ಹಾಲಿವುಡ್ ನ ಶೋಕಗೀತೆ
(ಮೂಲ: ಬರ್ತೋಲ್ತ್ ಬ್ರೆಕ್ಟ್ )
--
ಹಾಲಿವುಡ್ ಗ್ರಾಮವನ್ನು ರೂಪಿಸಿದವರು
ಅದನ್ನು ಕಲ್ಪಿಸಿದ್ದು
ಅದು ಸ್ವರ್ಗವಾಗಿ ಇರಬೇಕು ಎಂದು.
ಅವರ ಸ್ಪಷ್ಟ ತೀರ್ಮಾನವೆಂದರೆ:
ಸ್ವರ್ಗ ಮತ್ತು ನರಕ ಎಂಬ ಎರಡು ಲೋಕಗಳನು
ದೇವರು ಸೃಷ್ಟಿಸುವ ಅಗತ್ಯ ಇರಲಿಲ್ಲ.
ಒಂದೇ ಸಾಕು ಹಾಲಿವುಡ್ ನಂತೆ: ಅದು ಸ್ವರ್ಗ
ಅದರ ಒಳಗಡೆಯೇ ಇದೆ ದಾರಿದ್ರ್ಯ ನಿರಾಶೆ
ನರಕದಲಿ ಇರುವಂತೆ.
-++++++++++++++
00000000000000
ಚಂದ್ರನ ರಾತ್ರಿ
(ಜರ್ಮನ್ ರೊಮ್ಯಾಂಟಿಕ್ ಕವಿ ಜೋಸೆಫ್ ಐಸೆನ್ ದೋಫ್ ರ್ (1788-1857)ನ ಕವನ.)
---
ಬಾನು ಬುವಿಯನು ಮೆತ್ತಗೆ
ಮುತ್ತಿಕ್ಕಿದಂತೆ,ಅದರಿಂದ
ಹೂಗಳು ಮಿರಮಿರನೆ ಮಿರುಗಿದಂತೆ
ಭೂಮಿಗೆ ಆಕಾಶದ್ದೇ ಕನಸು.
ಗಾಳಿ ಹಾರಾಡಿದಾಗ ಹೊಲದ ಮೇಲೆಲ್ಲ
ಬಾಗಿ ತೊನೆದಾಡಿದಾಗ ಜೋಳದ ತೆನೆಗಳೆಲ್ಲ
ಮರಗಳು ಲಾಸ್ಯವಾಡಿದವು ಮಧುರವಾಗಿ
ರಾತ್ರಿಯಲಿ ನಕ್ಷತ್ರಗಳು ಸ್ಫಟಿಕವಾಗಿ
ಚಾಚಿಕೊಂಡಿತು ತನ್ನ ರೆಕ್ಕೆಗಳನು
ನನ್ನ ಜೀವ ಜಗದಗಲವಾಗಿ
ನೀರವದ ನಾಡಿನಲಿ ಹಾರಾಡುತಿತ್ತು ನನ್ನ ಜೀವ
ಮತ್ತೆ ಮನೆ ಸೇರುವುದೋ ಎಂಬ ಭಾವ.
ಧಿಧಿ++++++
ಕನ್ನಡಕ್ಕೆ: ಬಿ.ಎ.ವಿವೇಕ ರೈ

