ಮುಂದಿನ 2-3 ತಿಂಗಳೊಳಗೆ ಸ್ಥಳೀಯಾಡಳಿತ ಚುನಾವಣೆ: ಸಚಿವ ಎನ್ .ಎಸ್ .ಭೋಸರಾಜು
ವಿಕ ಸುದ್ದಿಲೋಕ ಕುಂದಾಪುರ
ಕಾಂಗ್ರೆಸ್ ಮುಕ್ತ ಭಾರತ ಕನಸು ಈಡೇರದಿರುವ ಸಂಕಟ ಬಿಜೆಪಿ ಅನುಭವಿಸುತ್ತಿದೆ. ಬೆಂಗಳೂರಿನಲ್ಲಿಪ್ರಧಾನಿ ಮೋದಿ ಅವರ ಹತಾಶೆಯ ಮಾತುಗಳೆ ಇದಕ್ಕೆ ಸಾಕ್ಷಿ. ಒಳ್ಳೆಯ ದಿನ ಕೊಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ದೇಶದ ಜನತೆಗೆ ಕೆಟ್ಟ ದಿನಗಳನ್ನು ನೀಡಿದೆ. ಜನರು ಸಾಕಪ್ಪ ಇವರ ಉಸಾಬಾರಿ ಎಂಬಷ್ಟರ ಮಟ್ಟಿಗೆ ಪರಿಸ್ಥಿತಿ ಬಂದೊದಗಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷಕ್ಕೆ ಉಜ್ವಲ ಅವಕಾಶ ತೆರೆದುಕೊಂಡಿದೆ. ಮುಂದಿನ 2-3 ತಿಂಗಳೊಳಗೆ ಸ್ಥಳೀಯಾಡಳಿತ ಚುನಾವಣೆ ನಡೆಸಲು ಸರಕಾರ ನಿರ್ಧರಿಸಿದೆ. ಕಾರ್ಯಕರ್ತರು ಇದಕ್ಕೆ ಅಣಿಯಾಗಬೇಕು ಎಂದು ಮಾಹಿತಿ, ತಂತ್ರಜ್ಞಾನ ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಎಸ್ .ಎನ್ .ಭೋಸರಾಜು ಹೇಳಿದರು.
ಬುಧವಾರ ಇಲ್ಲಿನ ಬೋರ್ಡ್ ಹೈಸ್ಕೂಲು ಸಮೀಪದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಇಲ್ಲಿನ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ಬಗ್ಗೆ ನನಗೆ 3 ದಿನದ ಹಿಂದೆಯೇ ಮಾಹಿತಿ ಬಂದಿದೆ. 140 ವರ್ಷ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಎಐಸಿಸಿ ಪ್ರಧಾನ ಕಚೇರಿ ಇಂದಿಗೂ ಬಾಡಿಗೆ ಕಟ್ಟಡದಲ್ಲಿದೆ. ಕಳೆದ 10 ವರ್ಷಗಳಲ್ಲಿಬಿಜೆಪಿ ಮತ್ತು ಅದರ ಪರಿವಾರ ಸಂಘಟನೆಗಳು ಮಾಡಿರುವ ಆಸ್ತಿ ಎಷ್ಟು ಎನ್ನುವುದು ದೇಶದ ಜನರಿಗೆ ಗೊತ್ತಿದೆ. ಬೆಂಗಳೂರಿನಲ್ಲಿಯುನಿವರ್ಸಿಟಿ ಜಾಗ ಕಬಳಿಸಿದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 2001ರಿಂದ ಕುಂದಾಪುರದಲ್ಲಿಕಾಂಗ್ರೆಸ್ ಭವನ ನಿರ್ಮಾಣಕ್ಕೆ ಜಾಗ ಕೋರಿ ಬ್ಲಾಕ್ ಕಾಂಗ್ರೆಸ್ ಪ್ರಯತ್ನ ನಡೆಸುತ್ತಲೆ ಬಂದಿದೆ. ಕಾನೂನು ಬದ್ಧವಾಗಿ ಸರಕಾರ 11 ಸೆಂಟ್ಸ್ ಜಾಗ ಮಂಜೂರುಗೊಳಿಸಿದೆ. ಹೊಟ್ಟೆ ಉರಿಯಿಂದ ಬಿಜೆಪಿಯವರು ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಅವರಿಗೆ ನೈತಿಕತೆ ಇಲ್ಲಎಂದು ಅವರು ಟೀಕಿಸಿದರು.
ಗ್ಯಾರಂಟಿಯಡಿ 1ಲಕ್ಷ 23 ಸಾವಿರ ಕೋಟಿ: ಗ್ಯಾರಂಟಿ ಯೋಜನೆಯಡಿ ವಾರ್ಷಿಕ 60000 ಕೋಟಿಯಂತೆ ಈವರೆಗೆ 1ಲಕ್ಷ 23 ಸಾವಿರ ಕೋಟಿ ಅನುದಾನ ರಾಜ್ಯದ ಜನರಿಗೆ ನೀಡಿದ್ದೇವೆ. ಕೊಟ್ಟ ಭರವಸೆಯಂತೆ ನಡೆದಿದ್ದೇವೆ. ಬಿಜೆಪಿಯವರು ಕೊಟ್ಟ ಭರವಸೆ ಈಡೇರಿಸಿದ್ದಾರೆಯೇ?. ಶತಮಾನ ಕಂಡ ಕಾಂಗ್ರೆಸ್ ಪಕ್ಷ ಅದರ ಸವಿನೆನಪಿಗಾಗಿ 100 ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮುಂದಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂಭವನ ತಲೆಯೆತ್ತಲಿದೆ. ಕಾರ್ಯಕರ್ತರು ಬೆವರು ಮತ್ತು ಪರಿಶ್ರಮದಿಂದ ನಿರ್ಮಿಸಲಿದ್ದಾರೆ. ತಡೆಯುವ ಶಕ್ತಿಯಿದ್ದರೆ ಬಿಜೆಪಿ ತಡೆಯಲಿ ಎಂದು ಸವಾಲು ಹಾಕಿದರು.
ದಾರಿ ತಪ್ಪಿಸುವುದೇ ಬಿಜೆಪಿಯ ಕಾಯಕ: ವೋಟ್ ಮ್ಯಾಪಿಂಗ್ ರಾಜ್ಯದಲ್ಲಿನಡೆಯುತ್ತಿದೆ. ವ್ಯವಸ್ಥಿತ ರೀತಿಯಲ್ಲಿನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ. ಎಸ್ ಐಆರ್ ನಡಿ ಮತ ಡಿಲೀಟ್ ಮಾಡುವುದನ್ನು ತಡೆಯಲು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿದೆ. ಬಿಜೆಪಿ ದಾರಿತಪ್ಪಿಸುವುದರಲ್ಲಿನಿಸ್ಸೀಮ. ಕೇವಲ ವೋಟ್ ರಾಜಕಾರಣವನ್ನಷ್ಟೇ ಮಾಡಿಕೊಂಡಿರುವ ಬಿಜೆಪಿಗೆ ಜನಕಲ್ಯಾಣ ಬೇಕಾಗಿಲ್ಲಎಂದರು.
ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕಾಂಗ್ರೆಸ್ ಭವನ ನಿರ್ಮಾಣ ವಿರೋಧಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ಕಾಂಗ್ರೆಸ್ ಪಕ್ಷಕ್ಕೆ ಮೈಲೇಜ್ ನೀಡಿದೆ. ವಿರೋಧಿಸಬೇಕೆಂಬ ಕಾರಣಕ್ಕೆ ಇದು ವಿರೋಧವೇ ಹೊರತು ಇದರಲ್ಲಿಯಾವುದೇ ವಾಸ್ತವಾಂಶ ಇಲ್ಲಎಂದರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಕಾಂಗ್ರೆಸ್ ಭವನಕ್ಕೆ ಸಾರ್ವಜನಿಕ ಭೂಮಿ ಕೊಡಲಾಗಿದೆ ಎಂಬ ಬೊಬ್ಬಿಡುವ ಬಿಜೆಪಿ ರಾಷ್ಟೊ್ರೕತ್ಥಾನ ಪರಿಷತ್ , ಜನಸೇವಾ ಟ್ರಸ್ಟ್ , ಹಿಂದೂ ಜಾಗರಣ ವೇದಿಕೆ ಸಹಿತ ಪರಿವಾರ ಸಂಘಟನೆಗಳಿಗೆ ಅಧಿಕಾರದಲ್ಲಿದ್ದ ವೇಳೆ ಕೊಟ್ಟ ಭೂಮಿಯ ವಿವರ ಮೊದಲು ನೀಡಲಿ. ಯುನಿವರ್ಸಿಟಿಯ ಭೂಮಿ ಸಹ ಬಿಡದೆ ನುಂಗಿದವರು ಇವರು. ಇವರು ಹೊಡೆದ ಭೂಮಿಯ ಪುಲ್ ಡಿಟೈಲ್ ನನ್ನಲ್ಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಂ.ಎ.ಗಫೂರ್ , ಮುನಿಯಾಲು ಉದಯಕುಮಾರ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ದೇವಕಿ ಪಿ.ಸಣ್ಣಯ್ಯ, ಬಿ.ಹೆರಿಯಣ್ಣ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೆದೂರು ಸದಾನಂದ ಶೆಟ್ಟಿ, ರಾಜು ಪೂಜಾರಿ ಯಡ್ತರೆ, ಜ್ಯೋತಿ ಹೆಬ್ಬಾರ್ , ಅಶೋಕಕುಮಾರ ಕೊಡವೂರು, ವಿಕಾಸ್ ಹೆಗ್ಡೆ, ಪ್ರಸನ್ನ ಶೆಟ್ಟಿ ಕೆರಾಡಿ, ಅಭಿಜಿತ್ ಪೂಜಾರಿ, ಇಶ್ಚಿತಾರ್ಥ ಶೆಟ್ಟಿ, ವಿನೋದ್ ಕ್ರಾಸ್ತಾ, ಹರೀಶ್ ಕಿಣಿ ಮತ್ತಿತರರು ಉಪಸ್ಥಿತರಿದ್ದರು. ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರ್ವಹಿಸಿದರು.
ಪೋಟೊ//13ಕೆ-ಸಿಎನ್ ಜಿ1//. ಮಾಹಿತಿ, ತಂತ್ರಜ್ಞಾನ ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಎನ್ .ಎಸ್ .ಭೋಸರಾಜು ಶಂಕುಸ್ಥಾಪನೆ ನೆರವೇರಿಸಿದರು.
ಪೋಟೊ//13ಕೆ-ಸಿಎನ್ ಜಿ2//. ಮಾಹಿತಿ, ತಂತ್ರಜ್ಞಾನ ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಎನ್ .ಎಸ್ .ಭೋಸರಾಜು ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿದರು.

