ಹಂಚಿ ಬಾಳುವ ಸಾರ್ಥಕತೆ
-----------
ಸಂಪತ್ತಿನ ಸಾರ್ಥಕತೆ ದಾನ ನೀಡುವುದರಲ್ಲಿಇದೆ ಎಂಬ ಮಾತಿದೆ. ನಾವು ನೀಡುವ ದಾನ ಹೇಗಿರಬೇಕು? ಯಾರಿಗೆ ದಾನ ನೀಡಬೇಕು?
----------
* ಸ್ವಾಮಿನಾಥನ್
ಮಾನವ ಜನ್ಮವು ಅತ್ಯಂತ ಅಮೂಲ್ಯವಾದುದು. ಆದರೆ, ಈ ಜನ್ಮದ ಸಾರ್ಥಕತೆ ಇರುವುದು ಕೇವಲ ಭೋಗದಲ್ಲಲ್ಲ, ಬದಲಾಗಿ ತ್ಯಾಗದಲ್ಲಿ. ಈ ಕೆಳಗಿನ ಸಂಸ್ಕೃತ ಶ್ಲೋಕವು ಬದುಕಿಗೆ ಒಂದು ಪಾಠ ಮತ್ತು ಪರಮ ಸುಖದ ಹಾದಿಯನ್ನು ಏಕಕಾಲಕ್ಕೆ ಪರಿಚಯಿಸುತ್ತದೆ:
ಗ್ರಾಸಾದರ್ಧಮಪಿ ಗ್ರಾಸಮರ್ಥಿಭ್ಯಃ ಕಿನ್ನ ಯಚ್ಛಸಿ |
ಇಚ್ಛಾನುರೂಪೋ ವಿಭವಃ ಕದಾ ಕಸ್ಯ ಭವಿಷ್ಯತಿ ||
ಇದರ ಅರ್ಥ ಸರಳ ಹಾಗೂ ಗಂಭೀರ: ‘ನಿನ್ನ ಬಳಿ ಇರುವ ಒಂದು ತುತ್ತು ಅನ್ನದಲ್ಲಿಅರ್ಧವನ್ನಾದರೂ ಹಸಿದವರಿಗೆ ಯಾಕೆ ನೀಡಬಾರದು? ತನಗೆ ಬೇಕಾದಷ್ಟು ಸಂಪತ್ತು ಕ್ರೋಢೀಕರಣವಾದ ಮೇಲೆ ದಾನ ಮಾಡುವೆ’ ಎಂದು ಕಾಯುವುದು ವ್ಯರ್ಥ. ಏಕೆಂದರೆ ಅಂದುಕೊಂಡಷ್ಟು ಸಂಪತ್ತು ಯಾರಿಗೆ ತಾನೇ, ಯಾವಾಗ ಸಿಕ್ಕಿದೆ?
ಸಂಪತ್ತಿನ ಭ್ರಮೆ ಮತ್ತು ನಾಳೆಯ ಅನಿಶ್ಚಿತತೆ
ನಮ್ಮಲ್ಲಿಹೆಚ್ಚಿನವರು ಒಂದು ಭ್ರಮೆಯಲ್ಲಿಬದುಕುತ್ತಿರುತ್ತಾರೆ. ನನ್ನ ಹತ್ತಿರ ಸಾಕಷ್ಟು ಹಣ ಬಂದ ಮೇಲೆ ನಾನು ಸಮಾಜಕ್ಕೆ ಏನಾದರೂ ಮಾಡುವೆ, ಮಕ್ಕಳ ಮದುವೆ ಮುಗಿಯಲಿ, ಆಮೇಲೆ ಧರ್ಮ ಕಾರ್ಯ ಮಾಡುವೆ ಅಥವಾ ನಿವೃತ್ತಿಯ ನಂತರ ಪುಣ್ಯದ ಕೆಲಸಕ್ಕೆ ಕೈಹಾಕುವೆ ಎಂಬ ಸಬೂಬುಗಳು ನಮ್ಮಲ್ಲಿಸದಾ ಇರುತ್ತವೆ. ಆದರೆ ಸುಭಾಷಿತಕಾರ ಕೇಳುವ ಪ್ರಶ್ನೆ ಮಾರ್ಮಿಕವಾಗಿದೆ ‘ಇಚ್ಛಾನುರೂಪೋ ವಿಭವಃ ಕದಾ ಕಸ್ಯ ಭವಿಷ್ಯತಿ?’
ಮನುಷ್ಯನ ಆಸೆಗೆ ಮಿತಿಯಿಲ್ಲ. ಇಂದು ಒಂದು ಲಕ್ಷ ರೂಪಾಯಿ ಇದ್ದವನಿಗೆ ಹತ್ತು ಲಕ್ಷ ಬೇಕೆನಿಸುತ್ತದೆ, ಹತ್ತು ಲಕ್ಷ ಬಂದವನಿಗೆ ಕೋಟಿ ಬೇಕೆನಿಸುತ್ತದೆ. ಈ ಸಾಕಷ್ಟು ಎಂಬ ಪದಕ್ಕೆ ಕೊನೆಯೇ ಇಲ್ಲ. ಹೀಗಿರುವಾಗ ‘ನನ್ನ ಹತ್ತಿರ ಸಾಕಷ್ಟಾದ ಮೇಲೆ ದಾನ ಮಾಡುವೆ’ ಎನ್ನುವುದು ಒಂದು ಮರೀಚಿಕೆಯನ್ನು ಬೆನ್ನಟ್ಟಿದಂತೆ.
ಸಂಪತ್ತು ಎಂಬುದು ಚಂಚಲವಾದುದು. ಲಕ್ಷ್ಮಿಯನ್ನು ಚಂಚಲೆ ಎನ್ನುತ್ತಾರೆ. ಅದು ಇಂದು ನಮ್ಮ ಕೈಯಲ್ಲಿದ್ದರೆ ನಾಳೆ ಮತ್ತೊಬ್ಬರ ಕೈ ಸೇರುತ್ತದೆ. ಆದರೆ ನಾವು ಪ್ರೀತಿಯಿಂದ ನೀಡಿದ ದಾನ ಮಾತ್ರ ನಮ್ಮ ಆತ್ಮದೊಂದಿಗೆ ಅಳಿಯದ ಪುಣ್ಯವಾಗಿ ಉಳಿಯುತ್ತದೆ.
ಮಂಕುತಿಮ್ಮನ ಕಗ್ಗದಲ್ಲಿದಾನದ ಮಹತ್ವ
ಕನ್ನಡದ ಆಧ್ಯಾತ್ಮಿಕ ದೀವಿಗೆಯಾದ ಡಿ.ವಿ.ಗುಂಡಪ್ಪನವರ (ಡಿವಿಜಿ) ಮಂಕುತಿಮ್ಮನ ಕಗ್ಗ ಈ ಸುಭಾಷಿತದ ಆಶಯವನ್ನು ಅತ್ಯಂತ ಸುಲಭವಾಗಿ ಸಾಮಾನ್ಯ ಜನರಿಗೂ ತಲುಪಿಸುತ್ತದೆ. ಡಿವಿಜಿಯವರು ದಾನದ ಬಗ್ಗೆ ಹೇಳುವ ಈ ಮಾತುಗಳು ಚಿನ್ನದಕ್ಷರಗಳಲ್ಲಿಬರೆದಿಡುವಂತಹವು:
ದಿನಕೆ ಕಡುಬಡವನಿಂ ಹಸ್ತವೊಂದನು ಪಡೆದು |
ದಿನಕೆ ಹಸಿದವಗನ್ನ ಕಬಳವನು ನೀಡಿ ||
ದಿನಕೆ ತನಗಾದ ಸೌಖ್ಯವನಿತನು ಹಂಚಿಬಾಳ್ |
ನೆನೆದು ಪರಮನನು ಮಂಕುತಿಮ್ಮ||
ಇದರ ತಾತ್ಪರ್ಯವಿಷ್ಟೇ: ಎಷ್ಟೇ ಶ್ರೀಮಂತನಾಗಿರಲಿ ಅಥವಾ ಬಡವನಾಗಿರಲಿ, ದಿನದ ಕೊನೆಯಲ್ಲಿಕನಿಷ್ಠ ಒಬ್ಬರಿಗಾದರೂ ಸಹಾಯ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಒಬ್ಬ ಹಸಿದವನಿಗೆ ಒಂದು ತುತ್ತು (ಕಬಳ) ಅನ್ನ ನೀಡು. ನಿನಗೆ ಸಿಕ್ಕ ಸೌಖ್ಯದಲ್ಲಿಸ್ವಲ್ಪವನ್ನಾದರೂ ಬೇರೆಯವರಿಗೆ ಹಂಚು. ಆಗಲೇ ನಿನ್ನ ಬದುಕು ಸಾರ್ಥಕ. ದಾನ ಮಾಡಲು ನಾವು ಕುಬೇರರಾಗಬೇಕಿಲ್ಲ. ನಮ್ಮ ಹತ್ತಿರವಿರುವ ಅಲ್ಪಪ್ರಮಾಣದ ವಸ್ತುವಿನಲ್ಲಿಯೇ ಒಂದು ಪಾಲನ್ನು ಪರರಿಗಾಗಿ ಮೀಸಲಿಡುವುದು ಶ್ರೇಷ್ಠ ಗುಣ. ಹಸಿದವನಿಗೆ ನೀವು ನೀಡುವ ಆ ಅರ್ಧ ತುತ್ತು ಅನ್ನ, ಆತನ ಪಾಲಿಗೆ ಅಮೃತ ಸಮಾನವಾಗಿರುತ್ತದೆ.
ಪುರಾಣಗಳ ಪ್ರೇರಣೆ: ತ್ಯಾಗದ ಪರಮೋಚ್ಚ ಸ್ಥಿತಿ
ನಮ್ಮ ಪರಂಪರೆಯಲ್ಲಿ’ಅತಿಥಿ ದೇವೋ ಭವ’ ಎಂಬುದು ಕೇವಲ ಘೋಷಣೆಯಲ್ಲ, ಅದು ಬದುಕಿನ ಕ್ರಮ. ಪುರಾಣಗಳಲ್ಲಿಬರುವ ರಂತಿದೇವನ ಕಥೆ ಇಂದಿಗೂ ನಮಗೆ ದಾರಿದೀಪ. ರಂತಿದೇವ ಒಬ್ಬ ಮಹಾರಾಜನಾಗಿದ್ದರೂ, ದೈವೇಚ್ಛೆಯಿಂದ ರಾಜ್ಯವನ್ನು ಕಳೆದುಕೊಂಡು ಕಾಡಿನಲ್ಲಿಅಲೆದಾಡುತ್ತಿರುತ್ತಾನೆ. ಆತ ಮತ್ತು ಆತನ ಕುಟುಂಬ ಸತತ 48 ದಿನಗಳ ಕಾಲ ಹಸಿವು ಮತ್ತು ನೀರಡಿಕೆಯಿಂದ ಬಳಲುತ್ತಿರುತ್ತಾರೆ. 49ನೇ ದಿನ ಅವರಿಗೆ ಸ್ವಲ್ಪ ಆಹಾರ ಮತ್ತು ನೀರು ಸಿಗುತ್ತದೆ.
ಆದರೆ, ಅವರು ಉಣ್ಣಲು ಕುಳಿತಾಗ ಒಬ್ಬ ಬ್ರಾಹ್ಮಣ, ನಂತರ ಒಬ್ಬ ಶೂದ್ರ, ಆಮೇಲೆ ಬೇಟೆಗಾರ ತನ್ನ ನಾಯಿಗಳೊಂದಿಗೆ ಬಂದು ಆಹಾರ ಕೇಳುತ್ತಾರೆ. ರಂತಿದೇವನು ತಾನು ಹಸಿವಿನಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರೂ, ಬಂದವರಿಗೆಲ್ಲತನ್ನ ಪಾಲಿನ ಆಹಾರ ಹಂಚುತ್ತಾನೆ. ಕೊನೆಗೆ ಉಳಿದಿದ್ದ ಸ್ವಲ್ಪ ನೀರನ್ನು ದಣಿದು ಬಂದ ಚಾಂಡಾಲನಿಗೆ ನೀಡಿ, ‘ನನಗೆ ಮುಕ್ತಿ ಬೇಡ, ಎಲ್ಲಪ್ರಾಣಿಗಳ ದುಃಖವನ್ನು ನಾನು ಅನುಭವಿಸುವಂತಾಗಲಿ’ ಎಂದು ಪ್ರಾರ್ಥಿಸುತ್ತಾನೆ. ಇದು ತ್ಯಾಗದ ಪರಾಕಾಷ್ಠೆ. ಸುಭಾಷಿತವು ಹೇಳುವ ‘ಗ್ರಾಸಾದರ್ಧಮಪಿ’ (ಅರ್ಧ ತುತ್ತು ಅನ್ನ) ಎಂಬ ಮಾತಿಗೆ ರಂತಿದೇವನೇ ಸಾಕ್ಷಿ.
ಭಗವದ್ಗೀತೆಯ ಸಾತ್ವಿಕ ದಾನ
ಶ್ರೀಕೃಷ್ಣನು ಭಗವದ್ಗೀತೆಯ 17ನೇ ಅಧ್ಯಾಯದಲ್ಲಿದಾನದ ಮೂರು ವಿಧಗಳನ್ನು ವಿವರಿಸುತ್ತಾನೆ. ಅದರಲ್ಲಿಸಾತ್ವಿಕ ದಾನದ ಬಗ್ಗೆ ಹೀಗೆ ಹೇಳುತ್ತಾನೆ:
ದಾತವ್ಯಮಿತಿ ಯದ್ದಾನಂ ದೀಯತೇಧಿನುಪಕಾರಿಣೇ|
ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ವಿಕಂ ಸ್ಮೃತಮ್ || (17.20)
ಅಂದರೆ, ‘ದಾನ ಮಾಡುವುದು ನನ್ನ ಕರ್ತವ್ಯ’ ಎಂಬ ಭಾವನೆಯಿಂದ, ಪ್ರತ್ಯುಪಕಾರವನ್ನು ನಿರೀಕ್ಷಿಸದೆ, ಯೋಗ್ಯವಾದ ಕಾಲದಲ್ಲಿ, ಯೋಗ್ಯವಾದ ಸ್ಥಳದಲ್ಲಿ, ಅರ್ಹನಾದ ವ್ಯಕ್ತಿಗೆ ನೀಡುವ ದಾನವೇ ಸಾತ್ವಿಕವಾದುದು. ಸುಭಾಷಿತವು ಹಸಿದವರಿಗೆ ನೀಡಲು ಹೇಳುವುದು ಇಂತಹ ಸಾತ್ವಿಕ ದಾನವನ್ನೇ. ಪಾತ್ರ ಅರಿತು ನೀಡುವ ದಾನವು ನೀಡುವವನ ಅಹಂಕಾರವನ್ನು ಅಳಿಸಿ, ವಿನಯವನ್ನು ತರುತ್ತದೆ.
ಮನದ ಕುದುರೆ ಮತ್ತು ತೃಪ್ತಿ
ನಾವು ಯಾವಾಗಲೂ ‘ಇನ್ನಷ್ಟು’ ಸಂಪತ್ತಿಗಾಗಿ ಹಾತೊರೆಯುತ್ತೇವೆ. ಕಗ್ಗದ ಮತ್ತೊಂದು ಪದ್ಯ ನಮ್ಮ ಈ ಸ್ಥಿತಿಯನ್ನು ಹೀಗೆ ವಿವರಿಸುತ್ತದೆ:
ಒಂದು ಗುರಿ ಮುಟ್ಟಲದೊ ಮುಂದೊಂದು ಗುರಿ ತೋರ್ಪುದು |
ಮುಂದೆ ಮುಂದಕೆ ಪಾರುತಿದೆ ಮನದ ಕುದುರೆ ||
ಅಂದಂದಿಗಾದುದಲಿ ತೃಪ್ತಿಯನು ಕಾಣುತಲಿ |
ಬಂದುದನು ಭುಂಜಿಸುತ ಬಾಳು- ಮಂಕುತಿಮ್ಮ ||
ನಮ್ಮ ಆಸೆಯ ಕುದುರೆಗೆ ಲಗಾಮಿಲ್ಲ. ಒಂದು ಗುರಿ ಮುಟ್ಟಿದ ತಕ್ಷಣ ಮತ್ತೊಂದು ಆಸೆ ಹುಟ್ಟಿಕೊಳ್ಳುತ್ತದೆ. ಈ ಓಟದಲ್ಲಿನಾವು ಪಕ್ಕದವನ ಕಷ್ಟವನ್ನು ನೋಡಲು ಮರೆಯುತ್ತೇವೆ. ಸುಭಾಷಿತವು ನಮಗೆ ಎಚ್ಚರಿಕೆ ನೀಡುವುದೇ ಇಲ್ಲಿ. ನಮಗೆ ಬೇಕಾದಷ್ಟು ಸಂಪತ್ತು ಸಿಕ್ಕಿದ ಮೇಲೆ ದಾನ ಮಾಡುವೆ ಎನ್ನುವವನು, ಸಮುದ್ರದ ಅಲೆಗಳು ನಿಂತ ಮೇಲೆ ಸ್ನಾನ ಮಾಡುವೆ ಎಂದು ಕಾಯುವವನಂತೆ ಮೂರ್ಖನಾಗುತ್ತಾನೆ.
ಸಂಪತ್ತಿನ ಮೂರು ಗತಿಗಳು
ಧರ್ಮ ಶಾಸ್ತ್ರಗಳ ಪ್ರಕಾರ ಸಂಪತ್ತಿಗೆ ಮೂರು ಗತಿಗಳಿವೆ: ದಾನ, ಭೋಗ ಮತ್ತು ನಾಶ.
ಯಾರು ತನ್ನ ಸಂಪತ್ತನ್ನು ದಾನ ಮಾಡುತ್ತಾನೋ ಆತನ ಸಂಪತ್ತು ಸಾರ್ಥಕವಾಗುತ್ತದೆ. ಯಾರು ದಾನ ಮಾಡದೆ ಕೇವಲ ತಾನು ಅನುಭವಿಸುತ್ತಾನೋ (ಭೋಗ), ಆತನ ಸಂಪತ್ತು ಮಧ್ಯಮ ದರ್ಜೆಯದು. ಆದರೆ ಯಾರು ದಾನವನ್ನೂ ಮಾಡದೆ, ತಾನೂ ಅನುಭವಿಸದೆ ಕೇವಲ ಕೂಡಿಡುತ್ತಾನೋ, ಆತನ ಸಂಪತ್ತು ಕೊನೆಗೆ ನಾಶವಾಗುತ್ತದೆ.
ಸಂಪತ್ತಿನ ಸಾರ್ಥಕತೆ ಇರುವುದು ದಾನದಲ್ಲಿಮಾತ್ರ. ದಾನ ಮಾಡದ ಸಂಪತ್ತು ಕಳ್ಳರ ಪಾಲಾಗುತ್ತದೆ ಅಥವಾ ಬೆಂಕಿಗೆ ಆಹುತಿಯಾಗುತ್ತದೆ. ನಾವು ನೀಡಿದ ದಾನ ಮತ್ತು ಮಾಡಿದ ಪುಣ್ಯ ಮಾತ್ರ ನಮ್ಮ ಆತ್ಮದೊಂದಿಗೆ ನಮ್ಮ ಸಾವಿನ ನಂತರವೂ ಉಳಿಯುತ್ತದೆ. ಸಹಾಯ ಮಾಡಲು ದೊಡ್ಡ ಶ್ರೀಮಂತಿಕೆಯ ಅವಶ್ಯಕತೆ ಇಲ್ಲ. ದೊಡ್ಡ ಮೊತ್ತದ ಚೆಕ್ ಬರೆಯುವವನು ಮಾತ್ರ ದಾನಿಯಲ್ಲ. ನಿಮ್ಮ ತಟ್ಟೆಯಲ್ಲಿರುವ ಅನ್ನದಲ್ಲಿಒಂದು ತುತ್ತು, ಹಿರಿಯರಿಗೆ ನೀಡುವ ಗೌರವ ಅಥವಾ ಕಷ್ಟದಲ್ಲಿರುವವರಿಗೆ ನೀಡುವ ಒಂದು ಸಾಂತ್ವನದ ಮಾತು ಇವುಗಳೂ ದಾನವೇ.
ಬದುಕಿನ ಅಂತ್ಯದಲ್ಲಿನಾವು ಎಷ್ಟು ಗಳಿಸಿದೆವು ಎಂಬುದು ಮುಖ್ಯವಾಗುವುದಿಲ್ಲ, ಬದಲಾಗಿ ಎಷ್ಟು ಜನರಿಗೆ ನೆರವಾದೆವು ಎಂಬುದು ಮಾತ್ರ ನಮ್ಮ ನೆನಪನ್ನು ಉಳಿಸುತ್ತದೆ. ‘ನಾಳೆ ಮಾಡುವೆ’ ಎಂಬುದು ಸೋಮಾರಿತನದ ಲಕ್ಷಣ. ‘ಇಂದೇ, ಈಗಲೇ, ನನ್ನ ಬಳಿ ಇರುವುದರಲ್ಲೇ ಅಲ್ಪವನ್ನು ಹಂಚುವೆ’ ಎಂಬುದು ಮಾನವೀಯತೆಯ ಲಕ್ಷಣ.
ನಮ್ಮ ಕೈಲಾದ ಅಲ್ಪ ಸಹಾಯದ ಮೂಲಕ ಸಮಾಜದಲ್ಲಿನೆಮ್ಮದಿಯ ಬೆಳಕನ್ನು ಹರಡೋಣ. ಹಂಚಿ ಉಣ್ಣುವ ಸೌಭಾಗ್ಯವೇ ನಿಜವಾದ ದೈವತ್ವ ಎಂದು ಭಾವಿಸೋಣ.
ಲೇಖಕರು: ಅಧ್ಯಾತ್ಮ ಚಿಂತಕರು

