ಭಾಗವತ ಶ್ರವಣದಿಂದ ಪುಣ್ಯಫಲ
------------
ಇಂಟ್ರೋ:
ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಾರಥ್ಯದಲ್ಲಿಅರಮನೆ ನಗರಿ ಮೈಸೂರಿನಲ್ಲಿ33 ದಿನಗಳ ಕಾಲ ‘ಮೈಸೂರು ದಿಗ್ವಿಜಯ’ ಅಧಿಕ ಮಾಸೋತ್ಸವ ವೈಭವದಿಂದ ನಡೆಯುತ್ತಿದೆ. ಈ ಸಂದರ್ಭ ಶ್ರೀಗಳು ನೀಡಿದ ಶ್ರೀಮದ್ ಭಾಗವತ ಚಿಂತನ- ಪ್ರವಚನದ ಸಂಗ್ರಹ ಸಾರ ಇಲ್ಲಿದೆ.
-------
*ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ, ಉತ್ತರಾದಿ ಮಠಾಧೀಶರು
------
ಸಮಗ್ರ ವೇದಗಳ ಸಾರವೇ ಭಾಗವತದಲ್ಲಿಅಡಗಿದೆ. ಇದನ್ನು ಇದ್ದಾಗ ಅಲ್ಲ, ಮೋಕ್ಷದ ನಂತರವೂ ಕೇಳುತ್ತಲೇ ಇರಬೇಕು ಎಂದಿದ್ದಾರೆ ವೇದವ್ಯಾಸರು. ಅನಂತ ಗುಣ ಪರಿಪೂರ್ಣನಾದ ಭಗವಂತನ ಅಖಂಡ ಧ್ಯಾನವನ್ನು ಮಾಡಿಸುವ ಜಗತ್ತಿನ ಏಕೈಕ ಗ್ರಂಥವಿದು.
ಭಗವಂತನ ಎದುರು ಆಪತ್ತುಗಳ ನಿವೇದನೆಯೇ ಅತ್ಯುತ್ತಮ, ಅಂತಿಮ ಮತ್ತು ಪರಮೋಚ್ಛ ಪರಿಹಾರ. ಆಪತ್ತುಗಳನ್ನು ನಿರ್ವಹಿಸುವ ಬಲ ಕೊಡುವಾತನೇ ಭಗವಂತ. ಅವನಲ್ಲಿಧೃಢ ವಿಶ್ವಾಸ ಉಂಟಾದರೆ ಕೇಳುವ ಪುರಾಣ, ಉಪನ್ಯಾಸ, ಶಾಸ್ತ್ರಗಳು ಎಂದಿಗೂ ನಮಗೆ ವ್ಯರ್ಥ ಎನಿಸುವುದೇ ಇಲ್ಲ. ಎಲ್ಲವನ್ನೂ ನಮಗೆ ನೀಡಿದ ದೇವರಲ್ಲಿನಮಗೆ ವಿಶ್ವಾಸವೇ ಮೂಡದಿದ್ದಾಗ ಬಾಳಿಗೇನು ಅರ್ಥ? ದೇವರು ನಾವು ಕೇಳಿದ್ದನ್ನು ಕೊಡುವ ಕರಣಾಮಯಿ. ಆದರೆ ಕೇಳದೇ ಇರುವುದನ್ನೆಲ್ಲಾನೀಡಿದ್ದಾನಲ್ಲಾ? ಜನಿಸುವ ಮೊದಲು ಏನು ಕೇಳಬೇಕು ಎಂಬ ಸ್ಥಿತಿಯಲ್ಲೇ ಇಲ್ಲದ ಸಂದರ್ಭದಲ್ಲೂಭಗವಂತ ನಮಗೆ ದೇಹ ನೀಡಿದ. ಉತ್ತಮವಾದ ಕಣ್ಣು, ಬಾಯಿ, ನಾಲಗೆ, ಹೊಟ್ಟೆ ಸೇರಿದಂತೆ ಸಕಲ ಅಂಗಾಂಗ ನೀಡಿದ. ತಂದೆ- ತಾಯಿಗಳು, ಪ್ರಕೃತಿ, ಕುಟುಂಬ, ದೇಶ- ಇವೆಲ್ಲವೂ ಬೇಕು ಎಂದು ನಾವು ಯಾರಾದರೂ ಅರ್ಜಿ ಹಾಕಿ ಬಂದೆವಾ? ಇಲ್ಲವಲ್ಲ.
ಇವೆಲ್ಲವೂ ನಾವು ಕೇಳದೇ ಇದ್ದರೂ ದೇವರು ಕೃಪೆ ಮಾಡಿ ನೀಡಿದ್ದು ಇವೆಲ್ಲಾ. ಅದಕ್ಕಾಗಿಯೇ ‘ನೀ ದಯಾಪರನೋ ...’ ಎಂದರು ದಾಸರು. ‘ನಂದೇನದೋ ಸ್ವಾಮಿ ... ನಿಂದೇ ಎಲ್ಲವೋ’ ಎಂದು ಸಮರ್ಪಣಾ ಭಾವ ತೋರಿದರು. ಇಂಥ ಭಾವ ನಮ್ಮಲ್ಲಿಇದ್ದರೆ ಮಾತ್ರ ನಾವು ಭಾಗವತ ಕೇಳಲು, ಹೇಳಲು ಅರ್ಹರು.
ಅರ್ಥವಾಗುವುದು ಯಾವಾಗ?
ನಿರ್ಮಮರಾಗಿ ಕರ್ಮಗಳನ್ನು ಮಾಡಿ. ಅದಕ್ಕೆ ಜ್ಞಾನವನ್ನು ಸಾಧನೆ ಮಾಡಿಕೊಳ್ಳಿ- ಎಂದು ಹೇಳಲು ಹೊರಟ ಮಹತ್ತರ ಗ್ರಂಥವೇ ಭಾಗವತ. ವೃಕ್ಷಗಳಿಗೂ ಮನವಿದೆ, ಅದಕ್ಕೂ ಭಾವ- ಜೀವ ಇದೆ ಎಂದು ಇತ್ತೀಚೆಗೆ ವಿಜ್ಞಾನ ಹೇಳಿರಬಹುದು. ಆದರೆ ಭಾಗವತ- ಗೀತೆಗಳು ಎಂದೋ ಅದನ್ನು ಲೋಕಕ್ಕೆ ತಿಳಿಸಿಕೊಟ್ಟಿದೆ. ಇದು ನಮಗೆ ವೇದ್ಯವಾಗಬೇಕು. ಅದಕ್ಕಾಗಿಯೇ ಹಿರಿಯರು ಹೇಳಿದರು ‘ತಿಳಿದು ಅಧ್ಯಯನ ಮಾಡು, ಶ್ರವಣ ಮಾಡು’ ಎಂದು. ಆಗ ಮಾತ್ರ ಭಾಗವತ ನಮಗೆ ಅರ್ಥವಾಗುತ್ತದೆ.
*
ಕೇಳದೇ ಇದ್ದಾಗಲೂ ದೇವರು ನೀಡಿದ್ದಾನೆ:
ಮಾನವ ಜನ್ಮ ದೊರಕಿರುವಾಗ ಸಂಪತ್ತು, ಐಶ್ವರ್ಯ ಬೇಡಿದರೆ ಅದು ಚಿಕ್ಕದಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ನಿಷ್ಕಾಮ ಕರ್ಮ ಮಾಡಿ. ನೀವು ಕೇಳದೇ ಇದ್ದರೂ ಅನಂತ ಫಲ ಕೊಟ್ಟ ದೇವರು ಮೋಕ್ಷವನ್ನೂ ಕಾರುಣ್ಯ ಮಾಡುತ್ತಾನೆ. ಮಕ್ಕಳಿಗೆ ರೋಗ ಬಂದಾಗ ಸೂಕ್ತವಾದ ಔಷಧೋಪಚಾರ ಮಾಡುವುದರೊಂದಿಗೆ ಭಗವಂತನ ಸ್ಮರಣೆಯನ್ನೂ ಮಾಡಬೇಕು. ಇದನ್ನು ದಶಮಸ್ಕಂದ ಭಾಗವತ ಹೇಳಿದೆ. ಮಕ್ಕಳಿಗೆ ಎಳವೆಯಲ್ಲೇ ಇವೆಲ್ಲವನ್ನೂ ಚಿಕ್ಕ ಚಿಕ್ಕದಾಗಿ ಅರ್ಥ ಮಾಡಿಸಿ. ಆಗ ಜೀವನದ ನೋವೂ ಶಮನವಾಗುತ್ತದೆ.
ಮನುಷ್ಯ ಇಲ್ಲದಾಗಲೂ ಜಗತ್ತು ಇತ್ತು. ಈಗಲೂ ಇದೆ. ಸತ್ತ ಮೇಲೂ ಜಗತ್ತು ಇರುತ್ತದೆ. ಇಷ್ಟು ದೊಡ್ಡ ವಿಶ್ವದಲ್ಲಿಮನುಷ್ಯ ಕೇವಲ ಒಂದು ಸಣ್ಣ ಜಂತು ಮಾತ್ರ. ಇದನ್ನು ಪ್ರಧಾನವಾಗಿ ತಿಳಿಯಬೇಕು. ದೇವರ ಸ್ವಾತಂತ್ರ್ಯವನ್ನು ನನ್ನದು ಎಂದು ಯಾವತ್ತೂ ಭಾವಿಸಬಾರದು. ಕದ್ದ ವಸ್ತುಗಳನ್ನು ದಾನ ಮಾಡುತ್ತೇನೆ ಎಂದರೆ ಕಾನೂನು ನಮಗೆ ಶಿಕ್ಷೆ ಕೊಡುತ್ತದೆ. ಅಂಥಾ ಕರ್ಮಕ್ಕೆ ಸತ್ಫಲ ಇಲ್ಲ. ‘ಶ್ರೀ ವಿಷ್ಣು ಪ್ರೀತ್ಯರ್ಥಂ’ ಎನ್ನುತ್ತಲೇ ಕರ್ಮ ಮಾಡಲು ಭಾಗವತ ಪ್ರೇರಣೆ ನೀಡಿದೆ.
*
ಅರ್ಹತೆ ಏನು?
ಕಂಡ ಕಂಡವರು ಭಾಗವತ ಕೇಳಿದರೆ ಫಲ ಬರುವುದೇ? ಇಲ್ಲ. ಅದಕ್ಕೂ ಒಂದು ಅರ್ಹತೆ ಇದೆ. ‘ತಿತಿಕ್ಷವಃ’ ಅಂದರೆ ಸಜ್ಜನಿಕೆ ಎಂಬುದು ನಮಗೆ ಬಹಳ ಮುಖ್ಯ. ಹೆತ್ತವರು, ಹಿರಿಯರು, ಜ್ಞಾನಿಗಳು ಏನಾದರೂ ಬೈದರೆ.... ಮೌನವಾಗಿ ಸ್ವೀಕರಿಸಿ. ದೊಡ್ಡವರ ಮಾತಿನ ಸಾರ ತಿಳಿಯಿರಿ. ಕಿರಿಯರ ಮೇಲೆ ಪ್ರೀತಿ ತೋರಿ. ಸಮ ವಯಸ್ಕರ ಜೊತೆಗೆ ವಿಶ್ವಾಸ ಇಡಿ. ಇನ್ನೊಂದು ಅರ್ಹತೆ ಎಂದರೆ ನಿರ್ಮತ್ಸರಾಣಾಂ. ... ಮಾತ್ಸರ್ಯ ಇರಲೇ ಬಾರದು. ಇತರರ ಚಿಕ್ಕ ಚಿಕ್ಕ ಗುಣಗಳನ್ನು ನೋಡಿ ಸಂಭ್ರಮಿಸಿ. ಎಂದಿಗೂ ಯಾರ ಮೇಲೂ ಅಸೂಯೆ ಸಲ್ಲದು. ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳಿ. ಇತರರ ಸನ್ನಡತೆ ಕಂಡು ಆನಂದಿಸಿ. ಪವಿತ್ರ ಭಾವ ಹೊಂದಿರಬೇಕು. ಅಂಥವರು ಮಾತ್ರ ಭಾಗವತ ಕೇಳಲು ಅರ್ಹರು ಎಂದಿದ್ದಾರೆ ಶ್ರೀ ವೇದವ್ಯಾಸರು. ದೃಢವಾದ ಭಕ್ತಿ ಎಂಬದು ಇನ್ನೊಂದು ಅರ್ಹತೆ. ಅನಂತ ಕಾಲದ ಸುಖ ನೀಡುವ ದೇವರನ್ನು ನಂಬಬೇಕು. ಅವನಲ್ಲಿಪರಿಪೂರ್ಣ ವಿಶ್ವಾಸ ಇಡಬೇಕು. ಬದುಕಿದರೆ ‘ಒಂದೂ ದೋಷ ಇಲ್ಲದಂತೆ ಬದುಕಬೇಕು’. ಎಲ್ಲವೂ ಅವನಿಗೇ ಪ್ರಿಯವಾಗಲಿ ಎಂಬ ಉದಾತ್ತ ಧ್ಯೇಯ ಅಚಲವಾಗಿ ಇರಬೇಕು. ಇವೆಲ್ಲದಕ್ಕೂ ಜ್ಞಾನವನ್ನೇ ಸಾಧನ ಮಾಡಿಕೊಳ್ಳಬೇಕು.
*
ರಸಭರಿತ ಫಲ ಸ್ವೀಕರಿಸಿ
‘ವೇದವೆಂಬ ವೃಕ್ಷದಲ್ಲಿಅರಳಿದ ಮಹಾ ಫಲವೇ ಭಾಗವತ. ಅದನ್ನು ರಚನೆ ಮಾಡಿದ ವ್ಯಾಸರು ಕೆಲವು ಹಣ್ಣುಗಳನ್ನು ತಾವೇ ಬೀಳಿಸಿ ನಮಗೆ ನೀಡಿದ್ದಾರೆ. ಶುಕ ಮುನಿಗಳು ಅದನ್ನು ಕಚ್ಚಿ (ಸ್ವೀಕರಿಸಿ) ನಮಗೆ ನೀಡಿದ್ದಾರೆ. ಇದನ್ನೆಲ್ಲಾಬಿಟ್ಟು ನಾವು ಕೇವಲ ಮರ ನೆಕ್ಕಿದರೆ ರುಚಿ ಬರುವುದೇ? ಇಲ್ಲ. ರಸ ಭರಿತ ಫಲವನ್ನು ಸ್ವೀಕರಿಸಲು ಮುಂದಾಗಬೇಕು’ ಎಂದು ಹೇಳಿದೆ ಭಾಗವತ.
ಗೀತೆಯಲ್ಲಿಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶಿಸುವಾಗ ಹೇಳಿದ್ದು, ‘ಮಾಂ ಅನುಸ್ಮರ ಯುಧ್ಯಸ್ವ ಚ’ ‘ನನ್ನನ್ನು ಸ್ಮರಿಸು, ಯುದ್ಧವನ್ನು ಮಾಡು’ ಎಂದು. ನಾವು ಮಾಡುವ ಪ್ರಯತ್ನ ಕರ್ತವ್ಯ, ಕರ್ಮ, ಅನುಷ್ಠಾನ ಮತ್ತು ಭಗವಂತನ ಚಿಂತನೆ - ಎಲ್ಲವೂ ಜೊತೆಗೇ ಸಾಗಬೇಕು. ದೇವರ ವಿರುದ್ಧವೇ ದೋಷಾರೋಪಗಳನ್ನು ಮಾಡಿದರೆ ಹೇಗೆ? ‘ಸರ್ವಶಕ್ತ ಭಗವಂತನಲ್ಲಿವಿಶ್ವಾಸ ಹೊಂದುವ ಪ್ರಯತ್ನವನ್ನು ಇಂದಿನಿಂದಲೇ ಆರಂಭ ಮಾಡು’ ಎಂದಿದೆ ಭಾಗವತ.
ಭಾಗವತ ಮತ್ತು ಭಗವದ್ಗೀತೆಗಳು ಜೀವನ ಮೌಲ್ಯವನ್ನು ಪ್ರತಿ ಹಂತದಲ್ಲೂತಿಳಿಸಿವೆ. ಮನೆಯ ಹಿರಿಯರು ಹೇಳಿದಂತೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳನ್ನು ಸಲ್ಪ ಮಾಡಿದರೂ ಅನಂತ ಪುಣ್ಯ. ಅದರಲ್ಲೂಅಧಿಕ ಮಾಸದಲ್ಲಿಇನ್ನೂ ಅಧಿಕ ಫಲ. ಉತ್ತಮ ಕಾರ್ಯ ಮಾಡುತ್ತೇನೆ ಎಂಬ ಸಣ್ಣ ಸಂಕಲ್ಪವನ್ನು ಶ್ರೀ ಸತ್ಯ ಸಂಕಲ್ಪ ಗುರುಗಳ ವೃಂದಾವನ ಸನ್ನಿಧಿಯಲ್ಲಿ ಮಾಡಿದರೂ ಅದರಿಂದ ಸಾಕಷ್ಟು ಫಲಗಳು ದೊರೆಯುತ್ತವೆ. ದೊರೆತ ನಿದರ್ಶನವೂ ಇದೆ. ತಡ ಬೇಡ. ಈ ಕ್ಷಣವೇ ಭಾಗವತ ಹೇಳಿರುವ ಸಂದೇಶಕ್ಕೆ ತಲೆಬಾಗಿ ಸತ್ಕಾರ್ಯ ಮಾಡಿ. ಬದುಕು ಸುಖಮಯವಾಗುತ್ತದೆ.

