ಲೀಡ್

Contributed byshubha.hegde@timesgroup.com|Vijaya Karnataka

ಬೇಸಿಗೆ ರಜೆ ಮುಗಿದು ಶಾಲೆಗಳು ಪುನರಾರಂಭಗೊಳ್ಳುವ ಸಮಯ ಬಂದಿದೆ. ಮಕ್ಕಳು ಮತ್ತೆ ಶಾಲೆಗೆ ಬರಲು ಸಿದ್ಧರಾಗುತ್ತಿದ್ದಾರೆ. ಶಾಲೆಗಳು ಮಕ್ಕಳ ಸ್ವಾಗತಕ್ಕೆ ಸಜ್ಜಾಗಿವೆ. ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಹೊಸ ಶೈಕ್ಷಣಿಕ ವರ್ಷಕ್ಕೆ ಉತ್ಸಾಹದಿಂದ ಎದುರು ನೋಡುತ್ತಿದ್ದಾರೆ. ಹೊಸ ಪುಸ್ತಕ, ಬ್ಯಾಗ್, ಮತ್ತು ಸಮವಸ್ತ್ರಗಳೊಂದಿಗೆ ಮಕ್ಕಳು ಶಾಲೆಗೆ ಬರಲಿದ್ದಾರೆ. ಶಾಲೆಯು ಮಕ್ಕಳ ಕಲರವದಿಂದ ಮತ್ತೆ ಜೀವಂತವಾಗಲಿದೆ.

the responsive writing of a school waiting for childrens return

ಶಾಲೆ ಅರಳುವ ಸಮಯ

ಕಿಕ್ಕರ್ : ಮಕ್ಕಳಿಗೆಂದು ಇಸ್ಕೂಲ್ ಬರೆದ ಒಲವಿನ ಓಲೆ

------------------

ಇಂಟ್ರೊ: ಶಾಲೆ ಕೇವಲ ಇಟ್ಟಿಗೆ-ಸಿಮೆಂಟ್ ಗಳ ಕಟ್ಟಡವಲ್ಲ. ಮಕ್ಕಳ ಕಲರವದ ನಡುವೆ ಜೀವ ತಳೆಯುತ್ತದೆ ಶಾಲೆ ಎಂಬ ಕಟ್ಟಡ. ಮಕ್ಕಳಿಲ್ಲದ ಬೇಸಿಗೆ ರಜೆಯಲ್ಲಿಖಾಲಿತನ ಅನುಭವಿಸಿದ ಶಾಲೆಗೆ ಮತ್ತೆ ಮಕ್ಕಳು ಶಾಲೆಗೆ ಬರುವ ಸೂಚನೆ ಸಿಕ್ಕಿದೆ. ಮತ್ತದೇ ಹೊಸ ಹುರುಪಿನೊಂದಿಗೆ ಮಕ್ಕಳ ಆಗಮನಕ್ಕೆ ಕಾದಿರುವ ಶಾಲೆ ಮಕ್ಕಳಿಗಾಗಿ ಇಲ್ಲಿತಾನೇ ಪತ್ರವೊಂದನ್ನು ಬರೆದಿದೆ...

---

ಸ್ಲಗ್ : ಮರಳಿ ಶಾಲೆಗೆ

---

ಅಕ್ಷತಾ ಕೃಷ್ಣಮೂರ್ತಿ

----

ಮಕ್ಕಳೇ,

ಎಲ್ಲರೂ ಮನೆಯಲ್ಲಿಬೆಚ್ಚಗಿದ್ದೀರಾ? ಮಳೆ ಬಂತೆಂದು ಮಳೆಯಲ್ಲಿಆಡಲಿಕ್ಕೆ ಹೊರಟಿರಾ ಏನು? ಹುಷಾರು, ಮೊದಲ ಮಳೆಗೆ ನೆನೆದು ಆರೋಗ್ಯ ಕೆಡಿಸಿಕೊಳ್ಳಬೇಡಿ. ನನ್ನನ್ನು ನೀವೆಲ್ಲನೋಡಲು ಬರುವಾಗ ಆರೋಗ್ಯದಿಂದ ಇರಬೇಕೋ ಬೇಡವೋ..?

ನನಗೂ ನಿನ್ನೆ ಟೆನ್ಷನ್ ಆಯಿತು, ಮೊನ್ನೆಮೊನ್ನೆ ಸುಣ್ಣಬಣ್ಣ ಬಳಿಸಿಕೊಂಡಿದ್ದೆನಲ್ಲಾ, ಎಲ್ಲಾಮಳೆನೀರಿಗೆ ಹೋಗಿಟ್ಟರೆ... ನನ್ನ ಮಕ್ಕಳು ಬರುವಾಗ ನಾನು ಸುರಸುಂದರಾಂಗನಾಗಿ ಕಾಣಬೇಡವಾ ಅಂತ... ಇರಲಿ, ನಾನಂತೂ ನಿಮ್ಮ ಸ್ವಾಗತಕ್ಕೆ ರೆಡಿಯಾಗಿ ನಿಂತಿದ್ದೇನೆ. ಇನ್ನು ಸ್ವಾಗತದ ಕಮಾನು ಕಟ್ಟಿದರಾಯಿತು ನೋಡಿ.

ಮಳೆ ಬಂದು ಬೇಸಿಗೆಯ ಧಗೆಯನ್ನು ಸ್ವಲ್ಪ ಕಡಿಮೆ ಮಾಡಿತು ನಿಜ. ಆದರೆ, ಅದಕ್ಕಿಂತ ಹೆಚ್ಚಿನದು ನೀವು ಬರುತ್ತೀರೆಂಬ ಖುಷಿ ಕೊಡುವ ತಂಪು. ಅದಕ್ಕೂ ಮುನ್ನ ಏಪ್ರಿಲ್ ಹತ್ತರ ನಂತರದ್ದಂತೂ ನನ್ನದು ಬರೀ ನೋವಿನ ಕಥೆ ಮಕ್ಕಳೇ. ನನ್ನ ಸುತ್ತಮುತ್ತ ನೀವೂ ಇಲ್ಲ, ಶಿಕ್ಷಕರೂ ಇಲ್ಲ. ಯಾರೂ ಇಲ್ಲದೆ ಸೊರಗಿರುವೆ. ಈ ಒಂಟಿತನದ ನೋವು ನನಗೆ ಮಾತ್ರ ಗೊತ್ತು. ಬೀಗ ಜಡಿಸಿಕೊಂಡ ನನ್ನ ಬಾಗಿಲು, ಹೊರ ಪ್ರಪಂಚ ಕಾಣಲಾಗದ ತೊಳಲಾಟಕ್ಕೆ ಸಿಕ್ಕ ಮುಚ್ಚಿದ ಕಿಟಕಿಗಳು, ಧೂಳು ಮೈ ತುಂಬಿಸಿಕೊಂಡ ಗೋಡೆಗಳು. ನಿಮ್ಮ ಪುಟ್ಟ ಪಾದದ ಹೆಜ್ಜೆ ಸಪ್ಪಳವಿಲ್ಲದ ನೆಲ, ತಪಸ್ಸಿಗೆ ಕುಳಿತ ಶಾಲೆಯ ಗಂಟೆ, ಮೂಲೆ ಸೇರಿದ ಕಸಬರಿಗೆ.. ಹೀಗೆ ಎಲ್ಲವೂ.. ಎಲ್ಲರನ್ನೂ.. ಕಳೆದುಕೊಂಡು ಮಾತಿಲ್ಲದೆ, ಮಕ್ಕಳ ಕತೆಯಿಲ್ಲದೆ ಕಳೆಯುವ ದುಃಖ ನನಗೆ ಮಾತ್ರ ಗೊತ್ತಿದೆ.

ಈ ವರ್ಷ ನಾನು ಪಕ್ಕಾ ಕಟ್ಟಡ ಎಂದು ಜನಗಣತಿ 2027ರ ಮನೆ ಪಟ್ಟಿಯಲ್ಲಿಗುರುತಿಸಿಕೊಂಡು ಬೀಗಿದ್ದರೂ, ಮಕ್ಕಳಿಲ್ಲದ ಮನೆಯಂತಾಗಿದೆ ನನ್ನ ಪರಿಸ್ಥಿತಿ. ಎಳೆಯ ಪಾರಿಜಾತದ ಪಾದಗಳ ಗುರುತು ಇಲ್ಲದೇ ನನ್ನ ನೆಲ ಬಾಡಿದೆ. ಪುಟಾಣಿ ಕೈಗಳ ಸ್ಪರ್ಶವಿಲ್ಲದೆ ಗೋಡೆಗಳು ಮಾತನಾಡದೇ ನಿಂತಿರುವಾಗ, ಹಗಲಿರುಳು ಒಂದೆಂತೆನಿಸಿ ಬೆಳಕು ಕೂಡ ಮೌನ ಮತ್ತು ಕತ್ತಲೆಯ ಭಾಷೆ ಬರೆಯುತ್ತಿದೆ ಅನಿಸುತ್ತದೆ.

ಇನ್ನೇನು ಜೂನ್ ಬಂತು, ನನ್ನ ಸಡಗರದ ಋುತು ಶುರು. ಬರಸಾತ ರಿಪೇರಿಯೆಂದು ಮಾಡಿನ ಹಂಚು ಸ್ವಚ್ಛ ಮಾಡಿಸಿಕೊಂಡ ಊರಿನ ಮನೆಗಳನ್ನು ನೋಡಿದ ನಾನು ಯಾರಿಗೂ ಕಮ್ಮಿ ಇಲ್ಲಎಂದು ಸಾರುತ್ತ ಮುಖ್ಯಾಧ್ಯಾಪಕರಿಗೆ ಹಾಗೂ ಎಸ್ ಡಿಎಂಸಿ ಅವರಿಗೆ ತಿಳಿಸಿ ಸಜ್ಜಾಗತೊಡಗಿರುವೆ. ಅವರ ಸ್ವಚ್ಛತೆಯ ಪರಿಪಾಠಕ್ಕೆ ಬೆದರಿದ ಜೇಡ ಹೊಸ ಜಾಡನ್ನು ಹುಡುಕಿ ನನ್ನ ಬಿಟ್ಟು ಅಂತೂ ಪರಾರಿಯಾಗಿದ್ದಾನೆ. ಅವನಿದ್ದರೆ ನನ್ನ ಮಕ್ಕಳಿಗೆ ತೊಂದರೆ. ಅಲರ್ಜಿ ಹರಡುವ ಮಹಾ ಘಾತಕ ಜೇಡ. ಬರಬೇಡ ಎಂದರೂ ಮಕ್ಕಳು ಮತ್ತು ಶಿಕ್ಷಕರು ಇಲ್ಲದ ಹೊತ್ತು ನಿಧಾನ ಬಂದು ಒಳಹೊಕ್ಕಿ ಬಿಡುತ್ತಾನೆ. ನನ್ನ ಸುತ್ತ ಬಿದ್ದ ಕಾಡಿನ ಮರಗಳ ಒಣಗಿದ ಎಲೆಗಳು, ಹಸಿಕಸ ಗುಂಡಿಗೆ ಸೇರಿ ಗೊಬ್ಬರವಾಗುವ ನಿರೀಕ್ಷೆಯಲ್ಲಿವೆ.

ಹೌದು, ಅಜ್ಜಿಮನೆ ಗೌಜು ಮುಗಿಯಿತಾ?

ಬೇಸಿಗೆ ರಜೆ ಮುಗಿಯುತ್ತಿದ್ದಂತೆ ಅಜ್ಜಿ ಮನೆಯ ಮುದ್ದು ಮೊಮ್ಮಕ್ಕಳು, ವಿದ್ಯಾರ್ಥಿಗಳಾಗಿ ಹಗುರ ಬದಲಾಗುತ್ತಿದ್ದೀರಿ, ನನಗೆ ಗೊತ್ತು. ಏಪ್ರಿಲ್ ಹತ್ತರಂದು ಎತ್ತಿಟ್ಟ ಪುಸ್ತಕ ಪೆನ್ನುಗಳೆಲ್ಲಮೂಲೆ ಸೇರಿದ್ದು ರಜೆ ಮುಗಿಯುತ್ತಿರುವ ಹೊತ್ತಿಗೆ ನೆನಪಾಗಿದೆಯಲ್ಲ? ನಿರ್ದಿಷ್ಟ ವೇಳಾಪಟ್ಟಿಯಿಲ್ಲದ ರಜೆಯ ಬದುಕು ಇನ್ನೇನು ಕೆಲವು ದಿನಗಳಲ್ಲಿಮುಗಿದು ಬಿಡುತ್ತದೆ ಎಂಬ ಆತಂಕ ರಜೆಯ ಕೊನೆಯ ವಾರ ನಿಮಗೆಲ್ಲರಿಗೂ ಎದುರಾಗುತ್ತದೆ ಎಂಬ ಪರಮ ಸತ್ಯದ ಅರಿವು ನನಗಿದೆ. ನೋಟ್ ಬುಕ್ , ಕಂಪಾಸು, ಬ್ಯಾಗು, ಶಾಲೆಯ ಡೈರಿ ಎಲ್ಲವೂ ನೆನಪಾಗಿ ಜೊತೆಗೆ ಹೋಂವರ್ಕ್ ಕೂಡ ಮಾಡಲು ಮನಸ್ಸು ಮಾಡದೇ ನಿಮ್ಮೆಲ್ಲರನ್ನೂ ಸತಾಯಿಸುವುದು ನಾನು ಕಣ್ಣಾರೆ ನೋಡಿದ್ದೇನೆ.

ನನ್ನ ಭೇಟಿಗೆ ನೀವೆಲ್ಲಬಂದ ದಿನ ತಕ್ಷಣ ಎದುರಾಗುವವರು ಶಿಕ್ಷಕರು. ಅವರನ್ನು ನೋಡಿದಾಕ್ಷಣ, ರಜಾ ಅವಧಿಯಲ್ಲಿಕೊಟ್ಟ ಮನೆಗೆಲಸ ನೆನಪಾಗಿ ನೋವು ಕಾಡುತ್ತದೆ, ನಿಮ್ಮ ನೋವು ನೋಡಿ ನಾನು ಕೂಡ ದುಃಖಿಸುತ್ತೇನೆ. ಸೇತುಬಂಧ ದೃಢೀಕರಣ ಪರೀಕ್ಷೆಗಳು ಕಿರಿಕಿರಿ ಎನಿಸುತ್ತವೆ ಅಲ್ಲವಾ? ನನ್ನ ಈ ಆವರಣಕ್ಕೆ ಬರುವುದೇ ಬೇಡ, ಮನೆಯೇ ಮೇಲು ಅನಿಸುವುದೇ ಈಗ. ಆದರೂ, ಪ್ರಾರ್ಥನಾ ಚಟುವಟಿಕೆಗಳು, ಕ್ರೀಡೆ, ಗೆಳೆಯರ ಒಡನಾಟ, ಶಿಕ್ಷಕಿಯರ ಸಲುಗೆ, ಅಕ್ಷರದಾಸೋಹದ ಸವಿನೆನಪುಗಳು ಪುನಃ ನನ್ನತ್ತ ಮುಖಮಾಡುವಂತೆ ಒತ್ತಾಯಿಸುತ್ತವೆ ಅಲ್ಲವಾ?

ಹೊಸ ಬ್ಯಾಗು, ಕಂಪಾಸು, ಛತ್ರಿ, ರೇನ್ ಕೋಟ್ ಗಳು ಮನೆ ತುಂಬಿಕೊಂಡವಾ? ನೋಟ್ ಬುಕ್ ಗಳು ಹೊಸ ಖಾಕಿ ಪೇಪರಿನ ಬೈಂಡ್ ಹಾಕಿಸಿಕೊಂಡು, ಹೆಸರು ಬರೆಯಲು ನೆರವಾಗುವ ಛೋಟಾಭೀಮ್ ಸ್ಟಿಕ್ಕರ್ ಅಂಟಿಸಿಕೊಂಡಾಗಿರಬೇಕು ಈಗ. ನಿಮ್ಮೆಲ್ಲರ ಕನಸಿನಲ್ಲೂನಾನು ಬರಲಾರಂಭಿಸಿರಬೇಕು ಈಗ. ನಾನು, ಶಿಕ್ಷಕರು, ಸ್ನೇಹಿತರು, ಕ್ಲಾಸು, ಬೆಂಚು... ಎಲ್ಲವೂ ಇನ್ನೇನು ಕನಸಿನಿಂದ ನನಸಿಗೇ ಬರುವುದಕ್ಕೆ ದಿನ ದೂರವಿಲ್ಲ.

ಪುಟಾಣಿ ಕಂದಮ್ಮಗಳಿರಾ,

ನನಗಿನ್ನು ವಯಸ್ಸು ಕಡಿಮೆಯಾಗಲಿಕ್ಕಿದೆ. ಯಾಕೆ ಗೊತ್ತಾ? ಅಂಗನವಾಡಿ, ಕೆ.ಜಿ ಕ್ಲಾಸಿನ ಮುಖ ನೋಡಿದ ಕಂದಮ್ಮಗಳು ನನ್ನಲ್ಲಿಗೆ ಬರಲಿದ್ದಾರೆ. ಅವರೆಲ್ಲನನ್ನ ದೊಡ್ಡ ಮುಖ ನೋಡಲು ಹಿಂಜರಿಯಲಾರರು. ಪುಟಾಣಿ ಮಕ್ಕಳ ನೈದಿಲೆಯಂತಹ ನಯನಗಳು ಕೊಳಗಳಾಗುವುದನ್ನು ಮಾತ್ರ ನಾನು ಸಹಿಸಲಾರೆ. ಎಲ್ಲವಿಷಯ ಗೊತ್ತಿದ್ದರೂ ಮಕ್ಕಳ ಮನದಲ್ಲಿಎದ್ದ ಹೊಯ್ದಾಟವೆಲ್ಲನಿಧಾನವಾಗಿ ಪಾಲಕರಿಗೂ ತಟ್ಟುತ್ತಿರುತ್ತದೆ ಎಂಬುದೇ ಸಂಕಟ. ನನ್ನೊಳಗೆ ಬಂದು ಸೇರಲು ಪಾಲಕರು ಕೂಡ ಕೆಲವು ತಯಾರಿ ಮಾಡದಿದ್ದರೆ ಹೇಗೆ? ಹೀಗಾಗಿ ಪೆಟ್ಟಿಗೆ ಒಳಸೇರಿದ ಮಕ್ಕಳ ಜನನ ಪ್ರಮಾಣ ಪತ್ರ ತನ್ನ ಹೆಸರು ಹಾಗೂ ಜನ್ಮದಿನಾಂಕ ಸರಿ ಇದೆಯೇ ಎಂದು ಪರೀಕ್ಷೆ ಮಾಡಿಕೊಳ್ಳುತ್ತವೆ. ಆಧಾರ್ ಕೇಂದ್ರಗಳಲ್ಲಿಸಾಲುಗಟ್ಟಿ ನಿಂತ ಪಾಲಕರು ನನ್ನ ಕುರಿತಾಗಿಯೇ ಮಾತುಕತೆ ಶುರು ಮಾಡುತ್ತಾರೆ. ಜಾತಿ, ಆದಾಯ ಪ್ರಮಾಣಪತ್ರಗಳೆಲ್ಲಕ್ಯೂನಲ್ಲಿನಿಂತು ನಿಧಾನ ನಡಿಗೆಯಲ್ಲಿಹಾದು ಪಾಲಕರ ಕೈ ಸೇರುತ್ತದೆ.

ಈಗೀಗ ಸಮವಸ್ತ್ರವೆಲ್ಲಎದ್ದೆದ್ದು ಇಸ್ತ್ರಿ ಮಾಡಿಸಿಕೊಳ್ಳಲು ಮುಂದಾಗುತ್ತವೆ. ಕಿತ್ತು ಹೋದ ಶರ್ಟಿನ ಗುಂಡಿಗಳಿಗೆ ಮರು ಜೀವ ಪಡೆಯುತ್ತದೆ. ಪ್ರತಿ ಸಮವಸ್ತ್ರದಲ್ಲಿಯೂ ನನ್ನದೇ ಆದ ಒಂದೊಂದು ಕಥಾನಕವಿದೆ. ತೊಳೆದರೂ ಹೋಗದ ಗೀಚಿದ ಗೆರೆಗಳು ಶರ್ಟಿನ ಅಂದವನ್ನು ಒಂದು ನಮೂನೆಯಲ್ಲಿಹೆಚ್ಚಿಸಿ ಮಕ್ಕಳಿಗೆ ನನ್ನ ಕಥೆ ನೆನಪಿಸುತ್ತದೆ.

ಕನಸಿನಲ್ಲಿಹಠಾತ್ತನೆ ನನ್ನ ಕಂಡ ಶಿಕ್ಷಕರು ಬಾಗಿಲು ತೆರೆಯಲು ಗಡಿಬಿಡಿಯಿಂದಲೇ ಸಿದ್ಧಗೊಳ್ಳುತ್ತಿರುತ್ತಾರೆ. ಈ ವರ್ಷದ ಬೇಸಿಗೆ ಶಿಕ್ಷಕರಿಗೆ ಕೆಲಸದಲ್ಲಿಯೇ ಕಳೆದು ಹೋಗಿದೆ. ಮಕ್ಕಳಿಗೆ ಫಲಿತಾಂಶ ನೀಡಿ, ಅಂಬೇಡ್ಕರ್ ಜಯಂತಿ ಮುಗಿಸುವಷ್ಟರಲ್ಲಿಜನಗಣತಿಯ ಕೆಲಸ ಶುರುವಾದಾಗ ನಿಮ್ಮೆಲ್ಲರನ್ನು, ನನ್ನನ್ನು, ಸಂಸಾರವನ್ನು ಒಂದಷ್ಟು ಕಾಲ ಇಷ್ಟವಿಲ್ಲದಿದ್ದರೂ ದೂರ ಮಾಡಿಕೊಂಡು, ಪೂರ್ಣವಾಗಿ ಮನೆಪಟ್ಟಿ ಕೆಲಸದಲ್ಲಿತೊಡಗಿಕೊಂಡ ಕೆಲಸದ ಘಳಿಗೆಗಳು ಶಿಕ್ಷಕರನ್ನು ದಾಟಿವೆ. ಉರಿ ಬಿಸಿಲಿನಲ್ಲಿಬೆವರಿಳಿಸುತ್ತ ಜನಗಣತಿ ಮನೆ ಸಂಖ್ಯೆಯನ್ನು ನನ್ನ ಗೋಡೆ ಮೇಲೆ ಬರೆದ ಮಾಸ್ತರರಿಗೆ ಬಿಸಿಲಿಗೆ ಮೈಯೊಡ್ಡಿ ನಿಂತ ನನ್ನ ಬಗ್ಗೆ ಸಹಾನುಭೂತಿ ಇದೆ. ನನ್ನ ಎದುರಿಗೆ ತಾವು ನಿಂತು ತೆಗೆಸಿಕೊಂಡ ಜಿಪಿಎಸ್ ಫೋಟೋ ಮಾಸ್ತರರ ಮೊಬೈಲ್ ನಲ್ಲಿಕುಳಿತು ಆಗಾಗ ನಗುತ್ತಿರುತ್ತದೆ. ವರ್ಷಪೂರ್ತಿ ಅವರು ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಲೇ ಇರುತ್ತಾರೆ.

ಶಿಕ್ಷಕರು ಮನೆಪಟ್ಟಿ ಕೆಲಸ ಮುಗಿಸಿ ಮಳೆಗಾಲಕ್ಕೆ ಪೂರ್ವ ತಯಾರಿಯಾಗಿ ಒಣಮೀನು, ಉಪ್ಪಿನಕಾಯಿ, ಹಪ್ಪಳ ಸಂಡಿಗೆ ಮಾಡಿ ಮುಗಿಸುವಷ್ಟರಲ್ಲಿಯೇ ಮೇ 28ನೇ ತಾರೀಕು ಹಾಯ್ ಹೇಳುತ್ತದೆ. ನಾನು ಅವರನ್ನು ಕೂಗಿ ಕರೆದಂತಹ ಸದ್ದು ಶಿಕ್ಷಕರಿಗೆ ಮಾತ್ರ ಕೇಳುತ್ತಿರುತ್ತದೆ. ನಿಮ್ಮನ್ನೆಲ್ಲಪ್ರೀತಿಯಿಂದ ಸ್ವಾಗತಿಸುವ ಪೂರ್ವ ತಯಾರಿಗಳು ಹೆಡ್ ಮಾಸ್ಟರ್ ಜೊತೆ ಚರ್ಚಿಸಿ ಆರಂಭಗೊಳಿಸುತ್ತಾರೆ. ಕಪಾಟಿನಲ್ಲಿದ್ದ ಅಕ್ಕಂದಿರ ಸೀರೆಗಳಲ್ಲಿನನ್ನ ಹೆಸರಿನ ಸ್ವರಸಂಚಾರವಾದಂತೆ ಆಗುತ್ತದೆ. ಯಾವುದೋ ಮೋಡಿಗೆ ಒಳಗಾದವರಂತೆ ಅಕ್ಕಂದಿರು-ಮಾಸ್ತರುಗಳೆಲ್ಲಹಿರಿದಾದ ನನ್ನ ಗೇಟಿನ ಬಾಗಿಲು ತೆರೆಯಲು ಸಿದ್ಧಗೊಳ್ಳುತ್ತಾರೆ.

ಪ್ರಾರಂಭೋತ್ಸವದ ಹೊತ್ತಲ್ಲಿಈ ಬಾರಿ ವಿಶೇಷವಾಗಿ ಆಚರಿಸಲ್ಪಡುವ ಮೆಗಾ ಪಿಟಿಎಂ ಬಗ್ಗೆ ನನಗೆ ಕುತೂಹಲವಿದೆ. ನಾಲ್ಕು ದಿನ ಮುನ್ನವೇ ಶಿಕ್ಷಕರನ್ನು ಬರಹೇಳಿರುವ ನಾನು ಹೊಸ ದಾಖಲಾತಿಯಾಗಿ ಬರುವ ಪುಟ್ಟ ಕಂದಮ್ಮಗಳನ್ನು ಕಾಣುವ ಕಾತರದಲ್ಲಿದ್ದೇನೆ. ಶಿಕ್ಷಕರು, ಎಸ್ ಡಿಎಂಸಿ, ಅಡುಗೆಯವರು ಸೇರಿ ನನ್ನ ವಿಶಾಲ ಗೋಡೆಯತ್ತ ದೃಷ್ಟಿ ಹರಿಸಿದ್ದಾರೆ. ಹಳೆಯ ಚಾರ್ಟ್ ಗಳು, ನಕಾಶೆಗಳು, ಕಲಿಕೋಪಕರಣಗಳ ಜಾಗದಲ್ಲಿಹೊಸ ಹೊಸ ಚಿತ್ರಪಟಗಳು ಬಂದು ಕೂತಿವೆ. ಪಂಚಾಂಗ ಬದಲಿಸಿಕೊಂಡ ಗೋಡೆ ಹೊಸ ಶೈಕ್ಷಣಿಕ ವರ್ಷದ ಸೇತುಬಂಧದ ತಯಾರಿ ನಡೆಸುತ್ತಿದೆ. ಪ್ರಾರ್ಥನೆಯ ಸಾಲು ನನ್ನೆದುರಿಗೆ ಕಂಡಾಗಲೇ ಮುಂಗಾರಿನ ಮಳೆ ಮೋಡಗಳು ಧಾವಿಸಿ ಬರುತ್ತವೆ. ಪುಟ್ಟಪುಟ್ಟ ಸಸಿ ಹುಟ್ಟಲು ತಕ್ಕುದಾದ ಮಣ್ಣಿನ ತೆಕ್ಕೆಗೆ ಮಳೆ ಬೀಜಗಳು ಉದುರುತ್ತವೆ. ನನ್ನ ಮೇಲಿನ ನಿಮ್ಮೆಲ್ಲರ ವ್ಯಾಮೋಹ ಅಲ್ಲಿಂದಲೇ ಶುರುವಾಗುತ್ತದೆ.. ಮತ್ತೆ ಮತ್ತೆ..

ನಾನಂತೂ ನಿಮ್ಮ ಕಡು ವ್ಯಾಮೋಹಿ. ಬರುತ್ತೀರಲ್ಲ, ಕಾಯುತ್ತಿದ್ದೇನೆ.

ಇಂತಿ, ನಿಮ್ಮ ಪ್ರೀತಿಯ ಶಾಲೆ.

(ಲೇಖಕರು ಕಥೆಗಾರರು, ಶಾಲಾ ಶಿಕ್ಷಕರು)