ನೀರಾವರಿ ವಿಚಾರ, ಬಹಿರಂಗ ಚರ್ಚೆಗೆ ಬನ್ನಿ

Contributed bymanjunatha.kp@timesgroup.com|Vijaya Karnataka

ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ವಿಚಾರವಾಗಿ ಸಚಿವ ಎಂ.ಬಿ.ಪಾಟೀಲರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ನೀರಾವರಿ ಕಾಂಗ್ರೆಸ್ ಕೊಡುಗೆ ಎನ್ನುವ ಸಚಿವರ ಹೇಳಿಕೆಗೆ ತಿರುಗೇಟು ನೀಡಿದ ಅಂಗಡಿ, ಬಿಜೆಪಿ ಸರಕಾರದ ಅವಧಿಯಲ್ಲಿ ನೀರಾವರಿ ಆರಂಭವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿದ್ದಾರೆ.

bjps complete argument on irrigation structure during a heated debate with cm mb patil

ಸಚಿವ ಎಂ.ಬಿ.ಪಾಟೀಲರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಅಂಗಡಿ ಆಹ್ವಾನ

ನೀರಾವರಿ ವಿಚಾರ, ಬಹಿರಂಗ ಚರ್ಚೆಗೆ ಬನ್ನಿ

ವಿಕ ಸುದ್ದಿಲೋಕ ವಿಜಯಪುರ

ಜಿಲ್ಲೆಯಲ್ಲಿಅನುಷ್ಠಾನಗೊಂಡ ನೀರಾವರಿ ಯೋಜನೆಗಳು ಕಾಂಗ್ರೆಸ್ ಕೊಡುಗೆ ಎಂದು ಸಚಿವ ಎಂ.ಬಿ.ಪಾಟೀಲರು ಹೇಳುತ್ತಿದ್ದಾರೆ. ಆದರೆ, ನೀರಾವರಿಗೆ ಬಿಜೆಪಿ ಸರಕಾರ ಕೊಡುಗೆ ನೀಡಿದೆ. ಈ ಬಗ್ಗೆ ಸಚಿವರು ಬಹಿರಂಗ ಚರ್ಚೆಗೆ ಬರಲಿ, ಸಾಬೀತುಪಡಿಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ನೀರಾವರಿ ನಮ್ಮ ಪಕ್ಷದ ಕೊಡುಗೆ ಎಂದು ಸಾಬೀತುಪಡಿಸಲು ನಾವು ಸಿದ್ಧ. ಸಚಿವರು ತಮ್ಮ ಸರಕಾರದ ಕೊಡುಗೆ ಎಂದು ಸಾಬೀತುಪಡಿಸಲಿ,’’ ಎಂದು ಸವಾಲು ಹಾಕಿದರು.

‘‘ನೀರಾವರಿ ಎನ್ನುವ ಪರಿಕಲ್ಪನೆಯೇ ಕಾಂಗ್ರೆಸ್ ಗೆ ಇರಲಿಲ್ಲ, ಈಗ ನೀರಾವರಿ ಎನ್ನುವ ಕಾಂಗ್ರೆಸ್ ನಾಯಕರು ಸುದೀರ್ಘ ಆಳ್ವಿಕೆಯಲ್ಲಿಮಲಗಿದ್ದರಾ?, ನೀರಾವರಿ ಆರಂಭವಾಗಿದ್ದೇ ಬಿಜೆಪಿ ಕಾಲಘಟ್ಟದಲ್ಲಿಎಂಬುದನ್ನು ಅರ್ಥೈಸಿಕೊಳ್ಳಬೇಕು. ಕೆರೆ ತುಂಬುವ ಯೋಜನೆ ಆರಂಭವಾಗಿದ್ದೇ ಬಿಜೆಪಿ ಸರಕಾರದ ಅವಧಿಯಲ್ಲಿ,’’ ಎಂದರು.

‘‘ಬಬಲೇಶ್ವರ ಮತಕ್ಷೇತ್ರದ ರಸ್ತೆಗಳು ಹಾಳಾಗಿದ್ದು, ವಾಹನ ಸವಾರರು ನಿತ್ಯ ತೊಂದರೆ ಎದುರಿಸುವಂತಾಗಿದೆ. ಒಂದೇ ಒಂದು ರಸ್ತೆ ನಿರ್ಮಿಸಿಲ್ಲ,’’ ಎಂದು ಆರೋಪಿಸಿದರು.

ಶಾಸಕರ ಹೇಳಿಕೆಗೆ ಖಂಡನೆ: ‘‘ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನಾರ್ಹ. ಮೋದಿ ಅವರ ಆಡಳಿತ ಘಟ್ಟದಲ್ಲಿನಮ್ಮ ದೇಶದ ಭವಿಷ್ಯ ಉಜ್ವಲವಾಗುತ್ತಿದೆ, ಈ ಬಗ್ಗೆ ಇಡೀ ಪ್ರಪಂಚ ಅವರ ಆಡಳಿತ ಮೆಚ್ಚಿದೆ,’’ ಎಂದು ಗುರುಲಿಂಗಪ್ಪ ಅಂಗಡಿ ಹೇಳಿದರು.

‘‘ಮೋದಿ ಅವರ ಅಭಿಮಾನಿಗಳಿಗೆ ಅಂಧ ಭಕ್ತರು ಎಂದು ಕರೆದಿರುವ ಇಂಡಿ ಶಾಸಕರು, ರಾಹುಲ್ ಗಾಂಧಿ ಅವರ ಅಂಧ ಭಕ್ತರಲ್ಲದೆ ಮತ್ತೇನು? ನಮ್ಮ ದೇಶದ ಘನತೆ ಹಾಳು ಮಾಡಿದ ಅಪಕೀರ್ತಿ ರಾಹುಲ್ ಗಾಂಧಿ ಅವರಿಗಿದೆ,’’ ಎಂದರು.

ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ, ‘‘ಇಂಡಿ ಶಾಸಕರು ಬುದ್ಧಿವಂತರು, ಒಳ್ಳೆಯವರು ಎಂಬ ಭಾವನೆ ಇತ್ತು. ಆದರೆ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ,’’ ಎಂದರು.

ಮುಖಂಡರಾದ ಡಿ.ಜಿ.ಬಿರಾದಾರ, ಈರಣ್ಣ ರಾವೂರ ಇತರರು ಉಪಸ್ಥಿತರಿದ್ದರು.