ಪ್ರೀತಿಯಲ್ಲಿ
ಬ್ರೇಕ್ ಅಪ್ ಮರ್ಡರ್
ಆರ್ . ಶ್ರೀನಾಗೇಶ್
ಇಂಟ್ರೊ: ಹದಿಹರೆಯದ ಪ್ರೀತಿ ಯಾವಾಗ ಪಕ್ವವಾಗುತ್ತದೆ? ಅದನ್ನು ಪರೀಕ್ಷಿಸುವುದು ಹೇಗೆ?
ಅವನಲ್ಲಿಅವಳಿಗೆ ಅವಳಲ್ಲಿಅವನಿಗೆ ಆಕರ್ಷಣೆ ಹುಟ್ಟಿದ ಕ್ಷಣ ಹಿಂದೆಂದೂ ಕಂಡು ಕೇಳರಿಯದ ಸುಂದರ ಲೋಕದ ಪರಿಚಯವಾಗುತ್ತದೆ. ಇಲ್ಲಿವಿಹರಿಸಿದಷ್ಟು ಹೊತ್ತು ಮುಗಿಯದ ಮಾತು, ತೀರದ ನೋಟ. ಹೀಗೆ ಪ್ರೀತಿಯ ದಾರಿಯಲ್ಲಿಸಿಕ್ಕ ಕಲ್ಲುಮುಳ್ಳುಗಳೆಲ್ಲಹೂವಾಗಿ ಬದಲಾಗುತ್ತವೆ ಅವರಿಬ್ಬರ ಪಾಲಿಗೆ. ಆದರೆ ಅದೆಷ್ಟು ದೂರ?ಒಂದಷ್ಟು ದೂರ ಕೈಕೈ ಹಿಡಿದು ಹೆಜ್ಜೆ ಹಾಕಿದವರನ್ನು ಏಕತಾನತೆ ಹಿಡಿದು ನಿಲ್ಲಿಸುತ್ತದೆ. ಪ್ರೀತಿಯ ದಾರಿ ಸವೆದಿದ್ದರ ಸೂಚನೆ ನೀಡುತ್ತದೆ. ಜೊತೆಯಾಗಿ ಮುಂದೆ ಹೆಜ್ಜೆ ಇಡಲಾಗದಷ್ಟು ದೇಹ ಬಳಲುತ್ತದೆ. ಮನಸ್ಸು ದೂರವಾಗುವ ಮಾತನಾಡುತ್ತದೆ. ಅಲ್ಲಿಗೆ ಪ್ರೇಮದೂರಿನ ದಾರಿಯ ಮಧ್ಯೆದಲ್ಲೇ ಸಿಕ್ಕ ತಿರುವಿನಲ್ಲಿಪ್ರೇಮಿಗಳು ಪರಸ್ಪರ ಬೇರೆಯಾಗುತ್ತಾರೆ. ಪ್ರೇಮ ವೈಫಲ್ಯ ಎಂಬ ಹೊಸ ಕಿರುದಾರಿಯಲ್ಲಿಒಂಟಿಯಾಗಿ ಹೆಜ್ಜೆ ಹಾಕಲು ಮನ ಒಪ್ಪುವುದಿಲ್ಲ. ಹತಾಷೆ, ಬೇಸರ, ದ್ವೇಷ, ಅಸಹಾಯಕತೆ ನಾನಾ ರೂಪದಲ್ಲಿಕಾಡುತ್ತದೆ. ಅದು ಎಲ್ಲಿಯವರೆಗೆ ಅಂದರೆ ಜೀವವೇ ನೀನು ಎಂದೆಲ್ಲಹಾಡಿ ಹೊಗಳಿದ್ದ ಪ್ರೇಮಿಯ ಜೀವ ತೆಗೆಯುವ ತನಕ.
ಇತ್ತೀಚಿನ ದಿನಗಳಲ್ಲಿಪ್ರೇಮ ವೈಫಲ್ಯ ಅಪರಾಧವಾಗಿ ಬದಲಾಗುವ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಇದು ಕೇವಲ ಎರಡು ಯುವ ಜೀವಗಳ ಅಂತ್ಯವಲ್ಲ, ಆ ಜೀವಗಳನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳ ಪಾಲಿನ ಜೀವಂತ ನರಕ. ಪ್ರೀತಿಯ ಕಾರಣಕ್ಕೆ ವಯಸ್ಸಿಗೆ ಬಂದ ಮಗಳನ್ನೋ, ಮಗನನ್ನೋ ಕಳೆದುಕೊಂಡ
ಪೋಷಕರು ಅನುದಿನವೂ ನೋವು ಅನುಭವಿಸಬೇಕಾಗುತ್ತದೆ. ಹೀಗಾಗಿ ಪ್ರೀತಿಯ ಆರಂಭದಲ್ಲೇ ಅದರ ಪಕ್ವತೆಯನ್ನು ಅರಿಯುವ, ಪರೀಕ್ಷಿಸುವುದು ಅತ್ಯಗತ್ಯ.
ಪ್ರೀತಿ ಮತ್ತು ಮೋಹದ ನಡುವಿನ ಅಂತರ
ಪ್ರೀತಿ, ವಿರಸ ಮತ್ತು ಕೊಲೆ ಒಂದಕ್ಕೊಂದು ಜೋಡಣೆಯಾಗದ ಹಂತಗಳು. ಪ್ರೀತಿ ಎಂದರೇನು? ಅದರಲ್ಲಿರುವ ಹೊಣೆಗಾರಿಕೆಗಳೇನು? ನಿರೀಕ್ಷೆಗಳು ಹುಸಿಯಾದಾಗ ಅದನ್ನು ಎದುರಿಸುವುದು ಹೇಗೆ? ಈ ಯಾವುದೇ ಪ್ರಶ್ನೆಗಳನ್ನು ಕೇಳಿಕೊಳ್ಳದೆಯೇ ಕೇವಲ ಸಖ್ಯವನ್ನೇ ಪ್ರೀತಿ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವುದು ಇಂದಿನ ಸಮಸ್ಯೆ. ಅಪಕ್ವ ಮನಸ್ಸುಗಳ ಮೇಲೆ ಪ್ರಭಾವ ಬೀರುವ ಕೆಲವು ಶಕ್ತಿಗಳು, ಪರಿಣಾಮದ ಬಗ್ಗೆ ಯೋಚಿಸದೆ ಕೇವಲ ಬಣ್ಣದ ಕನಸುಗಳನ್ನು ಮಾರಾಟ ಮಾಡುತ್ತಿವೆ. ಹಿಂದೆ 15ನೇ ವಯಸ್ಸಿನ ಹಂತವು ವಿರೋಧ ಲಿಂಗಿಯ ಬಗ್ಗೆ ಕುತೂಹಲ ಮೂಡಿಸುವ ಪ್ರಾಯವಾಗಿತ್ತು. ಆದರೆ ಇಂದು ಅಂತರ್ಜಾಲದ ಅತಿಯಾದ ಬಳಕೆಯಿಂದಾಗಿ ಮಕ್ಕಳು ಬಹಳ ಸಣ್ಣ ವಯಸ್ಸಿನಲ್ಲೇ ಇಂತಹ ಆಕರ್ಷಣೆಗಳಿಗೆ ಒಳಗಾಗುತ್ತಿದ್ದಾರೆ.
ಹತಾಶೆಯ ಹಾದಿ
ಕೆಲವರು ಪ್ರೀತಿಯಲ್ಲಿತಮ್ಮ ಸರ್ವಸ್ವವನ್ನೂ ಪಣಕ್ಕಿಡುತ್ತಾರೆ. ಇದು ಶಾಶ್ವತ ಎಂದು ನಂಬಿ ತಮ್ಮ ಭವಿಷ್ಯವನ್ನೇ ಅದರಲ್ಲಿಹೂಡಿಕೆ ಮಾಡುತ್ತಾರೆ. ಪ್ರೀತಿಸುವ ಸಮಯದಲ್ಲಿಪರಸ್ಪರರ ಭಾವನೆಗಳು, ಮನೆಯ ಪರಿಸ್ಥಿತಿ ಅಥವಾ ವಾಸ್ತವದ ನಿರೀಕ್ಷೆಗಳ ಬಗ್ಗೆ ಚರ್ಚಿಸುವ ತಾಳ್ಮೆ ಇವರಿಗಿರುವುದಿಲ್ಲ. ಸಂಬಂಧದಲ್ಲಿಕಾಣಿಸಿಕೊಳ್ಳುವ ಎಚ್ಚರಿಕೆಯ ಸಂಕೇತಗಳನ್ನು ಇವರು ನಿರ್ಲಕ್ಷಿಸುತ್ತಾರೆ. ತಾವು ಕಟ್ಟಿಕೊಂಡ ಭ್ರಮಾಸೌಧ ಕುಸಿದುಬೀಳಬಹುದು ಎಂಬ ಭಯವೇ ಇದಕ್ಕೆ ಕಾರಣ.
ಮಾಲೀಕತ್ವವೇ ಮೃಗೀಯತೆಗೆ ಕಾರಣ
ಪ್ರೀತಿಯಲ್ಲಿಪರಸ್ಪರ ಗೌರವ ಮತ್ತು ನಂಬಿಕೆಗಿಂತ ಇಂದು ಮಾಲೀಕತ್ವ ಹೆಚ್ಚಾಗುತ್ತಿದೆ. ‘ಅವನು ಅಥವಾ ಅವಳು ನನಗೆ ಮಾತ್ರ ಸೇರಿದವರು’ ಎಂಬ ಹಠ ಅಹಮಿಕೆಯನ್ನು ಬೆಳೆಸುತ್ತದೆ. ಯಾವಾಗ ಸಂಬಂಧ ಮುರಿದು ಬೀಳುತ್ತದೋ, ಆಗ ತಾವು ತೊಡಗಿಸಿದ ಬಂಡವಾಳ. ಅದು ಭವಿಷ್ಯವಿರಲಿ, ಕನಸು, ಹಣ ಅಥವಾ ದೇಹವಿರಲಿಎಲ್ಲವೂ ವ್ಯರ್ಥವಾಯಿತು ಎಂಬ ಹತಾಶೆ ಕಾಡತೊಡಗುತ್ತದೆ. ಈ ಹತಾಶೆಯೇ ದ್ವೇಷವಾಗಿ ಬದಲಾಗಿ ಪ್ರತೀಕಾರಕ್ಕೆ ಪ್ರಚೋದಿಸುತ್ತದೆ.
ಅಹಂ ಅಪರಾಧದಲ್ಲಿಅಂತ್ಯ
ಹುಡುಗರು, ಹುಡುಗಿ ತಮ್ಮ ನಿಯಂತ್ರಣದಲ್ಲಿದ್ದಾಳೆ ಎಂದು ಭಾವಿಸಿರುತ್ತಾರೆ. ಬ್ರೇಕ್ ಅಪ್ ಆದಾಗ ಅವರ ಅಹಂಗೆ ದೊಡ್ಡ ಪೆಟ್ಟು ಬೀಳುತ್ತದೆ. ಈ ಪೆಟ್ಟೇ ಹಲ್ಲೆಮತ್ತು ಹತ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ.
ಬಾಕ್ಸ್
ಪ್ರೀತಿಸುವುದು ಯಾವಾಗ?
ಹದಿಹರೆಯದಲ್ಲಿಪರಸ್ಪರ ಆಕರ್ಷಣೆ, ಪ್ರೀತಿಸುವುದು ತಪ್ಪಲ್ಲ. ಆದರೆ ಅದರ ಉದ್ದೇಶ ಮುಖ್ಯ. ಅದಕ್ಕೊಂದು ಸ್ಪಷ್ಟತೆ ಇರಬೇಕು. ಹೀಗಾಗಿ ವಯೋಸಹಜವಾಗಿ ಪ್ರೀತಿಯ ಶಕ್ತಿಯನ್ನು ಅರ್ಥಮಾಡಿಕೊಳ್ಳುವ ಪಕ್ವತೆ ಬರಬೇಕು. ಆರ್ಥಿಕವಾಗಿ ಸ್ವತಂತ್ರರಾಗುವ ತನಕ ನಮ್ಮ ಸರ್ವಸ್ವವನ್ನೂ ಪಣಕ್ಕಿಡುವ ಅಗತ್ಯವಿಲ್ಲ. ಪ್ರೀತಿ ಎನ್ನುವುದು ಸಖ್ಯವನ್ನು ಆನಂದಿಸುತ್ತಾ ಪರಸ್ಪರರ ಬೆಳವಣಿಗೆಗೆ ಪೂರಕವಾಗಿದ್ದಾಗ ಮಾತ್ರ ಪ್ರೀತಿಸುವವರು ಮತ್ತು ಅವರ ಕುಟುಂಬಗಳು ಸುರಕ್ಷಿತವಾಗಿರಲು ಸಾಧ್ಯ.

