ವಿಕ ಸುದ್ದಿಲೋಕ ಕೃಷ್ಣರಾಜನಗರ ಮಕ್ಕಳಲ್ಲಿಕನ್ನಡ ಭಾಷಾಭಿಮಾನ ಮತ್ತು ಗೌರವವನ್ನು ಬೆಳೆಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕನ್ನಡ ಭಾಷೆ , ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಕನ್ನಡದ ಅಸ್ಮಿತೆಯನ್ನು ಉಳಿಸಿ, ಬೆಳೆಸಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಕೃಷ್ಣರಾಜನಗರ ಮತ್ತು ಸಾಲಿಗ್ರಾಮ ತಾಲೂಕು ಇವರ ಸಂಯುಕ್ತಾಶ್ರಯದಲ್ಲಿಪಟ್ಟಣದ ಬಯಲು ರಂಗಮಂದಿರದಲ್ಲಿನಡೆದ ಕನ್ನಡ ರಾಜ್ಯೋತ್ಸವ - 2026 ಕಾರ್ಯಕ್ರಮದಲ್ಲಿಮಾತನಾಡಿದರು. ‘‘ಇಂದಿನ ತಂತ್ರಜ್ಞಾನ ಯುಗದಲ್ಲಿತಾಂತ್ರಿಕವಾಗಿಯು ಕನ್ನಡವನ್ನು ಬಳಸುವ ಮೂಲಕ ಕನ್ನಡದ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕಿದೆ. ಈ ಮೂಲಕ ನಮ್ಮ ಭಾಷೆ, ಸಂಸ್ಕ್ಕೃತಿ ನಮ್ಮ ಮುಂದಿನ ಪೀಳಿಗೆಯಲ್ಲಿಯೂ ಉಳಿದು ಬೆಳೆಯಬೇಕಿದೆ,’’ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿಂಡಿಮ ಶಂಕರ ಮಾತನಾಡಿ,‘‘ಕನ್ನಡದ ಶ್ರೀಮಂತಿಕೆಗೆ ಮೊದಲ ಸಾಕ್ಷಿ ಅದರ ಲಿಪಿ ಮತ್ತು ಪ್ರಾಚೀನ ಶಾಸನಗಳಲ್ಲಿಅಡಗಿರುವುದನ್ನು ನೋಡಬಹುದು. ಈ ಪುಣ್ಯಭೂಮಿ ಕೇವಲ ಮಣ್ಣಿನ ನೆಲವಲ್ಲ,ಅನೇಕ ರಾಜ ಮಹಾರಾಜರ ಕಲಾ ಸಾಹಿತ್ಯ ವೈಭವ, ಸುವರ್ಣ ಯುಗಕ್ಕೆ ಸಾಕ್ಷಿಯಾಗಿದೆ,’’ಎಂದರು. ‘‘ಕರ್ನಾಟಕ ರಾಜ್ಯೋತ್ಸವ ಎಂಬುದು ಕೇವಲ ಸಾಂಪ್ರದಾಯಿಕ ಆಚರಣೆ ಅಲ್ಲ. ಪ್ರತಿ ಕನ್ನಡಿಗನ ಅಸ್ಮಿತೆಯ ಸಂಕೇತ, ಪ್ರಜ್ವಲ ರೂಪ, ಆತ್ಮ ಗೌರವದ ವೈಭವವಾಗಿದೆ,’’ ಎಂದರು. ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿ ಜನತೆಗೆ ಸಂದೇಶ ನೀಡಿದರು. ವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಲೋಕೇಶ್ (ಶಿಕ್ಷಣ ಮತ್ತು ಸಮಾಜ ಸೇವೆ), ರೇವಣ್ಣ (ಯೋಗ), ಡಾ.ಎ.ಸಿ. ಸುರೇಶ (ಪಶುವೈದ್ಯಕೀಯ ಸೇವೆ), ಕಾಮಾಕ್ಷಿ ನಾಗೇಂದ್ರ (ಜಾನಪದ), ರಘು (ಕಲಾವಿದ), ರವಿ (ಸಮಾಜಸೇವಕ), ರಚನಾ ಗೌಡ (ವಿದ್ಯಾರ್ಥಿನಿ), ವೇದಾಂತ್ ಎನ್ ಭಾರದ್ವಾಜ್ (ಕ್ರೀಡೆ)ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಕೃಷ್ಣರಾಜೇಂದ್ರ ಪದವಿ ಪೂರ್ವ ಕಾಲೇಜಿನಿಂದ ಭುವನೇಶ್ವರಿ ದೇವಿ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು ಅಲಂಕರಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿಪೂಜಾ ಕುಣಿತ, ವೀರಗಾಸೆ ಕುಣಿತ, ಸ್ತಬ್ಧ ಚಿತ್ರಗಳೊಂದಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪಥಸಂಚಲನದೊಂದಿಗೆ ಮೆರವಣಿಗೆ ನಡೆಸಲಾಯಿತು.ಹುಣಸೂರಿನ ಹಿರಿಯ ಶ್ರೇಣಿ ಆಡಳಿತಾಧಿಕಾರಿ ಶೇಖರ್ ,ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿ.ಪಿ.ಕುಲದೀಪ್ , ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ .ಆರ್ , ಸಾಲಿಗ್ರಾಮ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್ .ಕೆ. ಮಧುಚಂದ್ರ, ಶಿಶು ಅಭಿವೃದ್ಧಿ ಮತ್ತು ಯೋಜನಾಧಿಕಾರಿ ಅಣ್ಣಯ್ಯ, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಮಹೇಶ್ , ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ತಿಮ್ಮ ಶೆಟ್ಟಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಇ. ಉಮೇಶ್ , ಕಾಂಗ್ರೆಸ್ ಮುಖಂಡ ರಾಮಚಂದ್ರ ಇದ್ದರು.