ವಿಕ ಸುದ್ದಿಲೋಕ ಪಿರಿಯಾಪಟ್ಟಣ ಕನ್ನಡಿಗರು ಯಾವುದೇ ಭಾಷೆ ಕಲಿತರು ಕನ್ನಡ ಭಾಷೆ ಮರೆಯಬಾರದು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್ ತಿಳಿಸಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.‘‘ಕನ್ನಡ ಭಾಷೆಯು ಪ್ರಾಚೀನ ಮತ್ತು ಸವಿಯಾದ ಭಾಷೆಯಾಗಿದೆ. ಪಂಪ, ಜನ್ನ, ರನ್ನ, ಕುವೆಂಪು,ದ.ರಾ. ಬೇಂದ್ರೆ ಸೇರಿದಂತೆ ಅನೇಕ ಮಹನೀಯರು ತಮ್ಮ ಸಾಹಿತ್ಯದ ಮೂಲಕ ಕನ್ನಡ ನಾಡು ಕಟ್ಟುವ ಕೆಲಸ ಮಾಡಿದ್ದಾರೆ. ಇವರ ಪರಿಶ್ರಮದಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಆದ್ದರಿಂದ ನಾವುಗಳು ಯಾವುದೇ ಭಾಷೆ ಕಲಿತರು ಕನ್ನಡ ಭಾಷೆ ಮರೆಯಬಾರದು,’’ ಎಂದರು. ಉಪನ್ಯಾಸಕ ಎಸ್ .ಕೆ.ಮಂಜು ಮಾತನಾಡಿ,‘‘ಸ್ವಾತಂತ್ರ ಪೂರ್ವದಲ್ಲಿಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು ಕನ್ನಡ ಭಾಷೆ ಮೂಲಕ ಕರ್ನಾಟಕ ಏಕೀಕರಣ ಚಳುವಳಿ ಒಗ್ಗೂಡಿಸುವ ಕೆಲಸ ಮಾಡಿತು.ಅಂದಿನ ಮುಖ್ಯ ಮಂತ್ರಿಯಾಗಿದ್ದ ಡಿ.ದೇವರಾಜ್ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿದರು. ಆದ್ದರಿಂದ ಕನ್ನಡವೆಂದರೆ ನಮ್ಮೆಲ್ಲರ ಅಸ್ಮಿತೆಯಾಗಿದೆ. ಸ್ವಾಭಿಮಾನದ ಸಂಕೇತವಾಗಿದೆ,’’ಎಂದರು. ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ,‘‘ಪಟ್ಟಣದಲ್ಲಿಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ಹಲವು ವರ್ಷಗಳ ನಂತರ ನನ್ನ ಅವಧಿಯಲ್ಲಿಸರಕಾರ ಸ್ಥಳವಾಕಾಶ ನೀಡಿದೆ. ಸುಸ್ಸಜಿತ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ವೆಂಕಟೇಶ್ ಅವರು ಅನುದಾನ ಮಂಜೂರು ಮಾಡಿಸಿಕೊಡಬೇಕು,’’ಎಂದು ಮನವಿ ಮಾಡಿದರು. ತಹಸೀಲ್ದಾರ್ ಅವರು ಧ್ವಜಾರೋಹಣ ನೆರವೇರಿಸಿದರು.ಎಂಡಿಸಿಸಿ ಜಿಲ್ಲಾ ನಿರ್ದೇಶಕ ಈಚೂರು ಲೋಕೇಶ್ , ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ,ಪುರಸಭೆ ಮಾಜಿ ಸದಸ್ಯ ರವಿ, ರಾಜೇಶ್ , ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಗೌಡ ಹೊಸಳ್ಳಿ, ಬಿಇಒ ರವಿ ಪ್ರಸನ್ನ, ಎಇಇ ಯೋಗಾನಂದ ಇದ್ದರು.