ಮನೆಗೆ ನುಗ್ಗಿದ ಚಿರತೆ, ಬಾಗಿಲು ಮುಚ್ಚಿ ಕೂಡಿ ಹಾಕಿದ ದಂಪತಿ

Contributed by: sidduvijaykarnataka@gmail.com|Vijaya Karnataka•
leopard invades home anger of locals erupts
ಕುಣಿಗಲ್ : ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಬಂದಿಗೌಡನಪಾಳ್ಯ ಗ್ರಾಮದಲ್ಲಿಸೋಮವಾರ ರಾತ್ರಿ 8-30ರ ಸಮಯದಲ್ಲಿಮನೆಯ ಮುಂದೆ ಕಟ್ಟಿಹಾಕಿದ್ದ ಮೇಕೆ ತಿನ್ನಲು ಬಂದ ಚಿರತೆ ಮೇಕೆಯೊಂದಿಗೆ ಮನೆಯೊಳಗೆ ನುಗ್ಗಿದೆ. ಗಾಬರಿಗೊಂಡು ಹೊರ ಓಡಿಬಂದ ಮನೆಯವರು ಸಮಯಪ್ರಜ್ಞೆಯಿಂದ ಕೂಡಲೇ ಬಾಗಿಲು ಹಾಕಿ ಚಿರತೆಯನ್ನು ಕೂಡಿಹಾಕಿದ್ದಾರೆ.

ಗ್ರಾಮದ ಚಿಕ್ಕಮರಿಯಪ್ಪ ಎಂಬುವರ ಮನೆಯ ಮುಂಭಾಗ ಕಟ್ಟಲಾಗಿದ್ದ ಮೇಕೆ ಮರಿ ಹಿಡಿದುಕೊಂಡು ಚಿರತೆ ಮನೆಯೊಳಗೆ ಬಂದಿದೆ. ಆಗ ಮನೆಯಲ್ಲಿಟಿವಿ ನೋಡುತ್ತ ಕುಳಿತಿದ್ದ ಚಿಕ್ಕಮರಿಯಪ್ಪ ಹಾಗೂ ಪತ್ನಿ ನರಸಮ್ಮ ದಂಪತಿ ಗಾಬರಿಗೊಂಡು ಹೊರಬಂದು ಬಾಗಿಲು ಹಾಕಿ ಚಿರತೆಯನ್ನು ಮನೆಯೊಳಗೆ ಕೂಡಿ ಹಾಕಿದ್ದಾರೆ,
ಚಿರತೆ ಮನೆಯೊಳಗೆ ಬಂದಿರುವುದು ನೋಡಿ ಗಾಬರಿಗೊಂಡ ನರಸಮ್ಮ ಪ್ರಜ್ಞೆ ತಪ್ಪಿದ್ದು, ಕೂಡಲೆ ಅವರನ್ನು ಸ್ಥಳಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಚಿಕ್ಕಮರಿಯಪ್ಪ ಮನೆಯ ಬಳಿ ಗ್ರಾಮಸ್ಥರು ಜಮಾಯಿಸಿದ್ದು, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಆರ್ ಎಫ್ ಒ ಚೈತ್ರಾ ಅವರು ಸ್ಥಳಕ್ಕೆ ಬರುತ್ತಿದ್ದಂತೆಯೆ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಗ್ರಾಮಸ್ಥರ ಮನವೊಲಿಸಿ ಕಾರ್ಯಾಚರಣೆ ಪ್ರಾರಂಭಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಗಾಗಿ ಇಡೀ ಮನೆ ಹುಡುಕಾಡಿದರು. ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನದ ಅರವಳಿಕೆ ತಜ್ಞರಾದ ಕಿರಣ್ ಸಹ ಸ್ಥಳಕ್ಕೆ ಆಗಮಿಸಿದ್ದು, ಮನೆಯ ಕೋಣೆಯೊಂದರ ಮಂಚದ ಕೆಳಗೆ ಅಡಗಿ ಕುಳಿತಿದ್ದ ಚಿರತೆಗೆ ಅರವಳಿಕೆ ನೀಡಿ ಪ್ರಜ್ಞೆ ತಪ್ಪಿಸಿ ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿಒಂದು ವರ್ಷ ಪ್ರಾಯದ ಹೆಣ್ಣು ಚಿರತೆ ಸೆರೆಹಿಡಿಯಲಾಯಿತು.

ಚಿರತೆ ಕಾರ್ಯಾಚರಣೆಯಲ್ಲಿತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಶೀಮಾ ಪಿ.ಎ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರ, ಬನ್ನೇರುಘಟ್ಟ ಜೈವಿಕ ಉದ್ಯಾನದ ಅರವಳಿಕೆ ತಜ್ಞರಾದ ಡಾ.ಕಿರಣ್ , ಸಹಾಯಕ ಶಿವಾಂಕ್ , ಅರಣ್ಯ ಇಲಾಖೆಯ ಅಧಿಕಾರಿಗಳಾದ ಕೇಶವಮೂರ್ತಿ, ಮಹದೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

ಆರ್ ಎಫ್ ಒ ವಿರುದ್ಧ ಗ್ರಾಮಸ್ಥರ ಆಕ್ರೋಶ: ಆರ್ ಎಫ್ ಒ ಚೈತ್ರಾ ಅವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಗ್ರಾಮಸ್ಥರು ಅವರ ವಿರುದ್ಧ ಹರಿಹಾಯ್ದರು. ಕಳೆದ ಒಂದು ವಾರದಿಂದ ಗ್ರಾಮದಲ್ಲಿಚಿರತೆ ಓಡಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು ಸಹ ಯಾವುದೆ ಕ್ರಮ ಕೈಗೊಂಡಿಲ್ಲ. ಈಗ ಗ್ರಾಮದ ಮಧ್ಯಭಾಗದಲ್ಲಿರುವ ಮನೆಯೊಳಗೆಯೇ ಚಿರತೆ ನುಗ್ಗಿದ್ದು, ಜನ ಸಾಮಾನ್ಯರಿಗೆ ಸಮಸ್ಯೆ ಆಗಿದ್ದರೆ ಯಾರು ಹೊಣೆ? ಇಷ್ಟು ದಿನ ಜಾನುವಾರುಗಳು ಹಾಗೂ ಬೀದಿ ನಾಯಿಗಳನ್ನು ಹೊತ್ತೊಯ್ಯುತ್ತಿದ್ದ ಚಿರತೆ ಈಗ ಏಕಾಏಕಿ ಮನೆಯೊಳಗೆ ನುಗ್ಗಿದೆ. ಕಳೆದ ಒಂದು ವಾರದ ಅವಧಿಯಲ್ಲಿಹಂದಲಗೆರೆ ಹಾಗೂ ಹುಲಿಕಟ್ಟೆ ಗ್ರಾಮಗಳಲ್ಲಿಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸಿದ್ದರೂ ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು,

ಪೋಟೋ ಚಿರತೆ: ಮನೆಯೊಳಗೆ ಚಿರತೆ ಓಡಾಟದ ದೃಶ್ಯ.