Huge Savings Price Reduction Of Cancer Medicines In Front Lead
ಫ್ರಂಟ್ ಲೀಡ್
Contributed by: Panchami M S|Vijaya Karnataka•
ಕ್ಯಾನ್ಸರ್ ಔಷಧಗಳ ಬೆಲೆ ಭಾರೀ ಕಡಿತ
- 3,540 ಕೋಟಿ ರೂ. ಉಳಿತಾಯದೇಶದಾದ್ಯಂತ 1,364 ಮಾದರಿಯ ಕ್ಯಾನ್ಸರ್ ನಿರೋಧಕ ಔಷಧಗಳ ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ ಸೋಮವಾರದಿಂದ ಜಾರಿಗೆ ಬಂದಿದೆ. ಕೇಂದ್ರ ಸರಕಾರದ ಈ ನಿರ್ಧಾರದಿಂದ ಕ್ಯಾನ್ಸರ್ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ವಾರ್ಷಿಕ ಸುಮಾರು 3,540.38 ಕೋಟಿ ರೂಪಾಯಿಗಳಷ್ಟು ಉಳಿತಾಯವಾಗಲಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.
ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ತಜ್ಞರ ಸಮಿತಿಯ ಶಿಫಾರಸಿನಂತೆ, ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು 137 ಕ್ಯಾನ್ಸರ್ ಔಷಧಗಳ ಲಾಭದ ಮಿತಿಯನ್ನು ಕಡಿತಗೊಳಿಸಿದೆ. ಇದರನ್ವಯ 85 ಪ್ರಮುಖ ಔಷಧ ತಯಾರಿಕಾ ಸಂಸ್ಥೆಗಳು 121 ಔಷಧಗಳಿಗೆ ಸಂಬಂಧಿಸಿದ 1,364 ಬ್ರ್ಯಾಂಡ್ ಗಳ ಪರಿಷ್ಕೃತ ಬೆಲೆಗಳನ್ನು ಪ್ರಕಟಿಸಿವೆ. ಈ ಪೈಕಿ 679 ಔಷಧ ಬ್ರ್ಯಾಂಡ್ ಗಳ ಬೆಲೆಯಲ್ಲಿಶೇಕಡಾ 50ಕ್ಕಿಂತಲೂ ಹೆಚ್ಚು ರಿಯಾಯಿತಿ ಸಿಗಲಿದ್ದು, ಕೆಲವು ಔಷಧಗಳ ಬೆಲೆಯಲ್ಲಿಗರಿಷ್ಠ ಶೇಕಡಾ 96.45ರಷ್ಟು ಇಳಿಕೆಯಾಗಿದೆ. ಈ ಪಟ್ಟಿಯಲ್ಲಿ20ಕ್ಕೂ ಹೆಚ್ಚು ರೀತಿಯ ಕ್ಯಾನ್ಸರ್ ಚಿಕಿತ್ಸೆಯಲ್ಲಿಬಳಸುವ ಇಮ್ಯುನೊಥೆರಪಿ ಔಷಧಗಳು ಹಾಗೂ ಪೆಂಬ್ರೋಲಿಜುಮಾಬ್ , ದುರ್ವಾಲುಮಾಬ್ , ಒಸಿಮೆರ್ಟಿನಿಬ್ ನಂತಹ ಪ್ರಮುಖ ಔಷಧಗಳು ಸೇರಿವೆ. 2019ರ ನಂತರ ಮಾರುಕಟ್ಟೆಯಲ್ಲಿಗಣನೀಯವಾಗಿ ಹೆಚ್ಚಿದ್ದ ಲಾಭದ ಮಿತಿಯನ್ನು ನಿಯಂತ್ರಿಸಲು ಸರಕಾರ ಈ ಕ್ರಮ ಕೈಗೊಂಡಿದೆ.
ಹೊಸ ನಿಯಮದಂತೆ ಯಾವುದೇ ಮೆಡಿಕಲ್ ಸ್ಟೋರ್ ಗಳು ಅಥವಾ ಆಸ್ಪತ್ರೆ ಫಾರ್ಮಸಿಗಳು ಪರಿಷ್ಕೃತ ಬೆಲೆಗಿಂತ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ. ಗ್ರಾಹಕರು ‘ಫಾರ್ಮಾ ಸಹಿ ದಾಮ್ ’ ಆ್ಯಪ್ ಅಥವಾ ಅಧಿಕೃತ ವೆಬ್ ಸೈಟ್ ಮೂಲಕ ಬೆಲೆಗಳನ್ನು ಪರಿಶೀಲಿಸಬಹುದು. ಹೆಚ್ಚಿನ ದರ ವಸೂಲಿ ಕಂಡುಬಂದಲ್ಲಿ‘ಫಾರ್ಮಾ ಜನ್ ಸಮಾಧಾನ್ ’ ಪೋರ್ಟಲ್ ಅಥವಾ 1800-111-255 ಸಹಾಯವಾಣಿ ಮೂಲಕ ದೂರು ನೀಡಬಹುದು.