ಸ್ಥಳೀಯ ಯೋಜನಾ ಪ್ರದೇಶದ ಸಮಗ್ರ ಯೋಜನೆ (ಮಾಸ್ಟರ್ ಪ್ಲಾನ್ )ರಚಿಸಲು ಸರಕಾರ ಯೋಜನೆ ಸಿದ್ದಪಡಿಸಿದ ಹಿನ್ನೆಲೆಯಲ್ಲಿಸಾರ್ವಜನಿಕರು ಸಹಕರಿಸಬೇಕು ಎಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಂ ಮನವಿ ಮಾಡಿದರು.ಪ್ರಾಧಿಕಾರದ ಸಭಾಂಗಣದಲ್ಲಿಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘‘ಕಳೆದ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ವತಿಯಿಂದ ಈ ವರೆಗೆ ಸುಮಾರು 150 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಸೋಮವಾರಪೇಟೆ ಯೋಜನಾ ಪ್ರದೇಶ ಹೊರತು ಪಡಿಸಿ ತಾಲೂಕಿನ ಇತರೆ ಪ್ರದೇಶದವರು ಮಡಿಕೇರಿಗೆ ತೆರಳಬೇಕಾಗಿತ್ತು, ಇದನ್ನು ಮನಗಂಡ ಶಾಸಕ ಮಂತರ್ ಗೌಡ ಅವರು ಸರಕಾರದ ಗಮನಕ್ಕೆ ತಂದು ಇದೀಗ ತಾಲೂಕಿನ ಎಲ್ಲಾಭಾಗದವರು ನಮ್ಮಲ್ಲಿಯೇ ಸಂಬಂಧಿಸಿದ ಕೆಲಸಗಳನ್ನು ವಿಲೇವಾರಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ,’’ಎಂದರು.
‘‘ಇದೀಗ ಸಾರ್ವಜನಿಕರ ಲೇಔಟ್ , ಕನ್ವರ್ಷನ್ , ನಕಾಶೆ ಅನುಮೋದನೆ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡಲಾಗುತ್ತಿದೆ. ಸೋಮವಾರಪೇಟೆ ಪ್ರಾಧಿಕಾರ ವ್ಯಾಪ್ತಿಯ ಮಾಸ್ಟರ್ ಪ್ಲಾನ್ ಇಲ್ಲದೆ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಮಾಸ್ಟರ್ ಪ್ಲಾನ್ ಇದ್ದರೆ ಗೃಹ, ವಾಣಿಜ್ಯ ಹಾಗೂ ಇನ್ನಿತರೆ ಆಸ್ತಿಗಳ ಮಾಹಿತಿ ದಾಖಲಾಗುವುದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿಸರಕಾರ ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಾಲಂ 10(1) ಅನ್ವಯ ಮಾಸ್ಟರ್ ಪ್ಲಾನ್ ರಚಿಸಲು ಸಾರ್ವಜನಿಕರಿಂದ ಸಲಹೆ ಸೂಚನೆ ಕೋರಿದ್ದಾರೆ. ಸಾರ್ವಜನಿಕರು ನ.19ರೊಳಗೆ ಲಿಖಿತ ಸಲಹೆ ನೀಡಬಹುದು,’’ ಎಂದು ತಿಳಿಸಿದರು.
‘‘ಸೋಮವಾರಪೇಟೆ ಪ್ರಾಧಿಕಾರದ ವ್ಯಾಪ್ತಿ ಚಿಕ್ಕದಾಗಿದ್ದು ,ಆರ್ಥಿಕ ಕ್ರೋಢಿಕರಣ ಕಷ್ಟಕರವಾಗಿದೆ. ಅಲ್ಲದೆ ಇಲ್ಲಿಸಂಗ್ರಹವಾಗುವ ಹಣದಿಂದಲೇ ಸಿಬ್ಬಂದಿಗಳಿಗೆ ವೇತನ ನೀಡಬೇಕಾಗಿರುವುದರಿಂದ ಆದಾಯದ ಮೂಲ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ,’’ ಎಂದರು.
ಸಭೆಯಲ್ಲಿಸಮಿತಿ ಸದಸ್ಯರಾದ ಬಸವರಾಜು, ಲೋಹಿತಾಶ್ವ, ದರ್ಶನ್ , ಮುಖ್ಯಾಧಿಕಾರಿ ಎಂ.ಪಿ.ಮಹೇಶ್ , ಸಮಿತಿ ಸದಸ್ಯ ಕಾರ್ಯದರ್ಶಿ ಸುನೀಲ್ ಇದ್ದರು.
ಎಂಡಿಕೆ9ಎಸ್ ಪಿಟಿ7: ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಸಭಾಂಗಣದಲ್ಲಿಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಂ ಅಧ್ಯಕ್ಷತೆಯಲ್ಲಿಸಭೆ ನಡೆಯಿತು.