ವಿದ್ಯುತ್ ತಗುಲಿ ಮಹಿಳೆ ಸಾವು
ವಿಕ ಸುದ್ದಿಲೋಕ ಶಿವಮೊಗ್ಗ
ಮಂಡೇನಕೊಪ್ಪ ಗ್ರಾಮದ ಪ್ರತ್ಯಂಗೀರಾ ದೇವಿ ದೇವಸ್ಥಾನ ಪಕ್ಕದ ಬಡಾವಣೆಯಲ್ಲಿಬುಧವಾರ ಸಂಜೆ ವಿದ್ಯುತ್ ಕಂಬದಲ್ಲಿಬೀದಿ ದೀಪ ಹಾಕಲು ಹೋದ ಮಹಿಳೆ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.
ಮೂಲತಃ ಕಾಚಿನಕಟ್ಟೆಯವರಾದ ಮಂಡೇನಕೊಪ್ಪ ವಾಸಿ ಮಹೇಶ್ ಅವರ ಪತ್ನಿ ಅನಸೂಯ(44) ಮೃತಪಟ್ಟವರು. ಮನೆ ಪಕ್ಕದ ಕಂಬದಲ್ಲಿಬೀದಿ ದೀಪದ ಸ್ವಿಚ್ ಹಾಕದೆ ನೇರವಾಗಿ ವೈಯರ್ ಗಳನ್ನು ಒಂದಕ್ಕೊಂದು ಸಂಪರ್ಕ ಏರ್ಪಡಿಸಿ ದೀಪಗಳನ್ನು ಬೆಳಗುವಂತೆ ಮಾಡಲಾಗುತ್ತಿತ್ತು. ಅನಸೂಯ ಅವರು ಸಂಜೆ ಅದೇ ರೀತಿಯಲ್ಲಿವೈಯರ್ ಗಳಿಗೆ ಸಂಪರ್ಕ ಏರ್ಪಡಿಸಲು ಹೋದಾಗ ವಿದ್ಯುತ್ ತಗುಲಿದೆ. ಅಧಿಕ ಶಕ್ತಿಯ ವಿದ್ಯುತ್ ತಗುಲಿದ್ದರಿಂದ ಅವರು ಸ್ಥಳದಲ್ಲೆಮೃತಪಟ್ಟರು ಎಂದು ಕುಟುಂಬದವರು ತಿಳಿಸಿದ್ದಾರೆ.
ಬೀದಿ ದೀಪಗಳನ್ನು ಹಾಕಿದ ಬಳಿಕ ನಿಯಂತ್ರಣಕ್ಕೆ ಸ್ವಿಚ್ ಅಥವಾ ಡಿಪಿ ಅಳವಡಿಸುವಂತೆ ಮೆಸ್ಕಾಂ ಸಿಬ್ಬಂದಿ ಮತ್ತು ಬಡಾವಣೆ ಅಭಿವೃದ್ಧಿಪಡಿಸಿದವರಿಗೆ ಹೇಳಿದರೂ ನಿರ್ಲಕ್ಷ್ಯ ಮಾಡಿದ್ದರು ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಂಬದವರ ದೂರು ಅನ್ವಯ ತುಂಗಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

