ಭಕ್ತಿ ಮತ್ತು ವ್ಯಸನ
ಇವೆರಡರ ನಡುವಿನ ವ್ಯತ್ಯಾಸ ಏಣು?
-----------------------
ಸದ್ಗುರು ಜಗ್ಗ ವಾಸುದೇವ್ | ಈಶ ಫೌಂಡೇಶನ್
---------
ಭಕ್ತಿ ಮತ್ತ ವ್ಯಸನ ಎರಡೂ ಒಂದೇ ಅಲ್ಲ, ಆದರೂ ಇವುಗಳ ನಡುವೆ ಒಂದು ಸಾಮ್ಯತೆ ಇದೆ. ಏನದು?
------------------------------------
ವ್ಯಸನವು ಸಾಮಾನ್ಯವಾಗಿ ಯಾವುದಾದರೂ ವಸ್ತುಗಳೊಂದಿಗೆ ಸಂಬಂಧಿಸಿರುತ್ತದೆ. ಆದರೆ ಭಕ್ತಿ ಎನ್ನುವುದು ನಿಮಗಿಂತ ಮಿಗಿಲಾದ ಯಾವುದೋ ಒಂದರ ಕಡೆಗೆ ಇರುತ್ತದೆ. ಭಕ್ತಿಯನ್ನು ಅಭ್ಯಾಸ ಮಾಡಲು ಸಾಧ್ಯವಿಲ್ಲ. ಅದನ್ನು ಬೆಳೆಸಲು ಅಥವಾ ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಯಾವುದಾದರೂ ವಿಷಯ ಅಥವಾ ಯಾರಾದರೂ ವ್ಯಕ್ತಿಯಿಂದ ನೀವು ಪ್ರಭಾವಿತರಾದಾಗ, ನಿಮ್ಮ ಅರಿವಿಗೆ ಮೀರಿ ಅವರು ಉನ್ನತವಾಗಿ ಕಂಡಾಗ, ಭಕ್ತಿ ಎಂಬುದು ಸಹಜವಾಗಿಯೇ ಸಂಭವಿಸುತ್ತದೆ.
ವ್ಯಸನವು ಸಂಭವಿಸುವುದು ಯಾವುದನ್ನಾದರೂ ನೀವು ಸವಿದಾಗ ಮತ್ತು ಆ ಅನುಭವ ನಿಮಗೆ ಇಷ್ಟವಾದಾಗ. ನೀವು ಅದನ್ನು ಎಷ್ಟು ಹೆಚ್ಚು ಸವಿಯುತ್ತೀರೋ, ಅಷ್ಟು ಹೆಚ್ಚಾಗಿ ಅದರಲ್ಲಿಸಿಕ್ಕಿಹಾಕಿಕೊಳ್ಳುತ್ತೀರಿ ಮತ್ತು ಬಂಧಿಯಾಗುತ್ತೀರಿ.
ಸಾಮ್ಯತೆ ಏನು?
ಈ ಎರಡರ ನಡುವಿನ ಒಂದು ಸಾಮ್ಯತೆಯೆಂದರೆ, ಭಕ್ತಿ ಮತ್ತು ವ್ಯಸನ ಎರಡೂ ಮನುಷ್ಯನೊಳಗೆ ಒಂದು ರೀತಿಯ ಆಹ್ಲಾದಕರ ಅಥವಾ ಪರಮಾನಂದದ ಅನುಭವವನ್ನು ನೀಡಬಲ್ಲವು.
ವ್ಯಸನದ ವಿಷಯದಲ್ಲಿಈ ಆಹ್ಲಾದಕರ ಅನುಭವವು ಪ್ರಬಲವಾಗಿರುತ್ತದೆ. ಉದಾಹರಣೆಗೆ, ಕಹಿಯಾದ ವಸ್ತುವಿಗೆ ನೀವು ಎಂದಿಗೂ ವ್ಯಸನಿಯಾಗುವುದಿಲ್ಲ. ಅದನ್ನು ನೀವು ಪ್ರಜ್ಞಾಪೂರ್ವಕವಾಗಿ ತಿನ್ನಬೇಕಾಗುತ್ತದೆ. ನೀವು ಅದನ್ನು ತಿನ್ನುವಾಗಲೆಲ್ಲಾ‘ನಾನು ಇದನ್ನು ಮಾಡಬೇಕೇ?’ ಎಂದು ಯೋಚಿಸಬೇಕಾಗುತ್ತದೆ. ಜನರು ತಂಬಾಕು, ಕಾಫಿ, ಮದ್ಯ ಮತ್ತು ವಿವಿಧ ರೀತಿಯ ಮಾದಕ ದ್ರವ್ಯಗಳಿಗೆ ವ್ಯಸನಿಯಾಗುತ್ತಾರೆ ಏಕೆಂದರೆ ಅವು ಆಹ್ಲಾದಕರ ಅನುಭವವನ್ನು ನೀಡುತ್ತವೆ ಎಂಬುದು ಅಭಿಪ್ರಾಯ.
ಭಕ್ತಿ ಎಂದರೆ ನಿಮ್ಮ ಭಾವನೆಗಳು ಅತ್ಯಂತ ಮಧುರವಾಗುವುದು ಎಂದರ್ಥ. ಒಬ್ಬ ಭಕ್ತನ ರೀತಿ-ನೀತಿಗಳು ತರ್ಕಬದ್ಧವಾಗಿ ಯೋಚಿಸುವ ವ್ಯಕ್ತಿಗೆ ಮೂರ್ಖತನದಂತೆ ಅಥವಾ ಅತಾರ್ಕಿಕವಾಗಿ ಕಾಣಿಸಬಹುದು, ಆದರೆ ಒಬ್ಬ ಭಕ್ತನು ಬಹಳ ಬುದ್ಧಿವಂತನಾಗಿರುತ್ತಾನೆ. ಇದರ ಬಗ್ಗೆ ಯೋಚಿಸಿ: ನಿಮ್ಮ ಇಷ್ಟದಂತೆ ಕಳೆಯಲು ದಿನಕ್ಕೆ 24 ಗಂಟೆಗಳ ಕಾಲಾವಕಾಶವಿದೆ. ಯಾವುದನ್ನು ನೀವು ಬುದ್ಧಿವಂತಿಕೆ ಎಂದು ಪರಿಗಣಿಸುತ್ತೀರಿ? ನಿಮ್ಮ ಸಮಯವನ್ನು ಸಂಪೂರ್ಣ ಆನಂದದಲ್ಲಿಕಳೆಯುವುದನ್ನೇ ಅಥವಾ ವಾಸ್ತವಕ್ಕೆ ಸಂಬಂಧವಿಲ್ಲದ ಎಲ್ಲಾರೀತಿಯ ಸಮಸ್ಯೆಗಳೊಂದಿಗೆ ಗೊಂದಲದಲ್ಲಿಕಳೆಯುವುದನ್ನೇ? ಒಬ್ಬ ಭಕ್ತನು ಬಹಳ ಬುದ್ಧಿವಂತ ಏಕೆಂದರೆ ಅವನು ಒಂದು ಸತ್ಯವನ್ನು ಅರ್ಥ ಮಾಡಿಕೊಂಡಿದ್ದಾನೆ - ನಿಮ್ಮ ಸಂಪೂರ್ಣ ಸಮಯವನ್ನು ಅತ್ಯಂತ ಆಹ್ಲಾದಕರವಾಗಿ ಕಳೆದರೆ, ಯಾವುದೂ ನಿಮ್ಮನ್ನು ಬಂಧಿಸುವುದಿಲ್ಲ. ಅಲ್ಲಿನೋವಿರುವುದಿಲ್ಲ. ಇದು ತರ್ಕಕ್ಕೆ ನಿಲುಕದಿರಬಹುದು. ವಿಶ್ಲೇಷಿಸಿ ನೋಡಿದರೆ ಇದರಲ್ಲಿಅರ್ಥವಿಲ್ಲವೆಂದು ಅನಿಸಬಹುದು. ಒಬ್ಬ ಬುದ್ಧಿಜೀವಿಗೆ ಈ ಪರಿಕಲ್ಪನೆಯು ಹಾಸ್ಯಾಸ್ಪದವಾಗಿ ಕಾಣಬಹುದು, ಆದರೆ ಭಕ್ತನ ಜೀವನದ ಮನೋಭಾವದಲ್ಲಿಬಹಳ ಆಳವಾದ ಬದುಕಿನ ಅರಿವಿರುತ್ತದೆ. ಇತಿಹಾಸದ ಸತ್ಯವೇನೆಂದರೆ, ಬೇರೆಲ್ಲಾಮಾರ್ಗಗಳಿಗಿಂತ ಭಕ್ತಿಯ ಮೂಲಕವೇ ಅತಿ ಹೆಚ್ಚು ಜನರು ಪರಮ ಸ್ಥಿತಿಯನ್ನು ತಲುಪಿದ್ದಾರೆ.
ಪರಮಾನಂದ ನೀಡುವ ಭಕ್ತಿ
ಭಕ್ತಿಯು ಪರಮಾನಂದವನ್ನು ಉಂಟು ಮಾಡುತ್ತದೆ. ಇದು ‘ಎಕ್ಟಸಿ’ ಎಂದು ಹೆಸರಿಸಲಾದ ರಾಸಾಯನಿಕ ಗುಳಿಗೆಗಳಂತಲ್ಲ; ಅಂತಹ ಮಾತ್ರೆಗಳು ನಿಮ್ಮನ್ನು ಸ್ವಲ್ಪ ಸಮಯದವರೆಗೆ ಉನ್ನತ ಸ್ಥಿತಿಯಲ್ಲಿರಿಸಿ ನಂತರ ನಿಮ್ಮನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ. ಅವು ನಿಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಕುಂಠಿತಗೊಳಿಸುತ್ತವೆ. ಮತ್ತೊಂದೆಡೆ, ಭಕ್ತಿಯು ನಿಮ್ಮನ್ನು ಅಗಾಧವಾಗಿ ವೃದ್ಧಿಸುತ್ತದೆ. ನೀವು ಶಾಶ್ವತವಾಗಿ ಪರಮಾನಂದದಲ್ಲಿರಲು ತೆಗೆದುಕೊಳ್ಳಬಹುದಾದ ಒಂದು ಮಾತ್ರೆ ಇದೆ ಎಂದು ಕಲ್ಪಿಸಿಕೊಳ್ಳಿ - ಅದ್ಭುತವಲ್ಲವೇ!
ಭಕ್ತಿ ಮತ್ತು ವ್ಯಸನದ ನಡುವಿನ ವ್ಯತ್ಯಾಸ
ಇವೆರಡರ ನಡುವಿನ ವ್ಯತ್ಯಾಸವನ್ನು ಈ ರೀತಿ ಸಂಕ್ಷಿಪ್ತವಾಗಿ ಹೇಳಬಹುದು: ವ್ಯಸನವು ನಿಮ್ಮನ್ನು ಕುಗ್ಗಿಸುತ್ತದೆ, ಭಕ್ತಿಯು ನಿಮ್ಮನ್ನು ವೃದ್ಧಿಸುತ್ತದೆ. ವ್ಯಸನವು ನಿಮಗೆ ಕ್ಷಣಿಕ ಆಹ್ಲಾದವನ್ನು ನೀಡಬಹುದು. ಭಕ್ತಿಯು ನಿಮಗೆ ನಿರಂತರವಾದ ಆಹ್ಲಾದಕರ ಅನುಭವವನ್ನು ನೀಡುತ್ತದೆ. ವ್ಯಸನವು ನಿಮ್ಮನ್ನು ಒಂದು ಮೂಲೆಗೆ ತಳ್ಳುತ್ತದೆ, ನಿಮ್ಮ ದೇಹ ಮತ್ತು ಮನಸ್ಸನ್ನು ಕುಂದಿಸಿ ನಿಮ್ಮನ್ನು ಮಾನಸಿಕ ಕಾಯಿಲೆಗೆ ತಳ್ಳುತ್ತದೆ. ಭಕ್ತಿಯು ನಿಮ್ಮನ್ನು ಎಲ್ಲವನ್ನೂ ಒಳಗೊಳ್ಳುವಂತೆ ಮಾಡುತ್ತದೆ. ಒಂದು ನಿಮ್ಮನ್ನು ನಾಶಪಡಿಸಿದರೆ, ಇನ್ನೊಂದು ನಿಮ್ಮನ್ನು ಉತ್ತಮಗೊಳಿಸುತ್ತದೆ. ಇದೇ ದೊಡ್ಡ ವ್ಯತ್ಯಾಸ.

