ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ ಕೇಂದ್ರಗಳು ಮೂಲಸೌಕರ್ಯದಲ್ಲಿಮುಂಚೂಣಿಯಲ್ಲಿದ್ದರೂ, ಹಲವು ಸವಾಲು, ಸಮಸ್ಯೆಗಳನ್ನು ಎದುರಿಸುತ್ತಿವೆ. ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆ ಇದ್ದರೂ, ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಹಾಗೂ ನಿಯಮಿತ ನಿರ್ವಹಣೆ ಅಗತ್ಯವಿದೆ. ಕೆಲವು ಅಂಗನವಾಡಿ ಕೇಂದ್ರಗಳಿಗೆ ಹೊಸ ಕಟ್ಟಡ ಮಂಜೂರಾಗಿದ್ದು, ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.2 ವರ್ಷಗಳಿಂದ ಮನೆ ಮನೆ ಸುತ್ತುತ್ತಿದೆ ಇದ್ಪಾಡಿ ಅಂಗನವಾಡಿ: ಪುತ್ತೂರು ತಾಲೂಕಿನಲ್ಲಿ375ರಷ್ಟು ಅಂಗನವಾಡಿ ಕೇಂದ್ರಗಳಿವೆ. ಎಲ್ಲೂಇಲ್ಲದ ಗಂಭೀರ ಸಮಸ್ಯೆ ಕೆದಂಬಾಡಿ ಗ್ರಾಮದ ಇದ್ಪಾಡಿ ಅಂಗನವಾಡಿಯಲ್ಲಿದೆ. ಇಲ್ಲಿಎರಡು ವರ್ಷಗಳಿಂದ ನೂತನ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿನಡೆಯುತ್ತಿದೆ. ಇದ್ದ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿದ ಕಾರಣ ಅಂಗನವಾಡಿ ನಡೆಸಲು ಕಟ್ಟಡವಿಲ್ಲದೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮನೆ ಮನೆ ಸುತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿದ್ದ ಅಂಗನವಾಡಿ ಕಟ್ಟಡದ ಗೋಡೆ ಬಿರುಕು ಬಿಟ್ಟ ಕಾರಣ ಹೊಸ ಕಟ್ಟಡಕ್ಕೆ ಹಣ ಮಂಜೂರಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ 2 ವರ್ಷಗಳಾಗುತ್ತಿದೆ. ಈ ಎರಡು ವರ್ಷಗಳಲ್ಲಿಇಲ್ಲಿರುವ 13 ಮಕ್ಕಳನ್ನು ಕಟ್ಟಿಕೊಂಡು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮನೆ ಮನೆ ಸುತ್ತುವಂತಾಗಿದೆ. ಈಗಾಗಲೇ ಒಟ್ಟು 3 ಮನೆಗಳಲ್ಲಿಕಾರ್ಯನಿರ್ವಹಿಸಲಾಗಿದೆ. ಇಲ್ಲಿಮಕ್ಕಳಿಗಾಗಿ ಅಡುಗೆ ಬೇಯಿಸಲು ಸಾಧ್ಯವಾಗದ ಕಾರಣ ಆಹಾರ ಸಾಮಗ್ರಿಗಳನ್ನು ಅವರವರ ಮನೆಗೆ ತಲುಪಿಸಲಾಗುತ್ತಿದೆ.
ಸುಳ್ಯದ ಇರುವಂಬಳ್ಳದಲ್ಲಿಖಾಸಗಿ ಕಟ್ಟಡವೇ ಗತಿ: ಸುಳ್ಯ ತಾಲೂಕಿನಲ್ಲಿ169 ಅಂಗನವಾಡಿ ಕೇಂದ್ರಗಳಿದ್ದು ಎಲ್ಲಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. ಮಂಡೆಕೋಲು ಗ್ರಾಮದ ಇರುವಂಬಳ್ಳ ಮತ್ತು ಅಜ್ಜಾವರದ ಕರಿಯಮೂಲೆ ಅಂಗನವಾಡಿ ಕೇಂದ್ರಗಳ ಕಾಮಗಾರಿ ಅರ್ಧದಲ್ಲಿದ್ದು ಗ್ರಾಮ ಪಂಚಾಯಿತಿ ಮತ್ತು ಖಾಸಗಿ ಕಟ್ಟಡದಲ್ಲಿಅಂಗನವಾಡಿ ಕಾರಾರ ಯಚರಿಸುತ್ತಿವೆ. ಇರುವಂಬಳ್ಳ ಅಂಗನವಾಡಿ ಕೇಂದ್ರದಲ್ಲಿ30 ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಸುಸಜ್ಜಿತ ಕಟ್ಟಡ ಇಲ್ಲದೆ ಖಾಸಗಿ ಕಟ್ಟಡದಲ್ಲಿಕಳೆಯುವಂತಾಗಿದೆ.
ಮಳೆಗಾಲದಲ್ಲಿಈ ಅಂಗನವಾಡಿ ಕೇಂದ್ರದ ಮಕ್ಕಳು ಸುತ್ತಮುತ್ತ ಇರುವ ಮರಗಳಿಂದಾಗಿ ಭಯದಿಂದಲೇ ದಿನ ದೂಡುತ್ತಿದ್ದಾರೆ. ಇದೀಗ ಸರಕಾರದಿಂದ ಹಣ ಬಿಡುಗಡೆಗೊಂಡಿದ್ದು ವರ್ಷದೊಳಗೆ ಹೊಸ ಅಂಗನವಾಡಿ ಕಟ್ಟಡ ಮಕ್ಕಳಿಗೆ ಸಿಗಲಿದೆ. ತಾಲೂಕಿನ 12 ಅಂಗನವಾಡಿ ಕಟ್ಟಡಕ್ಕೆ 30 ವರ್ಷವಾಗಿದ್ದು, ಹೊಸ ಕಟ್ಟಡದ ಬೇಡಿಕೆಯಿದೆ. 13 ಅಂಗನವಾಡಿಗಳನ್ನು ದುರಸ್ತಿ ಮಾಡಲಾಗಿದೆ.
ಇದ್ದ ಕಟ್ಟಡ ಕೆಡವಿದ ಬಳಿಕ...: ಬಂಟ್ವಾಳ ತಾಲೂಕಿನಲ್ಲಿ567 ಅಂಗನವಾಡಿ ಕೇಂದ್ರಗಳಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಅಂಗನವಾಡಿ ಕೇಂದ್ರಗಳಿರುವ ತಾಲೂಕುಗಳ ಪೈಕಿ ಅಗ್ರಸ್ಥಾನದಲ್ಲಿದೆ. ಆದರೆ ಸಿಡಿಪಿಒ ಕಚೇರಿ ಪಕ್ಕದಲ್ಲೇ ಇರುವ ಕೈಕುಂಜ ಅಂಗನವಾಡಿ ಕೇಂದ್ರ ಕಳೆದೊಂದು ವರ್ಷದಿಂದ ಸ್ವಂತ ಕಟ್ಟಡವಿಲ್ಲದೆ ಸಮಸ್ಯೆ ಎದುರಿಸುತ್ತಿದೆ. ಕಟ್ಟಡ ಮರು ನಿರ್ಮಾಣಕ್ಕೆಂದು ಇದ್ದ ಕಟ್ಟಡ ಕೆಡವಲಾಗಿದೆ. ಇದುವರೆಗೂ ಕೆಲಸ ಪೂರ್ತಿಯಾಗಿಲ್ಲ. ಹೀಗಾಗಿ ಈ ಅಂಗನವಾಡಿ ಕೇಂದ್ರ ಬೇರೆ ಕಟ್ಟಡವನ್ನು ಆಶ್ರಯಿಸಿದೆ.
ನೆಟ್ ಆವರಣವೇ ಈ ಕೇಂದ್ರಕ್ಕೆ ಶ್ರೀರಕ್ಷೆ: ಕಡಬ ಪೇಟೆಯ ರೈತ ಸಂಪರ್ಕ ಕೇಂದ್ರದ ಬಳಿಯಿರುವ ಕಡಬ ಚರ್ಚ್ ಅಂಗನವಾಡಿ ಕೇಂದ್ರಕ್ಕೆ ಆವರಣ ಗೋಡೆಯೇ ಇಲ್ಲ. ಶಾಡೋನೆಟ್ ಕಟ್ಟಿ ಆವರಣಗೋಡೆ ರಚಿಸಲಾಗಿದೆ. ಪಕ್ಕದ ಖಾಸಗಿ ಶಾಲೆ ಆವರಣ ಗೋಡೆ ಹತ್ತಿರದಲ್ಲಿದ್ದರೂ ಪೂರ್ತಿ ಆವರಿಸಿಲ್ಲ. ಆವರಣ ಗೋಡೆ ನಿರ್ಮಾಣಕ್ಕೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಕಡಬ ತಾಲೂಕಿನಲ್ಲಿ158 ಅಂಗವಾಡಿ ಕೇಂದ್ರಗಳಿದ್ದು, ಕುಟ್ರುಪ್ಪಾಡಿ ಗ್ರಾಮದ ಬಲ್ಯ ಪಟ್ಟೆ ಅಂಗನವಾಡಿ ಕೇಂದ್ರ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಬಲ್ಯ ಗ್ರಾಮದ ಕುರುಬರಕೇರಿ ಅಂಗನವಾಡಿ ಕೇಂದ್ರ, ಪೆರಾಬೆ, ಬುಡೇರಿಯಾ, ಬಲ್ಯ ಶಾಲಾ ಆವರಣದ ಅಂಗನವಾಡಿಗಳಿಗೆ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮರ್ದಾಳ, ಸಾಲೆತ್ತಡ್ಕ, ಕಾಯರ್ತಡ್ಕ ಸೇರಿದಂತೆ 50ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ನೂತನ ಕಟ್ಟಡದ ಅಗತ್ಯವಿದೆ.
12 ವರ್ಷಗಳಿಂದ ಬೀಗಮುದ್ರೆ: ಬೆಳ್ತಂಗಡಿ ತಾಲೂಕಿನಲ್ಲಿ326 ಅಂಗನವಾಡಿ ಕೇಂದ್ರಗಳಿವೆ. ಮುಂಡಾಜೆಯ ಅರೆಕಲ್ಲುಕೇಂದ್ರಕ್ಕೆ 12 ವರ್ಷ ಹಿಂದೆ ಬೀಗ ಬಿದ್ದಿದೆ. ಇಲ್ಲಿಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿಲ್ಲ. ಇಲ್ಲಿನ ಮಕ್ಕಳನ್ನು 4 ಕಿ.ಮೀ. ದೂರದ ಕೊಂಬಿನಡ್ಕ ಹಾಗೂ 5 ಕಿ.ಮೀ. ದೂರದ ಚಾಮುಂಡಿನಗರಕ್ಕೆ ಸ್ಥಳಾಂತರಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಅರೆಕಲ್ಲುಪ್ರದೇಶದ ಮಕ್ಕಳು ಅಂಗನವಾಡಿಗೆ ಸುತ್ತಿ ಬಳಸಿ ಹೋಗಬೇಕಾಗಿದೆ. ಅರೆಕಲ್ಲುಅಂಗನವಾಡಿ ಕಟ್ಟಡ ಶಿಥಿಲಗೊಂಡಿದೆ. ಅಂಗನವಾಡಿಯ ಬಾಗಿಲು, ಕಿಟಕಿ ಚಾವಣಿಯ ಭಾಗಗಳು ನೇತಾಡುತ್ತಿವೆ. ಈ ಅಂಗನವಾಡಿ ಕಟ್ಟಡದ ಪರಿಸ್ಥಿತಿ ಅಪಾಯಕಾರಿಯಾಗಿದೆ.