ಯೋಗಕ್ಷೇಮ ಹೆಚ್ಚಿಸುವ ಯೋಗ
--
ನಿತ್ಯ ಯೋಗ ಮಾಡುವುದರಿಂದ ಮಾನಸಕ, ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
-------
*ಗೋಪಾಲಕೃಷ್ಣ ದೇಲಂಪಾಡಿ
-------------
ಯೋಗವು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುವ ಜೀವನ ವಿಧಾನ. ಸಂಸ್ಕೃತ ಮೂಲದಿಂದ ಬಂದ ಯೋಗ ಎಂಬ ಪದವು ಸೇರುವುದು, ಒಗ್ಗೂಡಿಸುವುದು ಎಂಬ ಅರ್ಥವನ್ನು ನೀಡುತ್ತದೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾಧಿಸುತ್ತದೆ. ನಮ್ಮ ಚಿಂತನೆ ಮತ್ತು ಕ್ರಿಯೆಯನ್ನು ಒಂದುಗೂಡಿಸುತ್ತದೆ. ಮಾನವ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ ಸಾಧಿಸುತ್ತದೆ.
ಇಂದು ವಿಶ್ವವೇ ಯೋಗದ ಕಡೆಗೆ ಮುಖ ಮಾಡುತ್ತಿದೆ. ಯೋಗದ ಬಗ್ಗೆ ಅರಿವು ಮೂಡಿದೆ. ಯೋಗ ಅಭ್ಯಾಸ ಮಾಡುವವ ಸಂಖ್ಯೆ ಹೆಚ್ಚಾಗುತ್ತದೆ. ಯೋಗ ಕಲಿತವರು (ನಿತ್ಯ ಅಭ್ಯಾಸ ಮಾಡುವವರು) ಅದರ ಪ್ರಯೋಜನಗಳನ್ನು ಇನ್ನೊಬ್ಬರಿಗೆ ಹಂಚುತ್ತಿರುವುದು ಕಂಡು ಬಂದಿದೆ. ಹೆಚ್ಚಿನ ಆರೋಗ್ಯ ಸಮಸ್ಯೆ ಉಂಟಾಗುವುದು ಮನಸ್ಸಿನ ದೋಷದಿಂದಲೇ ಎಂಬುದು ದೃಢಪಟ್ಟಿದೆ. ಮನಸ್ಸಿನ ಶಾಂತಿ, ನೆಮ್ಮದಿ ಹಾಗೂ ನಿಯಂತ್ರಣಕ್ಕೆ ನಮ್ಮ ಯೋಗ ಎಂಬುದೇ ರಾಜಮಾರ್ಗವಾಗಿದೆ. ಇತ್ತೀಚಿನ ದಿನಗಳಲ್ಲಿವೈದ್ಯರು ಔಷಧ ನೀಡುವುದರ ಜತೆಗೆ ನಡಿಗೆ, ವ್ಯಾಯಾಮ ಹಾಗೂ ಯೋಗ ಮಾಡಿ ಎಂದು ಸೂಚಿಸುತ್ತಾರೆ.
ವಿಶ್ವಕ್ಕೇ ಮಾದರಿ ಪ್ರಾಚೀನ ಯೋಗ ವಿಧಾನ
ಜೂನ್ 21ನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. ಯುಎನ್ ಜಿಎ ತನ್ನ ನಿರ್ಣಯದಲ್ಲಿ, ‘ಯೋಗವು ಜೀವನದ ಎಲ್ಲಾಅಂಶಗಳ ನಡುವೆ ಸಮತೋಲನವನ್ನು ಸಾಧಿಸುವುದರ ಜೊತೆಗೆ ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ವಿಧಾನವಾಗಿದೆ. ಯೋಗವನ್ನು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ಒದಗಿಸುತ್ತದೆ. ವಿಶ್ವದ ಜನರ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ’ ಎಂದು ಅನುಮೋದಿಸಿದೆ. ಆ ಮೂಲಕ ಸಮಗ್ರ ಆರೋಗ್ಯ ಕ್ರಾಂತಿಗೆ ಕಾರಣವಾಯಿತು.
ಯೋಗವು ಕೇವಲ ಒಂದು ವ್ಯಾಯಾಮವಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನದಲ್ಲಿಡುವ ಒಂದು ಸಮಗ್ರ ಜೀವನ ಪದ್ಧತಿಯಾಗಿದೆ. ಯೋಗಾಭ್ಯಾಸದಿಂದ ನಮ್ಮ ದೇಹ ಮತ್ತು ಮನಸ್ಸಿಗೆ ದೊರೆಯುವ ಪ್ರಮುಖ ಪ್ರಯೋಜನಗಳು ಇಲ್ಲಿವೆ.
ಯೋಗದಿಂದ ದೈಹಿಕ ಪ್ರಯೋಜನಗಳು
*ಸದೃಢತೆ ಮತ್ತು ನಮ್ಯತೆ
ಯೋಗದ ಆಸನಗಳು ಸ್ನಾಯುಗಳನ್ನು ಬಲಪಡಿಸುತ್ತವೆ ಮತ್ತು ದೇಹದ ಲವಲವಿಕೆಯನ್ನು ಹೆಚ್ಚಿಸುತ್ತವೆ. ಇದು ಕೀಲು ನೋವು ಮತ್ತು ಬೆನ್ನು ನೋವನ್ನು ಕಡಿಮೆ ಮಾಡಲು ಸಹಕಾರಿ.
*ಹೃದಯದ ಆರೋಗ್ಯ
ನಿಯಮಿತ ಯೋಗವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದರಿಂದ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.
* ತೂಕ ನಿರ್ವಹಣೆ
ಯೋಗವು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ಅನಗತ್ಯ ಕೊಬ್ಬನ್ನು ಕರಗಿಸಲು ಮತ್ತು ತೂಕವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
*ರೋಗ ನಿರೋಧಕ ಶಕ್ತಿ: ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ವಿವಿಧ ಕಾಯಿಲೆಗಳಿಂದ ರಕ್ಷಿಸುತ್ತದೆ.
*ಉತ್ತಮ ಉಸಿರಾಟ: ಪ್ರಾಣಾಯಾಮದಂತಹ ಶ್ವಾಸಕ್ರಿಯೆಗಳು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿ ದೇಹಕ್ಕೆ ಹೆಚ್ಚಿನ ಆಮ್ಲಜನಕವನ್ನು ಪೂರೈಸುತ್ತವೆ.
ಯೋಗದ ಮಾನಸಿಕ ಪ್ರಯೋಜನಗಳು
*ಒತ್ತಡ ಮತ್ತು ಆತಂಕ ನಿವಾರಣೆ
ಧ್ಯಾನ ಮತ್ತು ಉಸಿರಾಟದ ತಂತ್ರಗಳು ಮನಸ್ಸನ್ನು ಶಾಂತಗೊಳಿಸಿ ಒತ್ತಡ ಮತ್ತು ಆತಂಕವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ.
* ಏಕಾಗ್ರತೆ ಮತ್ತು ಸ್ಮರಣಶಕ್ತಿ
ಯೋಗವು ಮೆದುಳನ್ನು ಚುರುಕಾಗಿಸಿ ಏಕಾಗ್ರತೆಯನ್ನು ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಉತ್ತಮ ನಿದ್ರೆ
ನಿದ್ರಾಹೀನತೆಯಿಂದ ಬಳಲುವವರಿಗೆ ಯೋಗವು ರಾಮಬಾಣದಂತೆ ಕೆಲಸ ಮಾಡುತ್ತದೆ, ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
* ಸಕಾರಾತ್ಮಕ ಆಲೋಚನೆ
ಇದು ಮನಸ್ಸಿನಲ್ಲಿಸಕಾರಾತ್ಮಕ ಭಾವನೆಗಳನ್ನು ಮೂಡಿಸಿ, ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಭಾವನಾತ್ಮಕ ಸ್ಥಿರತೆ ತರಲು ಸಹಾಯ ಮಾಡುತ್ತದೆ.
ಗಮನಿಸಿ:ಯೋಗವನ್ನು ಸರಿಯಾದ ಕ್ರಮದಲ್ಲಿಮತ್ತು ನುರಿತ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿಅಭ್ಯಾಸ ಮಾಡುವುದು ಹೆಚ್ಚು ಫಲಪ್ರದ ಮತ್ತು ಸುರಕ್ಷಿತ. ನೀವು ಮೊದಲ ಬಾರಿಗೆ ಯೋಗ ಮಾಡುತ್ತಿದ್ದರೆ, ನುರಿತ ಯೋಗ ತರಬೇತುದಾರರ ಮಾರ್ಗದರ್ಶನದಲ್ಲಿಕಲಿಯುವುದು ಉತ್ತಮ. ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯಿರಿ.
ಯೋಗದ ನಂತರ ವಿಶ್ರಾಂತಿ
ಯೋಗ ಮುಗಿಸಿದ ನಂತರ ಕೊನೆಯಲ್ಲಿ5-10 ನಿಮಿಷಗಳ ಕಾಲ ಶವಾಸನ ಮಾಡುವುದು ಬಹಳ ಮುಖ್ಯ.
- ಸ್ನಾನ: ಯೋಗ ಮಾಡಿದ ತಕ್ಷಣ ಸ್ನಾನ ಮಾಡಬೇಡಿ. ಕನಿಷ್ಠ 30 ನಿಮಿಷಗಳ ನಂತರ ಸ್ನಾನ ಮಾಡುವುದು ಒಳ್ಳೆಯದು.
- ಆಹಾರ ಯೋಗದ ನಂತರ ಅರ್ಧ ಗಂಟೆಯವರೆಗೆ ಯಾವುದೇ ಆಹಾರ ಸೇವಿಸಬೇಡಿ
ಯೋಗಾಭ್ಯಾಸ ಮಾಡುವಾಗ ಪಾಲಿಸಬೇಕಾದ ಕೆಲವು ಮುಖ್ಯ ನಿಯಮಗಳು ಮತ್ತು ಸೂಚನೆಗಳು ಇಲ್ಲಿವೆ.
ಯೋಗ ಮಾಡುವ ಮುನ್ನ
* ಸಮಯ: ಯೋಗವನ್ನು ಮುಂಜಾನೆ ಮಡುವುದು ಅತ್ಯಂತ ಉತ್ತಮ. ಸಂಜೆ ಮಾಡುವುದಾದರೆ ಸೂರ್ಯಾಸ್ತದ ಸಮಯದಲ್ಲಿಮಾಡಬಹುದು.
* ಖಾಲಿ ಹೊಟ್ಟೆ: ಯೋಗಾಭ್ಯಾಸವನ್ನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿಮಾಡಬೇಕು. ಆಹಾರ ಸೇವಿಸಿದ ಕನಿಷ್ಠ 3-4 ಗಂಟೆಗಳ ನಂತರ ಯೋಗ ಮಾಡುವುದು ಸೂಕ್ತ.
* ಸ್ಥಳ: ಯೋಗ ಮಾಡಲು ಶಾಂತವಾದ ಗಾಳಿ-ಬೆಳಕು ಆಡುವ ಮತ್ತು ಸಮತಟ್ಟಾದ ಜಾಗವನ್ನು ಆರಿಸಿಕೊಳ್ಳಿ.
* ಯೋಗ ಮ್ಯಾಟ್ : ಬರಿ ನೆಲದ ಮೇಲೆ ಯೋಗ ಮಾಡಬೇಡಿ. ಒಂದು ಯೋಗ ಮ್ಯಾಟ್ ಅಥವಾ ದಪ್ಪನೆಯ ಬಟ್ಟೆಯನ್ನು ಹಾಸಿಕೊಳ್ಳಿ.
ಅಭ್ಯಾಸದ ಸಮಯದಲ್ಲಿ
- ವಾಮ್ ರ್ ಅಪ್ : ಆಸನಗಳನ್ನು ಮಾಡುವ ಮೊದಲು ಲಘು ವ್ಯಾಯಾಮ ಅಥವಾ ಕುತ್ತಿಗೆ, ಕೈ-ಕಾಲುಗಳ ಚಲನೆಯ ಮೂಲಕ ದೇಹವನ್ನು ಸಿದ್ಧಗೊಳಿಸಿಕೊಳ್ಳಿ.
* ಉಸಿರಾಟ: ಯೋಗ ಮಾಡುವಾಗ ಉಸಿರಾಟವು ಸಹಜವಾಗಿರಲಿ. ಬಾಯಿಯಿಂದ ಉಸಿರಾಡದೆ ಮೂಗಿನ ಮೂಲಕವೇ ಉಸಿರಾಡಿ.
* ಬಲವಂತ ಬೇಡ: ನಿಮ್ಮ ದೇಹಕ್ಕೆ ಎಷ್ಟು ಸಾಧ್ಯವೋ ಅಷ್ಟು ಮಾತ್ರ ಆಸನಗಳನ್ನು ಮಾಡಿ. ದೇಹದ ಮೇಲೆ ಅತಿಯಾದ ಒತ್ತಡ ಹೇರಬೇಡಿ.
* ಏಕಾಗ್ರತೆ: ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ ಮತ್ತು ಮಾಡುವ ಆಸನದ ಮೇಲೆ ಗಮನವಿರಲಿ.
Ü್ರಮುಖ ಯೋಗಗಳು ;
* ಆರಂಭದಲ್ಲಿಪ್ರಾರ್ಥನೆ, ನಿಂತುಕೊಂಡು ಕುತ್ತಿಗೆಗೆ ವ್ಯಾಯಾಮ, ಭುಜಗಳಿಗೆ ವ್ಯಾಯಾಮ ಸೊಂಟಕ್ಕೆ ವ್ಯಾಯಾಮ (ತಿರುಚುವಿಕೆ) ಮತ್ತು ಮೊಣಕಾಲುಗಳಿಗೆ ವ್ಯಾಯಾಮಗಳು.
* ಆಯ್ದ ಆಸನಗಳ ಪಟ್ಟಿ : ನಿಂತುಕೊಂಡು(ಆಸನಗಳು): ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ.
* ಕುಳಿತುಕೊಂಡು ಮಾಡುವ ಆಸನಗಳು : ದಂಡಾಸನ, ಬದ್ಧಕೋಣಾಸನ, (ಭದ್ರಾಸನ), ವಜ್ರಾಸನ, ಅರ್ಧ ಉಷ್ಮಾಸನ, ಶಶಾಂಕಾಸನ, ಮಂಡೂಕಾಸನ, ವಕ್ರಾಸನ.
* ಹೊಟ್ಟೆಯ ಆಧಾರದಲ್ಲಿಮಾಡುವ ಆಸನಗಳು: ಮಕಾರಾಸನ, ಭುಜಾಂಗಾಸನ, ಶಲಭಾಸನ.
* ಬೆನ್ನಿನ ಆಧಾರದಲ್ಲಿಅಭ್ಯಾಸ ಮಾಡುವ ಆಸನಗಳು: ಸೇತು ಬಂಧ ಸರ್ವಾಂಗಾಸನ, ಪವನಮುಕ್ತಾಸನ, ಶವಾಸನ.
* ಆಮೇಲೆ ಕಪಾಲಭತಿ, ನಾಡೀಶುದ್ಧಿ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ ಹಾಗೂ ಉಸಿರನ್ನು ಗಮನಿಸುವ ಧ್ಯಾನ (ಬೆನ್ಮುದ್ರೆಯಲ್ಲಿ).
ಲೇಖಕರು: ಅಂತಾರಾಷ್ಟ್ರೀಯ ಯೋಗ ಪಟು

