12ನಿಜಗುಣಿ2
ಕಲಘಟಗಿಗೆ ಜೂ.15ರಿಂದ 24*7 ನೀರು
ವಿಕ ಸುದ್ದಿಲೋಕ ಧಾರವಾಡ
ಕಲಘಟಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 17 ವಾರ್ಡ್ ಗಳಿಗೆ ಜೂನ್ 15ರಿಂದ 24*7 ಕುಡಿಯುವ ನೀರು ಪೂರೈಕೆ ಆಗಲಿದೆ. ಅಣ್ಣಿಗೇರಿ, ನವಲಗುಂದ, ಕುಂದಗೋಳ ಪಟ್ಟಣಗಳಲ್ಲಿಯೂ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವುದಾಗಿ ಜಿಲ್ಲಾಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಮಂಗಳವಾರ ಜಿಲ್ಲಾವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ ಅವರು, ಬೇಸಿಗೆ ಕಾಲದ ಕುಡಿಯುವ ನೀರು, ಜಾನುವಾರು ಮೇವು ಹಾಗೂ ಅಕಾಲಿಕ ಮಳೆಯಿಂದ ಆಗಿರುವ ಹಾನಿ ಮತ್ತು ಪರಿಹಾರ ಕೈಗೊಂಡಿರುವ ಕುರಿತು ಪರಿಶೀಲಿಸಿದರು.
ಕಲಘಟಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 17 ವಾರ್ಡ್ ಗಳಲ್ಲಿ19 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪ್ರತಿದಿನಕ್ಕೆ 3 ಎಂಎಲ್ ಡಿ ನೀರು ಪೂರೈಸಲಾಗುತ್ತಿದೆ. 35.38 ಕೋಟಿ ರೂ. ಮೊತ್ತದ ಈ 24*7 ನೀರು ವ್ಯವಸ್ಥೆಯನ್ನು ಜೂನ್ 15ರಿಂದ ಆರಂಭಿಸಲಾಗುವುದು. ಅಣ್ಣಿಗೇರಿ, ನವಲಗುಂದ, ಕುಂದಗೋಳಗಳಲ್ಲಿನೀರು ಪೂರೈಕೆ ಆಗುವವರೆಗೆ ಅಲ್ಲಿಯ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಬೇಸಿಗೆ ಸಮಯದಲ್ಲಿಯೂ 4-5 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಹಾಗೂ ಅವರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಧಾರವಾಡ, ಹುಬ್ಬಳ್ಳಿ ಮತ್ತು ಕಲಘಟಗಿ ತಾಲೂಕಿನ ಗ್ರಾಮಗಳಲ್ಲಿಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, 16 ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ2,35,059 ದನ ಮತ್ತು ಎಮ್ಮೆಗಳು, 1,49,220 ಕುರಿ ಮತ್ತು ಮೇಕೆಗಳಿವೆ. ಜಿಲ್ಲೆಯಲ್ಲಿಪ್ರಸ್ತುತ ವಾರ 5,06,588.81 ಮೆ.ಟನ್ ಮೇವು ಉಳಿಕೆ ಇದೆ. ಅದು ಮುಂದಿನ 49 ವಾರಗಳಿಗೆ ಆಗಲಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ . ವಿವರಿಸಿದರು.
ಜಿಪಂ ಸಿಇಒ ಭುವನೇಶ ಪಾಟೀಲ, ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ಎಡಿಸಿ ಗೀತಾ ಸಿ.ಡಿ. ಉಪಸ್ಥಿತರಿದ್ದರು.
ಬಾಕ್ಸ್ ..
ಮನೆ ಬಾಗಿಲಿಗೆ ತೆರಳಿ ಎಫ್ ಐಡಿ ನೀಡಿ:
ರೈತರ ಹಿತದೃಷ್ಟಿಯಿಂದ 7ಎ ಪ್ರಕರಣಗಳನ್ನು ಪರಿಹರಿಸಬೇಕು. ದಾಖಲೆಗಳ ನ್ಯೂನತೆ ಹಾಗೂ ಕೊರತೆ ಕಂಡಲ್ಲಿನಿಯಮಾನುಸಾರ ರೈತರಿಗೆ ಅವಕಾಶ ನೀಡಿ, ಪರಿಶೀಲಿಸಬೇಕು. ಮುಂಗಾರಿನಲ್ಲಿಅಗತ್ಯದ ಬೀಜ, ರಾಸಾಯನಿಕ ಗೊಬ್ಬರ ದಾಸ್ತಾನು ಮಾಡಿ, ವಿತರಿಸಬೇಕು. ಕೃಷಿ ಇಲಾಖೆಯ ಎಲ್ಲಸೌಲಭ್ಯಗಳನ್ನು ಪಡೆಯಲು ಪ್ರತಿ ರೈತರಿಗೆ ಎಫ್ ಐಡಿ ಸಂಖ್ಯೆ ಕಡ್ಡಾಯ. ಈಗಾಗಲೇ ಶೇ.77ಕ್ಕಿಂತ ಹೆಚ್ಚು ರೈತರು ಎಫ್ ಐಡಿ ಸಂಖ್ಯೆ ಹೊಂದಿದ್ದಾರೆ ಎಂದು ಸಚಿವರು ಹೇಳಿದರು.
ಬಾಕ್ಸ್ ..
ಕೈಗಾರಿಕಾ ವಲಯ ಅಭಿವೃದ್ಧಿಗೆ ಬದ್ಧ
ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯಗಳ ಉನ್ನತೀಕರಣಕ್ಕೆ ರಾಜ್ಯ ಸರಕಾರವು ಆದ್ಯತೆ ನೀಡಿದೆ. ವಿವಿಧ ಕಾರ್ಯಗಳಿಗಾಗಿ ಭೂಸ್ವಾಧೀನ ಕಾರ್ಯವು ಪ್ರಗತಿಯಲ್ಲಿದೆ. ಭೂಸ್ವಾಧೀನ ಮಾಡಿಕೊಂಡ ರೈತರಿಗೆ ಪರಿಹಾರ ಧನ ವಿತರಣೆ ಕಾರ್ಯವು ಪ್ರಗತಿಯಲ್ಲಿದ್ದು, ರಾಜ್ಯ ಸರಕಾರವು ರೈಲು ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪಡಿಸಿಕೊಳ್ಳುವ ಕಾರ್ಯವನ್ನು ಆದ್ಯತೆ ಮೇಲೆ ಕೈಗೊಳ್ಳುತ್ತಿದೆ ಎಂದು ಸಂತೋಷ ಲಾಡ್ ತಿಳಿಸಿದರು.
ಫೋಟೊ: 12ನಿಜಗುಣಿ2
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಮಂಗಳವಾರ ನಡೆದ ಜಿಲ್ಲಾವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿಸಚಿವ ಸಂತೋಷ ಲಾಡ್ ಮಾತನಾಡಿದರು.

