ಸುಸ್ಥಿರ ಮದ್ಯ ಉತ್ಪಾದನೆಗೆ ಬೆಂಬಲ

Contributed byDHANANJAYAGOWDA|Vijaya Karnataka

ಕರ್ನಾಟಕವು ಮದ್ಯ ಉತ್ಪಾದನೆಯಲ್ಲಿ ಹೊಸತನದ ಕೇಂದ್ರವಾಗುತ್ತಿದೆ. ಪರಿಸರ ಪೂರಕ ಬೆಳವಣಿಗೆ, ದೇಶೀಯ ಉತ್ಪಾದನೆ ಮತ್ತು ಬೆಂಗಳೂರಿನ ಹೊರಗೆ ಬ್ರೀವರಿ ಪರಿಸರ ವ್ಯವಸ್ಥೆಯ ವಿಸ್ತರಣೆಗೆ ರಾಜ್ಯ ಸರಕಾರ ಬೆಂಬಲ ಘೋಷಿಸಿದೆ. ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರು ವ್ಯಾಪಾರ ಸುಲಭಗೊಳಿಸಲು ಮತ್ತು ಉತ್ಪಾದನಾ ವ್ಯವಸ್ಥೆ ಬಲಪಡಿಸಲು ಮಹತ್ವದ ಸುಧಾರಣೆ ತಂದಿರುವುದಾಗಿ ತಿಳಿಸಿದರು. 2030ರವರೆಗೆ ನೀತಿ ಸ್ಥಿರತೆ ಒದಗಿಸಲು ಸರಕಾರ ಬದ್ಧವಾಗಿದೆ.

new support for sustainable alcohol production in karnataka minister timmappas take

-ಮದ್ಯೋದ್ಯಮ ಪ್ರಮುಖರ ಸಮಾವೇಶದಲ್ಲಿಸಚಿವ ತಿಮ್ಮಾಪುರ ಭರವಸೆ

ವಿಕ ಸುದ್ದಿಲೋಕ ಬೆಂಗಳೂರು

ಕರ್ನಾಟಕವು ಮದ್ಯ, ಆಲ್ಕೋಹಾಲ್ ಉತ್ಪಾದನೆಯ ಹೊಸತನದ ಹಬ್ ಆಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಪರಿಸರಕ್ಕೆ ಪೂರಕ (ಸುಸ್ಥಿರ) ಬೆಳವಣಿಗೆ, ದೇಶೀಯ ಉತ್ಪಾದನೆ ಮತ್ತು ಬೆಂಗಳೂರಿನಿಂದ ಹೊರಗೆ ಬ್ರೀವರಿ ಪರಿಸರ ವ್ಯವಸ್ಥೆಯ ವಿಸ್ತರಣೆಗೆ ರಾಜ್ಯ ಸರಕಾರ ಸಂಪೂರ್ಣ ಬೆಂಬಲ ಘೋಷಿಸಿದೆ.

ನಗರದಲ್ಲಿಸೋಮವಾರ ನಡೆದ ಮದ್ಯೋದ್ಯಮದ ಪ್ರಮುಖರ ಸಮಾವೇಶದಲ್ಲಿಭಾಗವಹಿಸಿ ಮಾತನಾಡಿದ ಅಬಕಾರಿ ಸಚಿವ ಆರ್ .ಬಿ.ತಿಮ್ಮಾಪುರ, ‘‘ವ್ಯಾಪಾರ ವಹಿವಾಟು ಸುಲಭಗೊಳಿಸಲು ಮತ್ತು ರಾಜ್ಯದ ಮದ್ಯ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಲು ಕರ್ನಾಟಕ ಸರಕಾರವು ಕಳೆದ ಒಂದು ವರ್ಷದಲ್ಲಿಮಹತ್ವದ ಅಬಕಾರಿ ಮತ್ತು ನಿಯಂತ್ರಕ ಸುಧಾರಣೆಗಳನ್ನು ತಂದಿದೆ,’’ ಎಂದು ತಿಳಿಸಿದರು.

‘‘ಲೈಸೆನ್ಸ್ ಪ್ರಕ್ರಿಯೆ ಸರಳೀಕರಣ, ಎಂಆರ್ ಪಿ ಪರಿಷ್ಕರಣೆ ವ್ಯವಸ್ಥೆ, ಡಿಜಿಟಲ್ ಅನುಸರಣೆ ಹಾಗೂ ವಾರ್ಷಿಕ ಪರವಾನಗಿ ನವೀಕರಣ ಸುಧಾರಣೆಗಳ ಮೂಲಕ ನಾವು ಹೆಚ್ಚು ಪಾರದರ್ಶಕ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ. ಉದ್ಯಮದ ದೀರ್ಘಾವಧಿ ಹೂಡಿಕೆಗೆ ಪೂರಕವಾಗಿ 2030ರವರೆಗೆ ನೀತಿ ಸ್ಥಿರತೆಯನ್ನು ಒದಗಿಸಲು ಸರಕಾರ ಬದ್ಧವಾಗಿದೆ,’’ ಎಂದು ಸಚಿವರು ಭರವಸೆ ನೀಡಿದರು.

40,000 ಕೋಟಿ ರೂ. ಆದಾಯ:

‘‘ಕರ್ನಾಟಕ ಸದ್ಯ ಅಬಕಾರಿ ಸುಂಕದ ಮೂಲಕ ವಾರ್ಷಿಕ ಸುಮಾರು 40,000 ಕೋಟಿ ರೂ. ಆದಾಯ ಗಳಿಸುತ್ತಿದೆ. ಇದು ರಾಜ್ಯದ ಆರ್ಥಿಕತೆಯಲ್ಲಿಈ ಕ್ಷೇತ್ರದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಆದರೆ ನಮ್ಮ ಉದ್ದೇಶ ಕೇವಲ ಆದಾಯ ಗಳಿಕೆಯಲ್ಲ. ಸುಸ್ಥಿರ ಬೆಳವಣಿಗೆ ಮೂಲಕ ಗ್ರಾಹಕರು, ರೈತರು, ಉತ್ಪಾದಕರು ಮತ್ತು ಸ್ಥಳೀಯ ಸಮೂಹಕ್ಕೆ ಪ್ರಯೋಜನವಾಗುವ ಸಮತೋಲಿತ ವ್ಯವಸ್ಥೆಯನ್ನು ನಿರ್ಮಿಸುವುದಾಗಿದೆ,’’ ಎಂದು ಸಚಿವರು ಸ್ಪಷ್ಟಪಡಿಸಿದರು.

‘‘ಆಲ್ಕೋಹಾಲ್ ಪ್ರವಾಸೋದ್ಯಮ, ಸುಸ್ಥಿರ ಮದ್ಯ ತಯಾರಿಕೆ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಆಧಾರಿತ ಉತ್ಪಾದನೆಯಲ್ಲಿರಾಜ್ಯಕ್ಕೆ ಅಪಾರ ಅವಕಾಶಗಳಿದ್ದು, ಪರಿಸರ ಸಂರಕ್ಷಣೆಗಾಗಿ ಬಾಟಲ್ ಮರುಬಳಕೆ ಹಾಗೂ ತ್ಯಾಜ್ಯ ನೀರಿನ ಸಂಸ್ಕರಣೆಗೆ ಉದ್ಯಮಗಳು ಆದ್ಯತೆ ನೀಡುವ ಅಗತ್ಯವಿದೆ,’’ ಎಂದು ತಿಳಿಸಿದರು.

ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶಿವಕುಮಾರ್ ಈಶ್ವರನ್ ಮಾತನಾಡಿ, ‘‘ನೀರಿನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯು ಈ ಉದ್ಯಮದ ಭವಿಷ್ಯವನ್ನು ನಿರ್ಧರಿಸಲಿವೆ. ಮದ್ಯದ ಉದ್ಯಮದ ಬೆಳವಣಿಗೆಯ ಲಾಭವು ನಮ್ಮ ಗ್ರಾಮೀಣ ಭಾಗಕ್ಕೂ ತಲುಪಬೇಕು. ಬ್ರೀವರಿಗಳಿಗೆ ಅಗತ್ಯವಿರುವ ಬಾರ್ಲಿ, ಧಾನ್ಯಗಳು ಮತ್ತು ಹಣ್ಣುಗಳನ್ನು ಹೊರಗಿನಿಂದ ತರಿಸುವ ಬದಲು ನಮ್ಮದೇ ರಾಜ್ಯದ ರೈತರಿಂದ ನೇರವಾಗಿ ಖರೀದಿಸಬೇಕು. ಇದರಿಂದ ಸ್ಥಳೀಯ ಪೂರೈಕೆ ಸರಪಳಿ ಬಲಗೊಳ್ಳುತ್ತದೆ,’’ ಎಂದು ತಿಳಿಸಿದರು.

ಜಂಟಿ ಅಬಕಾರಿ ಆಯುಕ್ತರು, ಬ್ರೀವರ್ ಗಳು, ಡಿಸ್ಟಿಲರಿಗಳ ಪ್ರತಿನಿಧಿಗಳು, ಪರಿಸರ ಸುಸ್ಥಿರತೆ ತಜ್ಞರು ಹಾಗೂ ತಂತ್ರಜ್ಞಾನ ಪೂರೈಕೆದಾರರು ಸಮಾವೇಶದಲ್ಲಿಭಾಗವಹಿಸಿದ್ದರು.