ಎರಡು ವಾರದಿಂದ ನಗರಸಭೆ ನೀರು ಪೂರೈಕೆ ಸ್ಥಗಿತ | ಸಾರ್ವಜನಿಕರಿಂದ ತೀವ್ರ ಆಕ್ರೋಶ
ಹನಿ ನೀರೂ ಕಾಣದ ಇಂಡಿವಿಕ ವಿಶೇಷ ಇಂಡಿ
ನಗರದಲ್ಲಿಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕಳೆದ ಎರಡು ವಾರಗಳಿಂದ ಬಹುತೇಕ ವಾರ್ಡ್ ಗಳಲ್ಲಿಹನಿ ನೀರು ಕೂಡ ಪೂರೈಕೆಯಾಗುತ್ತಿಲ್ಲ. ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದ ವರ್ತನೆಗೆ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಇಂಡಿ ತಾಲೂಕಿನಲ್ಲಿಈ ಬಾರಿ ಭೀಕರ ಬರ ಆವರಿಸಿ ರೈತರು ತೊಂದರೆಗೆ ಸಿಲುಕಿದ್ದಾರೆ. ಏತನ್ಮಧ್ಯೆ ನಗರಕ್ಕೆ ಕುಡಿವ ನೀರು ಕೂಡ ಪೂರೈಕೆಯಾಗದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬರ ಆವರಿಸಿದ್ದರಿಂದ ಈ ಬಾರಿ ಮಳೆಯಾಗಿಲ್ಲ. ಇದರಿಂದ ನದಿಗಳೂ ಒಣಗಿವೆ. ಆದರೆ ನೀರಿನ ಲಭ್ಯತೆ ಅರಿತು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿದ್ದ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಪೂರ್ಣವಾಗಿ ಕೈಚೆಲ್ಲಿಕುಳಿತಿದ್ದಾರೆ. ತಮಗಾಗುತ್ತಿರುವ ನೀರಿನ ತೊಂದರೆಯನ್ನು ಹೇಳಿಕೊಳ್ಳಲು ಕರೆ ಮಾಡಿದರೆ ಯಾವುದೇ ಅಧಿಕಾರಿಗಳು ಫೋನ್ ಸ್ವೀಕರಿಸುತ್ತಿಲ್ಲಎನ್ನುವುದು ನಾಗರಿಕರ ಆರೋಪವಾಗಿದೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳ ಈ ಉಡಾಫೆ ಧೋರಣೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ನೀರಿದ್ದರೂ ಮನಸ್ಸಿಲ್ಲ:
ಇಂಡಿ ನಗರ ಸಮೀಪದಲ್ಲೇ ಇರುವ ಬೋರ್ ವೆಲ್ ಗಳಲ್ಲಿಸಾಕಷ್ಟು ನೀರಿದೆ. ಅಲ್ಲಿಂದ ಪೈಪ್ ಲೈನ್ ಕೈಗೊಂಡು ತಾತ್ಕಾಲಿಕವಾಗಿ ನಗರದ ಜನರಿಗೆ ನೀರು ಒದಗಿಸಲು ನಗರಸಭೆ ಮುಂದಾಗುತ್ತಿಲ್ಲ. ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯ ಇಚ್ಛಾಶಕ್ತಿ ಕೊರತೆಯಿಂದಾಗಿ ಜನರು ಹನಿ ನೀರಿಗಾಗಿ ಪರದಾಡುವಂತಾಗಿದೆ.
ಶಾಸಕರ ಕಚೇರಿಗೆ ದೂರುಗಳ ಮಹಾಪೂರ:
ನಗರಸಭೆ ಅಧಿಕಾರಿಗಳ ಕಾರ್ಯವೈಖರಿಯಿಂದ ಬೇಸತ್ತಿರುವ ಸಾರ್ವಜನಿಕರು ನೇರವಾಗಿ ಶಾಸಕರ ಕಚೇರಿಗೆ ಮೊರೆ ಹೋಗುತ್ತಿದ್ದಾರೆ. ಕುಡಿಯುವ ನೀರಿನ ಪೂರೈಕೆಯಲ್ಲಿವಿಫಲವಾಗಿರುವ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಪ್ರತಿದಿನ ದೂರು ಸಲ್ಲಿಸುತ್ತಿದ್ದಾರೆ. ಶಾಸಕರ ಕಚೇರಿ ಸಿಬ್ಬಂದಿಯೂ ದೂರುಗಳನ್ನು ಕೇಳಿ ಸುಸ್ತಾಗುತ್ತಿದ್ದಾರೆ.
ನಗರದಲ್ಲಿಕುಡಿಯುವ ನೀರಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನಗರಸಭೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದೆ. ಅಲ್ಲದೇ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿಸಾರ್ವಜನಿಕರು ಬೀದಿಗಿಳಿದು ಉಗ್ರ ಹೋರಾಟ ಮಾಡುವ ಪ್ರಸಂಗ ಎದುರಾಗಲಿದೆ.
---------
ಅಧಿಕಾರಿಗಳ ನಡೆ ಹಾಸ್ಯಾಸ್ಪದ
ನೀರು ಪೂರೈಕೆ ಏಕೆ ನಿಂತಿದೆ ಎಂದು ಕೇಳಿದರೆ ನಗರಸಭೆ ಅಧಿಕಾರಿಗಳು ‘‘ಉಜನಿ ಜಲಾಶಯದಿಂದ ನೀರು ಬಿಡಲಾಗಿದೆ, ಶೀಘ್ರದಲ್ಲೇ ಬರಲಿದೆ’’ ಎಂಬ ಸಬೂಬು ನೀಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿಉಜನಿ ಜಲಾಶಯದಿಂದ ಬಿಟ್ಟ ನೀರು ಇದುವರೆಗೂ ಧೂಳಖೇಡ ತಲುಪಿಲ್ಲ. ಅಧಿಕಾರಿಗಳ ಈ ಹೇಳಿಕೆಗಳು ನಗೆಪಾಟಲಿಗೆ ಒಳಗಾಗುತ್ತಿವೆ.
---------
ಟ್ಯಾಂಕರ್ ನೀರಿಗೆ ಮೊರೆ
ನಗರಸಭೆಯಿಂದ ನೀರು ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿಅನಿವಾರ್ಯವಾಗಿ ಸಾರ್ವಜನಿಕರು ಖಾಸಗಿ ನೀರಿನ ಟ್ಯಾಂಕರ್ ಗೆ ಮೊರೆ ಹೋಗುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ 800 ರಿಂದ 1000 ರೂ. ವರೆಗೆ ದರವಿದ್ದು, ಇಷ್ಟೊಂದು ಹಣ ನೀಡಿ ನೀರು ಪಡೆಯುವಂತಾಗಿದೆ. ಶ್ರೀಮಂತರು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಬಡವರು ಏನು ಮಾಡಬೇಕು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.