ದಿನಕ್ಕೊಂದು ಸುಭಾಷಿತ
--
-ಶ್ರೀನಾಥ ಎಸ್ .ವಿ.
s್ಟಜ್ಞಿaಠಿha.svಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಸಂಸ್ಕೃತ ಸಾಹಿತ್ಯದಲ್ಲಿಸುಭಾಷಿತಗಳಿಗೆ ಒಂದು ಮಹತ್ವದ ಸ್ಥಾನವಿದೆ. ನಾಲ್ಕು ಸಾಲುಗಳಲ್ಲಿಜೀವನದ ಅರ್ಥ, ಜೀವನ ಮೌಲ್ಯ, ಬದುಕಿನ ಪಾಠವನ್ನು ತುಂಬಾ ಆತ್ಮೀಯವಾಗಿ, ಆಪ್ತತೆಯಿಂದ ತಿಳಿಸಿಕೊಡುವ ಒಂದು ಮಹತ್ತರವಾದ ಕಾರ್ಯವನ್ನು ಈ ಸುಭಾಷಿತಗಳು ಮಾಡುತ್ತವೆ. ಸುಭಾಷಿತ ಎಂದರೆ ಒಳ್ಳೆಯ ಮಾತು, ಹಿತನುಡಿ ಎಂದು ಅರ್ಥ. ಆದರೆ ಈ ಅರ್ಥ ಇಷ್ಟಕ್ಕೇ ನಿಲ್ಲುವುದಿಲ್ಲ, ಸುಭಾಷಿತದ ಅರ್ಥ ತುಂಬಾ ವಿಸ್ತಾರವಾದದ್ದು ಮತ್ತು ಅಷ್ಟೇ ಅರ್ಥಪೂರ್ಣವಾದದ್ದು. ಅದನ್ನು ಓದಿ ತಿಳಿದುಕೊಂಡು ಜೀವನದಲ್ಲಿಅಳವಡಿಸಿಕೊಂಡರೆ ನಮ್ಮ ಬದುಕು ಕೂಡ ಅರ್ಥಪೂರ್ಣವಾಗುತ್ತದೆ. ಇಂಥ ಸುಭಾಷಿತಗಳಲ್ಲಿಆಯ್ದ 108 ಸುಭಾಷಿತಗಳ ಅರ್ಥವನ್ನು ಸರಳವಾದ ಕನ್ನಡದಲ್ಲಿಅರ್ಥೈಸುವ ಒಂದು ಉತ್ತಮವಾದ ಕೆಲಸವನ್ನು ಲೇಖಕರಾದ ಜಗದೀಶ ಶರ್ಮಾ ಸಂಪ ಅವರು ಮಾಡಿದ್ದಾರೆ.
ಲೇಖಕ ಜಗದೀಶಶರ್ಮಾ ಸಂಪ ಅವರು ದಿನಕ್ಕೊಂದು ಸುಭಾಷಿತ ಎನ್ನುವ ಶೀರ್ಷಿಕೆಯಡಿ 108 ಸುಭಾಷಿತಗಳನ್ನು ಓದುಗರ ಮುಂದಿಟ್ಟಿದ್ದಾರೆ. ಅವರು ನೀಡಿರುವ ಈ ಸುಭಾಷಿತಗಳನ್ನು ದಿನಕ್ಕೊಂದರಂತೆ ಓದುತ್ತಾ, ಅದನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದರೆ ಸಾಕು ನಮ್ಮ ಬದುಕಿಗೂ ಒಂದು ಅರ್ಥ ಬರುತ್ತದೆ ಎನ್ನುವುದರಲ್ಲಿಎರಡು ಮಾತಿಲ್ಲ.
ಜಗದೀಶಶರ್ಮಾ ಸಂಪ ಅವರು ಲೇಖಕರಾಗಿ ಹಲವಾರು ಉತ್ತಮ ಕೃತಿಗಳನ್ನು ಓದುಗರ ಕೈಗಿತ್ತಿದ್ದಾರೆ. ಇದು ಅವರ 33ನೇ ಕೃತಿ. ಈ ಹಿಂದಿನ ಕೃತಿಗಳಲ್ಲಿಬಳಸಿರುವ ಸರಳ, ಸುಂದರವಾದ ಶೈಲಿಯನ್ನೇ ಇಲ್ಲಿಯೂ ಮುಂದುವರಿಸಿದ್ದಾರೆ. ಚಿಕ್ಕ ಚಿಕ್ಕ ವಾಕ್ಯಗಳು, ಮನಸ್ಸಿಗೆ ಹತ್ತಿರವಾಗುವಂತಹ ಉದಾಹರಣೆಗಳ ಮೂಲಕ ಸುಭಾಷಿತಗಳನ್ನು ವಿವರಿಸುತ್ತಾ ಹೋಗುತ್ತಾರೆ. ಒಂದೇ ಏಟಿಗೆ ಇಡೀ ಪುಸ್ತಕವನ್ನು ಓದಿ ಮುಗಿಸಬಹುದಾದಷ್ಟು ಆಪ್ತತೆಯ ಬರಹ ಇಲ್ಲಿದೆ. ಆದರೆ ಲೇಖಕರೇ ಹೇಳಿರುವಂತೆ ಇದು ದಿನಕ್ಕೊಂದು ಸುಭಾಷಿತ. ಹಾಗಾಗಿ ಸುಭಾಷಿತವನ್ನು ಓದಿ ಅರ್ಥ ಮಾಡಿಕೊಂಡು ಅದನ್ನು ಮನನ ಮಾಡುವುದಕ್ಕೂ ಸ್ವಲ್ಪ ಸಮಯವನ್ನು ಮೀಸಲಿಡಬೇಕಾಗುತ್ತದೆ. ಹೀಗಾಗಿ ದಿನಕ್ಕೊಂದು ಸುಭಾಷಿತವನ್ನು ಓದಿ ಅರ್ಥೈಸಿಕೊಳ್ಳುವುದು ಉತ್ತಮ.
ಲೇಖಕರೇ ಪ್ರವೇಶಿಕೆಯಲ್ಲಿತಿಳಿಸಿರುವಂತೆ 1985-86ರಲ್ಲಿಆರಂಭವಾದ ಸುಭಾಷಿತ ಕಲಿಕೆಯ ಗೀಳು ಇಲ್ಲಿಯ ವರೆಗೂ ಅವರನ್ನು ಕರೆದುಕೊಂಡು ಬಂದಿದೆ. ನಮಗೆ ಸಿಕ್ಕ ಖುಷಿಯನ್ನು ಇತರರಿಗೆ ಹಂಚಬೇಕು ಎನ್ನುವ ಸುಭಾಷಿತದ ಮಾತಿನಂತೆಯೇ ಜಗದೀಶಶರ್ಮಾ ಸಂಪ ಅವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿ ದಿನ ಮುಂಜಾವಿನಲ್ಲಿಒಂದೂವರೆ ನಿಮಿಷದಲ್ಲಿಒಂದು ಸುಭಾಷಿತವನ್ನು ಕೇಳುಗರಿಗೆ ತಲುಪಿಸುವ ಕೆಲಸ ಮಾಡಿದರು. ಬಹಳಷ್ಟು ಜನ ಇದನ್ನು ಕೇಳಿ ಸಂತಸಪಟ್ಟರು ಮತ್ತೆ ಕೆಲವರು ಅದನ್ನು ಜೀವನದಲ್ಲಿಅಳವಡಿಸಿಕೊಂಡರು. ಕೊನೆಗೆ ಸಾವಣ್ಣ ಪ್ರಕಾಶನ ಆ ಸುಭಾಷಿತಗಳನ್ನೆಲ್ಲಕಲೆಹಾಕಿ ಪುಸ್ತಕ ರೂಪದಲ್ಲಿಓದುಗರ ಕೈಗಿಟ್ಟಿದೆ.
ಒಂದು ಕಾಲದಲ್ಲಿಶಾಲೆಗಳಲ್ಲಿಪ್ರಾರ್ಥನಾ ಸಮಯದಲ್ಲಿಇಲ್ಲವೇ ತರಗತಿ ಆರಂಭದಲ್ಲಿಪತ್ರಿಕೆಯಲ್ಲಿಬರುವ ಸುಭಾಷಿತವನ್ನು ಓದಿಸುವ ಅಭ್ಯಾಸವಿತ್ತು. ಶಿಕ್ಷಕರು ಸಾಧ್ಯವಾದಷ್ಟು ಮಟ್ಟಿಗೆ ಮಕ್ಕಳಿಗೆ ಅರ್ಥವಾಗುವಂತೆ ಅದನ್ನು ವಿವರಿಸಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಆ ಸಂಪ್ರದಾಯ ಅದೆಷ್ಟು ಶಾಲೆಗಳಲ್ಲಿಉಳಿದಿದೆಯೋ ಗೊತ್ತಿಲ್ಲ. ಆದರೆ ಆ ಕೆಲಸವನ್ನು ಜಗದೀಶಶರ್ಮಾ ಸಂಪ ಅವರು ತುಂಬಾ ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಇದು ಹಿರಿಯರಿಗಷ್ಟೇ ಅಲ್ಲಕಿರಿಯರೂ ಓದ ಬಹುದಾದ ಉತ್ತಮ ಕೃತಿ.
ಕೃತಿ: 108 ಸುಭಾಷಿತ-ದಿನಕ್ಕೊಂದು ಸ್ಫೂರ್ತಿ (ಭಾಗ-1)
ಲೇಖಕರು: ಜಗದೀಶ ಶರ್ಮಾ ಸಂಪ
ಪ್ರಕಾಶಕರು: ಸಾವಣ್ಣ ಎಂಟರ್ ಪ್ರೈಸಸ್ , ನಂ.12, ಬೈರಸಂದ್ರ ಮುಖ್ಯ ರಸ್ತೆ, ಜಯನಗರ 1ನೇ ಬ್ಲಾಕ್ ಪೂರ್ವ, ಬೆಂಗಳೂರು-560011.
ಮೊದಲ ಮುದ್ರಣ: ಏಪ್ರಿಲ್ 2026
ಪುಟಗಳು: 120, ಬೆಲೆ ರೂ. 150/-
ಘ್ಕಿ

