ನಾನು ಓದಿದ

Contributed byshubha.hegde@timesgroup.com|Vijaya Karnataka

ಹೆಚ್‌.ಆರ್‌.ಸುಜಾತಾ ಅವರ 'ಮೋಡ ಕಟ್ಟುವ ಕನಸು' ಕವನ ಸಂಕಲನವು ಜೀವನದ ಸಾಮಾನ್ಯ ದೃಶ್ಯಗಳೊಳಗಿನ ಅಸಾಮಾನ್ಯ ತತ್ವಗಳನ್ನು ಅನಾವರಣಗೊಳಿಸುತ್ತದೆ. ಪ್ರೀತಿ, ಪ್ರಕೃತಿ, ದುಃಖ, ಕನಸು, ಬದುಕಿನ ಹೋರಾಟ, ಜೀವನ-ಸಾವಿನ ಚಕ್ರ, ಮಾನವ ನಿರ್ಮಿತ ಗಡಿಗಳು ಇವುಗಳೆಲ್ಲವನ್ನೂ ಕವಯತ್ರಿ ಸರಳ ಭಾಷೆಯಲ್ಲಿ ಆಳವಾಗಿ ಚಿತ್ರಿಸಿದ್ದಾರೆ. ಈ ಸಂಕಲನವು ಬದುಕಿನ ಮೇಲಿನ ನಂಬಿಕೆಯನ್ನು ಮೂಡಿಸುತ್ತದೆ.

dreams of building clouds understanding small experiences of life in h r sujatas work

ಸಣ್ಣ ಅನುಭವಗಳ ಭವ್ಯ ಭಾವಲೋಕ

ಡಾ.ಲಕ್ಷ್ಮಣ ವಿ ಎ

ರೂಪಕ, ಭಾವ ಮತ್ತು ಬದುಕಿನ ಸೂಕ್ಷ್ಮ ಅನುಭವಗಳನ್ನು ಒಂದೇ ಹೊತ್ತಿನಲ್ಲಿಹಿಡಿದಿಡಬಲ್ಲಕವಯತ್ರಿಯರ ಸಾಲಿನಲ್ಲಿಎಚ್ .ಆರ್ .ಸುಜಾತಾ ಗಮನ ಸೆಳೆಯುñ್ತಾರೆ.

‘ಮೋಡ ಕಟ್ಟುವ ಕನಸು’ ಕವನ ಸಂಕಲನದಲ್ಲಿಅವರು ಜೀವನದ ಸಾಮಾನ್ಯ ದೃಶ್ಯಗಳೊಳಗೆ ಅಡಗಿರುವ ಅಸಾಮಾನ್ಯ ತತ್ವಗಳನ್ನು ಕಾವ್ಯಾತ್ಮಕವಾಗಿ ಅನಾವರಣಗೊಳಿಸಿದ್ದಾರೆ. ಈ ಸಂಕಲನದ ಕವನಗಳು ಓದುಗರ ಮನಸ್ಸಿಗೆ ತಾಕುವುದು ಅವುಗಳ ಸರಳ ಭಾಷೆಯಿಂದಲ್ಲ; ಆ ಸರಳತೆಯೊಳಗೆ ಮಡುಗಟ್ಟಿರುವ ಆಳವಾದ ಅನುಭವದಿಂದ.

‘ಮೋಡವೇಕೆ ತೇಲುತ್ತಿವೆ? ಒಲಿದ ಜೀವ ಹಗುರವೆಂದು’ ಸಾಲುಗಳಲ್ಲಿಪ್ರೀತಿಯ ಹಗುರತನವನ್ನು ಮೋಡದ ಚಲನೆಯಲ್ಲಿಕಾಣುವ ಕವಯತ್ರಿ, ‘ಹಕ್ಕಿಯೇಕೆ ಹಾರುತ್ತಿವೆ? ಪ್ರೀತಿಗಿಲ್ಲಮೇರೆಯೆಂದು’ ಎಂದು ಹೇಳುವಾಗ ಪ್ರೀತಿಯ ಅಸೀಮ ಸ್ವಭಾವವನ್ನು ಮನದಟ್ಟಾಗಿಸುತ್ತಾರೆ. ಈ ಪದ್ಯದಲ್ಲಿಒಲವು ಮತ್ತು ಬದುಕಿನ ನಡುವಿನ ಅವಿನಾಭಾವ ಸಂಬಂಧ ಮೃದು ಭಾವ ಗೀತೆಯಂತೆ ಕೇಳಿಸುತ್ತದೆ.

‘ಹೂ ಮತ್ತು ಆಲಿಕಲ್ಲು’ ಪದ್ಯದಲ್ಲಿಮಳೆಯನ್ನೇ ‘ಕಣ್ಣ ಹರಳಾಗಿ’ ನೆಲಕ್ಕೆ ಇಳಿಯುವಂತೆ ಚಿತ್ರಿಸುವುದು, ಪ್ರಕೃತಿಯೊಳಗಿನ ನೋವು ಮತ್ತು ಸೌಂದರ್ಯದ ದ್ವಂದ್ವವನ್ನು ನೆನಪಿಸುತ್ತದೆ. ಮಳೆಯ ಹನಿ ಇಲ್ಲಿಕೇವಲ ನೀರಲ್ಲ; ಅದು ಪ್ರಕೃತಿಯ ಭಾವಭಾಷೆ. ಇದೇ ರೀತಿ ‘ಹುಸಿಯಾಗದು ಕನಸು’ ಕವನದಲ್ಲಿಕನಸು, ದುಃಖ, ಪ್ರೀತಿ, ಬದುಕಿನ ಹೋರಾಟ ಪರಸ್ಪರ ಜೋತುಬಿದ್ದ ಜೀವಸಂಬಂಧಗಳಾಗಿ ಮೂಡಿವೆ. ‘ಕಳೆದುಕೊಳ್ಳುವುದು, ಕೂಡಿದಷ್ಟು ಸುಲಭವಲ್ಲ’ ಎಂಬ ಸಾಲು ಬದುಕಿನ ಅನುಭವಗಳ ಸಾರವಾಗಿಬಿಡುತ್ತದೆ. ‘ಹಿಮದ ಕರುಳು’ ಪದ್ಯದಲ್ಲಿಕವಯತ್ರಿ ದುಃಖವನ್ನು ಹಿಮದ ರೂಪಕದಲ್ಲಿಹಿಡಿದಿಡುತ್ತಾರೆ. ‘ಬಿಸಿಲಂತೆ ಕರಗಿ ಹೋಗುವುದು ದುಃಖದ ನಿಯತಿ’ ಎನ್ನುವ ಸಾಲುಗಳಲ್ಲಿನೋವಿನ ಶಾಶ್ವತತೆಯನ್ನು ಅಲ್ಲ, ಅದರ ಕರಗುವ ಸ್ವಭಾವವನ್ನು ನೆನಪಿಸುವ ಧೈರ್ಯ ಇದೆ. ‘ಗರ ಬೀಳಿಸುವ ಆಟ’ ಕವನ ಜೀವನ-ಸಾವಿನ ಚಕ್ರವನ್ನು ಸರಳವಾಗಿ ಹೇಳುತ್ತದೆ. ‘ಒಂದು ಸತ್ತರೆ ಬದಲೊಂದು ಹುಟ್ಟುತ್ತದೆ’ ಎನ್ನುವ ಸಾಲು ಅಸ್ತಿತ್ವದ ನಿರಂತರ ಚಲನೆಯ ಸಂಕೇತ. ಬದುಕು ಇಲ್ಲಿಒಂದು ಆಟ; ಆದರೆ ಅದು ನಿರ್ದಯ ಆಟವಲ್ಲ, ನಿರಂತರ ಪುನರ್ಜನ್ಮದ ಆಟ. ‘ಕೊರೆದ ಗೆರೆ’ ಪದ್ಯ ಈ ಸಂಕಲನದ ಪ್ರಬಲ ಸಾಮಾಜಿಕ ರೂಪಕಗಳಲ್ಲಿಒಂದು. ಬೇಲಿ, ಗಡಿ, ಪರಿಧಿ ಇವೆಲ್ಲಮಾನವರು ಕಟ್ಟಿದವು. ಆದರೆ ‘ಒಣಗಿದ ಹೂಪಕಳೆಗಳು ಗಾಳಿಯಲ್ಲಿತೇಲುತ್ತಿವೆ ಬೇಲಿಯ ಗೆರೆ ದಾಟಿ’ ಎನ್ನುವ ಸಾಲು ಪ್ರಕೃತಿಗೆ ಗಡಿಯಿಲ್ಲವೆಂಬ ಸತ್ಯವನ್ನು ಹೇಳುತ್ತದೆ. ಮಾನವನ ವಿಭಜನೆಗಳಿಗಿಂತ ಬದುಕಿನ ಹರಿವು ದೊಡ್ಡದು ಎಂಬುದನ್ನು ಕವಯತ್ರಿ ನವಿರಾಗಿ ಹೇಳಿಬಿಡುತ್ತಾರೆ. ಒಟ್ಟಿನಲ್ಲಿ‘ಮೋಡ ಕಟ್ಟುವ ಕನಸು’ ಬದುಕಿನ ಸಣ್ಣ ಸಣ್ಣ ಅನುಭವಗಳಿಂದ ಕಟ್ಟಿದ ಭಾವಲೋಕ. ಪ್ರತಿಯೊಂದು ಕವನದಲ್ಲೂಜೀವನದ ಮೇಲೆ ಇರುವ ನಂಬಿಕೆ ಇದೆ.

ಮೋಡ ಕಟ್ಟುವ ಕನಸು

ಲೇ: ಹೆಚ್ .ಆರ್ .ಸುಜಾತಾ

ಪ್ರ: ಮಿಂಚುಳ್ಳಿ ಪ್ರಕಾಶನ

ಬೆಲೆ: 150

ಪುಟ: 88