‘‘ವೀರರಾಣಿ ಒನಕೆ ಓಬವ್ವ ಅವರ ಸಾಹಸ, ತ್ಯಾಗ ಮತ್ತು ಬಲಿದಾನ ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದು, ಹೆಣ್ಣುಮಕ್ಕಳು ಎಲ್ಲಕ್ಷೇತ್ರಗಳಲ್ಲಿಧೈರ್ಯದಿಂದ ಮುನ್ನಡೆಯಬೇಕು,’’ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಹೇಳಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಆದರ್ಶ ಪಾಲಿಸಿ:
‘‘ಒಬ್ಬ ಮಹಿಳೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನಾಡನ್ನು ರಕ್ಷಿಸಿದ ಆ ಶೌರ್ಯ ಇಂದಿನ ಹೆಣ್ಣುಮಕ್ಕಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನ ಎಲ್ಲರಿಗೂ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಇಂತಹ ವೀರಮಾತೆಯರ ಆದರ್ಶಗಳನ್ನು ಮೈಗೂಡಿಸಿಕೊಂಡು, ಮಹಿಳೆಯರು ಮುನ್ನಡೆಯಬೇಕು. ಕಾನೂನು ಹಾಗೂ ಸರಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪ್ರತಿಯೊಬ್ಬ ಹೆಣ್ಣು ಮಗಳೂ ಧೈರ್ಯವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿಮುಂಚೂಣಿಗೆ ಬರಬೇಕು,’’ ಎಂದರು.
ತಹಸೀಲ್ದಾರ್ ಸುರೇಶ್ ವರ್ಮಾ, ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಸಂಯೋಜಕ ಡಾ.ಶರಣಪ್ಪ ಚಲವಾದಿ ಮಾತನಾಡಿದರು.
ಮೆರೆವಣಿಗೆ:
ವೀರರಾಣಿ ಒನಕೆ ಓಬವ್ವ ಜಯಂತಿ ನಿಮಿತ್ತ ನಗರದ ಡಾ.ಬಿ.ಆರ್ .ಅಂಬೇಡ್ಕರ್ ವೃತ್ತದಲ್ಲಿವೀರರಾಣಿ ಒನಕೆ ಓಬವ್ವ ಭಾವಚಿತ್ರಕ್ಕೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ಗಣ್ಯರು, ಸಮಾಜದ ಮುಖಂಡರು ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ನಾನಾ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಎಂಜಿನಿಯರ್ ಜೈಪಾಲ್ ರೆಡ್ಡಿ, ಸಮಾಜದ ಮುಖಂಡರಾದ ಮಲ್ಲೇಶ ಕೊಲಿಮಿ, ಲಲಿತಾ ಆಂಜನೇಯ, ಜಗನ್ನಾಥ ಸುಂಕಾರಿ, ಅರ್ಚನಾ ಸುಂಕಾರಿ, ಸಂತೋಷ ನಂದಿ, ಮಾರೆಪ್ಪ, ಎಂ.ವಸಂತ, ದಯಾನಂದ, ಶಿವರಾಜ್ , ವಿಶ್ವನಾಥ, ದೇವೇಂದ್ರ, ರಾಘವೇಂದ್ರ, ಭೀಮಣ್ಣ ಇತರರು ಇದ್ದರು.