ಎಳ್ಳಿನ ವೈವಿಧ್ಯ ಖಾದ್ಯ
ಶ್ಯಾಮಲಾ ಸತ್ಯ
ಸ್ಲಗ್ : ಪಾಕ ಶಾಲೆ
ನಿತ್ಯದ ಅಡುಗೆಯಲ್ಲಿಎಳ್ಳು ಇರಲೇಬೇಕು. ಕೆಲವೇ ಕೆಲವು ಕಾಳುಗಳಿಗೆ ಸೀಮಿತವಾಗುವ ಈ ಎಳ್ಳನ್ನೇ ಪ್ರಧಾನವಾಗಿ ಬಳಸಿದ ಆಹಾರ ಪದಾರ್ಥಗಳು ಆರೋಗ್ಯ ಹಾಗೂ ರುಚಿಕರ. ಅಂತಹ ಎಳ್ಳಿನಿಂದ ತಯಾರಾದ ರೆಸಿಪಿಗಳ ಬಗ್ಗೆ ವಿವರ ಇಲ್ಲಿದೆ.
ಪಾನಕ
ಸಾಮಗ್ರಿ: ಹುರಿದ ಎಳ್ಳು 2 ಟೇಬಲ್ ಚಮಚ, ಬೆಲ್ಲ2 ಟೇಬಲ್ ಚಮಚ, ನೀರು 2 ಲೋಟ, ಏಲಕ್ಕಿ ಪುಡಿ ಚಿಟಕಿ, ಉಪ್ಪು ಚಿಟಕಿ
ವಿಧಾನ: ಬೆಲ್ಲಹಾಗೂ ಎಳ್ಳನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ. ನೀರನ್ನು ಸೇರಿಸಿ ಇನ್ನೊಮ್ಮೆ ಹೊಂದಿಕೊಳ್ಳುವಂತೆ ಮಿಕ್ಸಿ ಮಾಡಬೇಕು. ನಂತರ ಅದನ್ನು ಚೆನ್ನಾಗಿ ಸೋಸಿ ಏಲಕ್ಕಿ, ಉಪ್ಪನ್ನು ಸೇರಿಸಿ ಕುಡಿಯಬಹುದು.
ಚಾಕೊಲೆಟ್
ಸಾಮಗ್ರಿ: ಐಸಿಂಗ್ ಸಕ್ಕರೆ 4 ಟೇಬಲ್ ಚಮಚ, ಹಾಲಿನ ಪುಡಿ 2 ಟೇಬಲ್ ಚಮಚ, ಕೋಕೊ ಪುಡಿ 2 ಟೇಬಲ್ ಚಮಚ, ತುಪ್ಪ 2 ಟೀ ಚಮಚ, ನಿಂಬೆ ರಸ ಒಂದೆರಡು ಹನಿಗಳು, ನೀರು ಒಂದೆರಡು ಹನಿಗಳು, ಹುರಿದ ಎಳ್ಳು 1/2 ಕಪ್
ವಿಧಾನ: ಅಗಲವಾದ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಕುದಿಯಲು ಇಡಬೇಕು. ಒಣ ಪುಡಿಗಳನ್ನು ಚೆನ್ನಾಗಿ ಜರಡಿ ಮಾಡಿ ಇನ್ನೊಂದು ಸಣ್ಣ ಪಾತ್ರೆಗೆ ಹಾಕಿ ಅದಕ್ಕೆ ತುಪ್ಪ, ನಿಂಬೆ ರಸ ಹಾಗೂ ಒಂದೆರಡು ಹನಿ ನೀರನ್ನು ಹಾಕಿ. ನೀರು ಕುದಿಯುತ್ತಿರುವ ಅಗಲದ ಪಾತ್ರೆಯೊಳಗೆ ಇಟ್ಟು ಕೈಯಾಡಿಸುತ್ತಿರಬೇಕು. ಗಟ್ಟಿಯಾಗುತ್ತಿದ್ದ ಹಾಗೆ ನೀರಿನ ಪಾತ್ರೆಯಿಂದ ಹೊರ ತೆಗೆದು ಅಚ್ಚಿಗೆ ಸ್ವಲ್ಪ ಎಳ್ಳನ್ನು ಹಾಕಿ , ಅದರ ಮೇಲೆ ಬೆಂದ ಚಾಕೊಲೆಟ್ ಪಾಕವನ್ನು ಹಾಕಿ. ಮೇಲೆ ತಿರುಗಿ ಎಳ್ಳನ್ನು ಉದುರಿಸಿ, ಹತ್ತು ನಿಮಿಷ ಫ್ರಿಡ್ಜ್ ನಲ್ಲಿಇಟ್ಟು ತೆಗೆದು ಸವಿಯಿರಿ.
ಮೆಡಿಟರೇನಿಯನ್ ತಹಿನಿ
ಸಾಮಗ್ರಿ: ಹುರಿದ ಎಳ್ಳು ಒಂದು ಕಪ್ , ಎಳ್ಳಿನ ಎಣ್ಣೆ 2 ಟೇಬಲ್ ಚಮಚ, ಬೆಳ್ಳುಳ್ಳಿ 4 ಎಸಳು, ನಿಂಬೆ ರಸ 2 ಟೇಬಲ್ ಚಮಚ, ಉಪ್ಪು ರುಚಿಗೆ ತಕ್ಕಷ್ಟು
ವಿಧಾನ: ಎಲ್ಲಾಸಾಮಗ್ರಿಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ತಿರುಗಿಸಿದರೆ ಸಾಸ್ ತರಹ ಆಗುತ್ತದೆ. ಅದನ್ನು ಒಂದು ಬಾಟಲಿಯಲ್ಲಿಸಂಗ್ರಹಿಸಿ ಇಡುವುದು. ಇದನ್ನು ಸಲಾಡ್ ಹಾಗೂ ಹೆಚ್ಚಿದ ಹಣ್ಣುಗಳ ಮೇಲೆ ಹಾಕಿ ಚಪಾತಿ ಅಥವಾ ಬ್ರೆಡ್ ಮೇಲೆ ಹಾಕಿ ಸವಿಯಬಹುದು.
ಹಮ್ಮಸ್ ಡಿಪ್
ಸಾಮಗ್ರಿ: ನೆನೆಸಿದ ಬಿಳಿ ಕಾಬೂಲ್ ಕಡಲೆ 2 ಕಪ್ , ಹುರಿದ ಎಳ್ಳು 1/2 ಕಪ್ , ಆಲಿವ್ ಎಣ್ಣೆ 3 ಟೇಬಲ್ ಸ್ಪೂನ್ , ಹುರಿದ ಜೀರಿಗೆ ಪುಡಿ 2 ಟೀ ಚಮಚ, ಬೆಳ್ಳುಳ್ಳಿ 10 ಎಸಳು, ಉಪ್ಪು ರುಚಿಗೆ ತಕ್ಕಷ್ಟು, ಬ್ಯಾಡಗಿ ಮೆಣಸಿನ ಪುಡಿ 2 ಟೀ ಚಮಚ, ನಿಂಬೆರಸ 1 ಟೇಬಲ್ ಚಮಚ
ವಿಧಾನ: ನೆನೆಸಿದ ಕಡಲೆಯನ್ನು ಚೆನ್ನಾಗಿ ಬೇಯಿಸಿ ಆರಿದ ಮೇಲೆ ಹೊರ ಸಿಪ್ಪೆಯನ್ನು ತೆಗೆಯಬೇಕು. ಮಿಕ್ಸಿ ಜಾರಿಗೆ ಹುರಿದ ಎಳ್ಳು ಹಾಗೂ ಬೆಳ್ಳುಳ್ಳಿಯನ್ನು ಹಾಕಿ ತಿರುವಬೇಕು. ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆ ಜೊತೆಗೆ ಮಿಕ್ಕೆಲ್ಲಾಸಾಮಗ್ರಿಗಳನ್ನು ಹಾಕಿ ನುಣ್ಣಗೆ ತಿರುವಿದರೆ ಹಮ್ಮಸ್ ರೆಡಿ. ಇದನ್ನು ಚಪಾತಿ, ಬ್ರೆಡ್ ಜೊತೆಗೆ ಸವರಿ ತಿನ್ನಬಹುದು.
ಎಳ್ಳಿನ ಮಿಕ್ಸಿ ಚಿತ್ರಾನ್ನ
ಸಾಮಗ್ರಿ: ಉದುರಾಗಿರುವ ಅನ್ನ, ಒಂದು ಪಾವು ಅಕ್ಕಿಯಿಂದ ಮಾಡಿದ್ದು, ಉದ್ದಿನ ಬೇಳೆ1 ಟೇಬಲ್ ಚಮಚ, ಎಳ್ಳು 3 ಟೇಬಲ್ ಚಮಚ
ಬ್ಯಾಡಗಿ ಮೆಣಸಿನಕಾಯಿ 6, ತೆಂಗಿನ ತುರಿ 1/4 ಕಪ್ , ಹುಣಸೆ ಹಣ್ಣು ನೆಲ್ಲಿಕಾಯಿ ಗಾತ್ರದ್ದು, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ
ಸಾಸಿವೆ, ಕಡಲೆಕಾಯಿ ಬೀಜ, ಕರಿಬೇವು, ಎಣ್ಣೆ, ಇಂಗು- ಚಿಟಕಿ
ವಿಧಾನ: ಉದ್ದಿನ ಬೇಳೆ, ಮೆಣಸಿನಕಾಯಿ, ಎಳ್ಳನ್ನು ಹದವಾಗಿ ಹುರಿದು, ಆರಿದ ಮೇಲೆ ಹುಣಸೆ ಹಣ್ಣು, ಉಪ್ಪು, ತೆಂಗಿನತುರಿಯನ್ನು ಹಾಕಿ ನೀರು ಹಾಕದೆ ಗಟ್ಟಿಯಾಗಿ ರುಬ್ಬಬೇಕು. ಒಂದು ಬಾಣಲೆಯಲ್ಲಿಎಣ್ಣೆಯನ್ನು ಹಾಕಿ ಸಾಸಿವೆ,ಇಂಗು, ಕರಿಬೇವು, ಕಡಲೆಕಾಯಿ ಒಗ್ಗರಣೆಯನ್ನು ಹದವಾಗಿ ಮಾಡಿ ಅನ್ನಕ್ಕೆ ಹಾಕಿ ಚಟ್ನಿಯನ್ನೂ ಹಾಕಿ ಕಲಸಿದರೆ ಎಳ್ಳು ಚಿತ್ರಾನ್ನ ಸವಿಯಲು ಸಿದ್ಧ.

