ಕೊಲಿಜಿಯಂ ವ್ಯವಸ್ಥೆ
ಮದ್ರಾಸ್ ಹೈಕೋರ್ಟ್ ಗೆ ಒಂಬತ್ತು ನ್ಯಾಯಾಂಗ ಅಧಿಕಾರಿಗಳು ಮತ್ತು 10 ವಕೀಲರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಒಪ್ಪಿಗೆ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಕೊಲಿಜಿಯಂ ಮೇ 18ರಂದು ನಡೆದ ಸಭೆಯಲ್ಲಿಈ ಮಹತ್ವದ ತೀರ್ಮಾನ ಕೈಗೊಂಡಿದೆ. ಅನುಮೋದನೆ ಪಡೆದ ನ್ಯಾಯಾಂಗ ಅಧಿಕಾರಿಗಳಲ್ಲಿಡಾ. ಪಿ ಮುರುಗನ್ , ಎಂ.ಡಿ. ಸುಮತಿ ಸೇರಿದಂತೆ ಒಂಬತ್ತು ಗಣ್ಯರಿದ್ದಾರೆ. ವಕೀಲರ ಪೈಕಿ ನಟರಾಜನ್ ರಮೇಶ್ ಮತ್ತು ಜಿ.ಕೆ ಮುತ್ತುಕುಮಾರ್ ಸೇರಿದಂತೆ ಒಟ್ಟು 10 ಮಂದಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆಯಲಿದ್ದಾರೆ.
ಇದೇ ವೇಳೆ, ಬಾಂಬೆ ಹೈಕೋರ್ಟ್ ನ ಆರು ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಪ್ರಸ್ತಾವನೆಗೂ ಕೊಲಿಜಿಯಂ ಅಸ್ತು ಎಂದಿದೆ. ನ್ಯಾಯಮೂರ್ತಿಗಳಾದ ನಿವೇದಿತಾ ಪ್ರಕಾಶ್ ಮೆಹ್ತಾ ಮತ್ತು ಪ್ರಫುಲ್ಲಸುರೇಂದ್ರಕುಮಾರ್ ಖುಬಾಲ್ಕರ್ ಸೇರಿದಂತೆ ಆರು ಜನರಿಗೆ ಕಾಯಂ ಸ್ಥಾನಮಾನ ಸಿಕ್ಕಿದೆ. ಸಾಂವಿಧಾನಿಕ ನಡೆಯಲ್ಲಿಆಗಾಗ ಸುದ್ದಿಯಲ್ಲಿರುವ ಈ ಕೊಲಿಜಿಯಂ ವ್ಯವಸ್ಥೆ ಎಂದರೇನು? ಯಾರೆಲ್ಲಾಈ ವ್ಯವಸ್ಥೆಯ ಭಾಗವಾಗಿರುತ್ತಾರೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಏನಿದು ಕೊಲಿಜಿಯಂ ವ್ಯವಸ್ಥೆ?
ಭಾರತದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಮತ್ತು ವರ್ಗಾವಣೆಯನ್ನು ನಿರ್ಧರಿಸುವ ವ್ಯವಸ್ಥೆಯೇ ಕೊಲಿಜಿಯಂ. ಇದರಲ್ಲಿಭಾರತದ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸುಪ್ರೀಂ ಕೋರ್ಟ್ ನ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಇರುತ್ತಾರೆ. ಕೊಲಿಜಿಯಂ ವ್ಯವಸ್ಥೆಯು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಮೂರ್ತಿಗಳನ್ನು ನೇಮಿಸುವ ಮತ್ತು ವರ್ಗಾವಣೆ ಮಾಡುವ ಒಂದು ವಿಧಾನ. ಕೊಲಿಜಿಯಂ ವ್ಯವಸ್ಥೆಯು ಸಂವಿಧಾನ ಅಥವಾ ಸಂಸತ್ತು ಘೋಷಿಸಿದ ನಿರ್ದಿಷ್ಟ ಕಾನೂನಿನಿಂದ ರೂಪಿತಗೊಂಡಿಲ್ಲ. ಬದಲಿಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳ ಮೂಲಕ ರೂಪುಗೊಂಡಿದೆ. 1998ರ ಅಕ್ಟೋಬರ್ 28ರಂದು ಕೊಲಿಜಿಯಂ ವ್ಯವಸ್ಥೆಯನ್ನು ರೂಪಿಸಲಾಯಿತು. ಆರಂಭಿಕವಾಗಿ ಸಿಜೆಐ ಜತೆಗೆ ಇಬ್ಬರು ಹಿರಿಯ ನ್ಯಾಯಮೂರ್ತಿಗಳನ್ನೊಳಗೊಂಡ ವ್ಯವಸ್ಥೆ ಇದಾಗಿತ್ತು. ನಂತರದ ದಿನಗಳಲ್ಲಿಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಯಿತು.
ಐವರ ತಂಡ ಕೊಲಿಜಿಯಂ: ಸುಪ್ರೀಂ ಕೋರ್ಟ್ ಕೊಲಿಜಿಯಂ ಐವರು ಸದಸ್ಯರ ಒಂದು ತಂಡವಾಗಿದ್ದು, ಸಿಜೆಐ ನೇತೃತ್ವದಲ್ಲಿಮುನ್ನಡೆಸಲಾಗುತ್ತದೆ. ಇದರಲ್ಲಿಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳಿರುತ್ತಾರೆ. ಹೈಕೋರ್ಟ್ ಕೊಲಿಜಿಯಂ ಅನ್ನು ಹಾಲಿ ಮುಖ್ಯ ನ್ಯಾಯಮೂರ್ತಿ ಹಾಗೂ ಇಬ್ಬರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುತ್ತದೆ. ಕೊಲಿಜಿಯಂ ವ್ಯವಸ್ಥೆಯು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟಿಗೆ ನ್ಯಾಯಮೂರ್ತಿಗಳ ಹೆಸರನ್ನು ಸೂಚಿಸಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುತ್ತದೆ. ಕೊಲಿಜಿಯಂ ನಿರ್ಧರಿಸಿದ ಬಳಿಕವಷ್ಟೇ, ಸರಕಾರ (ರಾಷ್ಟ್ರಪತಿ) ಆ ಹೆಸರುಗಳಿಗೆ ಅನುಮೋದನೆ ನೀಡಬೇಕಿರುತ್ತದೆ. ಹೈಕೋರ್ಟ್ ಕೊಲಿಜಿಯಂ ನೇಮಕಕ್ಕೆ ಶಿಫಾರಸು ಮಾಡಿದ ಹೆಸರುಗಳಿಗೆ ಸಿಜೆಐ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದನೆ ಬಳಿಕವೇ ಸರಕಾರಕ್ಕೆ ರವಾನಿಸಲಾಗುತ್ತದೆ.
ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸರಕಾರವು ಇಂಟೆಲಿಜೆನ್ಸ್ ಬ್ಯೂರೊ (ಐಬಿ) ಮೂಲಕ ಮಾಹಿತಿ ಪಡೆದು ವಕೀಲರನ್ನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಲ್ಲಿನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಕೊಲಿಜಿಯಂಗೆ ಸಲಹೆ ನೀಡಬಹುದು. ಕೊಲಿಜಿಯಂ ಆಯ್ಕೆಗಳ ಬಗ್ಗೆ ಸರಕಾರವು ಆಕ್ಷೇಪಣೆಗಳನ್ನು ಎತ್ತಬಹುದು. ಆದರೆ, ಕೊಲಿಜಿಯಂ ಅದೇ ಹೆಸರುಗಳನ್ನು ಪುನರುಚ್ಚರಿಸಿದರೆ, ಸರಕಾರವು ಅವರನ್ನು ನೇಮಿಸಲು ಬದ್ಧವಾಗಿರಬೇಕು. ಕೆಲವೊಮ್ಮೆ ಸರಕಾರವು ನೇಮಕಾತಿಗಳನ್ನು ವಿಳಂಬಗೊಳಿಸುತ್ತದೆ. ವಿಶೇಷವಾಗಿ ಕೊಲಿಜಿಯಂ ಶಿಫಾರಸು ಮಾಡಿದವರಲ್ಲಿಒಂದೆರಡು ಹೆಸರುಗಳ ಬಗ್ಗೆ ಸರಕಾರಕ್ಕೆ ಆಕ್ಷೇಪ ಅಥವಾ ಅಸಮಾಧಾನವಿದ್ದರೆ, ಇಂಥ ವಿಳಂಬಗಳು ಸಂಭವಿಸುತ್ತವೆ. ಶಿಫಾರಸುಗಳನ್ನು ಸರಕಾರ ತಡೆಹಿಡಿದಾಗ ಕೊಲಿಜಿಯಂ ಬೇಸರ ವ್ಯಕ್ತಪಡಿಸಿರುವ ಪ್ರಕರಣಗಳೂ ಉಂಟು.
ಕೊಲಿಜಿಯಂ ವ್ಯವಸ್ಥೆಗೆ ಟೀಕೆ: ಈ ವ್ಯವಸ್ಥೆಯು ಪಾರದರ್ಶಕವಾಗಿಲ್ಲ. ಏಕೆಂದರೆ ಇದು ಯಾವುದೇ ಅಧಿಕೃತ ಕಾರ್ಯವಿಧಾನ ಅಥವಾ ಸಚಿವಾಲಯಗಳನ್ನು ಒಳಗೊಂಡಿಲ್ಲ. ನ್ಯಾಯಮೂರ್ತಿಗಳ ನೇಮಕಕ್ಕೆ ಇರುವ ಅರ್ಹತಾ ಮಾನದಂಡಗಳು ಅಥವಾ ಆಯ್ಕೆ ವಿಧಾನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಕೊಲಿಜಿಯಂ ಯಾವಾಗ ಸಭೆ ಸೇರುತ್ತದೆ, ಎಲ್ಲಿಸಭೆ ನಡೆಸುತ್ತದೆ, ಸಭೆಯಲ್ಲಿಏನೇನು ಚರ್ಚಿಸಲಾಗುತ್ತದೆ ಎಂಬುದರ ಯಾವುದೇ ಮಾಹಿತಿ ಲಭ್ಯವಿರಲ್ಲ. ಅವುಗಳನ್ನು ಕೊಲಿಜಿಯಂನ ಸದಸ್ಯರು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ. ಹಾಗಾಗಿ, ನ್ಯಾಯಮೂರ್ತಿಗಳ ನೇಮಕಕ್ಕೆ ಇರುವ ಈ ವ್ಯವಸ್ಥೆಯನ್ನು ತೆಗೆದು ಹಾಕಬೇಕು ಎಂದು ಈ ಹಿಂದೆ ಕೇಂದ್ರ ಕಾನೂನು ಸಚಿವರಾಗಿದ್ದ ಕಿರಣ್ ರಿಜಿಜು ಅವರು ಆಗ್ರಹಿಸಿದ್ದರು.

