ಪಟ್ಟದಕಲ್ಲು
----
ಪಟ್ಟದಕಲ್ಲುಮತ್ತು ಐಹೊಳೆಗಳು ನಮ್ಮ ದೇಶದ ಶಿಲ್ಪಕಾರರ ಪ್ರಯೋಗಶಾಲೆಯೆಂದು ಹೇಳಲಾಗುತ್ತದೆ. ಏಕೆಂದರೆ ಈ ಎರಡು ಸ್ಥಳಗಳಲ್ಲಿದೇಶದ ವಿವಿಧ ಪ್ರದೇಶಗಳ ಶಿಲ್ಪ ಪದ್ಧತಿಗಳ ರಚನೆಯನ್ನು ಕಾಣಬಹುದು. ಅದಕ್ಕೆ ಈ ಪ್ರದೇಶದಲ್ಲಿದೊರೆಯುತ್ತಿದ್ದ ಕೆಂಪು ಮರಳುಗಲ್ಲಿನ ವಿಶಾಲ ಸಂಗ್ರಹ ಒಂದು ಕಾರಣವಾಗಿರಬಹುದಾದರೆ, ಈ ಪ್ರದೇಶವನ್ನಾಳಿದ ಚಾಲುಕ್ಯರು ತಮ್ಮ ವಿಜಯೋತ್ಸವದ ಆಚರಣೆಯ ಸಂಸ್ಮರಣೆಗೆಂದು 7-8ನೇ ಶತಮಾನದ ಅವಧಿಯಲ್ಲಿಕೆಲವು ದೇವಾಲಯಗಳನ್ನು ನಿರ್ಮಿಸಿದರು. ವಿರೂಪಾಕ್ಷ, ಸಂಗಮೇಶ್ವರ, ಚಂದ್ರಶೇಖರ, ಮಲ್ಲಿಕಾರ್ಜುನ, ಕಾಶಿ ವಿಶ್ವನಾಥ, ಗಳಗನಾಥ, ಕಾಡಸಿದ್ಧೇಶ್ವರ, ಜಂಬುಲಿಂಗೇಶ್ವರ ಹಾಗೂ ಪಾಪನಾಥೇಶ್ವರ ಎಂದು ಇಲ್ಲಿಒಟ್ಟು 9 ದೇವಾಲಯಗಳು ಹಾಗೂ ಮತ್ತು ಒಂದು ಜೈನ ನಾರಾಯಣ ಎಂಬ ಹೆಸರಿನ ಬಸದಿಯಿದೆ. ನಾಲ್ಕು ದೇವಾಲಯಗಳು ನಾಗರ ಶೈಲಿಯವು ಮತ್ತು ನಾಲ್ಕು ದ್ರಾವಿಡ ಶೈಲಿಯವು. ಪಾಪನಾಥ ದೇವಾಲಯವು ಈ ಎರಡು ಪ್ರಾಕಾರಗಳ ಮಿಶ್ರಣವೆನ್ನಬಹುದು.
ಪಟ್ಟದಕಲ್ಲಿನ ಮೂಲ ಹೆಸರು ಕಿಸುವೊಳಲು, ಎಂದರೆ ಕೆಂಪು ನಗರ ಎಂದರ್ಥ. ಇದನ್ನು ಚಾಲುಕ್ಯರ ಸಂಸ್ಕೃತ ಶಾಸನಗಳಲ್ಲಿರಕ್ತಪುರ ಎಂದು ಉಲ್ಲೇಖಿಸಲಾಗಿದೆ. ಇದನ್ನೇ ಪೇತರ್ಗಲ್ ಎಂದು ಅನುಮಾನಾಸ್ಪದವಾಗಿ 150 ಸಾ.ಯು.ದಲ್ಲಿಪೆರಿಪ್ಲಸ್ ಹೇಳಿದ್ದಾನೆಂದು ಊಹಿಸಲಾಗಿದೆ. ಇತ್ತೀಚೆಗೆ ಎಎಸ್ ಐ ಉತ್ಖನನದಿಂದ ತಿಳಿದು ಬಂದಿರುವಂತೆ ಚಾಲುಕ್ಯಪೂರ್ವದ ಕೆಲವು ಇಟ್ಟಿಗೆಯ ರಚನೆಗಳಲ್ಲಿಸಂಗಮೇಶ್ವರ ದೇವಾಲಯದ ಎದುರಿನ ಕಮಾನು ರಚನೆಗಳು ಮತ್ತು ಜೈನ ನಾರಾಯಣ ದೇವಾಲಯಗಳು ಸೇರಿವೆ. ಚಾಲುಕ್ಯರ ದೊರೆ ವಿಜಯಾದಿತ್ಯನು (696-733) ವಿಜಯೇಶ್ವರನೆಂಬ ಹೆಸರಿನಲ್ಲಿಶಿವಲಿಂಗವುಳ್ಳ ಕಲ್ಲಿನ ದೇವಾಲಯವನ್ನು ಮೊದಲಬಾರಿಗೆ ನಿರ್ಮಿಸಿದನು. ಈ ದೇವಾಲಯವನ್ನು ಈಗ ಸಂಗಮೇಶ್ವರವೆಂದು ಕರೆಯಲಾಗುತ್ತಿದೆ. ದ್ರಾವಿಡ ಶೈಲಿಯಲ್ಲಿನಿರ್ಮಿಸಿರುವ ಈ ನಿರ್ಮಾಣವು ಅಪೂರ್ಣ ಪಡಸಾಲೆ ಮತ್ತು ಕೆಲವು ಶಿಲ್ಪಗಳಿಂದ ಕೂಡಿದೆ. ವಿಜಯಾದಿತ್ಯನ ಪುತ್ರ ಎರಡನೆಯ ವಿಕ್ರಮಾದಿತ್ಯನು (733-744) ಚಾಲುಕ್ಯ ವಂಶದ ಕೊನೆಯ ಅರಸ. ಈತನು ಪಲ್ಲವರ ರಾಜಧಾನಿಯಾಗಿದ್ದ ಕಾಂಚಿಯನ್ನು ಮೂರು ಬಾರಿ ಗೆದ್ದಿದ್ದನು. ಆತನ ಈರ್ವರು ರಾಣಿಯರಾದ ಹೈಹಯ ಕುಲಕ್ಕೆ ಸೇರಿದ ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯರು ಲೋಕೇಶ್ವರ ಮತ್ತು ತ್ರೈಲೋಕ್ಯೇಶ್ವರ ದೇವಾಲಯಗಳನ್ನು ನಿರ್ಮಿಸಿದರು.
ಪಟ್ಟದಕಲ್ಲಿನ ಇನ್ನೊಂದು ಅತ್ಯಪೂರ್ವ ದೇವಾಲಯವೆಂದರೆ ಗಳಗನಾಥ. ಶಾಸನಗಳ ಆಧಾರವೇನೂ ಇಲ್ಲದಿದ್ದರೂ, ಇದು ಕೂಡ ಎರಡನೆಯ ವಿಕ್ರಮಾದಿತ್ಯನ ಕೊಡುಗೆಯೆಂದೂ ಅಲ್ಲಿನ ಲಿಂಗಕ್ಕೆ ವಿಕ್ರಮೇಶ್ವರನೆಂಬ ಹೆಸರಿತ್ತೆಂದು ಊಹಿಸಬಹುದು. ಇದು ಉತ್ತರದ ನಾಗರಶೈಲಿಯ ಗೋಪುರವನ್ನು ಹೊಂದಿದ್ದು, ಆಂಶಿಕವಾಗಿ ನಾಶವಾಗುತ್ತಿದೆ. ಚಾಲುಕ್ಯರಿಂದ ಕೊನೆಯದಾಗಿ ನಿರ್ಮಿಸಲ್ಪಟ್ಟ ಉತ್ತರ-ದಕ್ಷಿಣ ಶೈಲಿಗಳ ತೀವ್ರ ಸಮ್ಮಿಶ್ರವೆನ್ನಬಹುದಾದದ್ದು ಪಾಪನಾಥ ದೇವಾಲಯ. ಇದನ್ನು ಸರ್ವಸಿದ್ಧಿ ಆಚಾರ್ಯನ ಶಿಷ್ಯನಾದ ರೇವಡಿ ಓವಜ್ಜನು ನಿರ್ಮಿಸಿದನು. ಚಾಲುಕ್ಯರ ಎರಡನೇ ಕೀರ್ತಿವರ್ಮನ ಆಳ್ವಿಕೆಯಲ್ಲಿಸಂಗಮೇಶ್ವರ, ಮಲ್ಲಿಕಾರ್ಜುನ ಮತ್ತು ವಿರೂಪಾಕ್ಷ ದೇಗುಲಗಳ ನಡುವೆ ಜ್ಞಾನಶಿವಾಚಾರ್ಯನೆಂಬ ಪಾಶುಪತ ಪಂಥದ ಶೈವಾಚಾರ್ಯನಿಂದ ಒಂದು ಸ್ಥಂಭವು ಸ್ಥಾಪಿಸಲ್ಪಟ್ಟಿತು. ಈತನು ಗಂಗಾನದಿಯ ಉತ್ತರಭಾಗದಿಂದ, ಬಹುಶಃ ಸಾರನಾಥ ಪ್ರಾಂತದವನೆಂದು ಊಹಿಸಲಾಗಿದೆ. ಇದನ್ನು ತ್ರೈಲೋಕ್ಯಮುದ್ರಾಂಕಿತ ಶೈಲ ಸ್ತಂಭ ಎಂದು ಹೆಸರಿಸಲಾಗಿದ್ದು, ಅದರ ಮೇಲೆ ಪಾಶುಪತ ಚಿಹ್ನೆಯಾದ ತ್ರಿಶೂಲವನ್ನು ಕಾಣಬಹುದು.
---

