ವಿಕ ಸುದ್ದಿಲೋಕ ಬೆಂಗಳೂರು
ಕ್ರಿಮಿನಲ್ ಪ್ರಕರಣಗಳಲ್ಲಿಪ್ರಾಸಿಕ್ಯೂಷನ್ ಪರವಾಗಿ ಸಾಕ್ಷಿ ನುಡಿಯದೆ ಪ್ರತಿಕೂಲ ಸಾಕ್ಷ್ಯ ನುಡಿಯುವ ಸಂತ್ರಸ್ತರಿಗೆ ಸರಕಾರದ ಸಂತ್ರಸ್ತರ ಪರಿಹಾರ ಯೋಜನೆಯಡಿ ಪರಿಹಾರ ನೀಡುವುದಕ್ಕೆ ಅವಕಾಶವಿಲ್ಲಎಂದು ಹೈಕೋರ್ಟ್ ಆದೇಶಿಸಿದೆ.
ಅತ್ಯಾಚಾರ ಪ್ರಕರಣದಲ್ಲಿಪ್ರತಿಕೂಲ ಸಾಕ್ಷ್ಯ ನುಡಿದ ಸಂತ್ರಸ್ತೆಗೆ 3 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂಬ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
‘‘ಸಂತ್ರಸ್ತೆ ನೀಡಿದ ಪ್ರತಿಕೂಲ ಹೇಳಿಕೆಯ ಆಧಾರದಲ್ಲಿಆರೋಪಿ ಖುಲಾಸೆಗೊಂಡಿದ್ದಾನೆ. ಆದ್ದರಿಂದ, ಪ್ರತಿಕೂಲ ಹೇಳಿಕೆ ನೀಡಿದ ಸಂತ್ರಸ್ತೆಗೆ ಪರಿಹಾರ ನೀಡಲು ನಿರ್ದೇಶಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಲಾಗಿದೆ,’ಧಿ’ ಎಂದು ನ್ಯಾಯಪೀಠ ತಿಳಿಸಿದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪರ ಎ.ಎಸ್ .ವಿಘ್ನೇಶ್ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ:
ತುಮಕೂರು ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿಸಂತ್ರಸ್ತೆ, ತನಿಖಾಧಿಕಾರಿ ಮತ್ತು ಮ್ಯಾಜಿಸ್ಪ್ರೇಟ್ ಮುಂದೆ ಹಾಜರಾಗಿ ಆರೋಪಿಯ ವಿರುದ್ಧ ಸಾಕ್ಷಿ ಹೇಳುವುದಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ನ್ಯಾಯಾಲಯದಲ್ಲಿನ ಪಾಟಿ ಸವಾಲು ಸಂದರ್ಭದಲ್ಲಿತಮ್ಮ ಮೊದಲಿನ ಹೇಳಿಕೆಗೆ ತದ್ವಿರುದ್ಧ ವಿವರಣೆ ನೀಡಿದ್ದರು. ಇದರಿಂದ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು.
ಆದರೆ, ಈ ಅಂಶವನ್ನು ಪರಿಗಣಿಸದ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರೂ ಆದ ಜಲ್ಲಾಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಸಂತ್ರಸ್ತೆಗೆ 3 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದರು. ಈ ಕ್ರಮವನ್ನು ಪ್ರಶ್ನಿಸಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

