರ್ಬಂಧಿಸಲಾಗಿದೆ. ಶಾಲಾ ಕಾಲೇಜುಗಳ ಶಿಕ್ಷಕರ ವಾರಾಂತ್ಯದ ಮನೆಪಾಠ ಕಾರ್ಯಕ್ರಮ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿಮೇಲ್ವಿಚಾರಣೆ, ಅಕ್ರಮ ತಡೆಗೆ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ. ಮುದ್ರಣದಿಂದ ಪರೀಕ್ಷಾ ಕೇಂದ್ರದವರೆಗೆ ಪ್ರಶ್ನೆ ಪತ್ರಿಕೆ ಸಾಗಣೆಗೆ ಸೂಕ್ತ ಭದ್ರತೆ ಒದಗಿಸಲಾಗಿದೆ.

