ವಿಕ ಸುದ್ದಿಲೋಕ ಮೂಡುಬಿದಿರೆಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ ಹಾಗೂ ವಿವಿಧ ರಾಜ್ಯಗಳ ಕಲಾಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿಅನಾವರಣಗೊಳಿಸುವ ಮೂಲಕ ಸೋಮವಾರ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೀಪಾವಳಿ ಸಂಭ್ರಮ ಗಮನ ಸೆಳೆಯಿತು.
ಕಾರ್ಯಕ್ರಮದ ಆರಂಭದಲ್ಲಿಮಂಗಳೂರಿನ ಶ್ರೀ ಮೂಕಾಂಬಿಕಾ ಚೆಂಡೆ ಬಳಗದ ಚೆಂಡೆ, ವಯೋಲಿನ್ ಹಾಗೂ ಕೀಬೋರ್ಡ್ ಗಳ ಸಮ್ಮಿಲನದೊಂದಿಗೆ ಮೂಡಿಬಂದ ಸಿಂಗಾರಿ ಮೇಳ ವಿಶೇಷ ಮೆರುಗು ನೀಡಿತು.
ದಕ್ಷಿಣ ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಬಿಂಬಿಸುವ ದಶಶಂಖಗಳು, ದಶಕೊಂಬುಗಳು, 30 ಶ್ವೇತ ಛತ್ರಗಳು, ವೇದಮಂತ್ರಗಳನ್ನು ಪಠಿಸುವ ವಿಪ್ರರ ತಂಡ ಹಾಗೂ ಪ್ರಣತಿ ಹಿಡಿದ 50 ದೇವಕನ್ನಿಕೆಯರ ಭವ್ಯ ಮೆರವಣಿಗೆ ನಡೆಯಿತು. ಸ್ಯಾಕ್ಸೋಫೋನ್ ಮತ್ತು ನಾಗಸ್ವರಗಳ ಮಂಗಳನಾದದ ನಡುವೆ ಭತ್ತದ ತೆನೆ, ಮಾವು, ಹಲಸು, ಕೆಸು ಹಾಗೂ ಬಿದಿರಿನ ಕದಿರುಗಳನ್ನು ಹಿಡಿದ 500 ಪುಟಾಣಿಗಳು ಮೆರವಣಿಗೆಯಲ್ಲಿಪಾಲ್ಗೊಂಡು ಸಂಭ್ರಮ ಹೆಚ್ಚಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ವಿವಿಧ ಮಠಗಳ ಸ್ವಾಮೀಜಿಗಳು, ಕಟೀಲು ಹರಿನಾರಾಯಣ ಆಸ್ರಣ್ಣರು, ಕೆ. ಶ್ರೀಪತಿ ಭಟ್ , ಶಶಿಧರ ಶೆಟ್ಟಿ ಬರೋಡಾ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ , ಮೀನಾಕ್ಷಿ ಆಳ್ವ, ವಿವೇಕ್ ಆಳ್ವ, ಡಾ. ವಿನಯ ಆಳ್ವ ಸೇರಿದಂತೆ ಗಣ್ಯರು ಮೆರವಣಿಗೆಯಲ್ಲಿಭಾಗವಹಿಸಿದರು.
ಸಂಪ್ರದಾಯದಂತೆ ಬಲೀಂದ್ರ ಪೂಜೆ, ಗೋಪೂಜೆ ತುಳುನಾಡಿನ ದೀಪಾವಳಿಯ ಪ್ರಮುಖ ಆಚರಣೆಯಾದ ಬಲೀಂದ್ರ ಪೂಜೆಯನ್ನು ಡಾ. ಎಂ. ಮೋಹನ್ ಆಳ್ವರು ಕುಟುಂಬ ಸಮೇತರಾಗಿ ನೆರವೇರಿಸಿದರು. ಬಲಿ ಮಹಾರಾಜನನ್ನು ಸಂಪ್ರದಾಯದಂತೆ ಭೂಲೋಕಕ್ಕೆ ಆಹ್ವಾನಿಸುವ ಆಚರಣೆಯನ್ನು ಕದ್ರಿ ನವನೀತ್ ಶೆಟ್ಟಿ ನಡೆಸಿಕೊಟ್ಟರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಗುರು ರಾಮಾಂಜನೇಯ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮಠದ ಮೋಹನದಾಸ ಪರಮಹಂಸ ಸ್ವಾಮೀಜಿ, ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ಕಟೀಲು ಹರಿನಾರಾಯಣ ಆಸ್ರಣ್ಣ ಹಾಗೂ ಪುತ್ತಿಗೆ ಮಠದ ದೇವಸ್ಥಾನದ ಪ್ರಧಾನ ಅರ್ಚಕ ಯೋಗೀಂದ್ರ ಭಟ್ ಉಪಸ್ಥಿತರಿದ್ದರು.
ಆಳ್ವಾಸ್ ದೀಪಾವಳಿ ಸಂದೇಶ ನೀಡಿದ ಪ್ರೊ.ಪವನ ಕಿರಣಕೆರೆ, ಜೀವಿಗಳಲ್ಲಿಅವಿರತವಾದ ಶಕ್ತಿಯನ್ನು ಕಲ್ಪಿಸುವ ನರಮಂಡಲಗಳಿರುತ್ತವೆ. ಆ ಶಕ್ತಿಯೇ ನಮ್ಮಲ್ಲಿನ ಜ್ಞಾನದ ದೀಪ. ನಮ್ಮೊಳಗಿನ ಅಜ್ಞಾನವನ್ನು ಕತ್ತಲೆಯಂತೆ ದೂರ ಮಾಡುವ ಹಬ್ಬವೇ ದೀಪಾವಳಿ. ಒಳಿತಿನೆಡೆಗೆ ನಮ್ಮನ್ನು ಸಾಗಿಸುವ ಈ ಸಾಂಪ್ರದಾಯಿಕ ಹಬ್ಬವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಜಾಗತಿಕ ಮಟ್ಟದಲ್ಲಿಆಚರಿಸುತ್ತಾ ಬಂದಿದೆ ಎಂದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಹಾಗೂ ನಿತೀಶ್ ಮಾರ್ನಾಡ್ ಕಾರ ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಆಳ್ವಾಸ್ ಸಾಂಸ್ಕೃತಿಕ ರಸವೈಭವದಲ್ಲಿಸಂಸ್ಥೆಯ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ದೇಶದ ನಾನಾ ರಾಜ್ಯಗಳ ಜನಪದ ಮತ್ತು ಶಾಸ್ತ್ರೀಯ ಹಾಗೂ ಸಮಕಾಲೀನ ಕಲಾಪ್ರಕಾರಗಳೊಂದಿಗೆ ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.