ಗರ್ಭಕಂಠ ಕ್ಯಾನ್ಸರ್ ತಡೆಗೆ ಎಚ್ ಪಿವಿ ಲಸಿಕೆ ಪರಿಣಾಮಕಾರಿ
ವಿಕ ಸುದ್ದಿಲೋಕ ಚಿಕ್ಕಮಗಳೂರು
ಮಹಿಳೆಯರನ್ನು ಕಾಡುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿಎಚ್ ಪಿವಿ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಪ್ರತಿಯೊಬ್ಬರೂ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್ .ಎಸ್ .ಕೀರ್ತನಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆಯಿಂದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಎಚ್ ಪಿವಿ ಲಸಿಕಾ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಮಗೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿಭಾರತೀಯರ ಸರಾಸರಿ ಜೀವಿತಾವಧಿ ಕೇವಲ 40ರಿಂದ 50 ವರ್ಷಗಳಷ್ಟಿತ್ತು. ಅಂದು ರೋಗ ನಿರೋಧಕ ಶಕ್ತಿ ಕಡಿಮೆ ಇದ್ದ ಕಾರಣ ಸಾಂಕ್ರಾಮಿಕ ಕಾಯಿಲೆಗಳಿಗೆ ಜನರು ಬಲಿಯಾಗುತ್ತಿದ್ದರು. ಆದರೆ, ಇಂದು ಪೋಲಿಯೊ, ಟಿಬಿ ಯಂತಹ ರೋಗಗಳನ್ನು ಲಸಿಕೆಗಳ ಮೂಲಕ ಯಶಸ್ವಿಯಾಗಿ ತಡೆಗಟ್ಟಿದ ಪರಿಣಾಮ ಜೀವಿತಾವಧಿ ಸರಾಸರಿ 60-70 ವರ್ಷಕ್ಕೆ ಏರಿಕೆಯಾಗಿದೆ. ಹಾಗೆಯೇ ಪ್ರಸ್ತುತ ಮಹಿಳೆಯರಲ್ಲಿಹೆಚ್ಚು ಕಾಣಿಸಿಕೊಳ್ಳುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಯಲು ಎಚ್ ಪಿವಿ ಲಸಿಕೆ ಶ್ರೀರಕ್ಷೆಯಾಗಲಿದೆ ಎಂದರು.
ಜಿಲ್ಲೆಯಲ್ಲಿಪ್ರಸ್ತುತ ಶೇ.51ರಷ್ಟು ಲಸಿಕಾ ಪ್ರಗತಿಯಾಗಿದ್ದು, ರಾಜ್ಯ ಮಟ್ಟದಲ್ಲಿಜಿಲ್ಲೆಯು 6ನೇ ಸ್ಥಾನದಲ್ಲಿದೆ. ಉಳಿದ ಶೇ. 49ರಷ್ಟು ಗುರಿಯನ್ನು ತಲುಪಲು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಶ್ರಮಿಸಬೇಕು. ಶಾಲಾ ರಜೆ ಇರುವ ಕಾರಣ ಮಕ್ಕಳು ಮನೆಗಳಲ್ಲಿಇರುತ್ತಾರೆ. ಅಂತಹವರನ್ನು ಗುರುತಿಸಿ ಲಸಿಕೆ ಹಾಕಿಸಬೇಕು. ಲಸಿಕೆ ಪಡೆದ ಮಕ್ಕಳ ಪೋಷಕರಿಂದ ಸಣ್ಣ ವಿಡಿಯೊಗಳನ್ನು ಚಿತ್ರಿಸಿ, ಅದನ್ನು ಇತರ ಪೋಷಕರಿಗೆ ತೋರಿಸುವ ಮೂಲಕ ಅವರಲ್ಲಿರುವ ಗೊಂದಲಗಳನ್ನು ನಿವಾರಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿಒಂದು ಡೋಸ್ ಗೆ 12ರಿಂದ 18 ಸಾವಿರ ರೂ. ಬೆಲೆ ಬಾಳುವ ಈ ಲಸಿಕೆಯನ್ನು ಸರಕಾರ ಉಚಿತವಾಗಿ ನೀಡುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದರು.
ಆರ್ ಸಿಎಚ್ ಅಧಿಕಾರಿ ಡಾ.ಎಚ್ .ಕೆ.ಮಂಜುನಾಥ್ ಮಾತನಾಡಿ, ಭಾರತೀಯ ಮಹಿಳೆಯರನ್ನು ಕಾಡುತ್ತಿರುವ ಮಾರಕ ಕಾಯಿಲೆಗಳಲ್ಲಿಎರಡನೇ ಸ್ಥಾನದಲ್ಲಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್ ಪಿವಿ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ. ಜಿಲ್ಲೆಯಲ್ಲಿಪತ್ತೆಯಾಗುತ್ತಿರುವ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಲ್ಲಿಶೇ.99.7ರಷ್ಟು ಪ್ರಕರಣಗಳು ‘ಹ್ಯೂಮನ್ ಪ್ಯಾಪಿಲೋಮ ವೈರಸ್ ’ನಿಂದಲೇ ಸಂಭವಿಸುತ್ತಿವೆ. ಈ ವೈರಸ್ ವಿರುದ್ಧ ಲಸಿಕೆ ಪಡೆಯುವುದರಿಂದ ಭವಿಷ್ಯದಲ್ಲಿಕ್ಯಾನ್ಸರ್ ಬರದಂತೆ ತಡೆಯಬಹುದು. ಈ ಲಸಿಕೆಯನ್ನು 9ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿಒಟ್ಟು 10,661 ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದು, ಈಗಾಗಲೇ ಶೇ.51ರಷ್ಟು ಸಾಧನೆಯಾಗಿದೆ. ಎಚ್ ಪಿವಿ ಲಸಿಕೆಯು ಸಂಪೂರ್ಣ ಸುರಕ್ಷಿತವಾಗಿದ್ದು, ಅಲರ್ಜಿಯಂತಹ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಬಹಳ ವಿರಳ. ಲಸಿಕೆ ಪಡೆದ ನಂತರ ಮಕ್ಕಳು ಕನಿಷ್ಠ 30 ನಿಮಿಷಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿಇರಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ, ವೈದ್ಯಾಧಿಕಾರಿಗಳಾದ ಡಾ.ರಂಜಿತಾ, ಡಾ.ದಿವ್ಯಶ್ರೀ, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿದ್ದರು.
ಫೋಟೋ:12ರುದ್ರಯ್ಯ-ಪಿ5
ಚಿಕ್ಕಮಗಳೂರಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನಡೆದ ಎಚ್ ಪಿವಿ ಚುಚ್ಚುಮದ್ದು ಅಭಿಯಾನದಲ್ಲಿಬಾಲಕಿಗೆ ಲಸಿಕೆ ನೀಡಲಾಯಿತು.

