ವಿಕ ಸುದ್ದಿಲೋಕ ಮಂದಾರ್ತಿ
ಮಂದಾರ್ತಿಯಲ್ಲಿಬೆಳೆಯತ್ತಲೇ ಇದೆ ಯಕ್ಷಗಾನ ದ ಹರಕೆ ಆಟ. ಯಕ್ಷಗಾನ ಪ್ರಿಯೆ ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಮಾಮೂಲಿ ತಿರುಗಾಟದ ಜತೆಗೆ, ಮಳೆಗಾಲದ ಆಟದೊಂದಿಗೆ ವರ್ಷವಿಡೀ ಯಕ್ಷಗಾನ ಸೇವೆ ನಡೆಯುತ್ತಿದೆ. ಯಕ್ಷಗಾನ ಕಲಾ ಮಾತೆಯ ಅನುಗ್ರಹ ಮತ್ತು ದೇವಿಯ ಕಾರಣಿಕಕ್ಕೆ ಸಾಕ್ಷಿಯೇ ಈ ಹರಕೆಯ ಯಕ್ಷಗಾನ. ಜತೆಗೆ ಯಕ್ಷಗಾನ ಕಲೆಯೂ ಬೆಳದಂತಾಗಿದೆ. ಹಲವಾರು ಕಲಾವಿದರಿಗೂ ಬದುಕು ನೀಡಿದಂತಾಗುತ್ತಿದೆ. ಇದು ಮಂದಾರ್ತಿ ಕ್ಷೇತ್ರದ ಹಿರಿಮೆ.
ಇದರಿಂದ ಭಕ್ತರ ಅಭೀಷ್ಟ ಪೂರೈಸುವುದಲ್ಲದೇ ಯಕ್ಷಗಾನ ಕಲಾವಿದರ ಮನೆಯೂ ಬೆಳಗುವಂತಾಗಿದೆ. ಕರಾವಳಿ ಮಾತ್ರವಲ್ಲದೇ ಮಲೆನಾಡು ಸೇರಿದಂತೆ ಇನ್ನಿತರ ಕೆಲವು ಕಡೆಗಳಲ್ಲಿಪ್ರದರ್ಶನಗೊಂಡು ಯಕ್ಷಗಾನದ ಕಂಪು ಪಸರಿಸುತ್ತಿರುವುದು ಹೆಮ್ಮೆಯ ವಿಷಯ. ಕರಾವಳಿಯ ಗಂಡುಕಲೆಗೂ ನಿರಂತರ ಪ್ರೋತ್ಸಾಹ ಸಿಕ್ಕಿ ಅಚಂದ್ರಾರ್ಕವಾಗಿ ಯಕ್ಷಗಾನ ಕಲೆಯೂ ನಿತ್ಯ ನಿರಂತರ ಉಳಿದು ಯಕ್ಷಗಾನ ಸೇವೆ ನಡೆಯಲಿದೆ ಎಂದರೆ ಅತಿಶಯೋಕ್ತಿ ಅಗಲಾರದು. ಇದರಿಂದ ಒಂದಿಷ್ಟು ಕಲಾವಿದರ ಬದುಕೂ ಹಸನಾಗುತ್ತಿದೆ.
ಮಂದಾರ್ತಿ ಶ್ರೀ ದುರ್ಗಪರಮೇಶ್ವರೀ ದೇವಳದಲ್ಲಿಯಕ್ಷಗಾನ ಸೇವೆಯಾಟವು ಈ ವರ್ಷ ಸುಸೂತ್ರದಿಂದ ನಡೆದು ಐದು ಮೇಳಗಳ ತಿರುಗಾಟ ಮೇ 24 ರಂದು ಶ್ರೀ ಕ್ಷೇತ್ರದಲ್ಲಿಸೇವೆಯಾಟದೊಂದಿಗೆ ಸಂಪನ್ನಗೊಳ್ಳಲಿದೆ. ತಿರುಗಾಟದ ಪ್ರಾರಂಭದ ದಿನ ಬಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿಗಣಪತಿ ಯಾಗ, ಮಧ್ಯಾಹ್ನ ಶ್ರೀ ಕ್ಷೇತ್ರದಲ್ಲಿಗಣಪತಿ ಯಾಗ, ರಾತ್ರಿ ಪ್ರಥಮ ದೇವರ ಸೇವೆ ಆಟ ಜರುಗಿ ಬಾರಾಳಿ ದೇವಾಲಯದಲ್ಲಿಕಲಾವಿದರು ಗೆಜ್ಜೆ ಧರಿಸಿ, ಶ್ರೀ ಕ್ಷೇತ್ರದಲ್ಲಿಆಟ ಆರಂಭವಾಗಿತ್ತು. 2025 ನವೆಂಬರ್ ನಲ್ಲಿಪ್ರಾರಂಭಗೊಂಡ ಯಕ್ಷ ತಿರುಗಾಟ ಸುಮಾರು 6 ತಿಂಗಳು ಕಾಲ 28 ಕಟ್ಟುಕಟ್ಟಳೆ ಆಟ ಸೇರಿದಂತೆ 945 ಸೇವೆ ಆಟ ಪೂರೈಸಿ ಭಾನುವಾರ ದೇವಳದಲ್ಲಿನಡೆಯುವ ಸೇವೆ ಆಟದೊಂದಿಗೆ ತೆರೆ ಬೀಳಲಿದೆ.
ಕರಾವಳಿ ಮತ್ತು ಮಲೆನಾಡಿನಲ್ಲಿ5 ಮೇಳಗಳಿಂದ ಸುಮಾರು 945 ಸೇವೆ ಆಟಗಳು ಆಗಿವೆ. ಅದರಲ್ಲಿ28 ಕಟ್ಟುಕಟ್ಟಳೆ ಸೇವೆ. ಈ ಬಾರಿ ಸುಮಾರು 250 ಆಟ ಶ್ರೀ ಕ್ಷೇತ್ರದಲ್ಲಿಮತ್ತು 200 ಆಟ ಮಲೆನಾಡು ಪ್ರದೇಶದಲ್ಲಿಆಗಿವೆ. ಸೇವೆ ಆಟಗಳಲ್ಲಿಶ್ರೀ ದೇವಿ ಮಹಾತ್ಮೆ, ಮಾತೆ ಮಂದಾಕಿನಿ, ಮಂದಾರ್ತಿ ಕ್ಷೇತ್ರ ಮಹಾತ್ಮೆ ಪ್ರಸಂಗಗಳು ಅತೀ ಹೆಚ್ಚು ಪ್ರದರ್ಶನ ಮತ್ತು ಇನ್ನಿತರ ಪೌರಾಣಿಕ ಪ್ರಸಂಗಗಳು ನಡೆದಿವೆ.
ಬಾಕ್ಸ್ ...
ಭಾನುವಾರ ಸೇವೆಯಾಟದೊಂದಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ದಿ.ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಈ ಬಾರಿ ಹಿರಿಯ ಕಲಾವಿದ ಗಾವಳಿ ಶೀನ ಕುಲಾಲ್ ಅವರಿಗೆ ದಿ.ಹಾರಾಡಿ ರಾಮ ಗಾಣಿಗ ಪ್ರಶಸ್ತಿ ನೀಡಲಾಗುವುದು. ಈ ಸಂದರ್ಬ ನಿವೃತ್ತಿ ಹೊಂದಿದ ನಾಲ್ವರು ಕಲಾವಿದರಿಗೆ ಗೌರವಧನ ನೀಡಲಾಗುವುದು.
ಬಾಕ್ಸ್
ಮಳೆಗಾಲದ ಯಕ್ಷಗಾನ
ಸೇವೆ ನೀಡಿದ ಭಕ್ತರಿಗೆ ಅನುಕೂಲವಾಗುವಂತೆ ಈ ಬಾರಿಯೂ ಜೂನ್ 15ರಿಂದ ಮಳೆಗಾಲದ ಕಾಲಮಿತಿ ಯಕ್ಷಗಾನ ನಡೆಯಲಿದೆ. 5 ಮೇಳಗಳ ಕಲಾವಿದರ ಕೂಡುವಿಕೆಯಿಂದ ಎರಡು ರಂಗಸ್ಥಳದಲ್ಲಿಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಯಕ್ಷಗಾನ ತರಬೇತಿ: ಪ್ರತೀ ವರ್ಷದಂತೆ ಮಳೆಗಾಲದಲ್ಲಿಯಕ್ಷಗಾನ ತರಬೇತಿ ಶಿಬಿರ ನಡೆಯಲಿದೆ. ಶಿಬಿರದಲ್ಲಿಭಾಗವತಿಕೆ, ಚಂಡೆ, ಮದ್ದಲೆ, ಹೆಜ್ಜೆಗಾರಿಕೆ ತರಗತಿಗಳು ನಡೆಯಲಿದೆ. ಉಚಿತವಾಗಿ ನಡೆಯುವ ಶಿಬಿರದಲ್ಲಿವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವಿರಲಿದೆ.
ಕೋಟ್
ಮಾಮೂಲಿಯಂತೆ ಈ ವರ್ಷವೂ ಯಾವ ತೊಂದರೆ ಇಲ್ಲದೇ ಕಲಾವಿದರ ಮತ್ತು ಭಕ್ತರ ಸಹಕಾರದಿಂದ ಮೇಳಗಳ ತಿರುಗಾಟ ಮುಗಿದಿದೆ. ಭಕ್ತರಿಗೆ ಅನುಕೂಲವಾಗುವಂತೆ ಈ ಬಾರಿಯೂ ಮಳೆಗಾಲದಲ್ಲಿಕಾಲಮಿತಿ ಯಕ್ಷಗಾನ ನಡೆಯಲಿದೆ. ಮಳೆಗಾಲದಲ್ಲಿಉಚಿತ ಊಟ ಯಕ್ಷಗಾನ ತರಬೇತಿ ನಡೆಯಲಿದೆ. ಈ ಬಾರಿ ತಿರುಗಾಟಕ್ಕೆ ಸಹಕರಿಸಿದ ಯಕ್ಷ ಕಲಾವಿದರಿಗೆ ಮತ್ತು ಸೇವೆ ನೀಡಿದ ಭಕ್ತಾದಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಕಲಾ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
-ಎಚ್ .ಧನಂಜಯ ಶೆಟ್ಟಿ, ಆಡಳಿತ ಮೊಕ್ತೇಸರ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಂದಾರ್ತಿ.
ಫೋಟೋಫೈಲ್ 24ಎಮ್ ಎಮ್ - ಮಂದಾರ್ತಿ

