ವಿಕ ಸುದ್ದಿಲೋಕ ಬೆಂಗಳೂರು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ನಿತಿನ್ ನವೀನ್ ಅವರು ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದು, ಮಹತ್ವದ ಸಭೆ, ಕೋರ್ ಕಮಿಟಿ ಸಭೆಗಳಲ್ಲಿಪಾಲ್ಗೊಳ್ಳಲಿರುವುದು ಕುತೂಹಲ ಮೂಡಿಸಿದೆ.
ಭಾನುವಾರ ಬೆಳಗ್ಗೆ ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಉಪಾಹಾರ ಸೇವಿಸಲಿದ್ದು, ಬಳಿಕ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಿಜೆಪಿ ಕಚೇರಿಗೆ ತೆರಳಲಿದ್ದಾರೆ. ರಾಜ್ಯದ ಬಿಜೆಪಿ ಸಂಸದರು, ಶಾಸಕರು, ಪದಾಧಿಕಾರಿಗಳೊಂದಿಗೆ ಎರಡು ಗಂಟೆ ಕಾಲ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಸ್ಥಿತಿಗತಿ, ಇತ್ತೀಚಿನ ವಿದ್ಯಮಾನಗಳು, ಮುಂಬರುವ ಚುನಾವಣೆಗಳಿಗೆ ಸಿದ್ಧತೆ ಕುರಿತಂತೆ ಸಮಾಲೋಚನೆ ನಡೆಸಲಿದ್ದಾರೆ. ಆ ಬಳಿಕ ರಾಜ್ಯ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಈ ವೇಳೆ ರಾಜ್ಯದಲ್ಲಿಕೈಗೊಂಡ ಪ್ರಮುಖ ಸಂಘಟನಾತ್ಮಕ ಚಟುವಟಿಕೆಗಳು, ರಾಜ್ಯ ಸರಕಾರದ ವಿರುದ್ಧ ನಡೆಸಿದ ಹೋರಾಟಗಳ, ಅದರ ಪರಿಣಾಮಗಳ ಕುರಿತಂತೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಷ್ಟ್ರೀಯ ಅಧ್ಯಕ್ಷರಿಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಸಂಜೆ ಯಲಹಂಕದಲ್ಲಿನಡೆಯಲಿರುವ ಬೆಂಗಳೂರು ಉತ್ತರ ಜಿಲ್ಲೆಯ ಪ್ರಶಿಕ್ಷಣ ವರ್ಗದಲ್ಲಿಸಮಾರೋಪ ಭಾಷಣ ಮಾಡಲಿದ್ದಾರೆ. ಜತೆಗೆ ಎಸ್ ಐಆರ್ ಕುರಿತಂತೆಯೂ ಪ್ರಮುಖರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಒಟ್ಟಾರೆ, ಬಿಎಸ್ ವೈ ಅಭಿಮಾನೋತ್ಸವ ಯಶಸ್ಸಿನ ಸಂಭ್ರಮದಲ್ಲಿರುವ ಕಾರ್ಯಕರ್ತರಿಗೆ ರಾಷ್ಟ್ರೀಯ ಅಧ್ಯಕ್ಷರ ರಾಜ್ಯ ಭೇಟಿಯು ಹುರುಪು ಹೆಚ್ಚಿಸುವ ನಿರೀಕ್ಷೆ ಮೂಡಿಸಿದೆ.
ರಾಷ್ಟ್ರೀಯ ಅಧ್ಯಕ್ಷರ ಭೇಟಿ ಕುರಿತಂತೆ ಪ್ರತಿಕ್ರಿಯಿಸಿರುವ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘‘ರಾಷ್ಟ್ರೀಯ ಅಧ್ಯಕ್ಷರ ಪ್ರವಾಸ, ಪ್ರಶಿಕ್ಷಣದಲ್ಲಿಭಾಗವಹಿಸುತ್ತಿರುವುದು ಕಾರ್ಯಕರ್ತರಿಗೆ ಸ್ಫೂರ್ತಿ ತರಲಿದೆ,’’ಎಂದು ಹೇಳಿದರು.

