ವಿಕ ಸುದ್ದಿಲೋಕ ಹುಬ್ಬಳ್ಳಿ
ರೈತರು ಉತ್ತಮ ಗುಣಮಟ್ಟದ ಮಾವಿನ ಹಣ್ಣು ಬೆಳೆಯುವುದರ ಜತೆಗೆ ಆ ಹಣ್ಣನ್ನು ವಿದೇಶಗಳಿಗೆ ರಫ್ತು ಮಾಡುವತ್ತ ಗಮನ ಹರಿಸಬೇಕು. ಆಗ ಮಾತ್ರ ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ರಾಜ್ಯ ಸರಕಾರ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ತೋಟಗಾರಿಕೆ ಇಲಾಖೆ, ಕೃಷಿ ಮಾರಾಟ ಇಲಾಖೆ, ಜಿಎಸ್ ಫೌಂಡೇಶನ್ ಹಾಗೂ ಜಿಲ್ಲಾಡಳಿತ ಸಹಯೋಗದೊಂದಿಗೆ ಎಪಿಎಂಸಿಯ ವಿವಿಧೋದ್ದೇಶ ವಸ್ತು ಪ್ರದರ್ಶನ ಆವರಣದಲ್ಲಿಮಾರುಕಟ್ಟೆ ಮತ್ತು ಮೌಲ್ಯವರ್ಧನೆ ಎಂಬ ಶೀರ್ಷಿಕೆಯಲ್ಲಿಶನಿವಾರ ಆರಂಭವಾದ ಧಾರವಾಡ ಜಿಲ್ಲಾ ಮಟ್ಟದ ಮಾವು ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿಮಾವು ಮೇಳವನ್ನು ಆಯೋಜಿಸಬೇಕಾಗಿದೆ. ಮೇಳದ ಕುರಿತು ವ್ಯಾಪಕ ಪ್ರಚಾರ ಅಗತ್ಯ. ಧಾರವಾಡ ಜಿಲ್ಲೆಯ ಮಾವುಗಳು ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತವೆ. ಪ್ರತಿ ವರ್ಷ ನಿರ್ದಿಷ್ಟ ತಿಂಗಳಲ್ಲಿಮಾವು ಮೇಳವನ್ನು ಆಯೋಜಿಸಬೇಕು. ಇದರಿಂದ ಜನರಿಗೆ ಮೇಳದ ಕುರಿತು ಮುಂಚಿತವಾಗಿ ತಿಳಿಯಲಿದೆ ಎಂದು ತಿಳಿಸಿದರು.
ಸಸಿ ನೆಡಲು ಮುಂದಾಗಿ
ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಮಾತನಾಡಿ, ದೊಡ್ಡ ದೊಡ್ಡ ಕಟ್ಟಡಗಳು ನಮಗೆ ಆಹಾರ ಒದಗಿಸುವುದಿಲ್ಲ. ಸಸಿಗಳನ್ನು ನೆಡಲು ಜನರು ಮುಂದಾಗಬೇಕಿದೆ. ಭೂಮಿಯ ವಾತಾವರಣದಲ್ಲಿಸಾಕಷ್ಟು ಬದಲಾವಣೆಗಳು ಆಗಿವೆ. ಮೇಳದ ಬಗ್ಗೆ ಹೆಚ್ಚಿನ ಪ್ರಚಾರ ಅವಶ್ಯಕವಾಗಿದೆ ಎಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ ಮಾತನಾಡಿ, ಮಾವು ರಾಷ್ಟ್ರೀಯ ಹಣ್ಣು ಆಗಿದೆ. ರೈತರು ವರ್ಷಪೂರ್ತಿ ಶ್ರಮವಹಿಸಿ ಮಾವು ಬೆಳೆಯುತ್ತಾರೆ. ಆದರೆ ರೈತರಿಗೆ ಮಧ್ಯವರ್ತಿಗಳ ಹಾವಳಿಯಿಂದ ಮೋಸವಾಗುತ್ತದೆ. ದೇಶದಲ್ಲಿಸಾವಿರಕ್ಕೂ ಅಧಿಕ ಮಾವಿನ ತಳಿಗಳಿವೆ. ಉತ್ತಮ ಬೆಳೆಗೆ ಉತ್ತಮ ಬೆಲೆ ದೊರೆಯಬೇಕು. ಜಿಲ್ಲೆಯ ಮಾವು ಬೇರೆ ದೇಶಗಳಿಗೂ ರಫ್ತಾಗಬೇಕು ಎಂದು ಹೇಳಿದರು.
ಜಿಎಸ್ ಗ್ಲೋಬಲ್ ನ ಜಿಷಾನ್ ಸಿರಸಂಗೆ ಮಾತನಾಡಿ, ಹುಬ್ಬಳ್ಳಿ ಧಾರವಾಡದಲ್ಲಿಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಜಾಗತಿಕವಾಗಿ 30 ಲಕ್ಷ ಸಸಿ ನೆಡುವ ಸಂಕಲ್ಪ ಮಾಡಲಾಗಿದೆ. 14 ಜಿಲ್ಲೆಗಳಲ್ಲಿ1.60 ಲಕ್ಷ ಹುದ್ದೆ ಸೃಷ್ಟಿಸುವ ಗುರಿ ಹೊಂದಿದ್ದೇವೆ. ರೈತರನ್ನು ಬೆಂಬಲಿಸೋಣ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಕೆ.ಎಚ್ .ಗುರುಪ್ರಸಾದ, ಕೃಷಿ ಮಾರಾಟ ತರಬೇತಿ ಮಹಾವಿದ್ಯಾಲಯದ ಪ್ರಾಚಾರ್ಯ ಆಶಿಕ್ ಅಲಿ ಡಿ.ಎಂ. ಅವರು ಮಾತನಾಡಿದರು.
ವಿವಿಧ ರೈತರು ಮೇಳದಲ್ಲಿಭಾಗವಹಿಸಿ ಮಾವು ಮಾರಾಟ ಮಾಡಿದರು. ಮೋಹನ ಹೊಸಮನಿ, ಚನ್ನು ಹೊಸಮನಿ, ಮಲ್ಲಿಕಾರ್ಜುನ ಗುಂಡೂರ, ನಿವೃತ್ತ ಪ್ರಾಧ್ಯಾಪಕರಾದ ಬಿ.ಬಿ.ಪಾಟೀಲ, ಚಿದಾನಂದ ಮನಸೂರ ಸೇರಿದಂತೆ ಖರೀದಿದಾರರು, ರಫ್ತುದಾರರು, ಸಾರ್ವಜನಿಕರು ಇತರರು ಇದ್ದರು.
ಫೋಟೋ: 23 ಸಂತೋಷ ಮಾವು ಮೇಳ
ಹುಬ್ಬಳ್ಳಿಯ ಎಪಿಎಂಸಿಯ ವಿವಿಧೋದ್ದೇಶ ವಸ್ತು ಪ್ರದರ್ಶನ ಆವರಣದಲ್ಲಿಶುಕ್ರವಾರ ಆರಂಭವಾದ ಧಾರವಾಡ ಜಿಲ್ಲಾ ಮಟ್ಟದ ಮಾವು ಮೇಳವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು.
ಫೋಟೋ: 23 ಸಂತೋಷ ಮಾವು ಮೇಳ
ಮಾವು ಮೇಳದಲ್ಲಿಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾದ ಮಾವಿನ ಹಣ್ಣನ್ನು ಶಾಸಕ ಮಹೇಶ ಟೆಂಗಿನಕಾಯಿ ವೀಕ್ಷಿಸಿದರು. ಕೆಸಿಸಿಐ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ ಸೇರಿ ಹಲವರು ಹಾಜರಿದ್ದರು.

