68ರ ಹರೆಯ, 346ರ ವಿಜಯ
ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಆದರೆ, ಕಲಿಯುವ ಮನಸ್ಸು, ಛಲ ಇರಬೇಕಷ್ಟೇ. ಹೀಗೆ ಛಯ ಹಾಗೂ ಆಸಕ್ತಿಯಿಂದ ತನ್ನ ಇಳಿ ವಯಸ್ಸಿನಲ್ಲಿಪಿಯುಸಿ ತೇರ್ಗಡೆಯಾದ ರಾಣಿ ಎಂಬ ಛಲಗಾತಿಯ ಸ್ಫೂರ್ತಿ ಕತೆ ಇಲ್ಲಿದೆ.
= = =
ಎಷ್ಟೋ ಮನುಷ್ಯರ ಸ್ವಭಾವವೇ ಹಾಗೆ, ಕಲಿಕೆಗೆ ವಯಸ್ಸಿನ ಮುಖವಾಡ ಹಾಕಿ ನಿಂತಲ್ಲಿಯೇ ನಿಂತುಬಿಡುತ್ತಾರೆ. ಎಷ್ಟೋ ಅಧ್ಯಾಪಕರುಗಳೇ ಕೆಲಸ ಗಿಟ್ಟಿಸಿಕೊಂಡ ನಂತರ ಓದುವುದನ್ನು ನಿಲ್ಲಿಸಿಬಿಡುತ್ತಾರೆ. ಪದವಿಗಳಿಗಾಗಿ ಓದುವುದನ್ನು ಬಿಡಿ, ಪಠ್ಯಕ್ಕೆ ಪೂರಕವಾದ ಪುಸ್ತಕಗಳನ್ನೇ ಓದುವುದಿಲ್ಲ. ಪಠ್ಯದಿಂದಾಚೆಗೆ ಏನನ್ನೂ ಕಲಿಯುವುದಿಲ್ಲ. ನಿಂತ ನೀರಿನಂತೆ ಆಗಿಬಿಡುತ್ತಾರೆ. ಇದು ಪಕ್ಕಕ್ಕಿರಲಿ, ಸಾಂಪ್ರದಾಯಿಕ ಓದಿನ ವಿಷಯಕ್ಕೆ ಬಂದರೆ 16ನೇ ವಯಸ್ಸಿಗೆಲ್ಲಾಹತ್ತನೇ ತರಗತಿ ಮುಗಿದರೆ, 18 ನೇ ವಯಸ್ಸಿಗೆ ಪಿಯುಸಿ ಮುಗಿಯುತ್ತದೆ. ಓದಲು ವಯಸ್ಸಿನ ಹಂಗಿದೆಯಾ? ಎಂದು ಕೇಳಿದರೆ ಬದುಕಲು ಬೇಕು ಎಂಬ ಉತ್ತರ ಸಿಕ್ಕರೆ, ಬದುಕಿಗೆ ಬೇಕಿಲ್ಲಯಾವ ವಯಸ್ಸಲ್ಲಾದರೂ ಓದಬಹುದು, ಪದವಿ ಪಡೆಯಬಹುದು ಎಂಬ ಉತ್ತರ ಸಿಗುತ್ತದೆ.
ಆಕೆಯ ಹೆಸರು ರಾಣಿ ಎನ್ .ಟಿ., ವಯಸ್ಸು ಅರವತ್ತೆಂಟು. ತಮಿಳುನಾಡಿನ ಕೊಯಮುತ್ತೂರು ನಗರದ ಹೊ ವಲಯದ ಕಾಳಿಕ್ಕನಾಯ್ಕೆನ್ ಪಾಳ್ಯಂನ ನಿವಾಸಿ. ಈ ವಯಸ್ಸಿನಲ್ಲಿಜನ ಮಕ್ಕಳೋ, ಮೊಮ್ಮಕ್ಕಳೋ ದುಡಿದು ತಂದಿದ್ದನ್ನು ತಿನ್ನುತ್ತಾ ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ ಎಂದು ಗೊಣಗುತ್ತಾ ಕೂತಲ್ಲಿಯೇ ಕೂತಿರುತ್ತಾರೆ. ಆದರೆ ಈಕೆಯದ್ದು ಇಂತಹ ಜನರಿಗೆ ವ್ಯತಿರಿಕ್ತವಾದ ವ್ಯಕ್ತಿತ್ವ.
ಇವರು ತನ್ನ ಅರವತ್ತೆಂಟನೇ ವಯಸ್ಸಿನಲ್ಲಿಪಿಯುಸಿ ಪರೀಕ್ಷೆಯನ್ನು ದ್ವಿತೀಯ ದರ್ಜೆಯಲ್ಲಿಪಾಸಾಗಿ ಊರ ಹಿರಿಯರ ಹುಬ್ಬೇರುವಂತೆ ಮಾಡಿದ್ದಾರೆ. 2025ರಲ್ಲಿನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಇವರು 600ಕ್ಕೆ 346 ಅಂಕ ಪಡೆದು ದ್ವಿತೀಯ ದರ್ಜೆಯಲ್ಲಿಪಾಸಾಗಿದ್ದಾರೆ. ಇದರಲ್ಲೇನೂ ವಿಶೇಷ ಇಲ್ಲಎಂದು ನಿಮಗನ್ನಿಸಬಹುದು. ಆದರೆ ವಿಶೇಷ ಇರುವುದೇ ಇಲ್ಲಿ.
ಇವರು ತನ್ನ ಹತ್ತನೇ ತರಗತಿಯನ್ನು ಮುಗಿಸಿದ್ದು 1972ರಲ್ಲಿ. ಮುಂದಕ್ಕೆ ಓದಬೇಕು ಎಂಬ ಆಸೆ ಅದಮ್ಯವಾಗಿದ್ದರೂ ಪರಿಸ್ಥಿತಿಗಳು ಇವರ ಆಸೆಗೆ ಪೂರಕವಾಗಿರಲಿಲ್ಲ. ತನ್ನ ಊರಿನಲ್ಲಿಮುಂದಿನ ವಿದ್ಯಾಭ್ಯಾಸಕ್ಕೆ ಪೂರಕವಾದ ಕಾಲೇಜು ಇಲ್ಲದ ಕಾರಣ ಆಕೆ ತನ್ನ ಕನಸನ್ನು ಕಮರಲು ಬಿಡಬೇಕಾಯಿತು. ಆ ನಂತರ ಮದುವೆ ಮಾಡಿದರು. ಅಲ್ಲಿಗೆ ಮುಗಿಯಿತು ಆಕೆಯ ಓದಿನ ಜೀವನ. ಮಕ್ಕಳು, ಅವರ ಓದು ನಂತರ ಅವರ ಬದುಕನ್ನು ನೇರ್ಪುಗೊಳಿಸುವಲ್ಲಿಯೇ ಹೈರಾಣಾಗಿಬಿಟ್ಟರು. ಕಾಲವಾಗಲೀ, ವ್ಯಕ್ತಿಯಾಗಲೀ ಯಾವತ್ತೂ, ಯಾರಿಗೂ ಕಾಯುತ್ತಾ ನಿಲ್ಲುವುದಿಲ್ಲವಲ್ಲ!
ಮನಸ್ಸು ದೆವ್ವಗಳ ಕಾರ್ಖಾನೆಯಾಗಲಿಲ್ಲ:
2020ರಲ್ಲಿರಾಣಿಯವರ ಗಂಡ ಇಹ ಲೋಕ ತ್ಯಜಿಸಿಬಿಟ್ಟರು. ಮಕ್ಕಳೂ ಅವರವರ ಬದುಕಿನಲ್ಲಿ, ಅವರವರದ್ದೇ ಲೋಕ ಕಂಡುಕೊಂಡುಬಿಟ್ಟಿದ್ದ ಕಾರಣ ಇವರು ಒಂಟಿಯಾದರು. ಖಾಲಿ ಕೂತವರ ಮನಸ್ಸು ದೆವ್ವಗಳ ಕಾರ್ಖಾನೆಯಾಗುತ್ತದೆ ಎನ್ನುತ್ತಾರೆ, ಆದರೆ ಈಕೆ ಮಾತ್ರ ಖಾಲಿ ಕೂತರೂ ಯೋಚಿಸಿದ್ದು ಮಾತ್ರ ಬೇರೆಯದ್ದೇ ಆಗಿತ್ತು.
ಯೋಗ ಬಹಳ ಇಷ್ಟವಿತ್ತು ಹಾಗಾಗಿ ಯೋಗ ಮಾಡಲು ಆರಂಭಿಸಿದರು. ಈ ನಡುವೆ ಅರ್ಧಕ್ಕೆ ಬಿಟ್ಟ ಓದನ್ನು ಯಾಕೆ ಮುಂದುವರೆಸಬಾರದು ಎಂಬ ಪ್ರಶ್ನೆ ತಲೆಯಲ್ಲಿಬೇರು ಬಿಟ್ಟಿತು. ಅದನ್ನು ಅಷ್ಟಕ್ಕೇ ಬಿಡದೇ ಅದಕ್ಕೆ ಗೊಬ್ಬರ ಮತ್ತು ನೀರೆರೆದೇಬಿಟ್ಟರು. ಈ ಮೂಲಕ ಪುನಃ ಕಲಿಕೆಯ ಬದುಕನ್ನು ಆರಿಸಿಕೊಂಡರು. ಖಾಸಗಿಯಾಗಿ ಪರೀಕ್ಷೆ ಕಟ್ಟಿದರು. 2024ರಲ್ಲಿಪ್ರಥಮ ಪಿಯುಸಿ ಮತ್ತು 2025ರಲ್ಲಿದ್ವಿತೀಯ ಪಿಯುಸಿ ಮುಗಿಸಿಯೇಬಿಟ್ಟರು. ಫಲಿತಾಂಶ ಬಂದಾಗ ಇಡೀ ಊರು ಸಂಭ್ರಮಿಸಿತ್ತು. ವಿಶೇಷವೆಂದರೆ ಈಕೆ ಎಲ್ಲಿಯೂ ಟ್ಯೂಷನ್ ಗಳಿಗೆ ಹೋಗಲಿಲ್ಲ. ಯಾರ ಸಹಾಯವನ್ನೂ ಪಡೆಯಲಿಲ್ಲ. ಮನೆಯಲ್ಲಿಯೇ ಕೂತು ಓದಿದರು. ಓದಿದ್ದನ್ನು ಬರೆದೂ ಬರೆದೂ ಕೈ ಬರಹವನ್ನು ಹದಕ್ಕೆ ತಂದುಕೊಂಡರು. ಒಟ್ಟು 600 ಅಂಕಗಳಿಗೆ ತಮಿಳಿನಲ್ಲಿ89, ಇಂಗ್ಲಿಷ್ ನಲ್ಲಿ50, ಅರ್ಥಶಾಸ್ತ್ರದಲ್ಲಿ48 ಅಂಕಗಳು ಸೇರಿದಂತೆ 346 ಅಂಕಗಳನ್ನು ಪಡೆದು ಶೇ. 57.66 ಫಲಿತಾಂಶದೊಂದಿಗೆ ದ್ವಿತೀಯ ದರ್ಜೆಯಲ್ಲಿಪಾಸಾಗಿದ್ದಾರೆ. ಇಲ್ಲಿಈಕೆಯ ದರ್ಜೆಯನ್ನು ನೋಡಿ ಮುಖ್ಯ, ಅಮುಖ್ಯ ಎಂದು ಅಳೆಯಬೇಕಿಲ್ಲ. ಅಳೆಯಬೇಕಿರುವುದು ಈಕೆಯ ಮನೋಬಲವನ್ನು. ಏಕೆಂದರೆ, ಮನೋಬಲವೊಂದಿದ್ದರೆ ಅದರ ಮುಂದೆ ಇನ್ಯಾವ ಬಲದ ಅವಶ್ಯಕತೆಯೂ ಇರುವುದಿಲ್ಲ. ಗಂಡ ಸತ್ತ ನಂತರ ಅದರಲ್ಲೂತನ್ನ 68ನೇ ವಯಸ್ಸಿನಲ್ಲಿಯಾರ ಬಳಿಗೂ ಟ್ಯೂಷನ್ ಗೂ ಸಹ ಹೋಗದೆ, ಮನೆಯಲ್ಲಿಯೇ ಓದಿ ಮೊದಲನೇ ಪ್ರಯತ್ನದಲ್ಲಿಯೇ ಪಾಸಾಗುತ್ತಾರೆ ಎಂದ ಮೇಲೆ ಈಕೆಯ ಆತ್ಮಶಕ್ತಿ ಮತ್ತು ಮನೋಬಲವನ್ನೊಮ್ಮೆ ಊಹಿಸಿಕೊಳ್ಳಿ. ಯೋಗ ಮತ್ತು ಕಳರಿ (ಇದು ಕೇರಳದ ಸಾಂಪ್ರದಾಯಿಕ ಸಮರ ಕಲೆ. ಇದು ವಿಶ್ವದ ಅತ್ಯಂತ ಪ್ರಾಚೀನ ಸಮರ ಕಲೆಗಳಲ್ಲಿಒಂದು. ಕಳರಿ ಎಂಬುದು ಕೇರಳದ ಯುದ್ಧ ಕಲೆ, ಯೋಗ, ಧ್ಯಾನ ಮತ್ತು ಆಯುರ್ವೇದದ ಮಿಶ್ರಣ) ಅಭ್ಯಾಸ ಮಾಡುತ್ತಿರುವ ಇವರು ದೈಹಿಕ ಶಿಕ್ಷಣದಲ್ಲಿಪದವಿಗೆ ದಾಖಲಾತಿ ಪಡೆಯುವ ತಯಾರಿಯಲ್ಲಿದ್ದಾರೆ.
ಪ್ರತಿ ಸುರಂಗದ ಕೊನೆಯಲ್ಲಿಯೂ ಬೆಳಕಿನ ಕಿಂಡಿ ಇದ್ದೇ ಇರುತ್ತದೆ ಎಂಬ ನುಡಿಗಟ್ಟಿನಂತೆ, ಎಲ್ಲಾಮುಗಿದು ಹೋದ ನಂತರವೂ ನಮ್ಮ ಬಳಿ ಒಂದು ಆಯ್ಕೆ ಉಳಿದೇ ಉಳಿದಿರುತ್ತದೆ. ಅದನ್ನು ಎಷ್ಟು ಸಮರ್ಪಕ ಮತ್ತು ಎಷ್ಟು ಪರಿಣಾಮಕಾರಿಯಾಗಿ ಆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಭವಿತವ್ಯ ಅಡಗಿರುತ್ತದೆ.
ಫೋಟೊ: ರಾಣಿ
ಪಾಯಿಂಟರ್ಸ್
· ಒಮ್ಮೆ ಯಾವುದೋ ಅವಕಾಶ ಕೈ ತಪ್ಪಿತೆಂದರೆ ಆಸೆಯನ್ನು ಅಲ್ಲಿಗೇ ಬಿಟ್ಟುಬಿಡಬೇಡಿ, ಬದುಕಿನ ಇನ್ಯಾವುದೋ ತಿರುವಿನಲ್ಲಿಎದುರಾಗುತ್ತದೆ. ಆಸೆಯನ್ನು ಮರೆಯದೇ ನೆನಪಿನಲ್ಲಿಟ್ಟುಕೊಂಡಿರಿ.
· ಕಲಿಕೆಗೆ ವಯಸ್ಸಿನ ಹಂಗು ಮತ್ತು ಸಾಧನೆಗೆ ಕಾಲದ ಕೊರಗು ಎರಡೂ ಇಲ್ಲ. ಮನಸ್ಥಿತಿ ಸುಸ್ಥಿಯಲ್ಲಿರಬೇಕಷ್ಟೇ.
· ಕನಸು ಕಾಣುವುದನ್ನು ನಿಲ್ಲಿಸಬೇಡಿ. ಕನಸು ಕಾಣುವ ಕಣ್ಣಿಗೆ ವಯಸ್ಸು ಇಳಿಯುವುದಿಲ್ಲ.
· ಎಲ್ಲವೂ ಮುಗಿಯಿತು ಎನ್ನುವುದು ಒಂದು ನೆಪ ಮತ್ತು ಕೈಲಾಗದವರ ಕೊನೆಯ ಅಸ್ತ್ರ. ಏನೂ ಮುಗಿದಿಲ್ಲಎಂದು ಮುನ್ನುಗ್ಗುವುದು ನಂಬಿಕೆ ಮತ್ತು ಆತ್ಮವಿಶ್ವಾಸದ ಲಕ್ಷಣ.
· ದೇಹ ನಡುಗಿದರೂ ಬರೆಯುವ ಉತ್ಸಾಹ ನಡುಗಬಾರದು.
· ಏಜ್ ಕಳೆದರೂ ಪೇಜ್ ತಿರುಗಿಸುವುದನ್ನು ನಿಲ್ಲಿಸಬಾರದು.
· ಸೋಲು ಗೆಲುವುಗಳ ನಡುವೆ ಇರುವುದು ನಿಮ್ಮಗಳ ಪ್ರಯತ್ನ ಮತ್ತು ಸಕಾರಾತ್ಮಕ ಮನೋಭಾವ ಮಾತ್ರ.
· ಜ್ಞಾನಕ್ಕಿಂತ ಪರಿಜ್ಞಾನ ಮುಖ್ಯ. ಓದಿಗಿಂತ ಅನುಭವ ಮುಖ್ಯ. ಪದವಿಗಿಂತ ಪ್ರಜ್ಞೆ ಮುಖ್ಯ. ಈ ಎಲ್ಲವುಗಳಿಗಿಂತ ಆತ್ವಿಶ್ವಾಸವೇ ಅತಿ ಮುಖ್ಯ.
· ಕಲಿಕೆಯಾಗಲೀ ಅಥವಾ ನಡಿಗೆಯಾಗಲೀ ಎರಡೂ ಕೂಡ ನಿರಂತರವಾಗಿ ಸಾಗುತ್ತಲೇ ಇರಬೇಕು. ಇವೆರಡೂ ನಿಂತ ದಿನ ಬದುಕೂ ಕೂಡ ನಿಲ್ಲುತ್ತದೆ.
· ಮನುಷ್ಯನ ಮನಸ್ಸಿನಂತೆಯೇ ವ್ಯಕ್ತಿತ್ವ. ಬಿತ್ತುವ ಬೀಜದಂತೆಯೇ ಬೆಳೆ. ಮನಸ್ಸಿನಲ್ಲಿಕೊಳೆ ಇರಬಾರದು. ಬೆಳೆಯಲ್ಲಿಕಳೆ ಇರಬಾರದು.

