ನಾಲ್ಕು ಬಗೆ ತ್ಯಾಜ್ಯ ವಿಂಗಡನೆ ಕಡ್ಡಾಯ

Contributed byBASAVARAJU KG|Vijaya Karnataka

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಂಗಡಣೆ ಕಡ್ಡಾಯವಾಗಿದೆ. ಮನೆಗಳು ಮತ್ತು ಉದ್ದಿಮೆಗಳು ಘನ ತ್ಯಾಜ್ಯವನ್ನು ನಾಲ್ಕು ವಿಧವಾಗಿ ವಿಂಗಡಿಸಿ ನೀಡಬೇಕು. ಹೋಟೆಲ್, ಕಲ್ಯಾಣ ಮಂಟಪ, ಆಸ್ಪತ್ರೆಗಳು ಬೃಹತ್ ತ್ಯಾಜ್ಯ ಉತ್ಪಾದಕರಾಗಿ ಪರಿಗಣಿಸಲ್ಪಟ್ಟು, ತಮ್ಮ ಆವರಣದಲ್ಲೇ ಹಸಿ ಕಸ ಸಂಸ್ಕರಿಸಬೇಕು. ರಸ್ತೆ, ಚರಂಡಿ, ಖಾಲಿ ನಿವೇಶನಗಳಲ್ಲಿ ಕಸ ಎಸೆದರೆ ದಂಡ ವಿಧಿಸಲಾಗುವುದು. ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು.

mandatory waste segregation in four ways new rules by davanagere municipality

ನಾಲ್ಕು ಬಗೆ ತ್ಯಾಜ್ಯ ವಿಂಗಡನೆ ಕಡ್ಡಾಯ

ವಿಕ ಸುದ್ದಿಲೋಕ ದಾವಣಗೆರೆ

ಮಹಾನಗರ ಪಾಲಿಕೆ ವ್ಯಾಪ್ತಿಯ ಮನೆ ಹಾಗೂ ಉದ್ದಿಮೆಗಳಲ್ಲಿಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಮೂಲದಲ್ಲಿಯೇ ಕಡ್ಡಾಯವಾಗಿ ನಾಲ್ಕು ವಿಧವಾಗಿ ವಿಂಗಡಿಸುವ ಮೂಲಕ ಸಾರ್ವಜನಿಕರು ಸ್ವಚ್ಛ, ತ್ಯಾಜ್ಯಮುಕ್ತ ಹಾಗೂ ಸ್ವಸ್ಥ ನಗರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತ ಡಾ.ಎನ್ .ಮಹಾಂತೇಶ್ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ಕೊಳೆಯುವ ಹಸಿತ್ಯಾಜ್ಯ, ಕೊಳೆಯದ ಒಣತ್ಯಾಜ್ಯ(ಮರುಬಳಕೆಗೆ ಯೋಗ್ಯ ಹಾಗೂ ಯೋಗ್ಯವಲ್ಲದ ದಹನಕಾರಿ ತ್ಯಾಜ್ಯ), ಸ್ಯಾನಿಟರಿ ತ್ಯಾಜ್ಯ(ಬಳಸಿದ ತಕ್ಷಣ ಕಂಪನಿ ನೀಡಿದ ಪೌಚ್ ಅಥವಾ ಪಾಲಿಕೆ ಸೂಚಿಸಿದ ರೀತಿಯಲ್ಲಿಸುತ್ತಿ ನೀಡಬೇಕು) ವಿಶೇಷ ಆರೈಕೆ ತ್ಯಾಜ್ಯ ಎಂಬುದಾಗಿ ವಿಂಗಡಿಸಿ ಕಸ ಸಂಗ್ರಹ ವಾಹನಗಳಿಗೆ ನೀಡಬೇಕು.

ಹೋಟೆಲ್ , ಕಲ್ಯಾಣ ಮಂಟಪ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ಸಮುಚ್ಛಯಗಳು ದಿನವೊಂದಕ್ಕೆ 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸಿದಲ್ಲಿಅಥವಾ 20,000 ಚದರ ಮೀ.ಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿದ್ದಲ್ಲಿ, ಇಲ್ಲವೇ ದಿನಕ್ಕೆ 40,000 ಲೀ. ನೀರು ಬಳಕೆ ಮಾಡುತ್ತಿದ್ದಲ್ಲಿಅವರನ್ನು ‘ಬೃಹತ್ ತ್ಯಾಜ್ಯ ಉತ್ಪಾದಕರು’ ಎಂದು ಪರಿಗಣಿಸಲಾಗುವುದು. ಇವರು ತಮ್ಮ ಆವರಣದಲ್ಲಿಯೇ ಹಸಿ ಕಸ ಸಂಸ್ಕರಿಸಬೇಕು (ಕಾಂಪೋಸ್ಟ್ /ಬಯೋಗ್ಯಾಸ್ ). ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರೀಕೃತ ಪೋರ್ಟಲ್ ನಲ್ಲಿಬಿಡಬ್ಲೂಜಿ ಎಂದು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ.

ಕಸ ಎಸೆದರೆ ದಂಡ ಖಚಿತ:

ರಸ್ತೆ, ಚರಂಡಿ, ಖಾಲಿ ನಿವೇಶನಗಳಲ್ಲಿಕಸ ಎಸೆಯುವುದು ಅಥವಾ ಕಸಕ್ಕೆ ಬೆಂಕಿ ಹಚ್ಚುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಘಿಸಿದರೆ ಘನತ್ಯಾಜ್ಯ ನಿರ್ವಹಣೆ ಉಪವಿಧಿಗಳನ್ವಯ ದಂಡ ವಿಧಿಸಲಾಗುವುದು. ತಪ್ಪು ಮರುಕಳಿಸಿದರೆ ಪರಿಸರ ಸಂರಕ್ಷಣಾ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

ಸಾರ್ವಜನಿಕರು ತೋಟಗಾರಿಕೆ ಕಸ, ಹಳೇ ಹಾಸಿಗೆ, ದಿಂಬು, ಚಾಪೆಗಳನ್ನು ಪ್ರತ್ಯೇಕವಾಗಿ ಹಸ್ತಾಂತರಿಸಬೇಕು. 100ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ಆಯೋಜಿಸುವ ಮುನ್ನ ಪಾಲಿಕೆಗೆ ಮಾಹಿತಿ ನೀಡಿ, ಅಗತ್ಯ ಶುಲ್ಕ ಪಾವತಿಸಿ ತ್ಯಾಜ್ಯ ಸಂಗ್ರಹ ವಾಹನಗಳ ಸೇವೆ ಪಡೆಯಬೇಕು. ಕಸದ ಪ್ರಮಾಣ ತಗ್ಗಿಸಲು ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.