ಪು. 8 ಲೀಡ್

Contributed byShridevi Ambekallu|Vijaya Karnataka

ಜೀವನದ ನೆಮ್ಮದಿಗೆ ತ್ರಿಗುಣಗಳ ಅರಿವು ಅತ್ಯಗತ್ಯ. ಸತ್ವ, ರಜ, ತಮ ಗುಣಗಳು ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಸತ್ವಗುಣವು ಸುಖ, ಜ್ಞಾನ ನೀಡುತ್ತದೆ. ರಜೋಗುಣವು ಕರ್ಮ, ಆಸಕ್ತಿಗೆ ಪ್ರೇರೇಪಿಸುತ್ತದೆ. ತಮೋಗುಣವು ಅಜ್ಞಾನ, ಮೋಹ, ಆಲಸ್ಯ ಉಂಟುಮಾಡುತ್ತದೆ. ಈ ಗುಣಗಳ ಸಮಸ್ಥಿತಿಯೇ ಆರೋಗ್ಯಕರ ಜೀವನಕ್ಕೆ ದಾರಿ. ತ್ರಿಗುಣಗಳ ತಿಳುವಳಿಕೆಯೊಂದಿಗೆ ಜೀವನ ನಡೆಸಿದರೆ ನೆಮ್ಮದಿ ಲಭಿಸುತ್ತದೆ.

awareness of the three gunas for mental balance what is the experience of peace

ನೆಮ್ಮದಿಗೆ ತ್ರಿಗುಣಗಳ ಅರಿವು

-------------------------

ಡಾ. ಈಶ್ವರ ಪ್ರಸಾದ ಆಲಂಗಾರು

----

ಸತ್ವ-ರಜ-ತಮಗಳೆಂಬ ತ್ರಿಗುಣಗಳು ನಮ್ಮ ಜೀವನದ ಮೇಲೆ ಬೀರುವ ಪರಿಣಾಮಗಳೇನು? ಇಲ್ಲಿದೆ ಅವಲೋಕನ.

----

ಭಾರತೀಯ ಅಧ್ಯಯನ ಪರಂಪರೆಯು ಗುರು ಶಿಷ್ಯ ಪರಂಪರೆಯ ಮೂಲಕ ಸಾವಿರಾರು ವರ್ಷಗಳಿಂದ ಅವಿಚ್ಛಿನ್ನವಾಗಿ ಮುಂದುವರಿದುಕೊಂಡು ಬಂದಿದೆ. ಭಾರತೀಯ ಸಿದ್ಧಾಂತದಲ್ಲಿವಾತ -ಪಿತ್ತ -ಕಫಗಳು ಶರೀರದ ಗುಣಗಳಾದರೆ, ಸತ್ವ , ರಜಸ್ ಮತ್ತು ತಮಸ್ ಎಂಬುದು ಮನಸ್ಸಿನ ಗುಣಗಳಾಗಿವೆ. ಶರೀರದಲ್ಲಿತ್ರಿದೋಷಗಳಾದ ವಾತ, ಪಿತ್ತ, ಕಫಗಳ ಸಮಸ್ಥಿತಿಯು ಆರೋಗ್ಯ ಸಂರಕ್ಷಣೆಗೆ ಎಷ್ಟು ಮುಖ್ಯವೋ, ಸತ್ವ, ರಜಸ್ ಮತ್ತು ತಮೋಗುಣಗಳ ಸಮಸ್ಥಿತಿಯು ಮನಸ್ಸಿನ ಆರೋಗ್ಯ ಸಂರಕ್ಷಣೆಗೆ ಅಷ್ಟೇ ಮುಖ್ಯ.

ಸತ್ವಗುಣ, ರಜೋಗುಣ ಮತ್ತು ತಮೋ ಗುಣಗಳು ಪ್ರಕೃತಿಯಿಂದ ಉತ್ಪನ್ನವಾಗಿ ಅವಿನಾಶಿಯಾದ ಜೀವಾತ್ಮನನ್ನು ದೇಹದಲ್ಲಿಬಂಧಿಸುತ್ತವೆ ಎಂದು ಭಗವದ್ಗೀತೆಯಲ್ಲಿ(14-5) ಶ್ರೀಕೃಷ್ಣನು ಹೇಳುತ್ತಾನೆ. ಸತ್ವ, ರಜ ಮತ್ತು ತಮಗಳೆಂಬ ಮೂರೂ ಗುಣಗಳು ಪರಸ್ಪರ ಭಿನ್ನವಾಗಿವೆ. ಈ ಮೂರೂ ಗುಣಗಳು ಪ್ರಕೃತಿಯ ಕಾರ್ಯವಾಗಿದ್ದು ಸಮಸ್ತ ಜಡ ಪದಾರ್ಥಗಳು ಇವುಗಳ ವಿಸ್ತಾರವಾಗಿರುವುದರಿಂದ ಇವುಗಳನ್ನು ಪ್ರಕೃತಿ ಸಂಭವಾಃ ಎಂದು ಹೇಳಲಾಗಿದೆ. ಜೀವಾತ್ಮನಿಗೆ ಮೂರು ಗುಣಗಳಿಂದ ಉತ್ಪನ್ನವಾದ ಶರೀರದಲ್ಲಿಮತ್ತು ಅವುಗಳ ಸಂಬಂಧವಿರುವ ಪದಾರ್ಥಗಳಲ್ಲಿಯಾವ ಅಭಿಮಾನ, ಆಸಕ್ತಿ ಮತ್ತು ಮಮತ್ವವಿದೆಯೋ ಅದೇ ಬಂಧನವಾಗಿದೆ. ಜನನ ಮರಣಗಳೆಂಬ ಬಂಧನಕ್ಕೆ ಒಳಗಾಗುವುದು ಸಂಸಾರ ಬಂಧನ ಮತ್ತು ಇದರಿಂದ ಬಿಡುಗಡೆಯು ಮೋಕ್ಷ.

ಸತ್ವ ಗುಣವೆಂದರೇನು?

ತತ್ರ ಸತ್ತ್ವಂ ನಿರ್ಮಲತ್ವಾತ್ ಪ್ರಕಾಶಕಮನಾಮಯಮ್ | ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ|| ಈ ಮೂರೂ ಗುಣಗಳಲ್ಲಿಸತ್ವಗುಣವು ನಿರ್ಮಲವಾಗಿದ್ದು ಪ್ರಕಾಶಗೊಳಿಸುವಂತಹುದು ಮತ್ತು ವಿಕಾರರಹಿತವಾಗಿದೆ. ಈ ಸತ್ವಗುಣವು ಸುಖದ ಸಂಬಂಧದಿಂದ ಮತ್ತು ಜ್ಞಾನದ ಸಂಬಂಧದಿಂದ ಬಂಧಿಸಲ್ಪಡುತ್ತದೆ. ಸತ್ವಗುಣದ ಸ್ವರೂಪದಲ್ಲಿಯಾವುದೇ ಪ್ರಕಾರದ ಯಾವ ದೋಷವೂ ಇರುವುದಿಲ್ಲ. ಹಾಗಾಗಿ ಅಂತಃಕರಣದಲ್ಲಿಮತ್ತು ಇಂದ್ರಿಯಗಳಲ್ಲಿಪ್ರಕಾಶದ ವೃದ್ಧಿಯಾಗುತ್ತದೆ. ದುಃಖ ವಿಕ್ಷೇಪ, ದುರ್ಗುಣ ಮತ್ತು ದುರಾಚಾರಗಳು ನಾಶವಾಗಿ ಶಾಂತಿಯು ಲಭಿಸುತ್ತದೆ. ಯಾವಾಗ ಸತ್ವಗುಣವು ಬೆಳೆಯುತ್ತದೆಯೋ ಆಗ ಮನುಷ್ಯನ ಮನಸ್ಸಿನ ಚಂಚಲತೆಯು ನಾಶವಾಗಿ ಜಗತ್ತಿನಿಂದ ಉಪರತ ಮತ್ತು ವೈರಾಗ್ಯವನ್ನು ಹೊಂದಿ ಪರಮಾತ್ಮನ ಧ್ಯಾನದಲ್ಲಿಮಗ್ನನಾಗಿರುತ್ತಾನೆ. ಸತ್ವಗುಣವು ನೆಮ್ಮದಿಯನ್ನು ಕೊಡುತ್ತದೆ.

ರಜೋಗುಣವೆಂದರೆ:

ರಜೋರಾಗಾತ್ಮಕಂ ವಿದ್ಧಿ ತೃಷ್ಣಾಸಂಗಸಮುದ್ಭವಮ್ | ತನ್ನಿಬಧ್ನಾತಿಕೌಂತೇಯಕರ್ಮಸಂಗೇನದೇಹಿನಮ್ || (14-7)ಎಂದು ಭಗವದ್ಗೀತೆಯಲ್ಲಿತಿಳಿಸಲಾಗಿದೆ. ರಜೋಗುಣವು ರಾಗ ರೂಪಿಯಾಗಿದ್ದು, ಕಾಮನೆ ಮತ್ತು ಆಸಕ್ತಿಯಿಂದ ಉತ್ಪನ್ನವಾಗಿ, ಜೀವಾತ್ಮನನ್ನು ಕರ್ಮಗಳ ಮತ್ತು ಅವುಗಳ ಫಲದ ಸಂಬಂಧದಿಂದ ಬಂಧಿಸುತ್ತದೆ. ರಜೋಗುಣವು ಸ್ವಯಂರಾಗ ಅಂದರೆ ಆಸಕ್ತಿಯ ರೂಪದಲ್ಲಿಪ್ರಕಟವಾಗುತ್ತದೆ. ಆಸಕ್ತಿಯು ರಜೋಗುಣದ ಸ್ಥೂಲ ರೂಪವಾಗಿದೆ. ಕಾಮನೆ ಮತ್ತು ಆಸಕ್ತಿಯಿಂದ ರಜೋಗುಣವು ಬೆಳೆಯುತ್ತದೆ ಹಾಗೂ ರಜೋಗುಣದಿಂದ ಕಾಮನೆ ಮತ್ತು ಆಸಕ್ತಿಗಳು ವೃದ್ಧಿಯಗುತ್ತದೆ.

ತಮೋಗುಣವೆಂದರೆ:

ಎಂಬುದನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಈ ರೀತಿ ಹೇಳುತ್ತಾನೆ - ತಮಸ್ತಾ್ವಜ್ಞಾನಜಂ ವಿದ್ಧಿ ಮೋಹನಂ ಕರ್ಮದೇಹಿನಾಮ್ | ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ನಾತಿ ಭಾರತ|| (14-8). ತಮೋ ಗುಣವು ಅಜ್ಞಾನದಿಂದ ಉತ್ಪನ್ನವಾದದ್ದು ಮತ್ತು ನಮ್ಮನ್ನು ಮೋಹಗೊಳಿಸುತ್ತದೆ. ಜೀವಾತ್ಮನನ್ನು ಪ್ರಮಾದ, ಆಲಸ್ಯ ಹಾಗೂ ನಿದ್ರೆಗಳ ಮೂಲಕ ತಮೋಗುಣವು ಬಂಧಿಸುತ್ತದೆ. ತಮೋಗುಣವು ಅಂತಃಕರಣ ಮತ್ತು ಇಂದ್ರಿಯಗಳಲ್ಲಿಜ್ಞಾನ ಶಕ್ತಿಯನ್ನು ಅಭಾವಗೊಳಿಸಿ, ಅವುಗಳಲ್ಲಿಮೋಹವನ್ನು ಉತ್ಪನ್ನ ಮಾಡುತ್ತದೆ. ಯಾರಿಗೆ ಅಂತಃಕರಣ ಮತ್ತು ಇಂದ್ರಿಯಗಳೊಂದಿಗೆ ಸಂಬಂಧವಿದೆಯೋ ಹಾಗೂ ಯಾರ ಶರೀರದಲ್ಲಿಅಹಂ ಅಥವಾ ಮಮತೆ ಇದೆಯೋ ಆ ಎಲ್ಲಾಪ್ರಾಣಿಗಳು ನಿದ್ರಾದಿಗಳ ಸಮಯದಲ್ಲಿ, ಅಂತಃಕರಣ ಮತ್ತು ಇಂದ್ರಿಯಗಳಲ್ಲಿ, ಮೋಹವು ಉತ್ಪನ್ನವಾದುದರಿಂದ ತನ್ನನ್ನು ಮೋಹಿತನೆಂದು ತಿಳಿಯುತ್ತಾರೆ. ಆದರೆ ಯಾರ ಅಂತಃಕರಣ ಮತ್ತು ಇಂದ್ರಿಯ ಸಹಿತವಾದ ಶರೀರದಲ್ಲಿಅಭಿಮಾನವು ಉಳಿಯಲಿಲ್ಲವೋ, ಅಂತಹ ಜೀವನ್ಮುಕ್ತರಾದವರು ಅವುಗಳೊಂದಿಗೆ ಯಾವುದೇ ಸಂಬಂಧವನ್ನು ತಿಳಿಯುವುದಿಲ್ಲ. ಪ್ರಮಾದವೆಂದರೆ ಅಂತಃಕರಣ ಮತ್ತು ಇಂದ್ರಿಯಗಳ ಅರ್ಥ ಚೇಷ್ಟೆಗಳ ಹಾಗೂ ಶಾಸ್ತ್ರವಿಹಿತವಾದ ಕರ್ತವ್ಯ ಪಾಲನೆಯು. ಕರ್ತವ್ಯ ಕರ್ಮಗಳಲ್ಲಿಅಪ್ರವೃತ್ತಿರೂಪೀ ನಿರುದ್ಯೋಗದ ಹೆಸರು ಆಲಸ್ಯ. ನಿದ್ರೆಯುತಂದ್ರಾ, ಸ್ವಪ್ನ, ಸುಷುಪ್ತಿ ಇವೆಲ್ಲಆಗಿದ್ದು ಇವೆಲ್ಲವುಗಳ ಮೂಲಕ ತಮೋಗುಣವು ಜೀವಾತ್ಮನನ್ನು ಮುಕ್ತಿಯ ಸಾಧನೆಯಿಂದ ವಂಚಿತನನ್ನಾಗಿಸಿ, ಜನನ ಮರಣವೆಂಬ ಸಂಸಾರದಲ್ಲಿಸಿಲುಕಿಸುತ್ತದೆ. ಪ್ರಮಾದ, ಆಲಸ್ಯ, ನಿದ್ರೆಯ ಮೂಲಕ ಜೀವಾತ್ಮನನ್ನು ಬಂಧನದಲ್ಲಿಡುತ್ತದೆ.

ಸತ್ವಂ ಸುಖೇ ಸಂಜಯತಿ ಅಂದರೆ ಸತ್ವಗುಣವು ನಮ್ಮನ್ನು ಸುಖದಲ್ಲಿತೊಡಗಿಸುತ್ತದೆ ಮತ್ತು ರಜೋಗುಣವು ಕರ್ಮದಲ್ಲಿಹಾಗೂ ತಮೋ ಗುಣವು ಜ್ಞಾನವನ್ನು ಮುಚ್ಚಿ ಹಾಕಿ ಪ್ರಮಾದದಲ್ಲಿಯೂ ತೊಡಗಿಸುತ್ತದೆ. ಇಲ್ಲಿಸುಖ ಶಬ್ದವು ಸಾತ್ವಿಕ ಸುಖವನ್ನು ಸೂಚಿಸುತ್ತದೆ. ಸತ್ವ ಗುಣವು ಮನುಷ್ಯನನ್ನು ಸಾಂಸಾರಿಕ ಭೋಗದಿಂದ ಮತ್ತು ಚೇಷ್ಟೆಗಳಿಂದ ಹಾಗೂ ಪ್ರಮಾದ ಆಲಸ್ಯ ಮತ್ತು ನಿದ್ರೆಯಿಂದ ಹಿಮ್ಮೆಟ್ಟಿಸಿ ಆತ್ಮಚಿಂತನೆಯ ಮೂಲಕ ಸಾತ್ವಿಕ ಸುಖದೊಂದಿಗೆ ಸಂಯುಕ್ತಗೊಳಿಸಿ ಸುಖದಲ್ಲಿತೊಡಗಿಸುತ್ತದೆ. ರಜೋಗುಣವು ಈ ಲೋಕ ಮತ್ತು ಪರಲೋಕದ ಭೋಗರೂಪವಾದ ಫಲಗಳನ್ನು ಕೊಡುವಂತಹ ಕರ್ಮಕ್ಕೆ ಪ್ರೇರೇಪಿಸುತ್ತದೆ. ಅದು ನಾನಾ ಪ್ರಕಾರದ ಭೋಗಗಳ ಇಚ್ಛೆಯನ್ನು ಉಂಟು ಮಾಡಿ, ಅವುಗಳ ಪ್ರಾಪ್ತಿಗಾಗಿ ಮನುಷ್ಯನನ್ನು ಕರ್ಮಗಳಲ್ಲಿತೊಡಗಿಸುತ್ತದೆ. ತಮೋಗುಣವು ಹೆಚ್ಚಿದಾಗ ಕೆಲವೊಮ್ಮೆ ಮನುಷ್ಯನ ಕರ್ತವ್ಯ-ಅಕರ್ತವ್ಯದ ನಿರ್ಣಯ ಮಾಡುವಂತಹ ವಿವೇಕ ಶಕ್ತಿಯು ನಷ್ಟವಾಗುತ್ತದೆ. ಇನ್ನೂ ಕೆಲವೊಮ್ಮೆ ಅಂತಃಕರಣ ಮತ್ತು ಇಂದ್ರಿಯಗಳ ಚೇತನವನ್ನು ನಾಶಮಾಡಿ ನಿದ್ರೆಯ ವೃತ್ತಿಯನ್ನುಂಟು ಮಾಡುತ್ತದೆ.

ರಜೋಗುಣ ಮತ್ತು ತಮೋಗುಣಗಳನ್ನು ಅದುಮಿಕೊಂಡು ಸತ್ವಗುಣವು ವೃದ್ಧಿಸುತ್ತದೆ. ಯಾವಾಗ ಈ ದೇಹದಲ್ಲಿಹಾಗೂ ಅಂತಃಕರಣ ಮತ್ತು ಇಂದ್ರಿಯಗಳಲ್ಲಿಚೈತನ್ಯವು ಮತ್ತು ವಿವೇಕಶಕ್ತಿಯು ಉಂಟಾಗುತ್ತದೋ ಆಗ ಸತ್ವಗುಣವು ವೃದ್ಧಿಯಾಗಿದೆಯೆಂದು ಅರ್ಥ. ರಜೋಗುಣವು ಹೆಚ್ಚಿದಾಗ ಲೋಭ, ಪ್ರವೃತ್ತಿ, ಸ್ವಾರ್ಥ ಬುದ್ಧಿಯ ಮೂಲಕ ಕರ್ಮಗಳನ್ನು ಮಾಡುವುದು, ಅಶಾಂತಿ ಮತ್ತು ವಿಷಯ ಭೋಗಗಳ ಲಾಲಸೆ ಇವೆಲ್ಲಉಂಟಾಗುತ್ತದೆ. ತಮೋಗುಣವು ಹೆಚ್ಚಿದಾಗ ಅಂತಃಕರಣ ಮತ್ತು ಇಂದ್ರಿಯಗಳಲ್ಲಿಚೈತನ್ಯಶಕ್ತಿಯ ಅಭಾವ ಅಂದರೆ ಅಂಧಕಾರ, ಕರ್ತವ್ಯ ಕರ್ಮಗಳಲ್ಲಿಅಪ್ರವೃತ್ತಿ, ಮತ್ತು ವ್ಯರ್ಥ ಚೇಷ್ಟೆಗಳು, ನಿದ್ರೆ ಇತ್ಯಾದಿ ಮೋಹವನ್ನುಂಟು ಮಾಡುವ ವೃತ್ತಿಗಳು ಉಂಟಾಗುತ್ತದೆ.

ಶರೀರದ ಆರೋಗ್ಯ ಎಷ್ಟು ಮುಖ್ಯವೋ ಮನಸ್ಸಿನ ಆರೋಗ್ಯವೂ ಅಷ್ಟೇ ಮುಖ್ಯ. ಸತ್ವ-ರಜ-ತಮಗಳೆಂಬ ತ್ರಿಗುಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಅವುಗಳ ಅರಿವಿನೊಂದಿಗೆ ನಮ್ಮ ಜೀವನವನ್ನು ನಡೆಸುವುದು ನೆಮ್ಮದಿಯ ಆರೋಗ್ಯಪೂರ್ಣ ಜೀವನಕ್ಕೆ ಸಹಕಾರಿ.

====

ಲೇಖಕರು: ಅಧ್ಯಾತ್ಮ ಚಿಂತಕರು