ಜೈನರ ಆರಾಧನಾಲಯ
ಕೆಲಸೂರು ಜಿನಾಲಯ
--------
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಪುರಾತನ ಜೈನ ದೇಗುಲದ ಪರಿಚಯ ಇಲ್ಲಿದೆ.
-----
ಬೇಗೂರು ವೀರೇಂದ್ರ ಕುಮಾರ್
ಕರ್ನಾಟಕದ ಕಲೆ, ಸಾಹಿತ್ಯ, ಪ್ರಾಕೃತಿಕ ಹಾಗೂ ಐತಿಹಾಸಿಕ ಹಿನ್ನಲೆಯಲ್ಲಿಕರುನಾಡಿನ ದಕ್ಷಿಣ ಅಂಚಿನ ಜಿಲ್ಲೆಯಾದ ಚಾಮರಾಜನಗರವು ನಿಸರ್ಗವಿತ್ತ ಅಪೂರ್ವ ಕೊಡುಗೆ. ಪ್ರಾಗೈತಿಹಾಸಿಕ ನೆಲೆಯಾಗಿದ್ದ ಈ ಪಾವನಭೂಮಿಯು ಸುಗಂಧ ನಿರ್ಮಿತ ಮಲಯಗಿರಿ ಚಂದನ ಹೊಂದಿರುವ ಪ್ರದೇಶವಾಗಿದೆ. ಇದು ನಾಡಿನ ಪ್ರಸಿದ್ಧ ರಾಜಮನೆತನಗಳ ಆಳ್ವಿಕೆಯಲ್ಲಿಪ್ರಜ್ವಲಿಸಿದೆ. ಈ ಜಿಲ್ಲೆಯಲ್ಲಿನ ಕೌಂಡಿನ್ಯ ನದಿಯ ತೀರದ ಮೇಲಿರುವ ಗುಂಡ್ಲುಪೇಟೆಯು ಸಾಹಸಿಗಳಿಂದ, ವೀರರಿಂದ ಖ್ಯಾತಿಗಳಿಸಿದ ಭಾಗ. ಅಂತೆಯೇ ಸಾವಿರಾರು ವರ್ಷಗಳ ವರ್ಣಮಯ ಸಂಸ್ಕೃತಿಯನ್ನು ತನ್ನೊಡಲಲ್ಲಿಪೋಷಿಸಿ ರಕ್ಷಿಸಿದ ನೆಲೆ ಕೆಲಸೂರು. ಹಿಂದೆ ಹಲವು ಜನರಿಗೆ ಉದ್ಯೋಗದ ನೆಲೆ ಒದಗಿಸಿದ್ದ ಕೇಂದ್ರ ಇದಾಗಿದ್ದು, ಅದರಿಂದಲೇ ‘ಕೆಲಸೂರು’ ಎಂಬ ಹೆಸರು ಬಂದಿರಬಹುದು.
ಜೈನರ ಪವಿತ್ರ ಸ್ಥಳವಾಗಿದ್ದ ಕೆಲಸೂರಿನಲ್ಲಿಕ್ರಿ.ಶ. 7ನೇ ಶತಮಾನದಲ್ಲಿ700ಕ್ಕೂ ಹೆಚ್ಚು ಜೈನ ಕುಟುಂಬಗಳಿದ್ದವು. ಆದರೆ ಈಗ ನಮಗೆ ಕಾಣಸಿಗುವುದು ಐತಿಹಾಸಿಕ ದಾಖಲೆಯಾದ ಶ್ರೀ ಚಂದ್ರನಾಥ ಜೈನ ಬಸದಿ ಹಾಗೂ ಅಲ್ಲಿರುವ ಅರ್ಚಕರ ಕುಟುಂಬ ಮಾತ್ರ. ಊರಿನ ದಕ್ಷಿಣ ಭಾಗದ ಕೆರೆಯ ದಂಡೆಯ ಮೇಲಿರುವ ಈ ಬಸದಿಯು ಸುಂದರ ಶಿಲ್ಪಕಲಾ ಶೈಲಿಯಲ್ಲಿರಚನೆಯಾಗಿದ್ದರೂ ಕಾಲನಂತರ ಹಲವು ಬಾರಿ ದಾಳಿಗೆ ಒಳಗಾಗಿರುವುದಕ್ಕೆ ಬಸದಿಯ ಹೊರಗೆ ಬಿದ್ದಿರುವ ಮುಕ್ಕಾದ ಶಿಲ್ಪಗಳು ಮೂಕಸಾಕ್ಷಿಯಾಗಿವೆ. ಅದಕ್ಕೆ ಸರಿಸಾಟಿಯಾಗಿ ಕಾಲ ಕಾಲಕ್ಕೆ ಹೊಯ್ಸಳರ ವೀರನರಸಿಂಹನ ಕಾಲದಲ್ಲಿಹಾಗೂ ಮೈಸೂರಿನ ರಾಜ ಮನೆತನದ ಮೂರನೇ ಕೃಷ್ಣರಾಜರ ಕಾಲದಲ್ಲಿಜೀರ್ಣೋದ್ಧಾರವನ್ನು ಕಂಡಿದೆ. ಬಸದಿಯ ಹೊರಭಾಗ ಭವ್ಯತೆಯನ್ನು ಕಳೆದುಕೊಂಡರೂ ಒಳಗಿನ ಶಿಲ್ಪಗಳು ವಿಶಿಷ್ಟ ಎನಿಸಿವೆ. ಬಸದಿ ಅನೇಕ ಬಾರಿ ದಾಳಿಗೆ ಒಳಗಾದರೂ, ಆಯಾಯ ಕಾಲದ ರಾಜರ ರಕ್ಷೆಗೂ ಒಳಗಾಗಿ ಪ್ರಖರತೆ ಉಳಿಸಿಕೊಂಡಿರುವುದಕ್ಕೆ ಪ್ರಮುಖ ಕಾರಣ ಬಸದಿಯೊಳಗಿನ ಯಕ್ಷ ಯಕ್ಷಿಯರ ಮಹಿಮೆ ಎಂಬುದು ಸ್ಥಳೀಯರ ನಂಬಿಕೆ. ಕನಕಗಿರಿ ಕ್ಷೇತ್ರದ ಭಟ್ಟಾರಕರಾದ ಪ.ಪೂ.ಸ್ವಸ್ತಿ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿಇತ್ತೀಚೆಗೆ ಇಲ್ಲಿಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
ಜಿನಾಲಯ ವೈಶಿಷ್ಟ್ಯ
ಜಿನಬಸದಿಯು ಗರ್ಭಗುಡಿ, ಅಂತರಾಳ, ಸುಖನಾಸಿ ನವರಂಗಗಳನ್ನು ಹೊಂದಿದ್ದು ಕಲಾತ್ಮಕವಾಗಿ ಶೃಂಗಾರಗೊಂಡಿದೆ. ಬಸದಿಯ ಗರ್ಭ ಗುಡಿಯಲ್ಲಿಜೈನರ ಎಂಟನೇ ತೀರ್ಥಂಕರರರಾದ ‘ಶ್ರೀ ಚಂದ್ರನಾಥ ತೀರ್ಥಂಕರ‘ರ ಭವ್ಯಮೂರ್ತಿಯಿದ್ದು, ಇದು ಮಣ್ಣು ಮತ್ತು ಅರಗಿನಿಂದ ಮಾಡಿದ ಶಿಲ್ಪವಾಗಿದ್ದು ,ಕರ್ನಾಟಕದಲ್ಲೇ ಎಕೈಕ ಅರಗಿನ(ಲೆಪ್ಪದ) ಜೈನಮೂರ್ತಿಯಾಗಿದೆ. ನವರಂಗದಲ್ಲಿನ ಗೊಡೆಗೆ ಸೇರಿಕೊಂಡಂತೆ ಇರುವ ಹತ್ತು ಅಡಿ ಎತ್ತರವಿರುವ ಬೃಹತ್ತಾದ ಶ್ಯಾಮಯಕ್ಷ ಹಾಗೂ ಜ್ವಾಲಮಾಲಿನಿ ಯಕ್ಷಿಯರ ಅರಗಿನ(ಲೆಪ್ಪದ) ಮೂರ್ತಿಗಳು ಕಟುವಾದ ನಾಸ್ತಿಕರಲ್ಲೂ ಆಸ್ತಿಕ ಭಾವನೆಯನ್ನು ಉಂಟುಮಾಡಿ ರೋಮಾಂಚನ ಗೊಳಿಸುತ್ತದೆ. ಜೈನ ಬಸದಿಗಳಲ್ಲಿನ ಜಿನಮೂರ್ತಿಗಳಿಗೆ ದಿನವೂ ಅಭಿಷೇಕ ನಡೆಯುತ್ತದೆ. ಆದರೆ ಇಲ್ಲಿನ ಮೂಲ ಮೂರ್ತಿಗಳಿಗೆ ಅಭಿಷೇಕವಿಲ್ಲ. ಇಲ್ಲಿರುವ ಚಂದ್ರನಾಥರ ಅಮೃತಶಿಲೆಯ ಮೂರ್ತಿಗೆ ಮಾತ್ರ ಅಭಿಷೇಕ ಮಾಡಲಾಗುತ್ತದೆ. ಇಲ್ಲಿನ ಶ್ಯಾಮಯಕ್ಷ ಹಾಗೂ ಜ್ವಾಲಮಾಲಿನಿ ಯಕ್ಷಿಯು ಹಲವು ಜೈನಕುಟುಂಬಗಳಿಗೆ ಮನೆದೇವರಾಗಿದ್ದು, ಉತ್ತರ ಭಾರತದಿಂದಲೂ ಹಲವು ಜೈನಧರ್ಮಿಯರು ಆಗಮಿಸಿ ದರ್ಶನ ಮಾಡಿ, ಹರಕೆಗಳನ್ನು ಸಲ್ಲಿಸುತ್ತಾರೆ. ಈ ಬಸದಿಯಲ್ಲಿರುವ ಶ್ರೀ ಜ್ವಾಲಾಮಾಲಿನಿ ದೇವಿಯು ಜೈನರಿಗಷ್ಟೆ ದೇವಿಯಾಗಿರದೆ, ಜೈನರೇ ಇಲ್ಲದ ಈ ಊರಿನ ಸುತ್ತಮುತ್ತಲಿನ ಸ್ಥಳೀಯರ ಆರಾಧ್ಯ ದೇವತೆಯಾಗಿರುವುದು ವಿಶೇಷ.
ಶ್ರೀಕ್ಷೇತ್ರವು ಗುಂಡ್ಲುಪೇಟೆಯಿಂದ ಅಂದಾಜು 9 ಕಿ.ಮೀ ಹಾಗೂ ಮೈಸೂರಿನಿಂದ 68 ಕಿ.ಮೀ ದೂರದಲ್ಲಿದೆ.

