ಶ್ರೀ ಮುತ್ತಪ್ಪ ದೇಗುಲದಲ್ಲಿ ಪೊಂಗಾಲ್ ಸೇವೆ
------
ಮಡಿಕೇರಿ: ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಭಗವತಿ ದೇವಿ, ಪಾರ್ವತಿ ದೇವಿ, ಸರಸ್ವತಿ, ಮಹಾಲಕ್ಷ್ಮೇ ಹಾಗೂ ದುರ್ಗೆ ಸಂಕಲ್ಪದಲ್ಲಿರುವ ದೇವಿಗೆ ಮೇ 31ರಂದು ಪೊಂಗಾಲ್ ಸೇವೆ ನಡೆಯಲಿದೆ.
ನಗರದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಶ್ರೀ ಮುತ್ತಪ್ಪ ದೇವಾಲಯ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ರಾಮನ್ , ‘ಪೊಂಗಾಲ್ ಮಹೋತ್ಸವವು ಕೇರಳದ ತಿರುವನಂತಪುರಂನಲ್ಲಿರುವ ಅಟ್ಟುಗಾಲ್ ಭಗವತಿ ಕ್ಷೇತ್ರದಲ್ಲಿಲಕ್ಷಾಂತರ ಮಹಿಳಾ ಭಕ್ತಾದಿಗಳಿಂದ ನಡೆಸಲ್ಪಡುವ ಶ್ರೇಷ್ಠವಾದ ಸೇವೆಯಾಗಿರುತ್ತದೆ. ಇತ್ತೀಚೆಗೆ ಇನ್ಫೋಸಿಸ್ ನ ಡಾ. ಸುಧಾ ಮೂರ್ತಿ ಅವರು ಕೂಡ ಈ ಪೊಂಗಾಲ್ ಸೇವೆಯಲ್ಲಿಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದರು. ಅಂತಹ ಪವಿತ್ರವಾದ ಪೂಜೆಯನ್ನು ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೕ ಭಗವತಿ ದೇವಿಯ ಸನ್ನಿಧಿಯಲ್ಲಿನಡೆಯಲಿದೆ’ ಎಂದರು.
‘ಪೊಂಗಾಲ್ ಸಮರ್ಪಣೆಯಿಂದ ಮನೆಯಲ್ಲಿಆರೋಗ್ಯ, ಶಾಂತಿ ಮತ್ತು ಸಮಾಧಾನ ನೆಲೆಸುತ್ತದೆ. ಮದುವೆ, ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾಪ್ರಾರ್ಥನೆಯನ್ನು ತಾಯಿ ನೆರವೇರಿಸಿಕೊಡುತ್ತಾಳೆ ಎಂಬುದು ನಂಬಿಕೆ. ಇಟ್ಟಿಗೆ ಅಥವಾ ಕಲ್ಲುಗಳನ್ನು ಜೋಡಿಸಿ ಒಲೆಯನ್ನು ಹಾಕಿ ಸೌದೆಗಳನ್ನು ಜೋಡಿಸಿ ಸಿದ್ಧಪಡಿಸಿದ ನಂತರ ಅರ್ಚಕರು ನೀಡಿದ ಕರ್ಪೂರದ ಆರತಿಯಿಂದ ಒಲೆ ಉರಿಸಿ ಹೊಸ ಮಡಕೆಯಲ್ಲಿನೀರು ತುಂಬಿಸಿ ಪೊಂಗಾಲ್ ತಯಾರು ಮಾಡುವುದು ಕ್ರಮ. ಇದನ್ನು ತಯಾರಿಸಲು ಹೊಸ ಮಡಕೆ, ಸೌದೆ, ಅಕ್ಕಿ, ಬೆಲ್ಲ, ಕಾಯಿ, ತುಪ್ಪ, ಏಲಕ್ಕಿ, ದ್ರಾಕ್ಷಿ, ಗೋಡಂಬಿ ಮುಂತಾದವುಗಳನ್ನು ದೇವಸ್ಥಾನದಿಂದಲೇ ಒದಗಿಸಲಾಗುವುದು. ಭಕ್ತರು ಆಗಮಿಸಿ ದೇವಿಯ ಪ್ರಸಾದವನ್ನು ಸ್ವೀಕರಿಸಬೇಕು’ ಎಂದು ಶಾರದಾ ರಾಮನ್ ಮನವಿ ಮಾಡಿದರು.

