ಅಳದಂಗಡಿಯಲ್ಲಿಪೂಕರೆ ಕಂಬಳ

Contributed by: aravindahebbar1971@gmail.com|Vijaya Karnataka•
Vijay Karnataka
ವಿಕ ಸುದ್ದಿಲೋಕ ಬೆಳ್ತಂಗಡಿ

ಅಳದಂಗಡಿ ಅರಮನೆಯ ಅಜಿಲ ಸೀಮೆಗೆ ಒಳಪಟ್ಟ ಅರ್ಕಿಜೆ ಪೂಕರೆ ಕಂಬಳವು ವಿಶಿಷ್ಟ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯೊಂದಿಗೆ ಅದ್ಧೂರಿಯಾಗಿ ನಡೆಯಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ ಮಾರ್ಗದರ್ಶನದಲ್ಲಿ ಪೂಕರೆ ಕಂಬಳ ನಡೆಯಿತು.

ತಲೆಮಾರುಗಳಿಂದ ಬಂದ ಸಂಪ್ರದಾಯವನ್ನು ಯಾವುದೇ ಆಧುನಿಕತೆಯ ಪ್ರಭಾವಕ್ಕೆ ಒಳಪಡಿಸದೆ ಇಂದಿಗೂ ಅರಮನೆಯ ಆಶ್ರಯದಲ್ಲಿಯಥಾವತ್ತಾಗಿ ಮುಂದುವರಿಸಿಕೊಂಡು ಬರುತ್ತಿರುವುದು ಈ ಕಂಬಳದ ವಿಶೇಷತೆ. ಅರಮನೆಯ ಚಾವಡಿ ನಾಯ್ಕರು, ಸಂಬಂಧಿಸಿದವರು, ಸೀಮೆಯ ಗುರಿಕಾರರ ಉಪಸ್ಥಿತಿಯಲ್ಲಿಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಕರೆ ಕಂಬಳ ನಡೆಯಿತು. ಈ ಕಂಬಳದಲ್ಲಿಅರಸರು ಸ್ವತಃ ಭಾಗವಹಿಸುವುದಿಲ್ಲಎಂಬುದು ಇಲ್ಲಿನ ಸಂಪ್ರದಾಯದ ವಿಶೇಷ. ಸೀಮೆಯ ಗುರಿಕಾರರು ಸಂಪ್ರದಾಯಬದ್ಧವಾಗಿ ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು. ಬಳಿಕ ಕೋಣಗಳನ್ನು ಕಂಬಳದ ಗದ್ದೆಯಲ್ಲಿಓಡಿಸಲಾಯಿತು. ಆಧುನಿಕ ಕಂಬಳಗಳಂತೆ ಸ್ಪರ್ಧೆ ಹಾಗೂ ವೇಗಕ್ಕೆ ಇಲ್ಲಿಆದ್ಯತೆ ನೀಡದೆ, ಪಾರಂಪರಿಕ ಆಚರಣೆ ಮತ್ತು ಧಾರ್ಮಿಕ ವಿಧಿವಿಧಾನಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.

ಪೂಕರೆ ಕಂಬಳದ ಅಂಗವಾಗಿ ಅಂಗಾರ ಕಲ್ಕುಡ ಹಾಗೂ ಬಿರ್ಮೆರೆ ನೇಮ ನಡೆಯಿತು. ನೇಮದ ಬಳಿಕ ವಿಶ್ವಕರ್ಮ ಸಮಾಜದವರು ಮರದಿಂದ ವಿಶೇಷವಾಗಿ ನಿರ್ಮಿಸಿದ ಪೂಕರೆಯನ್ನು ಇಳಿಸಲಾಯಿತು. ನಂತರ ಬಿಲ್ಲವ ಸಮಾಜದ ಗುರಿಕಾರರು ಸಂಪ್ರದಾಯದಂತೆ ಪೂಕರೆ ಎಳೆದರು. ಪೂಕರೆ ಎಳೆದ ಬಳಿಕ ಬಂಡಾರಿ ಸಮಾಜದವರು ಪೂಕರೆಯ ಮೇಲೆ ಹಾಲು ಎರೆಯುವ ವಿಶಿಷ್ಟ ಆಚರಣೆ ನಡೆಯಿತು.

ಹೀಗೆ ನಾನಾ ಸಮುದಾಯಗಳ ಪಾಲ್ಗೊಳ್ಳುವಿಕೆ, ಧಾರ್ಮಿಕ ನಂಬಿಕೆ, ಪರಂಪರೆಯ ವಿಧಿ ವಿಧಾನಗಳ ಮೂಲಕ ಅರ್ಕಿಜೆ ಪೂಕರೆ ಕಂಬಳವು ಸಾಮರಸ್ಯದ ಸಂದೇಶ ಸಾರಿತು. ಈ ಅಪರೂಪದ ಕಂಬಳವನ್ನು ಕಣ್ತುಂಬಿಕೊಳ್ಳಲು ಸ್ಥಳೀಯರು ಮಾತ್ರವಲ್ಲದೆ, ಸುತ್ತಮುತ್ತಲಿನ ಊರುಗಳಿಂದಲೂ ನೂರಾರು ಮಂದಿ ಆಗಮಿಸಿದ್ದರು.

17ಎಂಜೆ ಪೂಕರೆ.

ಚಿತ್ರ ವಿವರ-

ಅಳದಂಗಡಿ ಅರಮನೆಯ ಅಜಿಲ ಸೀಮೆಗೆ ಒಳಪಟ್ಟ ಅರ್ಕಿಜೆ ಪೂಕರೆ ಕಂಬಳ ನಡೆಯಿತು.