ಭವಾನಿಪುರದ ಸ್ಟ್ರಾಂಗ್ ರೂಮ್ ಗೆ ನುಗ್ಗಿದ ‘ದೀದಿ’

Contributed byshree vijendra|Vijaya Karnataka

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲು ಇನ್ನೂ ನಾಲ್ಕು ದಿನಗಳು ಬಾಕಿ ಇರುವಾಗಲೇ, ಆಡಳಿತಾರೂಢ ಟಿಎಂಸಿ ಪಕ್ಷವು ಬಿಜೆಪಿ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ. ಕೋಲ್ಕೊತಾದ ಸಖಾವತ್‌ ಮೆಮೋರಿಯಲ್‌ ಶಾಲೆಯಲ್ಲಿನ ಮತ ಎಣಿಕೆ ಕೇಂದ್ರಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿ ಕಳವಳ ವ್ಯಕ್ತಪಡಿಸಿದರು. ಟಿಎಂಸಿ ಕಾರ್ಯಕರ್ತರು ಸ್ಟ್ರಾಂಗ್‌ ರೂಮ್‌ ಬಳಿ ಜಮಾಯಿಸಿ ಧರಣಿ ನಡೆಸಿದರು. ಈ ಬೆಳವಣಿಗೆಯಿಂದಾಗಿ ರಾತ್ರಿಯಿಡೀ ಹೈಡ್ರಾಮಾ ನಡೆಯಿತು. ಟಿಎಂಸಿ ಸಿಸಿಟಿವಿ ದೃಶ್ಯಾವಳಿ ಇರುವ ವಿಡಿಯೊವನ್ನು ಬಿಡುಗಡೆ ಮಾಡಿದೆ.

evm tampering in bhawanipur tmc protests

ಕೋಲ್ಕೊತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಕ್ಕೆ ಇನ್ನೂ ನಾಲ್ಕು ದಿನಗಳು ಬಾಕಿ ಇರುವ ಹೊತ್ತಲ್ಲೇ ಆಡಳಿತಾರೂಢ ಟಿಎಂಸಿಯು, ಸ್ಟ್ರಾಂಗ್ ರೂಮ್ ನಲ್ಲಿಬಿಜೆಪಿ ಇವಿಎಂಗಳ ಟ್ಯಾಂಪರಿಂಗ್ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.

ಕೋಲ್ಕೊತಾದ ಸಖಾವತ್ ಮೆಮೋರಿಯಲ್ ಶಾಲೆಯಲ್ಲಿನ ಭವಾನಿಪುರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಸಿಎಂ ಮಮತಾ ಬ್ಯಾನರ್ಜಿ ಬುಧವಾರ ಸಂಜೆ ಭೇಟಿ ಕೊಟ್ಟು ಇವಿಎಂಗಳ ಟ್ಯಾಂಪರಿಂಗ್ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇನ್ನೊಂದೆಡೆ ಟಿಎಂಸಿ ಅಭ್ಯರ್ಥಿಗಳಾದ ಕುನಾಲ್ ಘೋಷ್ ಹಾಗೂ ಶಶಿ ಪಂಜಾ ಸೇರಿದಂತೆ ನೂರಾರು ಕಾರ್ಯಕರ್ತರು ಕುದಿರಾಮ್ ಅನ್ಶುಲಿಯಾನ್ ನಲ್ಲಿರುವ ಸ್ಟ್ರಾಂಗ್ ರೂಮ್ ಬಳಿ ಜಮಾಯಿಸಿ ಇವಿಎಂಗಳ ಟ್ಯಾಂಪರಿಂಗ್ ನಡೆಯುತ್ತಿದೆ ಎಂದು ಆರೋಪಿಸಿ ಧರಣಿ ನಡೆಸಿದರು. ಈ ಬೆಳವಣಿಗೆಯಿಂದ ಗುರುವಾರ ರಾತ್ರಿಯಿಡೀ ಹೈಡ್ರಾಮಾ ನಡೆಯಿತು.

ವಿಡಿಯೊ ಬಿಡುಗಡೆ: ಸಂಬಂಧಪಟ್ಟ ಯಾವುದೇ ಪ್ರತಿನಿಧಿಗಳ ಉಪಸ್ಥಿತಿ ಇಲ್ಲದೇ ಇವಿಎಂಗಳನ್ನು ತೆರೆಯಲಾಗುತ್ತಿದೆ ಎಂದು ಆರೋಪಿಸಿ ಟಿಎಂಸಿ, ಸಿಸಿಟಿವಿ ದೃಶ್ಯಾವಳಿ ಇರುವ ವಿಡಿಯೊವನ್ನು ಬಿಡುಗಡೆ ಮಾಡಿದೆ. ಇದು ಬಿಜೆಪಿ ಹಾಗೂ ಚುನಾವಣಾ ಆಯೋಗದ ನಡುವಿನ ಸಂಚಿನಿಂದ ನಡೆದ ದೊಡ್ಡ ಚುನಾವಣಾ ಅಕ್ರಮ ಎಂದು ಆರೋಪಿಸಿದೆ.