ಕುಂದಾಪುರ: ಮೇ 17ರಂದು ಕೊಲ್ಲೂರು ಸಮೀಪದ ದಳಿ ತಿರುವಿನಲ್ಲಿಸಂಭವಿಸಿದ್ದ ಮೀನಿನ ಲಾರಿ ಮತ್ತು ಜೀಪ್ ನಡುವಿನ ಡಿಕ್ಕಿ ಘಟನೆಯಲ್ಲಿಮಡಿದ ಮಹಿಳೆಯರಿಬ್ಬರ ಮೈಮೇಲಿದ್ದ ಚಿನ್ನ ಕದ್ದ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ. ದುರ್ಘಟನೆಯಲ್ಲಿಕೇರಳ ರಾಜ್ಯದ ಮಂಜೇಶ್ವರ ನಿವಾಸಿಗಳಾದ ಜ್ಯೋತಿ ಮತ್ತು ಅರಿಯಾ ಎಂಬವರು ಮೃತಪಟ್ಟಿದ್ದರು. ವಾರದ ಬಳಿಕ ಮೃತ ಮಹಿಳೆಯರ ಪೈಕಿ ಜ್ಯೋತಿ ಅವರ ಚಿನ್ನಾಭರಣ ಪರಿಶೀಲಿಸಿದಾಗ ಕಳವು ಆಗಿರುವುದು ಕಂಡುಬಂದಿತ್ತು. ಈ ಬಗ್ಗೆ ಮೃತ ಮಹಿಳೆಯ ಕುಟುಂಬದವರಾದ ಶ್ರೀಕುಮಾರ್ ಎಂಬವರು ದೂರು ನೀಡಿದ್ದರು. ಡಿವೈಎಚ್ .ಡಿ.ಕುಲಕರ್ಣಿ, ಸಿಪಿಐ ಶಿವಕುಮಾರ್ ನಿರ್ದೇಶನದಂತೆ ತಕ್ಷಣ ಕಾರ್ಯಪ್ರವೃತ್ತರಾದ ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕರಾದ ವಿನಯ ಎಂ. ಕೊರ್ಲಹಳ್ಳಿ, ನಾಗೇಂದ್ರ ಎಚ್ ಸಿ, ಲಕ್ಷ್ಮಣ ಗಾಣಿಗ ಎಚ್ ಸಿ, ರಾಘವೇಂದ್ರ ಎಚ್ ಸಿ, ನಾಗರಾಜ ಪಿಸಿ ಅವರನ್ನೊಳಗೊಂಡ ತಂಡ ಸಿಸಿ ಟಿವಿ ದೃಶ್ಯಾವಳಿ ಮತ್ತು ಘಟನಾ ಸ್ಥಳದಲ್ಲಿಸಾರ್ವಜನಿಕರು ತೆಗೆದ ನಾನಾ ಫೋಟೊ ಮತ್ತು ತಾಂತ್ರಿಕ ಸಹಾಯದಿಂದ ಆರೋಪಿಯನ್ನು ಪ್ರಕರಣ ದಾಖಲಾದ 24 ಗಂಟೆಯೊಳಗೆ ಬಂಧಿಸಿದ್ದಾರೆ. ಬಂಧಿತ ಆರೋಪಿ ಕೊಲ್ಲೂರಿನ ಕಲ್ಯಾಣಿಗುಡ್ಡೆ ನಿವಾಸಿ ಹೇಮಂತ್ (40) ಎಂದು ಗುರುತಿಸಲಾಗಿದೆ. ಆರೋಪಿಯಿಂದ 3.910 ಗ್ರಾಂ ತೂಕದ 1 ಉಂಗುರ ಮೌಲ್ಯ 57,000 ರೂ., 3.450 ಗ್ರಾಂ ತೂಕದ 1 ಬಳೆ ಮೌಲ್ಯ 50,000 ರೂ. 7.160 ಗ್ರಾಂ ತೂಕದ 1 ಸರ ಮೌಲ್ಯ 1,00,000ರೂ. ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೋಟೊ//25ಕೆ-ಎಚ್ ಎಂಟಿ1//. ಬಂಧಿತ ಆರೋಪಿ.
ಪೋಟೊ//25ಕೆ-ಎಚ್ ಎಂಟಿ2//. ವಶಪಡಿಸಿಕೊಂಡ ಸ್ವತ್ತು

